ಮತ್ತೆ ಹಸ್ತಿನಾಪುರಕ್ಕೆ ಬಂದ ಪಾಂಡವರು

-ಪಾಂಚಾಲರ ನಾಡಿನಲ್ಲಿ ನಡೆದ ದ್ರೌಪದಿ ಸ್ವಯಂವರದ ಬಳಿಕ ಹಸ್ತಿನಾಪುರದ ಅರಮನೆಯಲ್ಲಿ ಸಭೆ ನಡೆಸಿದ ದುರ್ಯೋಧನನು, ಪಾಂಡವರು ಬದುಕಿ ಬಂದಿರುವ ಸಂಗತಿಯನ್ನೂ ಸ್ವಯಂವರದಲ್ಲಿ ದ್ರೌಪದಿಯನ್ನು ಅರ್ಜುನ ಜಯಿಸಿದ್ದನ್ನೂ ತಿಳಿಸಿದನು. ದುರ್ಯೋಧನ ದುಶ್ಯಾಸನರಿಗಂತೂ ಪಾಂಡವರುಳಿವು ನುಂಗಲಾರದ ತುತ್ತಾಗಿತ್ತು. ವಿಷಯ ತಿಳಿದ ಭೀಷ್ಮಾದಿಗಳು ಹರ್ಷ ವ್ಯಕ್ತಪಡಿಸಿ ಅವರನ್ನು ಹಸ್ತಿನಾಪುರಕ್ಕೆ ಕರೆತರುವಂತೆ ಸೂಚಿಸಿದರು. ಧೃತರಾಷ್ಟ್ರನು ಸಂತೋಷಿಸಿದಂತೆ ಕಂಡರೂ ಒಳಗೊಳಗೆ ಅಸಹನೆಯಿಂದ ಕುದಿಯುತ್ತಿದ್ದ. ಶಕುನಿಯು ಪಾಂಡವರ ವಿನಾಶಕ್ಕೆ ಕಂಕಣ ತೊಟ್ಟಿದ್ದವನ ಹಾಗೆ ಮತ್ತೊಂದು ಯೋಜನೆ ರೂಪಿಸತೊಡಗಿದ-

ದ್ರುಪದಕುಮಾರಿಯ ಸ್ವಯಂವರದಲ್ಲಿ ಮಧ್ಯಮಪಾಂಡವ ಜಯಿಸಿರಲು
ಪಾಂಡುಕುಮಾರರ ಶೌರ್ಯವೆಂತಹುದು ಎಂದು ಜಗತ್ತಿಗೆ ತಿಳಿದಿರಲು
ಪಾಂಡವರೆಲ್ಲರು ಅರಗಿನಮನೆಯಲಿ ಅಳಿದರು ಎಂದೇ ನಂಬಿದ್ದ
ಅರಸಿಕೆಯಡ್ಡಿ ನಿವಾರಣೆಯಾಯಿತು ಎಂದು ಸಡಗರದಿ ಮುಳುಗಿದ್ದ
ಕೌರವಪಕ್ಷ ನಿರಾಶೆಯ ಹೊಂದಿತು ಮುಂದಿನ ನಡೆ ಇನ್ನೇನೆಂದು
ಸೇಡಿನ ಭಾವದ ಪಾಂಡವ ವೀರರ, ಮುಂದೆ ತಡೆಯುವುದು ಹೇಗೆಂದು!
ಪಾಂಚಾಲರ ಬಲ ಪಾಂಡವರೊಂದಿಗೆ ಇರುವ ಸಂಗತಿಯ ಮನಗಂಡು
ಅವರನು ಎದುರಿಸಿ ಜಯಿಸಲು ಆಗದು ಎಂಬ ವಾಸ್ತವವ ಬಗೆಗೊಂಡು
ಧೃತರಾಷ್ಟ್ರನು, ದುರ್ಯೋಧನ ಶಕುನಿಯ ದುಶ್ಯಾಸನರನು ಬರಮಾಡಿ
ಪಾಂಡವರಿಗೆ ಬಲ ಹೆಚ್ಚಿದೆಯೆನ್ನುವ ವಿವರವನ್ನು ಅವರಿಗೆ ನೀಡಿ
ಬಲಭೀಮನ ಕಡುವೈರಿಯಾಗಿರುವ ತನ್ನ ಕುಮಾರನ ಹಿತ ನೋಡಿ
ಪಾಂಡುಪುತ್ರರಿಗೆ ಪಾಲನು ನೀಡುವ ಬಗೆ ಹೇಗೆಂಬುವ ಮಾತಾಡಿ
‘ಎಲ್ಲರೂ ಒಪ್ಪಬೇಕಿದೆ’ ಎನ್ನುತ ಅಧಿಕಾರದ ಬಲ ಬಳಸಿದನು
ಹೇಳಿದ ಹಾಗೆಯೆ ಕೇಳಿರಿ ಎನ್ನುತ ತೀರ್ಮಾನವನ್ನು ತಿಳಿಸಿದನು
ಮೊದಲಿಗೆ ದುರ್ಯೋಧನ ಬೇಡೆಂದನು ಅವನಿಗೆ ಇಷ್ಟವು ಇರಲಿಲ್ಲ
ಶಕುನಿಯು ಅವನನು ಸಮಾಧಾನಿಸುತ ಒಪ್ಪಿಸಿಬಿಟ್ಟನು, ಬಿಡಲಿಲ್ಲ!
ಹಿರಿಯರು ಚರ್ಚಿಸಿ ದಾಯಾದಿಯಲ್ಲಿನ ಜಗಳದ ಚಿಂತನೆ ಮಾಡಿದರು
ಹೀಗೆಯೆ ಬಿಟ್ಟರೆ ಕೆಡುವುದು ಎನ್ನುತ ಪರಿಹಾರವನ್ನು ಹುಡುಕಿದರು
ಕುರುಕುಲ ಹಿರಿಯನು ಭೀಷ್ಮನು ನುಡಿದನು- “ಕೇಳಿ ಈಗ ನಾ ಹೇಳುವುದು
ದಾಯಾದಿಗಳಲಿ ಜಗಳವು ಬಂದರೆ ಅಳಿಯದೆ ಉಳಿಯುತ ಬೆಳೆಯುವುದು
ಕೌರವರನ್ನೂ ಪಾಂಡವರನ್ನೂ ಬೇರೆ ಬೇರೆಯೇ ಇಡಬೇಕು
ಅವರೊಳಗಿರುತಿಹ ದಾಯಾದಿ ಮತ್ಸರ ಬೇರಿನ ಸಮೇತ ಸುಡಬೇಕು
ಕುರುಗಳು ಆಳಿದ ಸಾಮ್ರಾಜ್ಯವನ್ನು ಎರಡು ವಿಭಾಗವ ಮಾಡೋಣ
ಎರಡೂ ಭಾಗಕೆ ದೊರೆಗಳ ನೇಮಿಸಿ ಮುಂದಿನ ನಡೆಯನು ನೋಡೋಣ”
ಸಭೆಯಲಿ ಗುಸುಗುಸು ಮಾತುಗಳಾಡುತ ಹಿರಿಯನ ಮಾತಿಗೆ ಬೆಲೆ ನೀಡಿ
ಇತ್ತಂಡಗಳೂ ಸುಖವಿರಲೆನ್ನುತ ಮುಂದಾಲೋಚನೆಯನ್ನು ಮಾಡಿ
ಎಲ್ಲಾ ಸಭಿಕರು ಒಮ್ಮತದಿಂದಲಿ ತಮ್ಮಯ ಒಪ್ಪಿಗೆ ನೀಡಿದರು
ಪಾಂಡವವೀರರ ನಗರಕೆ ಕರೆಸುವ ತೀರ್ಮಾನವನ್ನು ಮಾಡಿದರು!

ದಾಯಾದಿಗಳಲಿ ಅಸಹನೆಯಿರುವುದು ಲೋಕದಲ್ಲಿ ಎಲ್ಲಾ ಕಾಲ
ಮಾಯೆಗೆ ಬಲಿಯಾಗುತ್ತಲೆ ಇರುವರು ಮೊದಲಿನಿಂದ ಸದಾಕಾಲ
ಆಯಕಟ್ಟಿನಾಸ್ತಿಯು ತಮಗೆನುವರು ನ್ಯಾಯಕ್ಕೆಲ್ಲಿದೆ ಉಳಿಗಾಲ
ನಾಯಿಯಂತೆ ನಾಲಿಗೆ ಚಾಚುತ್ತಿರೆ ಬಂದುಬಿಡುತ್ತದೆ ಕೊನೆಗಾಲ

ಪಾಂಡವರೈವರು ಅಳಿಯಂದಿರು ಆ ಪಾಂಚಾಲರ ದೊರೆ ದ್ರುಪದನಿಗೆ
ಮಾವನ ಅರಮನೆಯಲ್ಲಿಯೆ ಇದ್ದರು ಪತಿಗಳಾಗಿ ಆ ದ್ರೌಪದಿಗೆ
ಪಾಂಡವವೀರರು ಮನೆಯಲ್ಲಿದ್ದರೆ ದ್ರುಪದನಿಗೇನೋ ಸಂತಸವು
ವರ್ಣಿಸಲಾಗದ ಅನುಭೂತಿಯ ಮಹದಾನಂದದ ಆ ಕ್ಷಣಗಳವು
ತಾವೇ ಆರ್ಯರು ಎನ್ನುತ ಕೊಬ್ಬಿದ ಕುರುಗಳ ಕುಡಿಗಳ ಸಂಬಂಧ
ಅನಾಯಾಸದಲಿ ಒದಗಿಬಂದಿತ್ತು ಪಾಂಚಾಲರ ದೊರೆಗಾನಂದ!
ಸೋದರಿ ಕುಂತಿಯ ಕಾಣಲು ಎನ್ನುತ ಅಲ್ಲಿಗೆ ಬಂದನು ವಸುದೇವ
ಯದುಕುಲನಂದನ ಕೃಷ್ಣನ ಸಂಗಡ, ನೀಡಲು ಬದುಕಿಗೆ ಮರುಜೀವ
ಕೃಷ್ಣನು ಎಂದರೆ ಭೂಮಿಗೆ ಬಂದಿಹ ವಿಷ್ಣುವೆಂದು ಜನ ನಂಬುವರು
ರಕ್ಕಸ ಗುಣಗಳ ಹೊಂದಿರುವವರನು ನಾಶಮಾಡುವನು ಎನ್ನುವರು!

ಸೆರೆಮನೆಯಲ್ಲಿಯೆ ಜನಿಸಿದ ಕೃಷ್ಣನು ಎಲ್ಲರ ಸೆರೆಯನ್ನು ಬಿಡಿಸುವವ
ನಂದಗೋಪನರಮನೆಯಲ್ಲಿ ಬೆಳೆಯುತ ಯಶೋದನಂದನ ಎನಿಸಿದವ
ರೋಹಿಣಿ ಪುತ್ರನು ಬಲರಾಮನಿಗೆ ಪ್ರೀತಿಯ ತಮ್ಮನು ತಾನಾಗಿ
ನಂದಗೋಕುಲದ ಮಂದಿಯೆಲ್ಲರಲಿ ಸುಂದರನೆಂದೇ ಹೆಸರಾಗಿ
ಮಣ್ಣಲಿ ಆಡುವ ಬೆಣ್ಣೆಯ ಕದಿಯುವ ತಣ್ಣನೆ ಮನವನು ತಳೆದವನು
ಮುರಳೀಮೋಹನ ಗಾನದಿ ಎಲ್ಲರ ಮನವನು ಸೆಳೆಯುತ ಬೆಳೆದವನು
ಬಾಲಲೀಲೆಗಳು ನಲಿಯುತಲಿದ್ದವು ಕತೆಗಳಾಗಿ ಆ ಕಾಲಕ್ಕೆ
ಲೀಲಾವಿನೋದಗಳಾಗುತಲಿದ್ದವು ಮೂಡಿಕೊಂಡು ಮತ್ತೂ ರೆಕ್ಕೆ
ತಂಗಿಯ ಮಕ್ಕಳ ಕೊಂದಿದ್ದಂತಹ ರಕ್ಕಸ ಕಂಸನ ಸಂಹರಿಸಿ
ತಂದೆತಾಯಿಯರ ಸೆರೆಯನು ಬಿಡಿಸಿದ ವೀರಕುಮಾರನು ಅವನೆನಿಸಿ
ಬುದ್ಧಿವಂತಿಕೆಗೆ ಹೆಸರಾಗಿದ್ದನು ಅದ್ಭುತ ಪ್ರತಿಭೆಯ ಚತುರಮತಿ
ತ್ರಿಕಾಲಜ್ಞಾನವ ತಿಳಿದಿದ್ದವನವ ಪ್ರಕಾಂಡ ಪಂಡಿತ ಪರಮೇಷ್ಠಿ!

ಗೋಪಿಕೆಯರೆಲ್ಲ ಕೃಷ್ಣನ ಚೆಲುವಿಗೆ ಮಾರುಹೋಗಿ ಆರಾಧಿಸಿರೆ
ಪ್ರೇಯಸಿಯರೆಂದು ನುಡಿವುದು ಲೋಕವು ಹೊರಳುವ ನಾಲಗೆಗೇನು ಹೊರೆ?
ಕೃಷ್ಣನು ಮಾಡಿದ ಸಾಹಸವೆಷ್ಟೋ ಲೆಕ್ಕವೇ ನಮಗೆ ಸಿಗದಷ್ಟು
ಕಷ್ಟದಲ್ಲಿರುವ ಯಾರೇ ಆಗಲಿ ರಕ್ಷಣೆ ನೀಡುವ ಮನವಿಟ್ಟು!
ರಕ್ಕಸ ನರಕಾಸುರನ ಸಂಹರಿಸಿ ರಕ್ಷಿಸಿದ್ದ ನೊಂದವರನ್ನು
ರಕ್ಕಸ ತಂಡದ ಪೀಡೆಗೆ ನಲುಗಿದ ಎಷ್ಟೋ ಮಂದಿ ಹೆಂಗಸರನ್ನು
ಸಾವಿರ ಸಾವಿರ ಸಂಖ್ಯೆಯ ಅವರುಗಳೆಲ್ಲರಿಗೂ ಕೃಷ್ಣನೆ ಬಂಧು
ಕಾಯುವ ಅವನೇ ತಮಗೆಲ್ಲರಿಗೂ ಒಡೆಯನು, ಪತಿಯೆಂದರು ಅಂದು
ಲೋಕವು ನುಡಿವುದು ಕೃಷ್ಣನಿಗೆಷ್ಟೋ ಮಡದಿಯರಿರುವರು ಲೋಕದಲಿ
ಭಾವಿಸಿ ನೋಡಲು ಅವರುಗಳೆಲ್ಲರ ಸಲುಹಿದ್ದನು ಮಾನವತೆಯಲ್ಲಿ
ಯಾದವ ವಂಶದ ಕೃಷ್ಣನು ಎಂದರೆ ದೇವನೆಂದು ಜನ ಬಗೆಯುವರು
ವಸುದೇವನಸುತನೆಂದರೆ ಸಮಸ್ತ ವಸುಧೆಯ ಜನ ಕೈಮುಗಿಯುವರು!

ಜಯಜಯ ಕೃಷ್ಣಾ ಯದುಕುಲ ನಂದನ ಜಯಜಯ ಮುರಳೀಮೋಹನನೇ
ಜಯಜಯ ಹೇ! ಮಧುಸೂದನ ಮಾಧವ ಜಯಜಯ ಆಪತ್ಬಾಂಧವನೇ
ಜಯಜಯ ಜನತಾ ಹೃದಯದ ಅಧಿಪತಿ ಜಯಜಯ ನಿನಗೆ, ಜನಾರ್ಧನನೇ
ಜಯಜಯ ಸುಂದರ ಮಂಗಳಮೂರುತಿ ಜನತೆಯ ದೇವನು ನೀನೇನೆ

ತಮ್ಮನ ಮಗನ ಪರಾಕ್ರಮವೆಲ್ಲವ ಅರಿತಿದ್ದಳು ಕುಂತಿಯು ತಾನು
ತನ್ನಯ ಮಕ್ಕಳನವನಿಗೆ ಒಪ್ಪಿಸಿ ‘ರಕ್ಷಿಸು’ ಎಂದಳು ಅವರನ್ನು
ಕೃಷ್ಣನು ಅಭಯವ ನೀಡುತ ಅವಳಿಗೆ ಪಾಂಡವರಿಗೆ ತಾ ನೆರಳಾದ
ಆಶ್ರಿತ ಜನರನ್ನು ಆದರಿಸುತ್ತಲಿ ಶತ್ರುಪಾಳೆಯಕ್ಕೆ ಯಮನಾದ
ಅತ್ತೆಯ ಮಕ್ಕಳ ಅಭ್ಯುದಯಕ್ಕೆ ಕೃಷ್ಣನು ಕಂಕಣ ಕಟ್ಟಿದನು
ಧರ್ಮದ ಪಕ್ಷವ ಹಿಡಿದೆನು ಎನ್ನುತ ಇಷ್ಟರ ಬೆನ್ನನು ತಟ್ಟಿದನು
‘ಕಷ್ಟನಷ್ಟಗಳು ಏನು ಬಂದರೂ ಪಾಂಡುಕುಮಾರರ ಕೈಬಿಡೆನು
ಅವರಿಗೆ ಉತ್ತಮ ಸಲಹೆಯ ನೀಡುತ ಕಷ್ಟವನ್ನು ಪರಿಹರಿಸುವೆನು’
ಎನ್ನುತ ಅವರಿಗೆ ಬೆನ್ನೆಲುಬಾಗಿಯೇ ನಿಲ್ಲುವ ವಚನವ ನೀಡಿದನು
ಕೃಷ್ಎಣಗೆ ತಂಗಿಯ ಸ್ಥಾನವ ನೀಡುತ ದ್ವಾರಕೆಯೆಡೆ ಮುಖ ಮಾಡಿದನು!

ಪಾಂಡುಕುಮಾರರ ಕರೆತರಲೆನ್ನುತ ಭೀಷ್ಮನು ತಾನೇ ಮುಂದಾಗಿ
ವಿದುರನ ಸಂಗಡ ಬಂದನು ಅಲ್ಲಿಗೆ ಅವರನು ಒಲಿಸುವ ಸಲುವಾಗಿ
ಕುಂತೀಸುತರನು ಸಂಧಿಸಿ ಭೀಷ್ಮನು ಕೇಳಿದನೆಲ್ಲರ ಕುಶಲವನು
ಎರಡು ವರುಷಗಳ ಒಳಿತು ಕೆಡಕುಗಳ ಆಲಿಸಿ ತಿಳಿದರು ಸಕಲವನು!
ಗಂಗಾತನಯನು, ಎದುರಮಹಾಶಯ ಮನದಲಿ ಚಿಂತಿಸಿ ನಾಳೆಯನು
ಕುಂತೀಪುತ್ರು ಅನುಭವಿಸಿದ ಆ ಸಂಕಟಗಳ ಸರಮಾಲೆಯನು
‘ಮುಂದೆ ಎಂತಹುದೆ ಅವಘಡವಾಗದು’ ಎಂದು ಅಭಯವನು ನೀಡಿದರು
‘ಹಸ್ತಿನಾಪುರಕ್ಕೆ ಮತ್ತೆ ಬರುವುದು’ ಎನ್ನುತ ಅವರನು ಬೇಡಿದರು
ಕುರುಸಾಮ್ರಾಜ್ಯವ ವಿಭಜಿಸಿ ಪಾಂಡವ ಪಾಲು ನೀಡುವೆವು ಎಂದವರು
ಹಿರಿಯರಾಗಿ ನಿಮ್ಮೊಂದಿಗೆ ಇರುವೆವು ಎನ್ನುತ ಅವರಿಗೆ ತಿಳಿಸಿದರು
ಕುಂತಿಗೆ ಸಂಧಿಯು ಒಪ್ಪಿಗೆಯಾಯಿತು ಪಾಂಡವರೂ ತಾವೊಪ್ಪಿದರು
ಮಾಡಿದುದೆಲ್ಲವ ಮರೆಯುತ ವೀರರು ರಾಜೀಸೂತ್ರವ ಅಪ್ಪಿದರು!
ಪಾಂಡವರೈವರು ತಾಯಿಯ ಸಂಗಡ ನಡೆದರು ಹಸ್ತಿನಪುರದತ್ತ
ದ್ರೌಪದಿ ತಾನೂ ಅನುಸರಿಸಿದ್ದಳು ಗಂಡಂದಿರ ಹಿತ ಬಯಸುತ್ತ
ವಾರಣಾವತಕೆ ಅಂದು ಹೋದವರು ಇಂದು ಮತ್ತೆ ನಾಡಿನ ಕಡೆಗೆ
ಮತ್ತೆ ಬದುಕಿ ಬಂದಂಥ ಪಾಂಡವರ ನೋಡುವಾಸೆ ಪುರಜನಗಳಿಗೆ
ನಗರದ ರಸ್ತೆಯ ಇಕ್ಕೆಡೆಯಲ್ಲೂ ಕಿಕ್ಕಿರಿದಿದ್ದರು ಪುರದ ಜನ
ಮತ್ತೆ ಪಾಂಡವರ ಕಾಣುತ ಪುರದಲ್ಲಿ ತುಂಬಿಬಂದಿತ್ತು ಅವರ ಮನ
ಸತ್ಯವಂತರಿಗೆ ಎಂದೂ ಜಯವೇ ಎಂಬ ಮಾತು ಹೊರಹೊಮ್ಮಿತ್ತು
ಸತ್ಯವಂತರಿಗೆ ಕಾಲವಲ್ಲೆಂದು ಹೇಳುವವರ ತುಟಿ ಮುಚ್ಚಿತ್ತು!
ಭೀಷ್ಮನ ಮಾತಿಗೆ ಬೆಲೆಯನ್ನು ನೀಡುತ ಬಂದಿದ್ದರು ಆ ಪಾಂಡವರು
ವಿದುರನು ಕೂಡಾ ಸರಿಯೆಂದಿದ್ದನು ಅವನನುಸರಿಸಿದಂಥವರು
ಹಿರಿಯರ ಮಾತಿಗೆ ಮೊದಲಿನಿಂದಲೂ ಬೆಲೆಯನ್ನು ನೀಡಿದ ಗುಣದವರು
ದೊರೆತನಕೆಂದೂ ಆಸೆಪಡದಂಥ ವಿಶಾಲಮನ ಹೊಂದಿರುವವರು
ಹಸ್ತಿನಾಪುರಕ್ಕೆ ಬಂದ ಕೂಡಲೆ ಸ್ವಾಗತ ದೊರಕಿತು ಎಲ್ಲರಿಗೆ
ಅಷ್ಟಕಷ್ಟಗಳ ಎದುರಿಸಿ ಜಯಿಸಿದ ಮಹಾವೀರರವರೆಲ್ಲರಿಗೆ
ಧೃತರಾಷ್ಟ್ರನು ತಾನೆದುರಿಗೆ ಬರುತಲಿ ಅವರಿಗೆ ಸ್ವಾಗತ ಕೋರಿದನು
ಒದಗಿದ ಎಲ್ಲಾ ಸಂಕಷ್ಟಗಳಿಗೆ ಕಪಟದ ಮರುಕವ ತೋರಿದನು

ಧರ್ಮರಾಯನಿಗೆ ಹೇಳಿದ ರಾಜನು “ಮಗನೇ ನಿಮಗೊಳಿತಾಗುವುದು
ಹಿರಿಯರು ಹೇಳುವ ಮಾತನು ಪಾಲಿಸು ಎಲ್ಲ ಶುಭಪ್ರದವಾಗುವುದು”
ಹೇಳಿದನಾದರೂ ಮನದೊಳಗೊಳಗೇ ಅಸಹನೆಯೇ ಮನೆಮಾಡಿತ್ತು
ಕುರುಕುಲ ಸಾಮ್ರಾಜ್ಯವು ಒಡೆಯುವುದೇ ಎಂಬ ಆತಂಕ ಕಾಡಿತ್ತು
ಆದರೆ, ಹಿರಿಯರು ಒಪ್ಪಿದ ನಂತರ ಏನು ತಾನೆ ಮಾಡಲು ಸಾಧ್ಯ?
ಒಲ್ಲದ ಮನವನ್ನು ಒಪ್ಪಿಸಿಕೊಳ್ಳುತ ಅರಗಿಸಿಕೊಳ್ಳುವುದು ದುಸ್ಸಾಧ್ಯ!

ಏಳುದಿನ ಕಾಲ ನಡೆಯಿತು ಚರ್ಚೆಯು ಕುರುಸಾಮ್ರಾಜ್ಯವ ವಿಭಜಿಸಲು
ಆಳುವವರನ್ನು ಒಪ್ಪಿಸಿಕೊಳುವುದು ಅಸಾಧ್ಯವೆಂದರಿವಿಗೆ ಬರಲು
ಭೀಷ್ಮ ತನ್ನ ಹಿರಿತನವನು ಬಳಸುತ ಅಂಕುಶ ಹಾಕಿದ ಕೆಲವರಿಗೆ
ಆದರೆ, ಯುವಕರು ಹಿರಿಯನ ಮಾತನು ಕಡೆಗಣಿಸಿದ್ದರು, ಇತ್ತು ಹಗೆ!
ಹೊಂದಿಕೆಯೆಂಬುದು ಕಗ್ಗಂಟಾಗಲು ಆಳುವವರಿಗೇ ಅನುಕೂಲ
ನಿಂದೆ, ಅಪವಾದ ಬಂದರೂ ಸರಿಯೆ ಎದುರಿಸಲಾರರು ಪ್ರತಿಕೂಲ
ಪಾಂಡವರಿದ್ದರು ಹಸ್ತಿನಪುರದಲಿ ಮುಂದಿನ ಶುಭದ ನಿರೀಕ್ಷೆಯಲಿ
ಜಯವನು ಪಡೆಯುತ ನಡೆದರು ಸುಖದಲಿ ತಮ್ಮಯ ಸಹನೆ ಪರೀಕ್ಷೆಯಲಿ
ರಾಜ್ಯಕೋಶಗಳು ವಿಭಜನೆಯಾದವು ಮುಂದಿನ ಕೆಲವೇ ದಿನದಲ್ಲಿ
ಆಳುವ ಮಂದಿಯ ಅನುಕೂಲದಲ್ಲಿ ಹೋಳಾಯಿತು ಎಲ್ಲವು ಅಲ್ಲಿ
ಕೌರವರುಳಿದರು ಹಸ್ತಿನಪುರದಲಿ, ಪಾಂಡವರಿಗೆ ಖಾಂಡವಪ್ರಸ್ಥ
ಪಾಲಿಗೆ ಬಂದುದು ಪಂಚಾಮೃತವೆಂದವರಿಗೆ ಅದುವೇ ಉತ್ಕೃಷ್ಟ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಳಿಯಲಿ ತೇಲಿದ ನೆರಳು
Next post ವಚನ ವಿಚಾರ – ಅಸಹಾಯಕ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

cheap jordans|wholesale air max|wholesale jordans|wholesale jewelry|wholesale jerseys