ಹಿರಿಯ ಜೀವ

(ಸರ್ವಜ್ಞ ಮೂರ್ತಿಯ ಸ್ವರೂಪದರ್ಶನಕಾರನನ್ನು ಕುರಿತು)

ಯಾರ ಅಭಿಶಾಪವೋ ಸರ್ವಜ್ಞ ಮೂರುತಿಗೆ !
ಅಮರನಲ್ಲವೆ- ಪುಷ್ಪದತ್ತ ಗಂಧರ್ವನವ?

ಕರದಿ ಕಪ್ಪರ ಹಿಡಿದು ಹಿರಿದಾದ ನಾಡಿನಲಿ
ತಿರಿದು ತಿನ್ನುತ, ತನ್ನ ಕಿರಿದುನಾಳ್ನುಡಿಗಳಲಿ
ಹಿರಿಯ ಹುರುಳನು ತುಂಬಿ ಜನಮನಕೆ ತಿನ್ನಿಸುತ್ತ
ಕನ್ನಡದ ಮಲೆನಾಡ-ಕನ್ನಡ ಬಯಲ್ನಾಡ-
ಮೂಡು-ಪಡುವಲು-ಬಡಗ-ತೆಂಕಣವನಲೆದಾಡಿ,
ಕನ್ನಡಿಗರೆಲ್ಲರನು ಕಂಡಿರ್ದ್ದ; ಆ ಕವಿಯ
ಕನ್ನಡಿಗರೆಲ್ಲ ಕಣ್ಣಾರೆ ಕಂಡಿರ್ದರು.

ಆ ಕವಿಯ ನಗೆನುಡಿಯ ಕೇಳಿ ನಕ್ಕಿರ್ದ್ದರು;
ಆತನಾ ಕಿಡಿನುಡಿಗೆ ನಡುಕ ಪಡೆದಿರ್ದ್ದರು,
ಅವನ ಬೆಡಗನು ಕೇಳಿ ಬೆರಗುವಟ್ಟಿರ್ದ್ದರು;
ಅವನ ಜೋಯಿಸ ಕೇಳಿ ಸೊಬಗನಾಂತಿರ್ದ್ದರು
ಅವನ ವೈದ್ಯಕದಿಂದ ಬೇನೆಯನು ನೀಗಿರ್ದ್ದ-
ರವನ ರಸವೈದ್ಯದಲ್ಲಿ ಕಲ್ಲು-ಕಬ್ಬಿಣವನೂ
ಕಾಂಚನವನಾಗಿ ಮಾಡುವ ಬಗೆಯಲಿರ್ದ್ದರು.
ಭವ್ಯ ದೇಹದ ಬ್ರಹ್ಮಚಾರಿ ಸರ್ವಜ್ಞನನು
ಬಲ್ಲದವರಿರಲಿಲ್ಲ ನಾಡಿನೋಳು….ಆದರೆ –
ಯಾರ ಶಾಪವೋ ಏನೋ, ಆ ಅಮರ ಕವಿಗೆ !
ಒಮ್ಮೆಲೇ ಅವನ ಮೈ ಅಳಿದು ಹೋಯಿತು; ಕೆಚ್ಚು-
ಗಟ್ಟಿರ್ದ್ದ ಅವನೊಡಲು ನುಚ್ಚು ನೂರಾಯಿತು !
ಆ ಊರಲೊಂದು ಚೂರ್, ಈ ಊರಲೊಂದು ಚೂರ್;
ಹಳ್ಳಿಗೊಂದೊಂದು ಚೂರ್, ಹಟ್ಟಿಗೊಂದೊಂದು ಚೂರ್;
ಹೊಲೆಯರಲಿ ತುಣುಕೊಂದು, ಹಾರುವರಲಿನ್ನೊಂದು,
ಕುರುಬ ಕುಂಬರ-ಜೇಡ-ಕಮ್ಮರರಲೊಂದೊಂದು;
ಒಕ್ಕಲಿಗರಲ್ಲಿ, ಆ ಲೆಕ್ಕಿಗರ ಮನೆಯಲ್ಲಿ-
ಮಕ್ಕಳಾಟಕೆ ಸಿಕ್ಕಿ ದಿಕ್ಕು ದಿಕ್ಕಿಗೆ ಚೂರು
ಸಿಕ್ಕಿದೊಲು ಚೆದರಿ ಸರ್ವಜ್ಞ ಮೂರ್ತಿಯ ಮೂರ್ತಿ
ಕಾಣದಂತಾಗಿತ್ತು ಕನ್ನಡದ ನಾಡಿನಲಿ.

ಯಾರ ಶಾಪವೋ ಕಾಣೆ, ಆ ಅಮೃತ ಮೂರುತಿಗೆ !
ಮೂರ್ತಿ ಅಳಿದರೆಯು ಆತನ ಕೀರ್ತಿ ನಾಡಿನಲಿ
ಸುಳಿದಾಡುತಿತ್ತು; ಸರ್ವಜ್ಞನಾ ಸವಿಹೆಸರು
ಕನ್ನಡದ ಬಾಯಿ-ಕಿವಿಗಳಲ್ಲಿ ಮನೆ ಮಾಡಿತ್ತು.
ಅಮರಕವಿ ಸರ್ವಜ್ಞ ಶಾಪಕ್ಕೆ ಸಾಯುವನೆ ?
ಶಾಪಮೋಚನ ಕಾಲ ಸಂದುಬಂದಿತು; ಕಾಲ
ತಾನೆ ಮಾಡುವನೇನು ತನ್ನ ಕಜ್ಜವನೆಲ್ಲ?
ಯಾವುದೋ ಹಿರಿಯ ಜೀವವನೊಂದ ಕರೆಯುವನು;
ಅದರ ಉಸಿರಲಿ ತನ್ನ ಉಸಿರನ್ನು ಊದುವನು.
ತನ್ನ ಕಜ್ಜವನೆಲ್ಲ ಮಾಡಿಸುವನದರಿಂದ.
ಆ ಜೀವವನೆ ‘ಮಹಾಪುರುಷ’ ಎನ್ನುತ ಲೋಕ
ಕೊಂಡಾಡಿ ಕೊನೆವಂತೆ ಮಾಡುತಿಹನಾತ.

ಸರ್ವಜ್ಞನಾ ನುಚ್ಚು ನೂರಾದ ಕಾಯವನು
ಮರಳಿ ಸಂಧಿಸಿ ಮೂರ್ತಿಯನ್ನು ನಿರ್ಮಿಸಲೆಂದು
ಕಾಲನಾರಿಸಿದ ಕನ್ನಡದೊಂದು ಹಿರಿಜೀವ
ದಿಕ್ಕು-ದಿಕ್ಕಿಗೆ ಚೆದರಿಬಿದ್ದಿರ್ದ್ದ ಕವಿರಾಯ-
ನಾ ಮೈಯ ನುಚ್ಚುನೂರುಗಳನೊರ್ಗೂಡಿಸುತ,
ತನ್ನ ಹಿರಿಮೆಯ ತಪದ ಸಂಜೀವಶಕ್ತಿಯಲಿ
ಸರ್ವಜ್ಞ ಕವಿಗೆ ಉಸಿರನ್ನಿತ್ತಿತಾ ಜೀವ.
ಮೆಯ್ಯಳಿದ ಕವಿ ಮತ್ತೆ ಮೆಯ್ಯಾಂತು ನಿಲ್ಲುವಂ-
ದದಿ ಮಾಡಿತಾ ಹಿರಿಯ ಜೀವ; ಈ ದಿನ ಮತ್ತೆ
ಸರ್ವಜ್ಞ ಮರಳಿ ಮಾತಾಡುತಿಹ ಮೈಗೊಂಡು.

ಕನ್ನಡಕೆ ಸರ್ವಜ್ಞ ಕವಿಯನೊದವಿಸಿಕೊಟ್ಟ
ಹಿರಿಜೀವ ಕನ್ನಡದ ಸೌಭಾಗ್ಯವದು ಸತ್ಯ !
ಕಾಲನೇ ಒಪ್ಪಿರಲು ಅದರ ಹಿರಿಮೆಯನಿನ್ನು
ಕನ್ನಡರು ಒಪ್ಪದೇನಿರುವರೇ? ಆ ಜೀವ
ಕನ್ನಡದ ನಾಡಿನಲಿ ಬಹುಕಾಲ ಬಾಳಲಿ !
ಆಳಾದ ಕನ್ನಡವು ಅರಸಾಗಿ ಬಾಳ್ವುದನು
ಕಣ್ಣಾರೆ ಕಂಡು ಸುಖ, ಶಾಂತಿಯನು ತಾಳಲಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬನ್ನಿ ಯಾತ್ರಿಕರೇ ನೀವೆಲ್ಲಾ
Next post ಮಾನಸ ಆತ್ಮದಲ್ಲಿ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…