ಅರಸು ಮಕ್ಕಳ ಶಸ್ತ್ರವಿದ್ಯಾ ಪ್ರದರ್ಶನ

-ದ್ರೋಣನು ಅರಸುಮಕ್ಕಳಿಗೆ ವಿವಿಧ ವಿದ್ಯೆಗಳನ್ನು ಕಲಿಸಿ, ಅವರಲ್ಲಿ ಅರ್ಜುನನನ್ನು ಅಗ್ರಗಣ್ಯನನ್ನಾಗಿಸಿದನು. ತಾನು ರಾಜಕುಮಾರರಿಗೆ ಕಲಿಸಿದ ವಿದ್ಯೆಗಳನ್ನು ಅವರಿಂದ ಪ್ರದರ್ಶಿಸಿ ಕುರುಕುಲ ಹಿರಿಯರ ಮತ್ತು ಜನತೆಯ ಮೆಚ್ಚುಗೆ ಗಳಿಸುವ ಸಲುವಾಗಿ ಭೀಷ್ಮನ ಅನುಮತಿ ಪಡೆದು, ತನ್ನ ಶಿಷ್ಯರ ಶಸ್ತ್ರವಿದ್ಯಾ ಪ್ರದರ್ಶನಕ್ಕೆ ಏರ್ಪಾಡು ಮಾಡಿದನು. ಅದಕ್ಕಾಗಿ ಕೃಪಾಚಾರ್ಯನ ಮುಂದಾಳತ್ವದಲ್ಲಿ ಹಸ್ತಿನಾಪುರದ ಹೊರವಲಯದ ವಿಶಾಲವಾದ ಮೈದಾನದಲ್ಲಿ ಪ್ರದರ್ಶನಕ್ಕೆ ವೇದಿಕೆ ಸಿದ್ಧವಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಜನರು, ರಾಜಕುಮಾರರ ಸಾಹಸಗಳನ್ನು ನೋಡಲು, ಸಡಗರದಿಂದ ಉತ್ಸುಕರಾಗಿ ಕಾದುಕುಳಿತಿದ್ದರು-

ಹಸ್ತಿನಾಪುರದ ಹೊರವಲಯದ ಆ ತಾಣವು ಉಜ್ವಲ ಬೆಳಗಿತ್ತು
ಎತ್ತರ ವೇದಿಕೆ ಸುತ್ತಲೂ ದೀಪ ಬೆಳಕನು ಚೆಲ್ಲುತ ಹೊಳೆದಿತ್ತು
ವೇದಿಕೆ ಮೇಗಡೆ ಆಸನಗಳಲ್ಲಿ ಭೀಷ್ಮ, ದ್ರೋಣ, ಕೃಪರೊಂದು ಕಡೆ
ಸುತ್ತ ನೆರೆದಿರುವ ಸೇವಕರೊಂದಿಗೆ ಧೃತರಾಷ್ಟ್ರನು ಇನ್ನೊಂದು ಕಡೆ
ಕುಂತಿಯ ಜೊತೆ ಗಾಂಧಾರಿಯು ತಾನೂ ಕುಳಿತಳು ವೇದಿಕೆಯಂಚಿನಲಿ
ತಮ್ಮಯ ಮಕ್ಕಳ ಶೌರ್ಯ ಪ್ರದರ್ಶನ ಕಾಣಲು ಕಾತರ ಹೊಂದುತಲಿ
ನೆರೆಯ ರಾಜ್ಯಗಳ ರಾಜಕುಮಾರರು ವೀರರು ಶೂರರು ಬಹುವಾಗಿ
ನೆರೆದಿದ್ದರು ಆ ವೇದಿಕೆ ಎದುರಲಿ ಹುರಿದುಂಬಿಸುವಲಿ ನೆರವಾಗಿ!

ಭೀಮ-ಸುಯೋಧನರಿಬ್ಬರೂ ಬರಲು ಮಧಿಸಿದ ಗಜಗಳ ತೆರದಲ್ಲಿ
ಠೀವಿಯಲ್ಲವರು ಆಗಮಿಸಿದ್ದರು ಧರಿಸುತ ಗದೆಗಳ ಭುಜದಲ್ಲಿ
ತೊಡೆಗಳ ತಟ್ಟುತ ಮೀಸೆಯ ತೀಡುತ್ತ ಸುತ್ತಲೂ ದಿಟ್ಟಿಸಿ ನೋಡಿದರು
ವೀರಾವೇಷದಿ ಹೂಂಕರಿಸುತ್ತಲಿ ಧೂಳೆಬ್ಬಿಸಿ ಕಾದಾಡಿದರು
ಗದಾಯುದ್ಧದ ವಿಧವಿಧ ವರಸೆಯ, ಗತಿಯ ಪ್ರದರ್ಶನ ಕಣದಲ್ಲಿ
ಎಲ್ಲರ ಎದುರಲಿ ತಮ್ಮ ಪರಾಕ್ರಮ ತೋರುವ ಬಯಕೆಯು ಮನದಲ್ಲಿ
ವೀರರಿಬ್ಬರೂ ಯಾರೂ ಸೋಲರು, ಸ್ಪರ್ಧೆಗೆ ರಣಕಳೆಯೇರಿತ್ತು
ರೋಷಾವೇಶದ ಹೋರಾಟದಲ್ಲಿ ಸ್ಪರ್ಧೆಯು ವಿಷಮಿಸತೊಡಗಿತ್ತು!
ದ್ರೋಣನು ಅಶ್ವತ್ಥಾಮನ ಕರೆಯುತ ಕದನವ ಮುಗಿಸಲು ಸೂಚಿಸಿದ
ಗುರುಪುತ್ರನು ಇವರಿಬ್ಬರ ನಡುವಲಿ ನಿಲ್ಲುತ ಕದನವ ನಿಲ್ಲಿಸಿದ
ಬುಸುಗುಟ್ಟುತ್ತಲೆ ಒಬ್ಬರನೊಬ್ಬರು ದಿಟ್ಟಿಸಿ ಸರಿದರು ಹಿಂದಕ್ಕೆ
ಬೆಂಕಿಯ ಕಣ್ಣಲಿ ಅಸಹನೆ ಕಂಡಿತು ತಡೆಯಾಗಲು ಆ ಕದನಕ್ಕೆ
ತುಳುಕುತ್ತಿದ್ದಿತು ಅವರಿಬ್ಬರಲೂ ಹೋರಾಡುವ ರೋಷಾವೇಶ
ಒಬ್ಬರನೊಬ್ಬರು ಮುಗಿಸುತ್ತಿದ್ದರು ಸಿಕ್ಕಿದ್ದಿದ್ದರೆ ಅವಕಾಶ!

ಮಾನವನೆದೆಯಲಿ ಅಡಗಿದ ಮರ್ಮವ ಅರಿಯಲು ಆಗದು ಲೋಕದಲಿ
ದಾನವ ಗುಣಗಳು ದಾರಿ ಮಾಡುತಲಿ ಜಾಗವ ಪಡೆವುವು ಮನಸಿನಲಿ
ಹೀನತನವು ಮೈದಾಳುತಲಿರುವುದು ಮೌನವಾಗಿ ಮನದಾಳದಲಿ
ತಾನು ತನ್ನವರು ಎನ್ನುವ ಭಾವವು ತೂರಿ ನೆಲೆಸುವುದು ಹೃದಯದಲಿ

ನಂತರ ಪಾಂಡವ, ಕೌರವ ವೀರರು ವಿದ್ಯಾಪ್ರದರ್ಶನ ನೀಡಿದರು
ನೆರೆದಿಹ ಮಂದಿಯು ಕೇಕೆಯ ಹಾಕುತ ಕರತಾಡನವನು ಮಾಡಿದರು
ಕತ್ತಿ ಕಠಾರಿಯ ಬಳಸುವ ಶೈಲಿಯ ಮುಕ್ತವಾಗಿ ಹೊರಚೆಲ್ಲಿದರು
ರಥ ಕುದುರೆಗಳನ್ನು ಬಳಸುವ ಕೌಶಲ ಎಲ್ಲವನೂ ತೋರ್ಪಡಿಸಿದರು!
ಕಡೆಯಲಿ ಅರ್ಜುನ ಬಂದನು ಅಲ್ಲಿನ ಸ್ಪರ್ಧೆಯ ಅಂಕಣದೆಡೆಯಲ್ಲಿ
ಪಾರ್ಥನ ಕೀರ್ತಿಗೆ ಹರ್ಷೋದ್ಗಾರದ ಚಪ್ಪಾಳೆಯ ಸ್ವಾಗತವಲ್ಲಿ
ಎಲ್ಲೆಡೆಯಿಂದ ಪ್ರೋತ್ಸಾಹದ ಧ್ವನಿ ಜಯಜಯಕಾರವು ಮೊಳಗಿತ್ತು
ಕೌರವಪಕ್ಷವು ಅಸಹನೆಯಿಂದಲಿ ಕೈಗಳ ಹಿಚುಕುತ ಕುಳಿತಿತ್ತು
ದುರ್ಯೋಧನನಿಗೆ ಸಹಿಸಲು ಆಗದೆ ಮೊಗವನು ಪಕ್ಕಕೆ ತಿರುಗಿಸಿದ
ಅರ್ಜುನನಿಗೆ ಸಮ ನಿಲ್ಲುವ ವೀರನು ತಮ್ಮಲ್ಲಿಲ್ಲದೆ ಕಸಿವಿಸಿದ!

ಧೃತರಾಷ್ಟ್ರನಿಗೋ ಪಾಂಡವರೆಂದರೆ ಅಸಹನೆ ಮನಸಿನ ಒಳಗೊಳಗೆ
ಆದರೆ ಅವರುಗಳೆದುರಿರುವಾಗ ತೋರ್ಪಡಿಸುವನವ ಕಪಟ ನಗೆ
ಅರ್ಜುನ ವೇದಿಕೆಯೆದುರಿನ ಬಯಲಲಿ ನಿಂತು ಎಲ್ಲರನು ದಿಟ್ಟಿಸಿದ
ಎದೆಯನು ಬೀಗುತ ಕೈಗಳ ಮುಗಿಯುತ ಚಪ್ಪಾಳೆಯನ್ನು ಗಿಟ್ಟಿಸಿದ
ನಂತರ ತೋರಿದನೆಲ್ಲ ವಿದ್ಯೆಗಳ, ನೆರೆದಿಹ ಜನಗಳ ಎದುರಿನಲಿ
ಕೇಕೆಯ ಹಾಕಿತು ಜನತೆಯ ಸಾಗರ, ನೋಡುತ ಎಲ್ಲವ ಬೆರಗಿನಲಿ
ಕಡೆಯಲಿ ತೋರಿದ ಬಿಲ್ಲಿನ ವಿದ್ಯೆಯ ವಿಧವಿಧ ಕೌಶಲವನ್ನಲ್ಲಿ
ಎರಡೂ ಕೈಯಲಿ ಬಾಣ ಪ್ರಯೋಗಿಸಿ ಸವ್ಯಸಾಚಿತನವನ್ನಲ್ಲಿ
ದ್ರೋಣನು ವೇದಿಕೆ ಮೇಗಡೆ ನಿಲ್ಲುತ ನೆಚ್ಚಿನ ಶಿಷ್ಯನ ಹೊಗಳಿದನು
‘ಪಾರ್ಥನ ಸರಿಸಮ ನಿಲ್ಲುವರಿರುವರೆ?’ ಎನ್ನುತ ಸಭೆಯಲಿ ಬೀಗಿದನು!

‘ನಾನಿದ್ದೇನೆ!’ ಎನ್ನುವ ಘೋಷವು ಮೊಳಗಿತು ಪ್ರೇಕ್ಷಕರೆಡೆಯಿಂದ
ರಾಜಠೀವಿಯಲ್ಲಿ ಓರ್ವನು ಯುವಕನು ಎದೆಯನು ಸೆಟೆಸುತ ಹೊರಬಂದ
ವೇದಿಕೆಯಲಿ ಕುಳಿತಿದ್ದವರೆಲ್ಲರು ಅಚ್ಚರಿಯಿಂದಲಿ ನೋಡಿದರು
ನೆರೆದಿಹ ಮಂದಿ ಕುತೂಹಲದಿಂದ ಹೋ.. ಹೋ.. ಎನ್ನುತ ಕೂಗಿದರು!
ಚಿಗುರುಮೀಸೆ ನವಯುವಕನು ಚಿನ್ನದ ಕರ್ಣಕುಂಡಲವ ಧರಿಸಿದ್ದ
ರಾಜಕಳೆಯು ಆ ಮೊಗದಲ್ಲಿದ್ದಿತು, ಸಾಮಾನ್ಯನ ಉಡುಪಲ್ಲಿದ್ದ

ಗಾಂಭೀರ್ಯದ ನಡೆ ನಡೆಯುತ ಬಂದವ ನಿಂತನು ವೇದಿಕೆಯೆದುರಲ್ಲಿ
ತಲೆಯನು ಬಾಗುತ ಹಿರಿಯರೆಲ್ಲರಿಗೆ ವಂದಿಸಿ ಹೇಳಿದ ವಿನಯದಲಿ-
“ಅರ್ಜುನ ತೋರಿದ ಚಮತ್ಕಾರಗಳ ವಿದ್ಯೆಯ ನಾನೂ ತಿಳಿದಿರುವೆ
ಅನುಮತಿ ನೀಡಿರಿ ಈಗಲೆ ಇಲ್ಲಿಯೇ ವಿದ್ಯೆಯನೆಲ್ಲ ಪ್ರದರ್ಶಿಸುವೆ”
ಕುಂತೀಮಾತೆಯು ಮಮತೆಯ ನೋಟದಿ ದಿಟ್ಟಿಸಿ ನೋಡಿದಳವನನ್ನು
ಕರ್ಣಕುಂಡಲವ ಕಂಡವಳಾಗಲೆ ನೆನಪಿಸಿಕೊಂಡಳು ಗತವನ್ನು
ತಾನೇ ಆ ದಿನ ತೆಪ್ಪದ ಮಡಿಲಲಿ ಮಗುವಿನ ಸಂಗಡವಿರಿಸಿದ್ದ
ಕುಂಡಲದೊಂದಿಗೆ ಈ ದಿನ ಯುವಕನು ಅವಳ ಎದುರಿನಲಿ ಕಂಡಿದ್ದ!

ಮಾತೆಯ ಮಮತೆಯ ಕರುಳಿನ ಕೂಗಿಗೆ ಮರುದನಿ ಸಿಗುವುದು ಉಂಟೇನು?
ಕಾತರ ತುಂಬಿದ ಮಾತೆಯ ಮನಸಿನ ಯಾತನೆ ಕಳೆಯುವುದುಂಟೇನು?
ನೀತಿ ನಿಯಮಗಳ ಬಲೆಯಲಿ ಸಿಲುಕಿದ ಮಾತೃಮೂರುತಿಯ ಸ್ಥಿತಿಯೇನು?
ಮಾತೆಯು ಮಾನವಲೋಕದ ದೇವತೆ ಮಂಗಳಮೂರುತಿಯೇ ತಾನು!

ಕುಂತಿಯ ಕರುಳಿಗೆ ಅರಿವಾಗಿದ್ದಿತು ಅವನೇ ತನ್ನಯ ಮಗನೆಂದು
ದುರ್ವಾಸನು ಅಂದವಳಿಗೆ ನೀಡಿದ ಮೊದಲನೆ ವರವೇ ಅವನೆಂದು
ಆದರಾರಿಗೂ ಹೇಳಲು ಆಗದು ತನ್ನಯ ಹಿಂದಿನ ಕತೆಯನ್ನು
ಅರಮನೆ ಬದುಕಲಿ ಅವಳರಿತಿದ್ದಳು ಅಲ್ಲಿನ ಅಂದಿನ ಮಿತಿಯನ್ನು!
ದ್ರೋಣನು ಯುವಕನ ಕೇಳಿದ ಕೂಡಲೆ- “ಯುವಕನೆ, ಕಲಿತಿಹೆ ಮಾತನ್ನು
ಯಾವ ದೇಶದಿಂದಾಗಮಿಸಿರುವೆ? ನಿನ್ನಯ ನಾಮಾಂಕಿತವೇನು?”
ಯುವಕನು ಹೇಳಿದ- “ಕರೆವರು ನನ್ನನು ರಾಧಾಸುತ ಕರ್ಣನು ಎಂದು
ಅರ್ಜುನ ಸಾಹಸ ಮೀರಿಸುವಂತಹ ವಿದ್ಯೆಯ ಬಲ್ಲೆನು ನಾನಿಂದು
ಭಾರ್ಗವರಾಮನ ಬಳಿಯಲಿ ವಿಧವಿಧ ಶಸ್ತ್ರವಿದ್ಯೆಗಳ ಕಲಿತಿರುವೆ
ಕಲಿತಿರುವಂತಹ ವಿದ್ಯೆಗಳೆಲ್ಲವ ನಿಮಗೆಲ್ಲರಿಗೂ ತೋರಿಸುವೆ”
ದ್ರೋಣನು ಅವನನು ಮತ್ತೂ ಕೇಳಿದ- “ಕರ್ಣನೆ, ನಿನ್ನಯ ಕುಲವೇನು?
ನಿನಗೆ ಜನ್ಮವನು ನೀಡಿದ ನಿನ್ನಯ ತಂದೆತಾಯಿಗಳ ಹೆಸರೇನು?”
ಕರ್ಣನು ಏನೂ ಹೇಳಲಾಗದೆ ತಡವರಿಸಿದ್ದನು ಅರೆಘಳಿಗೆ
ತನ್ನಯ ಹುಟ್ಟಿಗೆ ಕಾರಣರಾರೋ? ನೋವಲಿ ನುಡಿದನು ಮರುಘಳಿಗೆ-

“ಯಾರೋ ಅರಿಯೆನು ನಾನು ಅನಾಥನು ವಂಶವದಾವುದೊ ತಿಳಿದಿಲ್ಲ
ಮಗುವಿರುವಾಗಲೆ ಗಂಗಾನದಿಯಲಿ ತೊರೆದರು ಏಕೋ ಅರಿವಿಲ್
ನನ್ನನು ಸಾಕಿದ ತಾಯಿಯು ರಾಧೆಯು ತಂದೆಯು ಸೂತನು ಅಧಿರಥನು
ಅರ್ಜುನನೊಂದಿಗೆ ಸ್ಪರ್ಧೆಗೆ ಬಂದಿಹೆ, ಇಷ್ಟು ವಿವರಗಳು ಸಾಕೇನು?”
ಕರ್ಣನು ಅಸಹನೆಯಿಂದಲಿ ಹೇಳಿದ ಮಾತನು ಕೇಳಿದ ದ್ರೋಣನಿಗೆ
ಕೋಪವು ಮನದಲಿ ಮೂಡತೊಡಗಿತ್ತು ಎಲ್ಲರೆದುರಲ್ಲಿ ಆ ಘಳಿಗೆ
ದ್ರೋಣನು ನುಡಿದನು ತಾತ್ಸಾರದಿಂದಲಿ- “ಸೂತಪುತ್ರ ನೀನಾಗಿರುವೆ
ಧರೆಯಲಿ ರಾಜರ ರಥವನು ನಡೆಸುವ ಸೂತರ ಕುಲದಲ್ಲಿ ಬೆಳೆದಿರುವೆ
ಕುಲಹೀನನು ನೀನಾದುದರಿಂದಲಿ ಕುಲಜರ ಜೊತೆ ಸರಿಸಮನಲ್ಲ
ಸೂತಪುತ್ರನಿಗೆ ರಾಜಪುತ್ರರೊಳು ಸ್ಪರ್ಧೆಗೈಯಲರ್ಹತೆಯಿಲ್ಲ!”

ಕುಲದಲಿ ಅರ್ಹತೆ ಕಾಣುವ ಲೋಕಕೆ ಛಲದಲಿ ನಂಬಿಕೆ ಇದೆಯೇನು?
ಕುಲಮದದಲ್ಲಿಯೆ ಮೆರೆಯುವ ಮಂದಿಗೆ ಬಲದ ಬಲ್ಮೆ ಅರಿಯುವುದೇನು?
ಛಲವೆಂಬುದು ಕುಲ ಬಲವೆಂಬುದು ಕುಲ ಎಂಬುದನರಿವುದು ಯಾವಾಗ?
ಕುಲಹೀನರು ಎಂದೆನ್ನುತ ಜರೆವರು, ಬಲಹೀನತೆ ಹೊಂದಿರುವಾಗ!

ಕರ್ಣ ನಿರಾಸೆಯ ಮೊಗವನು ಹೊತ್ತವ ಮೆಲ್ಲನೆ ಹಿಂದಡಿಯಿರಿಸಿದನು
ಕುಲಹೀನನು ತಾನೆನ್ನುವ ಮಾತಿಗೆ ನೋವಿನ ಮನದಲಿ ಕೊರಗಿದನು
ಕುಲವನು ಅರಿಯದೆ ಕೊರಗುತಲಿದ್ದನು ಅರಿವು ಬಂದ ಆ ದಿನದಿಂದ
ಕುಲವೇ ಪ್ರಧಾನವಾಯಿತೆ ಜಗದಲಿ? ಗುರುತಿಸಬಾರದೆ ಗುಣದಿಂದ?
ಪ್ರೇಕ್ಷಕ ವರ್ಗವು ಮನದಲಿ ಮರುಗಿತು ಕರ್ಣನ ಇಂಥ ಪರಿಸ್ಥಿತಿಗೆ
ಆಳುವ ವರ್ಗವ ಎದುರಿಸಿ ನಿಲ್ಲದ ತಮ್ಮಯ ಅಸಹಾಯಕ ಸ್ಥಿತಿಗೆ!
ಕುಂತಿಗೆ ಸಂಕಟವಾಯಿತು ತನ್ನಯ ಮಗನಿಗೆ ಒದಗಿದ ಸ್ಥಿತಿ ಕಂಡು
ಏನೂ ಮಾಡಲು ಆಗದ ಸ್ಥಿತಿಯಲಿ ಕುಳಿತಳು ಮನದಲಿ ಬಲುನೊಂದು
ಸೂರ್ಯಪುತ್ರನೆನಿಸಿದ ಕರ್ಣನನು ಲೋಕವು ಅರಿವುದು ಯಾವಾಗ?
ಧೈರ್ಯದಿಂದ ನಡೆದಂಥ ಸಂಗತಿಯ ತಿಳಿಸಲಾಗುವುದೆ ತನಗೀಗ?
ಯಾರ ಬಳಿ ತಾನು ಹೇಳಿಕೊಳ್ಳುವುದು? ಮನಸಿನಲ್ಲಿಯೇ ಮರುಗಿದಳು
ಅಯ್ಯೋ! ವಿಧಿಯೇ! ಎನ್ನುತ ತನ್ನಯ ಅಸಹಾಯಕತೆಗೆ ಕೊರಗಿದಳು!

ಧೃತರಾಷ್ಟ್ರನ ಸುತ ದುರ್ಯೋಧನ ತಾನಲ್ಲಿಗೆ ಬಂದನು ಕೆರಳುತ್ತ
ಕುಲದಪಮಾನದಿ ತಲೆಯನ್ನು ತಗ್ಗಿಸಿ ನಡೆದಿಹ ವೀರನ ತಡೆಯುತ್ತ
ಕರ್ಣನು ತಲೆಯನ್ನು ತಗ್ಗಿಸಿ ನಡೆದವ ನಿಂತನು ನೋಡುತ ಅವನನ್ನು
ಕರುಣೆಯ ನೋಟದಿ ದಿಟ್ಟಿಸಿ ನೋಡಿದ ಕೌರವ ನಿಂತಿರುವವನನ್ನು
‘ವೀರನೆ! ಎದೆಗುಂದದೆ ನೀನಿರುವುದು’ ಎನ್ನುತ ಕರ್ಣನ ಕೈಹಿಡಿದ
ಅರ್ಹತೆ ವಿಷಯವನೆತ್ತಿದ ದ್ರೋಣನ ಎಲ್ಲರ ಎದುರಲಿ ಪ್ರಶ್ನಿಸಿದ-
“ಗುರುವೇ, ಪ್ರತಿಭೆಯು ಇದ್ದರೆ ಸಾಲದೆ ಅರ್ಹತೆ ಏನದು ಕುಲದಲ್ಲಿ
ಧೈರ್ಯದ ಶೌರ್ಯವು ಇದ್ದರೆ ಸಾಲದೆ ಹೋರಾಡಲು ಈ ನೆಲದಲ್ಲಿ?”
ದ್ರೋಣನು ನುಡಿದನು- “ಕುರುಯುವರಾಜನೆ, ಅರ್ಹತೆ ಇರುವುದು ರಾಜರಿಗೆ
ಅವಕಾಶವ ಕೊಡಲಾಗದು ರಾಜರ ಸ್ಪರ್ಧೆಯಲಿಂದು ಸಾಮಾನ್ಯರಿಗೆ
ಹಿಂದಿನಿಂದಲೂ ರಾಜವಂಶದಲ್ಲಿ ಇರುವಂತಹ ಸ್ಪರ್ಧಾನಿಯಮ
ಇಂದು ನಾವುಗಳು ಮೀರಲಾಗುವುದೆ ಅಂದು ಮಾಡಿರುವ ಆ ನಿಯಮ?”

ಕುರುಯುವರಾಜನು ಕೇಳಿದ ಕೂಡಲೆ- “ರಾಜರಿಗೇ ಅರ್ಹತೆಯೇನು?
ಹಾಗಾದರೆ ನಾನೀಗಲೆ ಮಾಡುವೆ ರಾಜನಾಗಿ ರಾಧೇಯನನು
ಇಂದಿನಿಂದ ಈ ವೀರನಾಗುವನು ಅಂಗರಾಜ್ಯಕ್ಕೆ ಅಧಿಪತಿಯು
ಈಗಿನಿಂದಲೇ ಸ್ಪರ್ಧೆಗೆ ತೊಡಗಲು ಬರುವುದು ಅವನಿಗೆ ಅರ್ಹತೆಯು
ಅಂಗರಾಜ್ಯಕ್ಕೆ ಅಧಿಪತಿಯೆನ್ನುತ ಈಗಲೆ ಇಲ್ಲಿಯೇ ಘೋಷಿಸುವೆ
ಈಗಿಂದೀಗಲೆ ಎಲ್ಲರ ಎದುರಲಿ ರಾಜ್ಯಾಭಿಷೇಕವ ಮಾಡಿಸುವೆ”
ಹೇಳಿದ ಕೌರವ ಕೂಡಲೆ ಅವನನು ರಾಜನು ಎನ್ನುತ ಘೋಷಿಸಿದ
ಅಲ್ಲಿಯೆ ಅವನಿಗೆ ಪಟ್ಟವ ಕಟ್ಟಲು ತನ್ನವರಿಗೆ ಆದೇಶಿಸಿದ!

ಒಡನೆಯೆ ಒಡೆಯನ ಆಜ್ಞೆಗೆ ಬಂದವು ವಿಧವಿಧ ಮಂಗಳದ್ರವ್ಯಗಳು
ಷಣದಲಿ ಕಣದಲಿ ಮೊಳಗಿದುವಾಗಲೆ ಬಗೆಬಗೆ ಮಂಗಳವಾದ್ಯಗಳು
ಹಿರಿಯರು ಗುರುಗಳು ಸಭಿಕರು ಎಲ್ಲರು ಅಚ್ಚರಿಯಲ್ಲಿ ನೋಡುತ್ತಿರಲು
ನೆರೆದಿರುವಂತಹ ಜನಸಮೂಹವೇ ಜಯಘೋಷವ ಮಾಡುತ್ತಿರಲು
ಅಧ್ವರ್ಯುವ ಶುಭ ಮಂತ್ರಘೋಷದಲಿ ಕರ್ಣನಿಗಾಯಿತು ಅಭಿಷೇಕ
ಸ್ವರ್ಣಕಿರೀಟವ ಧರಿಸಿದ ಕರ್ಣನ ಹಣೆಯಲಿ ಗಂಧಾಕ್ಷತೆ ತಿಲಕ!

ಹೀನಕುಲದವನು ಎನಿಸಿದ ಕರ್ಣನು ಮೇಲುಕುಲದವರ ಸಮನಾದ
ಬದುಕಿನಲ್ಲಿ ಬಂದಂತಹ ಭಾಗ್ಯವ ಬರಸೆಳೆದಪ್ಪುತ ದೊರೆಯಾದ
ಗುರುಹಿರಿಯರು ತಾವಾಶೀರ್ವದಿಸಲು ಅಂಗರಾಜ್ಯದಧಿಪತಿಯಾದ
ದುರ್ಯೋಧನ ಬೆಂಬಲ ಬಲದಲ್ಲಿಯೆ ರಾಜ್ಯದ ಒಡೆಯನು ತಾನಾದ!
ಕನಸಲಿ ಕೂಡ ಬಯಸದ ಭಾಗ್ಯವು ಬಂದೊದಗಿದ್ದಿತು ಕರ್ಣನಿಗೆ
ಅವನಾನಂದಕೆ ಪಾರವಿರಲಿಲ್ಲ ಪದಗಳು ದೊರೆಯವು ವರ್ಣನೆಗೆ
ಕುರುಯುವರಾಜನ ಚರಣಕೆ ನಮಿಸುತ ಕಣ್ಣಲಿ ನೀರನು ತುಂಬಿದನು
ಮರುಜನುಮವನೇ ನೀಡಿದನೆನ್ನುತ ಕೃತಜ್ಞತೆಯನ್ನು ಹೊಂದಿದನು
ಒಡೆಯನಿಗೇ ತಾನಂಕಿತವೆನ್ನುತ ಆನಂದಭಾಷ್ಪವನುದುರಿಸಿದ
ಒಡೆಯನ ಸೇವೆಗೆ ಜೀವವನೇ ಮುಡುಪಿಡುವೆನು ಎನ್ನುತ ಕೈಮುಗಿದ!

ಜೋಡಿಸಿದೆರಡೂ ಕೈಗಳ ಹಿಡಿದನು ಎಲ್ಲರೆದುರು ದುರ್ಯೋಧನನು
ತೃಪ್ತಿಯ ಮನದಲಿ ಅವನಿಗೆ ಹೇಳಿದ- ‘ಜೀವದ ಗೆಳೆಯನು ನೀನಿನ್ನು!’
ಈರ್ವರೊಬ್ಬರನ್ನೊಬ್ಬರು ಅಪ್ಪುತ ಮುನ್ನುಡಿ ಬರೆದರು ಗೆಳೆತನಕೆ
ಜೀವಕೆ ಜೀವವ ನೀಡುವ ಗೆಳೆಯರು ಎಂಬುದ ಸಾರುತ ಈ ಜಗಕೆ
ಕುರುಯುವರಾಜನ ವಿಶಾಲ ಹೃದಯಕೆ ಸಭಿಕರೆಲ್ಲ ತಲೆದೂಗಿದರು
ಅಂಗರಾಜ-ಯುವರಾಜರ ಹೆಸರಲಿ ಜಯಘೋಷಗಳನ್ನು ಕೂಗಿದರು
ದುರ್ಯೋಧನನಿಗೆ ಸಂತಸವಾಯಿತು ತಮ್ಮ ಪಕ್ಷ ಬಲವಾಯ್ತೆಂದು
ಕರ್ಣನಂಥ ವೀರನು ದೊರೆತದ್ದು ಭಾಗ್ಯವೆಂದು ಬಗೆದನು ಅಂದು
ಅರ್ಜುನನಿಗೆ ಸಮವೀರನು ದೊರಕಿದ ಸಂತಸ ಕೌರವ ಪಕ್ಷದಲಿ
ನಾವೂ ವೈರಿಯ ಸಮಬಲರಾದೆವು ಎನ್ನುತ ಉಬ್ಬಿತು ಹರ್ಷದಲಿ!

ಪಾಂಡವವೀರರ ಮನದಲಿ ಯಾವುದೆ ಭಾವನೆಯೂ ಮೂಡಿರಲಿಲ್ಲ
ದುರ್ಯೋಧನ ಹೀಗೇತಕೆ ಮಾಡಿದ ಎಂಬ ಅರಿವು ಕೂಡಾ ಇಲ್
ಸೂತಪುತ್ರನನು ರಾಜನ ಮಾಡಿದನೇತಕೆ? ಅಚ್ಚರಿ ಮನದಲ್ಲಿ
ಹಿರಿಯರು ಗುರುಗಳು ಒಪ್ಪಿರುವಾಗ ಮರುಮಾತೇತಕೆ ನಮಗಿಲ್ಲಿ
ಎನ್ನುತ ಸುಮ್ಮನೆ ನೋಡುತಲಿದ್ದರು ಮುಂದೇನೋ ನೋಡುವ ಎಂದು
ಸನ್ನಡತೆಗೆ ಹೆಸರಾಗಿದ್ದಂತಹ ಪಂಚಪಾಂಡವರು ಅಲ್ಲಂದು
ನಂತರ ನಡೆಯಿತ ಕರ್ಣನ ಶೌರ್ಯದ ಶಸ್ತ್ರವಿದ್ಯೆ ಚಮತ್ಕಾರ
ದೊರಕಿತು ಅಲ್ಲಿಯ ಪ್ರೇಕ್ಷಕರೆಲ್ಲರ ಕರತಾಡನಗಳ ಸತ್ಕಾರ
ಕೌರವ ಪಾಂಡವರೆಲ್ಲರು ಮೆಚ್ಚುವ ಶೌರ್ಯ ಪ್ರದರ್ಶನ ಕರ್ಣನದು
ವೈರಿಗಳಾದರೂ ಮೆಚ್ಚಲೇಬೇಕು ಅಂಥ ಪ್ರದರ್ಶನ ವೀರನದು!

ಭೀಷ್ಮ, ದ್ರೋಣ, ಕೃಪ, ವಿದುರಾದಿಗಳೂ ನೋಡಿದರೆಲ್ಲವ ಬೆರಗಿನಲಿ
ಸಂಜಯ ಹೇಳಿದ ಧೃತರಾಷ್ಟ್ರನಿಗೆ ನಡೆದುದನೆಲ್ಲವ ವಿವರದಲಿ
ಚಿಂತೆಯು ತುಂಬಿದ ಕುಂತಿಯ ಕಣ್ಣಲಿ ಆನಂದದ ಹನಿ ತುಳುಕಿತ್ತು
ಆದರೆ, ವಿರೋದಪಕ್ಷವ ಸೇರಿದ ಎನ್ನುವ ಕಿಂಚಿತ್ ಅಳುಕಿತ್ತು
ಬಳಗದಲ್ಲಿ ಮಗನಿರುವನು ಎಂಬುದೆ ಅವಳಿಗೆ ಕೊಂಚ ಸಮಾಧಾನ
ಮನದಲಿ ಹರಸುತ ಒಳಿತನು ನೆನೆದಳು ‘ಶುಭವಾಗದೆ ಮುಂದೊಂದು ದಿನ?’
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಲ್ಲಮ
Next post ವಚನ ವಿಚಾರ – ದುಡ್ಡು ಎಂಬ ನಾಯಿ

ಸಣ್ಣ ಕತೆ

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ಬಲಿ

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ಕೂನನ ಮಗಳು ಕೆಂಚಿಯೂ….

  ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys