ಸ್ತ್ರೀಯರ – ಸಿದ್ಧ ಮಾದರಿಯ ಸಂವೇದನೆಗಳು

ಸ್ತ್ರೀಯರ – ಸಿದ್ಧ ಮಾದರಿಯ ಸಂವೇದನೆಗಳು

ನಾನೇ ಮಾಡ್ತೀನಿ, ನೀ ಮಾಡೋದೇನೂ ಬೇಡ, ಎಂದು ಎಷ್ಟು ಹೇಳಿದರೂ ಕೇಳದೇ ದಿನಕ್ಕಾಗುವಷ್ಟು ಅಡುಗೆ ಮಾಡಿಟ್ಟೇ ಹೋಗಿದ್ದಾಳೆ, ಪಾಪ. ಕೆಲವು ವಿಷಯಗಳಲ್ಲಿ ಹೆಣ್ಮಕ್ಕಳು ತೀರಾ ಪೊಸೆಸಿವ್ ಅಲ್ವಾ?ಎರಡು ದಿನಗಳ ಮಟ್ಟಿಗೆ ತೌರಿಗೆ ಹೊರಟ ಹೆಂಡತಿ ಪತಿಗಾಗಿ ಮುತುವರ್ಜಿಯಿಂದ ಅಲ್ಲಿ ಇಲ್ಲಿ ತಿಂದು ಹೊಟ್ಟೆ ಕೆಡಿಸಿಕೊಳ್ಳಬಾರದೆಂಬ ಕಾರಣದಿಂದ ತೌರಿಗೆ ಹೋಗುವಾಗಲೂ ಒಂದಿಟ್ಟು ಬೇಯಿಸಿಟ್ಟು ಹೋದ ಬಗ್ಗೆ ಪತಿ ಮಹಾಶಯನೊಬ್ಬನ ಅಂಬೋಣ ಇದು.

ನನಗಾಶ್ಚರ್ಯ.ತನಗಾಗಿ ಕಾಳಜಿಯಿಂದ ಅಡುಗೆ ಮಾಡಿಟ್ಟು ಹೋದ ಹೆಂಡತಿಗೆ ಪೊಸೆಸಿವ್ ಎಂಬ ಬಿರುದುಕೊಟ್ಟ ಗಂಡಿನ ಬಗ್ಗೆ.ಇದಕ್ಕೆ ಕಾರಣ ಆತನಲ್ಲ. ನಮ್ಮ ಸಮಾಜದ ದೃಷ್ಟಿ. ಅದು ಮೂಡಿಸಿದ ಅರಿವು. ಹೆಣ್ಣು ಕೆಲವು ವಿಷಯಗಳಲ್ಲಿ ಪೊಸೆಸಿವ್ ಇರಬಹುದು. ಯಾಕೆಂದರೆ ಹುಟ್ಟುತ್ತಲೇ ಕೆಲವೊಂದು ಸಿದ್ಧ ಸೂತ್ರಗಳು ಆಕೆಗೆ ಅರಿವಿಲ್ಲದೇ ಸಂಪ್ರದಾಯಸ್ಥ ಭಾರತೀಯ ಸಮಾಜದ ಕೌಟಂಬಿಕ ಚಹರೆಯ ಗುಣಲಕ್ಷಣಗಳು ಆಕೆಯಲ್ಲಿ ರಕ್ತಗತವಾಗಿ ಬಂದೇ ಬಿಡುತ್ತವೆ. ಎಷ್ಟೋ ಸಂದರ್ಭಗಳಲ್ಲಿ ಸ್ತ್ರೀವಾದ, ಸ್ತ್ರೀ ಸಮಾನತೆಗಾಗಿ ಹೋರಾಡುವ ಮಹಿಳಾವಾದಿಗಳು, ಸ್ತ್ರೀತ್ವವನ್ನು ಪ್ರತಿಪಾದಿಸುತ್ತ ತಾರತಮ್ಯ ವಿರೋಧಿಸುವ ಹೆಣ್ಣುಗಳು, ಶಿಕ್ಷಣದಿಂದ ಗಂಡಿಗಿಂತ ಹೆಚ್ಚಿನ ಸ್ಥಾನಮಾನ ಪಡೆದ ಸ್ತ್ರೀಯರು, ಮಹಿಳಾ ವಕೀಲೆಯರು,ನ್ಯಾಯವಾದಿಗಳು ಕಾರ್ಯಕ್ರಮಗಳಲ್ಲಿ ಮೈಕ ಮುಂದೆ, ಕೈಯಲ್ಲಿ ಲೇಖನಿ ಬಂದಾಗ ತನಗನ್ನಿಸಿದ್ದನ್ನೆಲ್ಲಾ ತಾನನುಭವಿಸಿದ ಅಸಮಾನತೆಯ ಭಿನ್ನ ಕ್ರಮಗಳನ್ನು ವಿರೋಧಿಸಿ ಮೈಮೇಲೆ ಭೂತ ಹೊಕ್ಕಂತೆ ಮಾತನಾಡಿದರೂ ತನ್ನ ಮನೆಯ ಮಟ್ಟಿಗೆ ಬರುತ್ತಲೇ ಮೃದುವಾಗುತ್ತಾರೆ. ತನ್ನದೆಂಬ ಪೋಸೆಸಿವ್‌ನೆಸ್‌ಗೆ ಒಳಗಾಗುತ್ತಾರೆ.ಮನೆಯಲ್ಲಿ ತಾನಿದ್ದರೆ ಮಾತ್ರ ಎಲ್ಲವೂ ಸರಿ ಇರುವುದೆಂಬ ಭ್ರಮೆ,ತನ್ನ ಮನೆಯಲ್ಲಿ ಜೋಡಿಸಿಟ್ಟ ಸಾಮಾನುಗಳು ತಾನಿಟ್ಟ ಜಾಗೆಯಿಂದ ಅಲ್ಪಸ್ವಲ್ಪ ವ್ಯತ್ಯಾಸವಾದರೂ ಆಕೆಗೆ ಆ ಸಂಗತಿಗಳು ತಟ್ಟನೆ ಅರಿವಾಗುತ್ತದೆ. ಮಕ್ಕಳ ಸಣ್ಣ ಅಳುವು ಕೂಡಾ ತಾಯಿಗೆ ತಟ್ಟನೇ ನಿದ್ದೆಯಿಂದ ಹೇಗೆ ಜಾಗೃತಿಗೆ ತರುವುದೋ ಹಾಗೆ.ಆಕೆ ಗೃಹಿಣಿಯಾಗಿರಲಿ ಇಲ್ಲವೇ ನೌಕರಸ್ಥ ಹೆಣ್ಣಾಗಿರಲಿ ಅಂತಹ ವ್ಯತ್ಯಾಸವೇನೂ ಗೋಚರಿಸದು.ಯಾಕೆಂದರೆ ಇದಕ್ಕೆ ಕಾರಣ ಮೂಲತಃ ಆಕೆಯಲ್ಲಿರುವ ತನ್ನದೆಂಬ ವಿಷಯಗಳ ಬಗ್ಗೆ, ಸಂಗತಿಗಳ ಬಗ್ಗೆ ಇರುವ ಕಾಳಜಿ. ಅದನ್ನು ಪೊಸೆಸಿವ್ ಪ್ರವೃತ್ತಿ ಎನ್ನಬೇಕೆಂದೇನೂ ಇಲ್ಲ ಅಲ್ಲವೇ?ಅದೊಂದು ಭಾವನಾತ್ಮಕ ಸಂಬಂಧದ ಕಾಳಜಿಯ ಒಂದು ಮುಖವಷ್ಟೇ. ಪುರುಷ ಹೆಣ್ಣಿನ ಪ್ರತಿಯೊಂದು ನಡೆಯನ್ನೂ, ನುಡಿಯನ್ನೂ ಈ ರೀತಿಯಲ್ಲಿ ಅಭಿವ್ಯಕ್ತಿಸುತ್ತ ಆಕೆಯ ವ್ಯಕ್ತಿತ್ವ ಅಷ್ಟೇ ಎಂಬ ವ್ಯಾಖ್ಯಾನ ನೀಡ ಬಯಸುತ್ತಾನೆ.

ಹಾಗಾದರೆ ಮನೆಗಾಗಿ ಹೆಣ್ಣು ತೋರುವ ಅತಿ ಮುತುವರ್ಜಿಯ ಪ್ರವೃತ್ತಿಗೆ ಕಾರಣ ಹುಡುಕಿದರೆ ಅಲ್ಲಿ ಮೂಡುವ ಉತ್ತರ ನಮ್ಮ ಸಮಾಜ ಮತ್ತದರ ರೂಪರೇಷೆಗಳೇ. ಹೆಣ್ಣು ಮಗುವನ್ನು ಬೆಳೆಸುವ ರೀತಿಗೂ ಗಂಡು ಮಗನನ್ನು ಬೆಳೆಸುವ ರೀತಿಗೂ ಇರುವ ವ್ಯತ್ಯಾಸ. ಹೆತ್ತವರು ಪಂಜರದಲ್ಲಿಟ್ಟು ಪಾರಿವಾಳ ಸಾಕಿದಂತೆ ಹೆಣ್ಣುಮಗಳ ಸಾಕುತ್ತಾ ಕಾಲೇಜಿಗೋ ನೌಕರಿಗೋ ಹೊರಹೋದ ಮಗಳು ಬರಲು ಅರ್ಧಗಂಟೆ ತಡವಾದರೆ ಸಾಕು. ತಲ್ಲಣಿಸಿಹೋಗುತ್ತಾರೆ. ಏನಾದರೂ ಅನಾಹುತವಾಯಿತೋ ಎಂಬ ಅಧೈರ್ಯದಿಂದ ಆಕೆಗೆ ಸಾಮಾಜಿಕ ನೈತಿಕತೆಯ ಸರಪಳಿಗಳ ಸಂಕೋಲೆಗಳ ಸುತ್ತಿ ಬಿಡುತ್ತಾರೆ. ಹೆಣ್ಣು ಮಕ್ಕಳು ಸಂಜೆ ಏಳಾಗುವ ಮೊದಲು ಮನೆಗೆ ಬಂದು ತಲುಪಿದರಷ್ಟೇ ಸಮಾಧಾನಗೊಳ್ಳುವ ಪರಂಪರೆ ಇನ್ನು ಹೋಗಿಲ್ಲ. ಇದಕ್ಕೆ ಹೊರಜಗತ್ತಿನ ದುಷ್ಟ ಪ್ರವೃತ್ತಿಯ ಮೃಗೀಯ ವರ್ತನೆ ಪುರುಷ ದೌರ್ಜನ್ಯಗಳೇ ಕಾರಣಗಳು ಎಂಬುದು ಅಷ್ಟೇ ಸತ್ಯ. ಅದಕ್ಕೆ ತಂದೆಯೊಂದಿಗೆ ತಾಯಿಯಾದವಳು ಕೂಡಾ ಅಷ್ಟೇ ಕಾರಣೀಕರ್ತಳಾಗಿ ಭಾಗಿಯಾಗಿರುತ್ತಾಳೆ. ಇದಕ್ಕೆ ಮಗಳ ಜೀವದ ಕಾಳಜಿ ಆಕೆಯ ಮುಂದಿನ ಬದುಕು ಸುರಳಿತವಾಗಿ ನಡೆಯಲೆಂಬ ಕಾಳಜಿ ಕೂಡಾ ಇದಕ್ಕೆ ಕಾರಣ.

ಅಲ್ಲದೇ ಅಡುಗೆ ಮಾಡುವುದು, ಮನೆಯನ್ನು ಒಪ್ಪ ಓರಣಗೊಳಿಸುವ ಕೆಲಸಗಳು,ಹೆಣ್ಣಿನ ಟೆಂಡರ ಕೆಲಸವೆಂಬಂತೆ ಕರ್ತವ್ಯವೆಂಬಂತೆ ಅಂತಹ ಮನೋಭೂಮಿಕೆಯನ್ನು ಬಾಲ್ಯದಿಂದಲೆ ಬೆಳೆಸಿಬಿಡುತ್ತಾರೆ. ಆಕೆ ಅದಕ್ಕೆ ಸಿದ್ಧಗೊಳ್ಳುತ್ತಲೇ ಹೋಗಿ ತಾನು ಗೃಹಿಣಿಯಾಗುತ್ತಲೇ ಗಂಡ ಮಕ್ಕಳ ಊಟ ಉಪಚಾರ, ತನ್ನ ಮನೆಯ ಒಳಹೊರಗು ತನ್ನದೇ ಸಂಪೂರ್ಣ ಕಾಳಜಿಗೆ ಸ್ವೀಕರಿಸಿಬಿಟ್ಟಿರುತ್ತಾಳೆ. ಹಾಗಾಗೇ ಕೆಲಸದಾಳು ಮಾಡಿದ ಕೆಲಸವನ್ನೂ ಆಕೆ ಮನಃಪೂರ್ವಕವಾಗಿ ಒಪ್ಪಲಾರಳು. ಕೆಲಸದಾಕೆ ತೊಳೆದ ಪಾತ್ರಗಳನ್ನೊಮ್ಮೆ ನೀರಿಗೆ ಬಿಟ್ಟು ಇನ್ನೊಮ್ಮೆ ಸ್ವಚ್ಛ ತೊಳೆಯುವ ಹೆಂಗಸರು ಇಲ್ಲದಿಲ್ಲ. ಇವೆಲ್ಲ ನಮ್ಮ ಸಿದ್ದ ಮಾದರಿಯ ಪಾತ್ರಗಳು ನಮ್ಮಲ್ಲಿ ಗೊತ್ತಿಲ್ಲದೇ ಕೆಲಸಮಾಡುತ್ತ ಹೆಣ್ಣು ಕುಟುಂಬದ ಕಣ್ಣು ಎಂಬ ಭ್ರಮಾಧೀನ ಕಲ್ಪನೆಯಲ್ಲಿ ಸುಖಿಸುತ್ತೇವೆ. ಹೆಣ್ಣನ್ನು ಗಂಡಿನಂತೆ ಬೆಳೆಸುವ ಕ್ರಮ ಎಂದಿಗೆ ಸಾಧ್ಯವಾಗುವುದೋ, ಅಂಥಹ ಜೀವನ ವಿಧಾನ ಎಂದಿಗೆ ಭಾರತದಲ್ಲಿ ಅನುಷ್ಠಾನಗೊಳ್ಳುವುದೋ, ಅಂದಿಗೆ ಈ ಎಲ್ಲ ವೈರುಧ್ಯಗಳು ಕೊನೆಗೊಳ್ಳಬಹುದು. ಅಲ್ಲಿಯವರೆಗೆ ನಮ್ಮ ಎಲ್ಲ ಕ್ರಮ ಅಥವಾ ಹೋರಾಟಗಳು ಹಿಮ್ಮುಖ ಚಲನೆಯಲ್ಲಿಯೇ ಸಾಗುತ್ತವೆಯೇ ಹೊರತು ಬೇರೆ ಇಲ್ಲ. ಯಾಕೆಂದರೆ ಗಂಡಾದರೆ ಆತನ ಚಲನವಲನಗಳು, ಮನೆಗೆ ಬರುವ ಹೋಗುವ ಯಾವ ಸಂಗತಿಯೂ ಗಣ್ಯವಾಗುವುದಿಲ್ಲ. ಹೊರ ಹೋದ ಮಗ ಮನೆಗೆ ಬರದಿದ್ದರೆ ನಾಳೆಯಾದರೂ ಬರಬಹುದೆಂಬ ನಂಬಿಕೆ. ಅದೇ ಹೆಣ್ಣು ಬರಲು ತುಸು ತಡವಾದರೂ ತಹತಹ ಶುರುವಾಗುವುದು ಹೆತ್ತವರ ಎದೆಯಲ್ಲಿ. ಇದಕ್ಕೆ ನಮ್ಮ ಸಮಾಜದ ಜೀವನ ವಿಧಾನ. ಪುರುಷ ಪ್ರಧಾನತೆಯಲ್ಲಿ ದೈಹಿಕ ಅಬಲತೆಯ ಮೇಲಾಗುವ ದೌರ್ಜನ್ಯ ಕಾರಣ. ಹೆಣ್ಣು ನಿಸರ್ಗದ ಸುಂದರ ಸೃಷ್ಟಿ. ಆಕೆ ಪ್ರಕೃತಿ.ಹೊರುವ ಹೆರುವ ಸಾಮರ್ಥ್ಯ ಇರುವವಳು. ತಾಳಿಕೆ ಸಹನೆ ಹೀಗೆ ಇತ್ಯಾದಿ ಇತ್ಯಾದಿ ಆಕೆಯ ಬಗ್ಗೆ ಉಪಮೆ ರೂಪಕಗಳು ಹೇರಳ. ಹೋದಲ್ಲಿ ಬಂದಲ್ಲಿ ಇವುಗಳ ಕೇಳಿದಾಗಲೆಲ್ಲಾ ಹೆಣ್ಣು ಹಿಗ್ಗುತ್ತಾಳೆ. ಆದರೆ ಅದೇ ಆ ಪ್ರಕೃತಿಯ ಪಡಿಪಾಟಲೋ ಆಕೆ ಮಾತ್ರ ಬಲ್ಲಳು.

ಪುರುಷ ಶ್ರೇಷ್ಠತೆಯ ಸಂಗತಿಗಳು ಅದರ ಬೀಳಲುಗಳು ಎಷ್ಟು ಸುಭದ್ರವಾಗಿವೆ ಎಂದರೆ ಹೆಣ್ಣು ಅಲಿಖಿತ ಸಂಹಿತೆಗಳಲ್ಲಿ ಅದರ ಮುಷ್ಟಿಯಲ್ಲಿ ತಾನೇ ಹೂತುಹೋಗಿ, ಹೆಣ್ಣು ಎಷ್ಟೇ ಕಲಿತರೂ ಓದು ಬರಹವೆಂದು ತುಂಬಾ ಬದಲಾವಣೆಯ ಗಾಳಿಯನ್ನೆ ಉಸಿರಾಡುತ್ತಿದ್ದರೂ ಕೆಲವೊಂದು ವಿಚಾರಗಳಲ್ಲಿ ಸಮಾನತೆಯ ಅನುಷ್ಠಾನ ಆಕೆಗೆ ಇಷ್ಟವಿಲ್ಲವೆಂಬಂತೆ ನಡೆದುಕೊಳ್ಳುವ ವೈಖರಿ ಇದೆ.ಇದಕ್ಕೆ ಉದಾಹರಣೆ ಮೇಲಿನ ಒಂದು ಸಣ್ಣ ಘಟನೆ. ಇಷ್ಟಾಗಿಯೂ ಮಹಿಳೆ ಮತ್ತು ಆಕೆಯ ಕಾರ್ಯಕ್ಷಮತೆ ಶಿಕ್ಷಣದ ಬೆಂಬಲದಿಂದ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಬರೀಯ ವಿದೇಶಗಳಲ್ಲಿ ಮಾತ್ರ ಕಾಣುತ್ತಿದ್ದ ಮಹಿಳಾ ಪೈಲೆಟ್‌ಗಳು, ಮೆಟ್ರೋ ರೈಲು ಚಾಲಕರು,ರಿಕ್ಷಾ ಚಾಲಕರು, ಮಹಿಳಾ ಬಸ್ಸು ಟ್ರಕ್ಕು ಚಾಲಕರು ಇಂದು ಭಾರತದಂತಹ ಸಂಪ್ರದಾಯಸ್ಥ ದೇಶದಲ್ಲೂ ದಿನದಿಂದ ದಿನಕ್ಕೆ ಸಂಖ್ಯೆಯಲ್ಲಿ ಹೆಚ್ಚುತ್ತಿದ್ದು, ಮಹಿಳೆಗಿಂತ ದೈಹಿಕವಾಗಿ ಬಲಿಷ್ಟನಾಗಿರುವ ಪುರುಷ ಮಾತ್ರ ಮಾಡಬಲ್ಲ ಎಂಬ ಪರಿಕಲ್ಪನೆ ಹೊಂದಿದ ಇಂತಹ ಪ್ರತಿಯೊಂದು ಕಾರ್ಯವನ್ನು ಇಂದಿನ ಮಹಿಳೆ ದೈಹಿಕ ಬಲಕ್ಕಿಂತ ತನ್ನ ಮನೋಬಲದ ಶಕ್ತಿಯಿಂದ ಆತನಷ್ಟೇ ಕ್ಷಮತೆಯಿಂದ ಮಾಡುತ್ತ ಇರುವುದು ಸಂತೋಷದ ಸಂಗತಿ. ಸ್ತ್ರೀ ಪುರುಷ ಎಂಬ ತಾರತಮ್ಯಕ್ಕೆ ಕಾರಣವಾದ ಸಂಗತಿಗಳಿಗೆ ಮುಂದೊಂದು ದಿನ ಉತ್ತರ ಸಿಗಬಹುದೇನೋ?
*****

One thought on “0

  1. ಸರಿಯಾದ ಗ್ರಹಿಕೆ.
    ಸಿದ್ಧ ಸೂತ್ರಗಳಲ್ಲಿ ಮಹಿಳೆಯರನ್ನು ನೋಡಲಾಗುವುದಿಲ್ಲ.ತುಂಬ ಯೋಚನೆ-ಯೋಜನೆಗಳೊಂದಿಗೆ ಅವರು ಕಾರ್ಯ ನಿರ್ವಹಿಸುತ್ತಿರುತ್ತಾರೆ.ಮತ್ತು ಬಹಳ ಸಾರಿ ತಮ್ಮ ಆತಂಕಗಳನ್ನು ಹೊರ ಹಾಕದೆ ಅದಕ್ಕೆ ತಕ್ಕ ಬಂದೋಬಸ್ತು ಮಾಡುವುದೂ ಇದೆ…
    ಇದು ರಕ್ತಗತವೇ ಆಗಿದೆಯೇನೊ ಎನಿಸುವಂತೆ ಅವರ ನಡೆ ಇರುತ್ತದೆ..

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೋದ ಬಾಲ್ಯ
Next post ಆರತಿ

ಸಣ್ಣ ಕತೆ

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…