ನವಿಲುಗರಿ – ೧೧

ನವಿಲುಗರಿ – ೧೧

ಮನೆಯಲ್ಲಿ ಚಿನ್ನು ಇಲ್ಲದಿರುವುದನ್ನು ಮೊದಲಿಗೆ ಗಮನಿಸಿದವಳು ಚಿನ್ನಮ್ಮ. ಅವಳ ಕೋಣೆಯಲ್ಲಿಲ್ಲವೆಂದರೆ ಕೆಂಚಮ್ಮಳ ಕೋಣೆಯಲ್ಲಿರಬಹುದೆಂದು ಭಾವಿಸಿ ಅಲ್ಲಿಗೆ ಹೋದಳು. ಕೆಂಚಮ್ಮ ಪ್ಲಕರ್‌ನಿಂದ ಹುಬ್ಬಿನಲ್ಲಿ ಹೆಚ್ಚು ಬೆಳೆದ ಕೂದಲನ್ನು ಕೀಳುತ್ತಿದ್ದವಳು ಚಿನ್ನಮ್ಮ ಒಳಬಂದೊಡನೆ ಕನ್ನಡಿ ಬದಿಗಿಟ್ಟು ಎದ್ದುನಿಂತಳು ‘ಬಾ ಅಕ್ಕಾ’ ಎಂದಳು. ‘ಚಿನ್ನು ಇಲ್ಲಿಗೇನಾರ ಬಂದವಳೇನೋ ಅಂತ ಬಂದೆ ಕಣೆ… ಈಗ ಒಂದಿಷ್ಟು ಆತಂಕಿತಳಾದಳು ಚಿನ್ನಮ್ಮ. ‘ಎಲ್ಲಿ ಹೋಗ್ತಾಳಕ್ಕ ಪಾಪ… ಅದಕ್ಕೇ ಉಸಿರಿಲ್ಲ. ಇಲ್ಲಿ ಎಲ್ಲಾರ ಅದಾಳೇನೋ ನೋಡು’ ಅಂದಳು ಕೆಂಚಮ್ಮ. ‘ಮೆಲ್ಲಗೆ ಮಾತಾಡೆ ಮಾರಾಯ್ತಿ, ಗಂಡಸರಿಗೆ ಗೊತ್ತಾದ್ರೆ ನಮ್ಮ ಮೈಮಾಗ್ನ ಬಟ್ಟೆ ಬಿಚ್ಚಿ ಹೊಡೆದಾರು’ ಸಣ್ಣದನಿಯಲ್ಲಿ ಎಚ್ಚರಿಸಿದಳು ಚಿನ್ನಮ್ಮ. ‘ನಡಿ ನಾವೇ ನೋಡೋನಾ. ಹಿತ್ತಲದಾಗೋ ಮನೆಮುಂದಿನ ತೋಟದಾಗೋ ಬೇಸರ ಕಳೆಯಾಕೆ ಕುಂತಿದ್ದಾಳು’ ಅಂದ ಕೆಂಚಮ್ಮ ಅವಳ ಜೊತೆ ಹೊರಟಳು. ಎಲ್ಲಾ ನೋಡಿದರು. ಚಿನ್ನಮ್ಮನ ಕೈಕಾಲುಗಳಲ್ಲಿ ಉಸಿರೇಯಿಲ್ಲ. ಕಾಲೆಳೆದುಕೊಂಡು ಒಳಬಂದಳು. ‘ಎಲ್ಲಿ ಹೋಗಿದ್ದಾಳೆ ಈ ಹುಡುಗಿ? ತನಗೂ ಕೇಳದಷ್ಟು ಮೆಲುದನಿ ಹೊರಡಿಸಿದಳು. ‘ಗಾಬರಿಯಾಗಬೇಡಕ್ಕಾ ಇಲ್ಲೆ ಎಲ್ಲಾರ ಫ್ರೆಂಡ್ ಮನೆಗೆ ಹೋಗಿದ್ದಾಳೋ ಏನೋ’ ಕೆಂಚಮ್ಮನದು ಹಾರಿಕೆ ಉತ್ತರ.

‘ಏನು ಮಾತು ಅಂತ ಆಡ್ತಿಯವ್ವ, ಹೊರಗೂ ಒಳಗೂ ಗಂಡಸರು ಕಾವಲ್ದಾರೆ… ಅದ್ಹೆಂಗೆ ಅವರ ಕಣ್ಣು ತಪ್ಪಿಸಿ ಹೋದ್ಳೆ, ನಿನಗಾರ ಒಂದು ಮಾತು ಹೇಳ್ದೆ ಹೋಗೋಳಲ್ಲ ಬಿಡು… ಜೀವಕ್ಕೇನಾರ ಮಾಡ್ಕೊಂಬಿಟ್ರೆ ಅವರಪ್ಪ ನನ್ನ ಜೀವ ಉಳಿಸ್ಯಾನಾ? ಅವಳಿಲ್ದೆ ನಾನಾರ ಹೆಂಗೆ ಬದುಕ್ಲಿ ಹೇಳೆ ಕೆಂಚಮ್ಮ’ ಅಳುವುದೊಂದೇ ದಾರಿ ಕಂಡಿತು. ಜೋರಾಗಿ ಅಳುವಂತಿಲ್ಲ. ‘ಕೆಂಚಮ್ಮ, ಎಲ್ಲಿ ಹೋಗಿದ್ದಾಳೆ? ನಿನಗೇನಾರ ಹೇಳಿ ಹೋದ್ಲೋ ಹೆಂಗೆ…? ಬಾಯಿಬಿಡೆ ನಮ್ಮವ್ವ’ ತೀರಾ ಅಧೀರಳಾದ ಚಿನ್ನಮ್ಮ ಆಕೆಯ ಕೈಹಿಡಿದು ಬೇಡಿದಳು.

‘ನಮ್ಮ ಮನೆ ದೇವರಾಣೆಗೂ ನಂಗೊತ್ತಿಲ್ಲಕಣಕ್ಕ. ಅವಳು ಜೀವಂತವಾಗಿ ತಿರುಗಿ ಬಂದ್ರಷ್ಟೆ ಸಾಕು. ದಂತಗೊಂಬೆಯಂತಹ ಹುಡ್ಗಿ. ಎಲ್ಲರ ಕಣ್ಣು ತಪ್ಪಿಸಿ ಅದಿನ್ನೆಂಗೆ ಹೋಗಿದ್ದಾಳು…’ ಬಡಬಡಿಸಿದಳು ಕೆಂಚಮ್ಮ.

‘ಗಂಡಸರು ಉಣ್ಣಾಕೆ ಬರೋ ಹೊತ್ತಾತು. ಅವರು ಬಂದು ಕೇಳಿದರೆ ಏನೇಗತಿ?’ ತರಗುಟ್ಟಿ ನಡುಗಿದಳು ಚಿನ್ನಮ್ಮ.

‘ಕೇಳಿದ್ರೇನಾತು ಬಿಡಕ್ಕ. ಅವಳೀಗ ಎಲ್ಲರ ಜೊತೆ ಊಟ ಮಾಡೋದಿರ್‍ಲಿ. ಊಟ ಬಿಟ್ಟು ಎಷ್ಟು ದಿನ ಆತು. ಬಲವಂತಕ್ಕೆ ಒಂದು ತುತ್ತು ತಿಂದರೆ ಅದೇ ಹೆಚ್ಚು. ಗಂಡಸರು ಕೇಳಿದರೆ ಅವಳಾಗ್ಲೆ ಉಂಡು ಮಲಗಿದಳು ಅಂತ ಹೇಳಿದ್ರಾತು’ ಪರಿಹಾರ ಸೂಚಿಸಿದಳು ಕೆಂಚಮ್ಮ.

‘ಅಯ್ಯೋ ಮನೆಹಾಳಿ. ಈವತ್ತು ಉಳ್ಕೊಂಡೆ. ನಾಳೆ ಕೇಳಿದರೆ?’ ಚಿನ್ನಮ್ಮ ಗಾಬರಿಗೊಂಡಳು. ಇವತ್ತು ಒಂದು ದಿನ ಕಳೆದುಬಿಟ್ಟರೆ ಸಾಕು. ರಂಗ ಚಿನ್ನು ಬಹಳ ದೂರ ಹೊರಟು ಹೋಗಿರ್ತಾರೆ ಎಂಬ ಲೆಕ್ಕಾಚಾರ ಕೆಂಚಮ್ಮನದು.

‘ನಾಳೆ ಮಾತು ನಾಳೆಗಾತು ಬಿಡು’ ಅಲಕ್ಷವಾಗಂದಳು. ಕೆಂಚಮ್ಮ ಅಲಿಯಾಸ್ ಸುಮ.

‘ತಾಯಿ ಸಂಕಟ ನಿನ್ಗೆ ಹೆಂಗೇ ಅರ್ಥವಾದೀತು ಹೆಂಗ್ಸೆ. ಅವರಿಗೆ ಸುಳ್ಳು ಹೇಳೋಕಿಂತ ನಿಜ ಹೇಳಿದ್ರೆ ಎಲ್ಲಾರ ಹುಡುಕಿಯಾರು. ಅವಳು ಚಿಕ್ಕ ಹುಡುಗಿ ಹಿಂಗೆ ಹೋಗಿರೋದು ನೋಡಿದರೆ ಅವಳು ಜೀವಕ್ಕೆ…’ ಬುಳುಬುಳನೆ ಅತ್ತಳು ಚಿನ್ನಮ್ಮ. ಅವಳನ್ನು ಹೇಗೆ ಸಂತೈಸಬೇಕೋ ತಿಳಿಯದಾದ ಕೆಂಚಮ್ಮನ ಎದೆ ಬಡಿದುಕೊಂಡಿತು. ಆದರೂ ತಾನು ಮಾಡಿದ್ದು ತಪ್ಪು ಎಂದಾಕೆಯ ಮನ ಅಂಜಲಿಲ್ಲ. ಇವರು ಪರಿತಪಿಸುವಾಗಲೆ ಭರಮಪ್ಪ ಮಕ್ಕಳಿಬ್ಬರೊಂದಿಗೆ ಕಾರಿನಲ್ಲಿ ಬಂದಿಳಿದ ಸುಳಿವು ದಬದಬನೆ ಕಾರು ಬಾಗಿಲು ಮುಚ್ಚುವ ಶಬ್ದ ಸಾರಿತು. ಚಿನ್ನಮ್ಮಳ ನಾಲಿಗೆ ದ್ರವ ಆರಿತು. ಬಂದವರೇ ಸೋಫಾದಲ್ಲಿ ಕೂತು ತೋಟದ ಅಡಿಕೆ ಬೆಳೆ, ಅದರಿಂದ ಬರುವ ಮೊತ್ತದ ಬಗ್ಗೆ ಲೆಕ್ಕಾಚಾರದ ಮಾತಿಗೆ ಕುಳಿತರು. ಈ ಸಲ ರೇಟ್ ಚೆಂದಾಗದೆ ಬಂಗಾರ ಬೆಳದ್ದೀವಿ ಅಂತ ಅಂಡ್ಕೊಂಡ್ರು ತಪ್ಪಿಲ್ಲವೆಂದು ಭರಮಪ್ಪ ಖುಷಿಯಾದರು. ಮಾತಿನ ನಡುವೆ ಬಸವಳಿದು ನಿಂತ ಮನೆ ಹೆಂಗಸರ ಮೋರೆ ನೋಡಿದ ಭರಮಪ್ಪ ಅವರತ್ತ ತಿರುಗಿದರು, ‘ಏನ್ರವ್ವ ಮೀನುಸಾರು ರೆಡಿನಾ?’ ಪ್ರಶ್ನಿಸಿದರು.

‘ಓಹೋ…. ಆಗ್ಲೆ… ಆಗ್ಲೆ ಆತು’ ಚಿನ್ನಮ್ಮನ ಧ್ವನಿಯಷ್ಟೇ ಅಲ್ಲ ದೇಹಾದ್ಯಂತ ನಡುಕ.

‘ಯಾಕವ್ವ ಮೈನಾಗೆ ಸೆಂದಾಕಿಲ್ಲೇನು?’ ಮತ್ತೆ ಪ್ರಶ್ನೆ.

‘ಏಯ್ ಹಂಗೇನಿಲ್ರಿ’ ಎಂದು ಮತ್ತೆ ಮತ್ತೆ ವಿಲಕ್ಷಣವಾಗಿ ಸೆರಗು ಹೊದ್ದಳು ಚಿನ್ನಮ್ಮ.

‘ಕೂಸು ಉಣ್ತೆನೇ?’ ಉಗ್ರಪ್ಪ ಮಗಳ ಬಗ್ಗೆ ಕೇಳಿದ.

‘ಆಗ್ಲೆ ಉಂಡು ಮಲಗಿದಳ್ರಿ ಭಾವಾರೆ’ ತೊದಲಿದಳು ಕೆಂಚಮ್ಮ.

‘ಈಗಾರ ಹಠ ಮಾಡೋದು ಕಡಿಮೆ ಮಾಡ್ಯಾಳೋ ಹೆಂಗೆ?’ ಮೈಲಾರಿ ಕೇಳಿದ.

‘ಈಗ ಭಾಳ್ ಸುಧಾರಿಸ್ಯಾಳೆ…’ ಕೆಂಚಮ್ಮನೇ ಮತ್ತೆ ಉತ್ತರಿಸಿದಳು. ಆದರೆ ಚಿನ್ನಮ್ಮನಿಗೆ ಆ ಧೈರ್ಯ ಎಲ್ಲಿಂದ ಬಂದೀತು. ಭಯದಿಂದಾಗಿ ಆಕೆಯ ನಾಲಿಗೆಯೇ ಹೊರಳದು.

‘ನಡಿರ್ರಲಾ ಉಂಬೋಣಾ’ ಭರಮಪ್ಪ ಮೇಲೆದ್ದರು. ಎಲ್ಲರೂ ಡೈನಿಂಗ್ ಟೇಬಲ್ ಬಳಿ ನಡೆದರು.

‘ಒಂದು ಮೀನೀಟು ತಡಿರ್ರಲೆ… ಕೂಸಿನ್ನ ಮಾತಾಡಿಸ್ಕೊಂಡು ಬತ್ತೀನಿ. ಇಲ್ಲದಿದ್ದರೆ ಗಂಟಲಾಗೆ ಕೂಳ ಇಳಿಯೋದಿಲ್ಲ’ ಎಂದ ಭರಮಪ್ಪ ಚಿನ್ನುವಿನ ಕೋಣೆಯತ್ತ ಹೆಜ್ಜೆ ಹಾಕಿದರು. ಅವರ ಒಂದೊಂದು ಹೆಜ್ಜೆಯೂ ಚಿನ್ನಮ್ಮನ ಎದೆಯ ಮೇಲೆ ಇಟ್ಟಂತಾಯಿತು. ಕೆಂಚಮ್ಮನಿಗೂ ಈಗ ಭಯ ಹತ್ತಿಕೊಂಡಿತು. ಕೋಣೆ ಖಾಲಿ ಖಾಲಿ ‘ಚಿನ್ನು ಚಿನ್ನುಮರಿ’ ಕೂಗಿ ಕರೆದರು ಭರಮಪ್ಪ.

‘ಎಲ್ಲವ್ವ ಕೂಸು?’ ಭರಮಪ್ಪ ಹಿಂದಿರುಗಿ ಬರುತ್ತಾ ಗದರುವ ಪರಿ ಪ್ರಶ್ನಿಸಿದರು. ಚಿನ್ನಮ್ಮ ಗಳಗಳನೆ ಅಳಲಾರಂಭಿಸಿದಳು. ಊಟಕ್ಕೆ ಕೂತ ಉಗ್ರಪ್ಪ, ಮೈಲಾರಿಯೂ ದುಗಡದಿಂದೆದ್ದು ಬಂದರು.

‘ಯಾಕೆ ಅಳ್ತಿದಿ? ಎಲ್ಲೆ ಅವಳು?’ ಉಗ್ರಪ್ಪ ಗುಡುಗಿದ.

‘ಸಂಜೆಯಿಂದ… ಸಂಜೆಯಿಂದ ಕಾಣ್ಯಾ ಇಲ್ರಿ’ ತೊದಲಿದಳು. ರಪ್ಪನೆ ಅವಳ ಕೆನ್ನೆಗೆ ಹೊಡೆದ ಉಗ್ರಪ್ಪ ನಖಶಿಖಾಂತ ಉರಿದುಹೋದ. ‘ಇಷ್ಟು ಮಂದಿ ಆಳುಕಾಳುಗಳಿದ್ದು ಅವಳು ಯಾರಿಗೂ ತಿಳಿದಂಗೆ ಹೆಂಗೆ ಹೋದ್ಳು?’ ಅಬ್ಬರಿಸಿದ. ಮೈಲಾರಿ ಆಳುಗಳನ್ನೆಲ್ಲಾ ಕೂಗಿ ಕರೆದ. ಸಾಲಾಗಿ ಬಂದು ನಿಂತರು.

‘ಎಲ್ಲಿ… ಎಲ್ರೋ ನಮ್ಮ ಚಿನ್ನು? ಚಿನ್ನು ಎಲ್ಲಿ?’ ಒಬ್ಬೊಬ್ಬರ ಕಾಲರ್ ಹಿಡಿದು ಬಾರಿಸಿದ. ಒಬ್ಬರ ಮುಖವನ್ನೊಬ್ಬರು ನೋಡಿಕೊಂಡ ಆಳುಕಾಳುಗಳಾದರೂ ಏನು ಹೇಳಿಯಾರು? ‘ಒಳಗೆ ಇರಬೇಕಲ್ರ… ಆಯಮ್ಮ ಹೊಸ್ತಿಲು ದಾಟಂತೂ ಹೊರಾಕೋಗಿಲ್ರ’ ಒಬ್ಬ ನಡುಗುತ್ತ ನಿವೇದಿಸಿಕೊಂಡ.

‘ಹೌದು ಮಾಸಾಮಿ’ ಅಂತ ಎಲ್ಲರೂ ಕುಕ್ಕರಗಾಲಲ್ಲಿ ಕೂತು ದೀನರಾಗಿ ಕೈಮುಗಿದರು. ‘ಹಂಗಾರೆ ಅವಳೆಲ್ಲರಲೇ?’ ಉಗ್ರಪ್ಪ ಕಿರುಚಿದ. ಅವನ ದನಿ ಸೂರಿಗೆ ಬಡಿದು ಪ್ರತಿಧ್ವನಿಸಿತು.

‘ಇಲ್ಲಿ ಇದಾಳೆ’ ಗಡಸು ದನಿಯೊಂದು ಕೇಳಿತು. ಎಲ್ಲರೂ ದನಿಬಂದತ್ತ ದೃಷ್ಟಿ ಹಾಯಿಸಿದರು. ಬಾಗಿಲಲ್ಲಿ ರಂಗ ನಿಂತಿರುವುದು ಕಂಡಾಗ ಚೇಳು ಕುಟುಕಿಸಿಕೊಂಡವರಂತಾದರು. ಕೆಂಚಮ್ಮಳಿಗೆ ತನ್ನ ಕಾಲಡಿಯ ನೆಲವೇ ಕುಸಿದಂತೆ ಭಾಸ, ರಂಗ ಕಾಣುತ್ತಿದ್ದಾನೆ ಚಿನ್ನು ಎಲ್ಲಿ??

‘ಅವಳೆಲ್ಲೋ ಬದ್ಮಾಷ್’ ಉಗ್ರಪ್ಪ ವ್ಯಗ್ರವಾಗಿ ಮುಂದೆ ಬಂದ.

‘ಧೈರ್ಯವಾಗಿ ಬಾ ಭವಾನಿ… ನೀನು ಯಾವ ತಪ್ಪು ಮಾಡಿಲ್ಲ’ ಎಂದ ರಂಗ ತನ್ನ ಹಿಂದೆ ಅಡಗಿರುವ ಚಿನ್ನುವನ್ನು ಪಕ್ಕಕ್ಕೆ ಕರೆದ. ರಂಗನ ಬೆನ್ನ ಹಿಂದೆ ಅವಿತಿದ್ದ ಚಿನ್ನು ಈಚೆ ಬಂದಳು. ಏನು ಮಾಡಬೇಕೋ ಏನು ಆಡಬೇಕೋ ತಿಳಿಯದೆ ಎಲ್ಲರೂ ಕ್ಷಣ ಸ್ತಂಭೀಭೂತರಾದರು. ಆಳುಕಾಳುಗಳು ರಂಗನ ಮೇಲೆ ಎರಗಲುದ್ಯುಕ್ತರಾಗಿ ‘ಯೋಯ್’ ಎಂದು ಅರಚುತ್ತಾ ಮುನ್ನುಗಿದ್ದಾಗ ‘ನಿಲ್ಲಿ… ನಿಲ್ಲರಲೆ’ ತಡೆದರು ಭರಮಪ್ಪ.

‘ಎಲ್ಲಿಗೆ ಕರ್‍ಕೊಂಡು ಹೋಗಿದ್ಯೋ ಇವಳನ್ನಾ?’ ಭರಮಪ್ಪ ಉರಿಗಣ್ಣು ಬಿಟ್ಟರು.

‘ನಾನ್ ಯಾಕೆ ಎಲ್ಲಿಗಾದ್ರೂ ಕರ್‍ಕೊಂಡು ಹೋಗ್ಲಿ, ನಮ್ಮ ಮನೆಗೆ ಬಂದಿದ್ದಳು… ನಮಗೂ ನಿಮಗೂ ಆಗಿಬರಲ್ಲ… ನಾವು ಮನುಷ್ಯರಂತೆ ಬದುಕ್ತಿದೀವಿ. ಸುಮ್ನೆ ಇಲ್ಲದ ರಾದ್ಧಾಂತ ಬೇಡ ಅಂತ ನಾನೇ ಬುದ್ದಿ ಹೇಳಿ ಕರ್‍ಕೊಂಡು ಬಂದೆ’ ಒಂದಿನಿತೂ ಅಳುಕದೆ ನಿಧಾನವಾಗಿ ಹೇಳಿದ ರಂಗ.

‘ಅವಳು ಯಾಕೆ ನಿನ್ನ ಮನೆಗೆ ಬಂದಿದ್ದಳೋ ನಾಯಿ?’ ಉಗ್ರಪ್ಪ ಗುಡುಗಿದ.

‘ನಿನ್ನ ಮಗಳನ್ನೇ ಕೇಳೋ… ಎದುರಿಗೇ ಇದ್ದಾಳಲ್ಲ’ ತಿರುಗೇಟು ನೀಡಿದ ರಂಗ.

‘ಯಾಕೆ… ಯಾಕೆಲೆ ಹೋಗಿದ್ದೆ ನೀನು?’ ತಲೆಕೆಟ್ಟವನಂತೆ ಅರಚಿದ ಉಗ್ರಪ್ಪ.

‘ನಾನು ರಂಗನ್ನ ಪ್ರೀತಿಸ್ತೀನಿ ಅದಕ್ಕೆ ಹೋಗಿದ್ದೆ’ ತಡವರಿಸದೆ ತಡಮಾಡದೆ ಉತ್ತರ ಬುಲೆಟ್‌ನಂತೆ ಬಂದಾಗ ಎಲ್ಲರೂ ಜೀರ್ಣಿಸಿಕೊಳ್ಳಲಾರದೆ ಒಳಗೇ ಬೆಂದುಹೋದರು. ‘ಮತ್ತೆ ಯಾಕೆ ಬಂದೆ ಈ ಮನೆಗೆ?’ ಅರಚಾಡದೆ ಅಸಹನೆ ತೋರದೆ ಗದ್ಗದಿತರಾಗಿ ಕೇಳಿದರೀಗ ಭರಮಪ್ಪ.

‘ಅವಳು ಬರ್ತಾ ಇರಲಿಲ್ಲ. ನಾನೇ ಬಲವಂತವಾಗಿ ಕರ್‍ಕೊಂಡು ಬಂದೆ ಸಾರ್’ ಗೌರವದಿಂದ ಉತ್ತರ ಕೊಟ್ಟ ರಂಗ.

‘ಯಾಕೆ? ಕದ್ದು ಓಡೋಕೆ ಭಯವಾತಾ?’ ಭರಮಪ್ಪ ಅವಡುಗಚ್ಚಿದರು.

‘ಕದ್ದು ಓಡಿ ಹೋಗೋಕೆ ನಾವೇನು ಪ್ರೇಮಿಗಳಾ?’ ಮರು ಪ್ರಶ್ನಿಸಿದ ರಂಗ. ಅವನ ಮಾತನ್ನು ಈಗಲೂ ಜೀರ್ಣಿಸಿಕೊಳ್ಳಲಾಗದೆ ಒಳಗೆ ಹಿಂಗಿ ಹೋದರು.

‘ಅವಳು ಪ್ರೇಮಿಸ್ತೀನಿ ಅಂತಿದಾಳಲ್ಲೋ ನಿನ್ನ?’ ಭರಮಪ್ಪನವರಿಗೂ ಕನ್‍ಪ್ಯೂಸ್ ಆಗಿತ್ತು. ‘ಅದೂ ನಿಜ. ಪ್ರೇಮ ಎರಡು ಹೃದಯಗಳಲ್ಲೂ ಏಕಕಾಲಕ್ಕೆ ಉಂಟಾಗಬೇಕು. ನಾನು ಇವಳನ್ನು ಪ್ರೀತಿಸುತ್ತಿದ್ದರೆ ಹೀಗೆ ಕರ್ಕೊಂಡು ಬಂದು ಒಪ್ಪಿಸ್ತಾನೂ ಇರಲಿಲ್ಲ. ನಿಮ್ಮನ್ನು ಒಪ್ಪಿಸಿ ಮದುವೆಯಾಗೋಕೆ ಪ್ರಯತ್ನ ಮಾಡುತ್ತಿದ್ದೆ’.

‘ಈ ಜನ್ಮದಲ್ಲಿ ನಾವು ಅದಕ್ಕೆ ಒಪ್ಪುತಾನೂ ಇರಲಿಲ್ಲ’ ಗಂಭೀರ ಸ್ವರ ಹೊರಡಿಸಿದರು ಭರಮಪ್ಪ.

‘ನನಗೆ ಗೊತ್ತು ಪ್ರೀತಿ ಪ್ರೇಮ ಗೊತ್ತಿಲ್ಲದವರು ನೀವು ಅಂತ. ನಿಮ್ಮ ಆಸ್ತಿನಾ ನಿಮಗೆ ಒಪ್ಪಿಸಿದೀನಿ… ಬರ್ತೀನಿ’ ಬಂದಷ್ಟೇ ವೇಗವಾಗಿ ರಂಗ ಹೊರಟುಹೋದ. ಅವನ ಬೈಕ್‌ನ ಶಬ್ದ ಕೇಳದಾದಾಗ ಎಲ್ಲರೂ ಇಹಕ್ಕೆ ಬಂದರು. ಚಿನ್ನು ದಿಗ್ಭ್ರಾಂತಳಾಗಿ ನಿಂತಲ್ಲೇ ನಿಂತಿದ್ದಳು.

‘ನೀವು ಹೊರಗಡೆ ಹೋಗ್ರಲೆ’ ಎಂಬಂತೆ ಭರಮಪ್ಪ ಆಳುಕಾಳುಗಳಿಗೆ ಸನ್ನೆ ಮಾಡಿದರು. ಆಳುಕಾಳುಗಳೂ ಮಾತು ಸತ್ತವರಂತೆ ಆಚೆ ಹೋದರು. ಉಗ್ರಪ್ಪನಿಗೆ ಅವಳನ್ನು ಕೊಚ್ಚಿಹಾಕುವಷ್ಟು ಕೋಪ, ಭರಮಪ್ಪನವರಿಗೆ ಅಂಜಿ ಅವನು ಸೈರಣೆಗೆ ಶರಣಾಗಿದ್ದ. ಕೂಗಾಡಿದರೆ ತಮ್ಮ ಮನೆಯ ಮರ್ಯಾದೆಯೇ ಬೀದಿಪಾಲಾಗುತ್ತೆ. ಹೇಗೂ ಚಿನ್ನುವನ್ನು ಕರೆತಂದು ಬಿಟ್ಟಿದ್ದಾನೆ. ನಾಕು ಮಾತು ಬುದ್ದಿ ಹೇಳಿ ಒಳಗೆ ಸೇರಿಸಿಕೊಳ್ಳೋದೇ ಸಧ್ಯಕ್ಕೆ ಪರಿಹಾರವೆಂದಾಲೋಚಿಸಿದರು ಭರಮಪ್ಪ. ಚಿನ್ನು ಬಳಿ ತಾವೇ ನಡೆದು ಹೋಗಿ ತಲೆ ನೇವರಿಸಿದರು ಮಮತೆಯಿಂದ. ಆಗಲೂ ಚಿನ್ನು ಶಿಲೆಯಂತೆ ನಿಂತೇ ಇದ್ದಳು. ಅವಳ ಮುಖದ ಒಂದು ನೆರಿಗೆಯೂ ಕದಲಿಲ್ಲ. ‘ಕೇಳಿದಿಯೇನಮ್ಮ ಆ ಭಡವನ ಪೊಗರಿನ ಮಾತ್ನಾ? ನಿನ್ನನ್ನ ಅವನು ಪ್ರೀತಿಸ್ತಿಲ್ಲವಂತೆ… ಇದಕ್ಕಿಂತ ಅವಮಾನ ನಿನಗೆ ಇನ್ನೇನು ಆಗಬೇಕು ಹೇಳು?’ ಭರಮಪ್ಪ ಅಪಮಾನದಿಂದ ಕುದಿಯುತ್ತಲೇ ಆ ಮಾತನ್ನಾಡಿದ್ದರು.

‘ಅವನು ಸುಳ್ಳು ಹೇಳ್ತಾನೆ… ಅವನೂ ನನ್ನನ್ನು ಪ್ರೀತಿಸ್ತಿರೋದು ನಿಜ’ ತಟ್ಟನೆ ಶಿಲೆ ಮಾತನಾಡಿದಾಗ ಉಳಿದವರೀಗ ಶಿಲೆಯಾದರು! ತಟ್ಟನೆ ಚೇತರಿಸಿಕೊಂಡವನು ಉಗ್ರಪ್ಪ, ‘ಮಾನಗೆಟ್ಟವಳೆ… ನಿನ್ನನ್ನಾ’ ಹೊಡೆಯಲೆಂದು ಮುನ್ನುಗಿದ.

‘ಅವಳ ಮೈ ಮುಟ್ಟಿದರೆ ಕೈ ಕತ್ತರಿಸಿಬಿಡ್ತೀನಿ ಹುಷಾರ್’ ಅಡ್ಡ ಬಂದವನು ಮತ್ತಾರೂ ಅಲ್ಲ ಮೈಲಾರಿ. ಉಗ್ರಪ್ಪ ಅವಕ್ಕಾದ!

‘ಹೊಡಿಬೇಕಾದ್ದು ಕಡಿಬೇಕಾದ್ದು ನಮ್ಮ ಕೂಸಿನಲ್ಲ. ಇವಳ ತಲೆ ಕೆಡಿಸಿ ತನ್ನದೇನು ಇದ್ರಾಗೆ ತಪ್ಪೇ ಇಲ್ಲ ಅನ್ನಂಗೆ ಆಕ್ಟ್ ಮಾಡ್ತಾ ಇದಾನಲ್ಲ ಅವನ್ನ… ಅವನ್ನ ಕಡಿಬೇಕು ಕಣಣ್ಣಾ’ ಬಿಸಿಯುಸಿರುಬಿಟ್ಟ ಮೈಲಾರಿ.

‘ಥುತ್‌. ನಮ್ಮ ಮಾನ ತೆಗೆದುಬಿಟ್ನಲ್ಲೋ ಅವ್ನು?’ ಉಗ್ರಪ್ಪ ಕುದಿದ.

‘ನಮ್ಮ ಮಾನ ತೆಗೆದೋರ ಪ್ರಾಣ-ಮಾನ ಎರಡೂ ಉಳಿಸೋದಿಲ್ಲಣ್ಣ ನಾನು. ಇದು ನಮ್ಮ ಮನೆದೇವರು ಗಾದ್ರಿಪಾಲನಾಯ್ಕನ ಮೇಲಾಣೆ’ ಮೈಲಾರಿಯ ಹಾರಾಟ. ಹೋದ ತಮ್ಮ ಮಾನವನ್ನು ಮತ್ತೆ ಪಡೆಯುವ ಬಗ್ಗೆ ಮಾತ್ರ ಇದೀಗ ಚಿಂತಿತರಾದ ಭರಮಪ್ಪ ಅವರ ಬಳಿ ಹೋಗಿ ಮೈದಡವುತ್ತಾ ಅಂದರು. ‘ಆಗಿದ್ದಾತು… ಸಮಾಧಾನ ಮಾಡ್ಕೊಳ್ಳಿ. ಹುಡುಗ ವಿವೇಕಸ್ಥ ಅದಾನೆ. ನಮ್ಮ ಮಾಲು ನಮಗೆ ಬಂದ ಸೇರೇತೋ ಇಲ್ಲೋ. ಕಡಿಬಡಿ ಮಾತೆಲ್ಲಾ ಈಗ್ಯಾಕ್ರಲಾ… ಮುಂದೆ ಏನು ಮಾಡಬೇಕೋ ಅದನ್ನ ಮಾಡಿದ್ರಾತು. ಹೆಣ್ಣು ಹೆತ್ತೋರ ನಾವು ಗಾಜಿನ ಮನೆಯಾಗಿದ್ದಂಗೆ… ಚಿನ್ನಮ್ಮ ಕೆಂಚಮ್ಮ ಮಗಿನಾ ಒಳಾಗ್ ಕರ್‍ಕೊಂಡುಹೋಗಿ… ನಡಿ ಕೂಸು, ಈಗಲಾದ್ರೂ ನಮ್ಮೋರು ಯಾರು ಹೊರಗಿನೋರು ಯಾರು ಅಂತ ನಿನ್ಗೆ ತಿಳಿದ್ರೆ ನನಗಷ್ಟು ಸಾಕು… ನಡಿ ಮಗಾ’ ಅಕ್ಕರೆಯಿಂದ ಚಿನ್ನುವಿನ ಮುಡಿ ನೇವರಿಸಿ, ‘ಆ ರಂಗನಾಥ ನಿನಗೆ ಒಳ್ಳೆ ಗ್ಯಾನ ಬುದ್ದಿ ಕೊಡ್ಲಿ’ ಎಂದು ಮನೆದೈವ ಉಡುಮರಡಿ ರಂಗನಾಥನನ್ನು ನೆನೆದರು. ಚಿನ್ನು ಕಲ್ಲಿನೋಪಾದಿಯಲ್ಲೇ ನಿಂತಿದ್ದಳು. ಕೆಂಚಮ್ಮ ಚಿನ್ನಮ್ಮ ಅವಳ ರಟ್ಟೆ ಹಿಡಿದು ‘ಬಾರೆ ನಮ್ಮವ್ವ… ಯಾಕವ್ವ ಹಿಂಗ್ ಮಾಡ್ದೆ?’ ಎಂದು ಕರೆದೊಯ್ದರು. ಇಬ್ಬರ ಪ್ರಶ್ನೆ ಒಂದೆ ಆದರೂ ಮನಸ್ಸುಗಳು ನಿರೀಕ್ಷಿಸಿದ ಉತ್ತರ ಬೇರೇನೇ ಇದ್ದವು. ಹೆಚ್ಚು ಹೇಳಿಸಿಕೊಳ್ಳದೆ ಕೊಸರಾಡದೆ ನಾಚದೆ ಸೋತೆನೆಂಬ ಅಳಕೂ ತೋರದೆ ಒಂದಿನಿತೂ ಪ್ರತಿಭಟಿಸದೆ ಕಣ್ಣೀರೂ ಸುರಿಸದೆ ಮೌನವಾಗಿ ನಡೆದುಹೋದಳು ತನ್ನ ಕೋಣೆಗೆ ಚಿನ್ನು. ಅಂದಿನಿಂದಲೇ ಅವಳು ಕಾಲೇಜಿಗೆ ಹೋಗಿದ್ದು ಸಾಕು ಎಂದು ಫತ್ವಾ ಹೊರಡಿಸಲಾಯಿತು.

ರಂಗ ಮನೆಗೆ ಬಂದಾಗ ಯಾರೂ ಅವನನ್ನು ಮಾತನಾಡಿಸುವ ಗೋಜಿಗೇ ಹೋಗಲಿಲ್ಲ. ತಾಯಿ ಊಟಕ್ಕೆ ಕರೆದರೂ ತನಗೆ ಹಸಿವಿಲ್ಲವೆಂದ ರಂಗ ತನ್ನ ರೂಮು ಸೇರಿಕೊಂಡ. ಆಕೆಯೂ ಬಲವಂತ ಮಾಡಲಿಲ್ಲ. ಅವನ ಹೃದಯದ ನೋವನ್ನಾಕೆ ಬಲ್ಲಳು. ಮನೆಯವರೆಲ್ಲಾ ಗಡದ್ದಾಗಿ ನಿದ್ದೆ ಹೊಡೆದರು, ಅವರಿಗೆಲ್ಲಾ ದೊಡ್ಡ ಗಂಡಾಂತರ ಒಂದರಿಂದ ಬಚಾವಾದ ಸಂತಸ. ಆದರೆ ರಂಗನಿಗೆಲ್ಲಿಯ ನಿದ್ರೆ? ಅವನಿಗಾಗಿ ಮಿಡಿವ ಇನ್ನೆರಡು ಹೃದಯಗಳಿಗೂ ನಿದ್ರೆಯಿಲ್ಲ. ಅಡಿಗೆ ಕೋಣೆಯಲ್ಲೇ ಮಲಗುವ ಅವರ ನರಳಾಟ ಹೊರಳಾಟ. ‘ಅಮ್ಮಾ, ಅಣ್ಣನ ರೂಮಿನ ದೀಪ ಇನ್ನೂ ಉರೀತಿದೆ… ಮಾತಾಡಿಸೋಣ ಬಾಮ್ಮ… ಮೇಲು ನೋಟಕ್ಕವನು ಚಿನ್ನುವನ್ನು ಬಿಟ್ಟು ಬಂದು ತನಗೇನೂ ಆಗಿಲ್ಲವೆಂಬಂತೆ ಇದ್ದರೂ ಅವನು ನೊಂದಿದ್ದಾನೆ ಕಣಮ್ಮ ಕಾವೇರಿ ನಿಡುಸುಯ್ದಳು. ‘ಸರಿಯಮ್ಮ’ ಕಮಲಮ್ಮನೂ ಎದ್ದು ಕಾವೇರಿಯೊಂದಿಗೆ ಅವನ ಕೋಣೆಗೆ ಹೋದಳು. ಅವರು ಬಂದಿದ್ದು ನೋಡಿ ರಂಗ ದಿಗ್ಗನೆ ಎದ್ದು ಕೂತ. ‘ಯಾಕಮ್ಮ ಇನ್ನೂ ನಿದ್ರೆ ಬಂದಿಲ್ವೆ ನಿಮಗೆ?’ ತಾನೇ ಕೇಳಿದ. ಅವರುಗಳು ಅವನ ಬಳಿ ಕೂತರು.

‘ನೀನ್ಯಾಕಪ್ಪ ಕೂತಿದ್ದಿ… ನಿದ್ರೆ ಬರಲಿಲ್ವಾ?’ ಅಣ್ಣನ ಕೈ ಹಿಡಿದು ಪ್ರೀತಿಯಿಂದ ಒತ್ತಿ ಕೇಳಿದಳು ಕಾವೇರಿ.

‘ನೀನು ಮಾಡಿದ್ದು ಸರಿಯೇನೋ?’ ಕಮಲಮ್ಮ ನೇರವಾಗಿ ಮಾತಿಗಿಳಿದರು.

‘ನಾನೇನಮ್ಮ ಮಾಡ್ದೆ?’ ಮುಗ್ಧನ ಫೋಜ್‌ಕೊಟ್ಟ.

‘ಚಿನ್ನುಗೆ ನೀನು ಹೀಗೆ ಮಾಡಬಾರದಿತ್ತೇನೋ ಕಣೋ’ ತಾಯಿಯ ಮೋರೆ ಕಳೆಗುಂದಿತ್ತು. ‘ಅಲ್ಲಮ್ಮ, ಅವಳಿಗಂತೂ ಬುದ್ಧಿಯಿಲ್ಲ. ಈ ಸಿರಿವಂತರ ಮನೆ ಹುಡುಗಿಯರಿಗೆ ಬದುಕು ಅಂದ್ರೇನಮ್ಮ ಗೊತ್ತು? ಅವಳು ಮನೆಬಿಟ್ಟು ಬಂದುಬಿಟ್ಳು ಅಂತ ನಾನೂ ಅವಳ ಹಿಂದೆ ಓಡಿ ಹೋಗೋಕೆ ಆಗ್ತದಾ? ಆ ಸುಕೋಮಲವಾದ ಹುಡುಗೀನ ಸಾಕೋಕೆ ನನ್ನಿಂದ ಸಾಧ್ಯವಾಗುತ್ತಾ?’ ವಾಸ್ತವತೆ ತೆರೆದಿಟ್ಟ.

‘ಪ್ರೀತಿಸಿದ ಮೇಲೆ ಹಮಾಲಿ ಮಾಡಿಯಾದರೂ ಸಾಕಬೇಕಪ್ಪಾ?’ ಕಾವೇರಿ ದಬಾಯಿಸಿದಳು. ‘ಬಿಳಿ ಆನೆನಾ ತಮ್ಮಂಥವರಿಂದ ಸಾಕೋಕೆ ಆಗುತ್ತಾ ಕಾವೇರಿ? ಹಮಾಲಿ, ಕೂಲಿಮಾಡೋ ಹುಡುಗನ ಜೊತೆ ಬದುಕ್ತೀನಿ ಅನ್ನೋ ಹುಡುಗೀರೇ ಬೇರೆ. ಆ ಧೈರ್ಯ ಸಾಹಸ ಸ್ವಾಭಿಮಾನ ಛಲ ಶ್ರೀಮಂತರ ಮನೆ ಹುಡುಗೀರ್‍ಗೆ ಸ್ವಲ್ಪ ಕಮ್ಮಿನೇ. ಇಷ್ಟಕ್ಕೂ ನಾನವಳನ್ನು ಪ್ರೀತಿಸಿಯೇ ಇಲ್ಲ…’

‘ಯಾಕಪ್ಪಾ ಅವಳಿಗೇನು ಕಡಿಮೆಯಾಗಿದೆ?’ ಮುಗ್ಧ ಪ್ರಶ್ನೆ ಕಾವೇರಿಯದು.

‘ಎಲ್ಲಾ ಹೆಚ್ಚಾಗಿದೆ ಅದಕ್ಕೆ ಪ್ರೀತಿಸಲಿಲ್ಲ. ಬಡತನಕ್ಕೆ ಪ್ರೀತಿಸುವ ಶಕ್ತಿ ಇರಬಹುದು. ಆದರೆ ಉಳಿಸಿಕೊಳ್ಳುವ ತಾಕತ್ ಇರೋಲ್ಲ. ನಮ್ಮ ಯೋಗ್ಯತೆ ನೋಡಿ ಪ್ರೀತಿಸಬೇಕು ಕಣೆ’.

‘ಹೀಗೆ ಯೋಚ್ನೆ ಮಾಡಿದ್ದಿದ್ದರೆ ಲೈಲಾ-ಮಜ್ನು, ಸಲೀಂ-ಅನಾರ್ಕಲಿ, ರೋಮಿಯೋ-ಜೂಲಿಯಟ್ ಇವರಾರು ಪ್ರೀತಿಸ್ತಾನೇ ಇರಲಿಲ್ಲ ಕಣೋ’

‘ಆದರೆ ಕಡೆಗೇನಾಯ್ತು?’

‘ಸತ್ತು ಅಮರರಾದರು’ ಹೆಮ್ಮೆ ವ್ಯಕ್ತಪಡಿಸಿದಳು ಕಾವೇರಿ.

‘ಪ್ರೇಮದಲ್ಲಿ ಸೋತು ಅಮರರಾಗುವುದಕ್ಕಿಂತ ಎಂಥದ್ದೇ ಬರಲಿ ಎದುರಿಸಿ ಬದುಕಿ ಪ್ರೇಮವನ್ನು ಗೆಲ್ಲಿಸಬೇಕು’.

‘ಸರಿ ಮತ್ತೆ… ಹಾಗೆ ಗೆದ್ದು ತೋರಿಸು’ ಕಾವೇರಿಯ ವಾದ.

‘ಪ್ರೇಮಿಗಳ ವಿಷಯ ನಾನು ಹೇಳಿದ್ದು’ ನಕ್ಕುಬಿಟ್ಟ ರಂಗ.

‘ನಂಗೊತ್ತು ಕಣೋ. ಇದಕ್ಕೆಲ್ಲಾ ನಾನೇ ಕಾರಣ. ನನ್ನ ಮದುವೆಗೆಲ್ಲಿ ಮುಂದೆ ತೊಂದರೆಯಾಗುತ್ತೋ ಅಂತ ಚಿನ್ನುವಿನಿಂದ ದೂರವಾಗ್ತಿದಿ’ ಅತ್ತೇಬಿಟ್ಟಳು.

‘ದಡ್ಡಿ, ನನ್ನನ್ನು ಅಷ್ಟೊಂದು ಎತ್ತರದಲ್ಲಿರಿಸಿ ನೋಡ್ಬೇಡ… ನಾನೇನು ತ್ಯಾಗಜೀವಿಯಲ್ಲ. ಓದುವಾಗ ಇಂಥ ಈ ವಿಷಯಗಳಿಗೆಲ್ಲಾ ತಲೆಹಾಕಬಾರ್‍ದಮ್ಮ. ಅಷ್ಟೆ ಅದು ನನ್ನ ಪಾಲಿಸಿ, ಅಮ್ಮಾ ಒಂದು ವಿಷಯ ಹೇಳೊದನ್ನೇ ಮರೆತಿದ್ದೆ ನೋಡು’ ರಂಗ ವಿಷಯಾಂತರ ಮಾಡಿದ. ಅಣ್ಣ-ತಂಗಿಯರ ವಾತ್ಸಲ್ಯದ ಮಾತುಗಳನ್ನು ಕೇಳುತ್ತಾ ಕೂತಿದ್ದ ಕಮಲಮ್ಮ ‘ಅಂತದ್ದೇನಪ್ಪಾ?’ ಎಂಬಂತೆ ಮಗನ ಮುಖ ನೋಡಿದರು. ‘ಅದೇನಮ್ಮ. ಇವಳನ್ನ ನೋಡೋಕೆ ಅಂತ ಬಂದ್ದಿದ್ರಲ್ಲ ಶಂಕರ್ ಅಂತ ವರ… ಹೈಸ್ಕೂಲ್ ಟೀಚರ್… ಆತ ಸಿಕ್ಕಿದ್ದ’ ರಂಗ ಅಂದ. ತಾಯಿ ಮಗಳಿಬ್ಬರ ಮೋರೆಯಲ್ಲೂ ಯಾವ ಬದಲಾವಣೆ ಕಾಣಲಿಲ್ಲ.

‘ಅವನಿಗೆ ಕಾವೇರಿ ಇಷ್ಟವಾಗಿದಾಳೆ. ಹೇಗಾದ್ರೂ ಮಾಡಿ ಒಂದು ಲಕ್ಷ ಜೋಡಿಸಿ ನಮ್ಮಪ್ಪನಿಗೆ ಕೊಡಿ. ಸಿಂಪಲ್ಲಾಗಿ ಮ್ಯಾರೇಜ್ಗೆ ಅಪ್ಪನ್ನ ಒಪ್ಪುಸ್ತೀನಿ ಅಂತ ಅವನೇ ಹೇಳ್ದ. ಒಳ್ಳೆ ಹುಡುಗ ಈ ಸಂಬಂಧವನ್ನು ನಾವು ಕಳ್ಕೊಬಾರ್ದಮ್ಮ’ ರಂಗನಲ್ಲಿ ಅಪರಿಮಿತ ಉತ್ಸಾಹವಿತ್ತು.

‘ನಿಜ ಕಣೋ. ವರದಕ್ಷಿಣೆ ವರೋಪಚಾರ ಮದುವೆ ಖರ್ಚಿಗೆ ಎಲ್ಲಿಂದಲೋ ಹಣತರೋದು ರಂಗ?’ ತಾಯಿಯ ಕಣ್ಣಾಲಿಗಳು ತುಂಬಿಬಂದವು.

‘ಈ ಮನೆ ಗಿರಿವಿ ಇಡೋದು’ ರಂಗನಿಗೆ ಗೊತ್ತಿದ್ದದು ಅದೊಂದೇ ಪರಿಹಾರ.

‘ನಿಮ್ಮ ಅಣ್ಣಂದಿರು ಒಪ್ಪಬೇಕಲ್ಲಪ್ಪಾ?’ ತಾಯಿಯ ಪರಾಧೀನತೆ.

‘ಹಿರಿಯರಿಂದ ಹೇಳಿ ಒಪ್ಪಿಸೋದಮ್ಮ, ಅಪ್ಪನ ಸ್ನೇಹಿತರು ಅಡ್ವಕೇಟ್ ಹನುಮಂತರಾಯರ ಬಗ್ಗೆ ಇವರಿಗೆಲ್ಲಾ ಗೌರವ ಹೆದರಿಕೆ ಎರಡೂ ಇದೆ… ಅವರಿಂದ ಬುದ್ಧಿ ಹೇಳಿಸೋದು… ನಾನು ರಾಯರನ್ನ ಕಂಡು ಮಾತಾಡ್ತೀನಮ್ಮ’.

‘ಏನೋ ಅಪ್ಪಾ, ನನಗಂತೂ ನಂಬಿಕೆಯಿಲ್ಲ’ ಪೆಚ್ಚುಮೋರೆ ಹಾಕಿದಳಾಕೆ.

‘ಹೋಗಿ ಹೋಗಿ ಟೈಮಾಯ್ತು… ಮಲಕೊಳ್ಳಿ… ನನ್ಗೂ ನಿದ್ದೆ ತೂಗ್ತಾ ಇದೆ’ ರಂಗ ಹೊದ್ದು ಮಲಗಲು ಅನುವಾದ. ‘ಅಣ್ಣಾ… ಚಿನ್ನು?’ ರಾಗತೆಗೆದಳು ಕಾವೇರಿ.

‘ಅವಳು ಅವಳ ಮನೇಲಿ ಹಾಯಾಗಿ ಮಲಗಿದಾಳೆ… ಅವಳ ಚಿಂತೆ ಬಿಟ್ಟಾಕು… ಹೋಗಿ ಹೋಗಿ ಮಲಗಿ. ಬೆಳಿಗ್ಗೆ ದಂಡಿ ಕೆಲಸ ಇದೆ. ನಾವೇ ತಾನೇ ಮಾಡೋದು? ಬಲವಂತಾಗಿ ಅವರನ್ನು ಏಳಿಸಿದ.

ಉಗ್ರಪ್ಪ ಮತ್ತು ಮೈಲಾರಿ ಸಿಟಿಯಲ್ಲಿ ರಂಗನ ಅಣ್ಣಂದಿರನ್ನು ಭೇಟಿ ಮಾಡುವರು. ಅವರನ್ನು ನೋಡಿದೊಡನೆ ಇವರಿಗೆ ಸಡಗರ. ಮಾತಿಗೆ ಮೊದಲೇ ನಮ್ಮ ಹುಡುಗ ಸರಿಗಿಲ್ಲ ದುರಹಂಕಾರಿ. ಅವನ ಪರವಾಗಿ ನಾವು ಕ್ಷಮೆ ಕೇಳ್ತೀವಿ ಸಾರ್ ಎಂದು ಕೈ ಕೈ ಮುಗಿದರು. ಅವನು ಮಾಡಿದ ಅಯೋಗ್ಯತನಕ್ಕೆ ನಮ್ಮ ಫ್ಯಾಮಿಲಿಗೆ ತೊಂದ್ರೆ ಕೊಡಬ್ಯಾಡಿ ಪ್ಲೀಸ್ ಎಂದು ತಮ್ಮಲ್ಲಿದ್ದ ಭಯವನ್ನೂ ಹೊರಹಾಕಿದರು. ಉಗ್ರಪ್ಪ ಮೈಲಾರಿ ಮೀಸೆ ಅಡಿಯಲ್ಲೇ ನಕ್ಕರು. ತಾವು ಬಂದ ಕೆಲಸ ಇಷ್ಟೊಂದು ಸರಾಗವಾಗಿ ಆಗದು. ಧಂಕಿ ಹಾಕಬೇಕೆಂದೆಲ್ಲಾ ಯೋಚಿಸಿಯೇ ಬಂದ ಅವರುಗಳ ಮನ ಕೋಳಿಪುಕ್ಕವಾಯಿತು. ಅಹಂ ಹೆಡೆಯಾಡಿತು.

‘ಹೆದರ್‍ಬೇಡ್ರಿ. ನಿಮ್ಮ ಫ್ಯಾಮಿಲಿನಾ ಹೊಸಕಿಹಾಕೋದು ನಮ್ಗೆ ಕಡಲೆ ತಿಂದು ಕೈ ತೊಳೆಸ್ಕೊಂಡಷ್ಟೆ ಈಸಿ, ಅದೆಲ್ಲಾ ಕ್ರಿಮಿನಲ್ ಅಫೇರ್ ನಮಗಿಷ್ಟವಾಗಿಲ್ಲ. ನೀವೂ ಊರಿನ ಜನವೆ. ನಮ್ಮ ಮಧ್ಯೆ ಕ್ಲಾಶ್ ನಡೆದರೆ ನೀವು ನಾಶಾಗಿ ಹೋಗ್ತಿರಾ ನೆಪ್ಪಿರ್‍ಲಿ’ ಮೈಲಾರಿ ತಿರಸ್ಕಾರವಾಗಂದ. ಅದೆಲ್ಲಾ ಯಾಕೆ? ಎಂಬಂತೆ ಮೂವರು ಕೈ ಜೋಡಿಸಿದರು.

‘ನಿಮ್ಮ ಫ್ಯಾಮಿಲಿ ಹ್ಯಾಪಿಯಾಗಿರಬೇಕಂದ್ರೆ ರಂಗನ್ನ ಹೇಗಾದ್ರೂ ಮಾಡಿ ಊರು ಬಿಟ್ಟು ಓಡ್ಸಿ’ ಉಗ್ರಪ್ಪ ನಿಧಾನವಾಗಿ ವಿವರಿಸುತ್ತಾ ಸಿಗರೇಟ್ ಹೊಗೆಯುಗುಳಿದ.

‘ಅಯ್ಯೋ ನಾವು ಯಾವತ್ತೋ ಆ ದಂಡಪಿಂಡನಾ ಮನೆಬಿಟ್ಟೆ ಆಚೆಗೆ ಹಾಕ್ತಿದ್ವಿ, ನಮ್ಮ ತಾಯಿ ಒಬ್ಬಳಿದಾಳೆ ಮುದುಕಿ ಅಡ್ಡ ಬರ್ತಾಳೆ ಸಾರ್’ ಲಾಯರ್ ಪೇಚಾಡಿದ.

‘ಅದೆಲ್ಲಾ ನಮಗೆ ಗೊತ್ತಿಲ್ರಿ ಚೆಂದವಾದ ಹೆಂಡ್ತಿರನ್ನ ಕಟ್ಕೊಂಡಿದಿರಾ. ಅವು ಬ್ಯಾರೆ ಹೊರಗಡೆ ದುಡಿತಾ‌ಅವೆ. ನೆಟ್ಟಗೆ ಮನೆಗೆ ಬರೇಕಲ್ಲವರಾ?’ ಕಿಸಿಕಿಸಿ ನಕ್ಕ ಮೈಲಾರಿ ಅವರ ಎದೆಗೇ ನೇರವಾಗಿ ಕೊಳ್ಳಿಯಿಟ್ಟ. ಅವನ ಪೋಲಿತನ ಕಚ್ಚೆಹರಕ ಕೆಲಸಗಳ ಬಗ್ಗೆ ಅವನಿಗೆ ಯೂನಿವರ್ಸಿಟಿಯವರು ಗೌರವ ಡಾಕ್ಟರೇಟ್ ಕೊಡಬೇಕಿತ್ತು. ಅಂತಹ ಸೆಕ್ಸ್ ಯೂನಿವರ್ಸಿಟಿ ಇಲ್ಲವೆಂಬುದೇ ಸೋದರರಲ್ಲಿ ಧೈರ್ಯತಂತು.

‘ಅದೆಲ್ಲಾ ಯಾಕ್ ಸಾ… ಅವನು ಹೊರಗೆ ಹಾಕಿದ್ರೆ ಅವನೇ ಊರುಬಿಟ್ಟು ಆಚೆ ಹೋಗ್ತಾನೆ… ನಾವ್ ನೋಡ್ಕೊಂತೀವಿ ಬಿಡಿ’ ಅಂದ ಫ್ಯಾಕ್ಟರಿ ಪರಮೇಶ.

‘ಅಯ್ಯಯ್ಯೋ… ನಿಮ್ಮ ಮಗು ಅರಿದೇ ನಮ್ಮ ಮನೆಗೆ ಬಂದು ಬಿಡ್ತಿಲ್ಲ. ಆಗ ನಾವೇ ಅವನಿಗೆ ನಾಕು ತಪರಾಕಿ ಹಾಕಿ ಬುದ್ದಿ ಹೇಳಿದ್ವಿ… ಇಲ್ಲದಿದ್ದರೆ ಆ ಖದೀಮ ಆ ಮಗೀನ ಎಲ್ಲಾದ್ರೂ ಹಾರಿಸಿಕೊಂಡು ಹೋಗೋನೇ ಇದ್ದ. ನಾವು ಬಿಡ್ತೀವಾ? ಮೊದ್ಲು ಮಗೀನ ಕರ್‍ಕೊಂಡು ಹೋಗಿ ಮನೆ ಸೇರ್‍ಸು ಅಂತ ಕ್ಯಾಕರಿಸಿ ಉಗಿದೀವಿ ಸಾ’ ಲೆಕ್ಚರರ್ ಗಣೇಶ ಲಕ್ಟರ್ ಕೊಟ್ಟ.

‘ಇಲ್ಲದಿದ್ದರೆ ಇಷ್ಟು ಹೊತ್ತಿಗೆ ಊರಲ್ಲಿ ಎಷ್ಟು ಹೆಣ ಬೀಳ್ತಿದ್ವೋ’ ಅಸಹ್ಯವಾಗಿ ನಕ್ಕ ಮೈಲಾರಿ, ‘ನಾವು ಹೇಳಿದ್ಹಾಗೆ ಕೇಳ್ತಿರಾ ತಾನೆ…?’ ದುರುದುರು ನೋಡಿದ.

‘ಕೇಳ್ತಿವಿ ಬಿಡಿ… ಆದ್ರೂ ಮನೆಯೋರ ನಿಷ್ಠೂರ ಕಟ್ಕೋಬೇಕಾಗುತ್ತೆ ಸಾರ್… ಒಡಹುಟ್ಟಿದ ತಮ್ಮ ಬೇರೆ. ಅವನನ್ನು ಹದ್ಬಸ್ತಿಗೆ ತಂದ್ರೆ ನಿಮಗಂತೂ ಉಪಯೋಗವಾಗುತ್ತೆ… ಆದ್ರೆ… ನಮಗೆ…?’ ಕೈಹೊಸೆದ ಲಾಯರ್‌ ವೆಂಕಟ ಸಂಕಟವನ್ನೆಲ್ಲಾ ಹಲ್ಲುಗಿಂಜುವುದರಲ್ಲೇ ಪ್ರದರ್ಶನಕ್ಕಿಟ್ಟ. ಇವರೇನು ಸಾಮಾನ್ಯರಲ್ಲಾ ಅಂದುಕೊಂಡ ಉಗ್ರಪ್ಪ, ಲಾಯರ್ ಸಹವಾಸ ಅದರಲ್ಲೂ ಕ್ರಿಮಿನಲ್ಲು ಎಂದಾಲೋಚಿಸಿದ ಉಗ್ರಪ್ಪ ಅಸಹನೆಯನ್ನು ತೋರಗೊಡದೆ ಕೇಳಿದ ‘ನಮ್ಮಿಂದ ಪ್ರತಿಫಲ ಕೇಳ್ತಿದಿರಾ? ನಿಮ್ಮ ಎದೆಗಾರಿಕೆ ಮೆಚ್ಚಬೇಕಾದ್ದೆ… ಏನಾಗ್ಬೇಕು ಹೇಳಿ?’

’ಹ್ಹಿ ಹ್ಹಿ ಹ್ಹಿ ಪ್ರತಿಫಲಾಪೇಕ್ಷೆ ಅಂತಲ್ಲ ಸಾರ್. ತಮಗೇನ್ ಸ್ವಾಮಿ ಬೆಂಕಿಗೆ ಇಟ್ಟರೂ ಬೇಯದಷ್ಟು ಅದೆ. ರಿಯಲ್ ಎಸ್ಟೇಟ್ ಕಿಂಗ್‌ಗಳು. ನಾವು ಮಿಡ್ ಕ್ಲಾಸ್‌ಗಳು. ಎಣ್ಣೆ ಬಂದಾಗ ಕಣ್ಣು ಮುಚ್ಕೋಬಾರದಲ್ವೆ…’ ಲಾಯರ್ ಮಾತಿನಲ್ಲಿ ತಾಳ್ಮೆ ಜಾಣೆ ಪ್ರದರ್ಶಿಸಿದ.

‘ಓಕೆ… ನಾವು ಹೇಳಿದಂಗೆ ಕೇಳಿದ್ರೆ ಈ ಸಿಟಿನಲ್ಲಿ ನಿಮಗೆ ಥರ್ಟಿ xಫಿಫ್ಟಿ ಸೈಟ್ ಕೊಡ್ತೀವಿ… ಆಯ್ತಾ?’ ಉಗ್ರಪ್ಪ ಹುಬ್ಬು ಕುಣಿಸಿದ.

‘ಮತ್ತೆ ನಮಗೆ?’ ಗಣೇಶ ಪರಮೇಶಿ ಬೊಬ್ಬೆ ಹೊಡೆದರು.

‘ಮೂವರಿಗೂ ಸೇರಿಸಿಯೇ ಹೇಳಿದ್ದು’

ಮಾತನಾಡಲೂ ಬಾರದಷ್ಟು ಹೃದಯ ತುಂಬಿ ಬಂದಿದ್ದರಿಂದ ಮೂವರು ಸೋದರರು ದೇವರ ಮುಂದೆ ನಿಂತ ಭಕ್ತರಂತೆ ಕೈಜೋಡಿಸಿ ಆನಂದ ತುಂದಿಲರಾದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹುಳಿ ಹಣ್ಣು
Next post ಚಂಡಿ

ಸಣ್ಣ ಕತೆ

 • ನಿಂಗನ ನಂಬಿಗೆ…

  -

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… ಮುಂದೆ ಓದಿ.. 

 • ತಿಥಿ

  -

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… ಮುಂದೆ ಓದಿ.. 

 • ಮಿಂಚಿನ ದೀಪ

  -

  ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… ಮುಂದೆ ಓದಿ.. 

 • ಬಲಿ

  -

  ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… ಮುಂದೆ ಓದಿ.. 

 • ಸಂಶೋಧನೆ

  -

  ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… ಮುಂದೆ ಓದಿ..