ಜಗಕೆಲ್ಲಾ ಯಾಕಿಂಥಾ
ನಿಶೆ ಕುಡಿಸಿ
ನಶೆ ಏರಿಸುವೆಯೋ ಸೂರ್ಯ?

ನಿನಗೆಲ್ಲವೂ ಹುಡುಗಾಟ
ಕುಡಿಸಿ ಮನವ ಕೆಡಿಸುವ ಆಟ

ಉನ್ಮತ್ತ ಪ್ರೀತಿಯಮಲು
ನಿಷ್ಕಾರಣ ನಿರಾಕರಣದ ತೆವಲು
ಸುಮ್ಮನೆ ಕಲ್ಲಾದವಳು
ಭೂಮಿಯಾಳಕೆ ಇಳಿದು ಹೋದವಳು
ಇರುವುದೆಲ್ಲವ ಬಿಟ್ಟು
ಇಲ್ಲದ್ದ ತಡಕಿ
ಎಲ್ಲವಾಗುತ್ತಲೇ ಇಲ್ಲವಾದವಳು
ಮತ್ತೆ ಮತ್ತೆ ತೆತ್ತುಕೊಂಡೂ
ಅಪರಿಪೂರ್ಣಳಾಗಿಯೇ ಉಳಿದವಳು!

ಸೂರ್ಯ
ಇತಿಹಾಸದುದ್ದಕ್ಕೂ ನಿನ್ನ
ಅವಿವೇಕದ ಎಷ್ಟೊಂದು
ಉದಾಹರಣೆಗಳು?
ಅರ್ಥವಾಗದವಳೇ ಇವಳು?

ಯಾರಿಗೂ ಎಂದಿಗೂ
ಅರ್ಥವಾಗದ
ಕವಿತೆ ಬರೆಯುತ್ತಾಳೆ
ಯಾಕೆ ಕೈಲಾಗದ ಹುಡುಗಿ?
ಇದೂ ಕೂಡ ನಿನ್ನ ಕರುಣೆಯೇನು?
ನಿನ್ನಂಥ ಪ್ರಖರ ಬೆಳಕಿನವನಿಗೆ
ಕತ್ತಲೊಡಲ ಅರಳುವಿಕೆಗಳು
ಬಿಡು ಅರ್ಥವಾಗುವುದಿಲ್ಲ!
*****