ವಚನಗಳು


ಯಾವ ನೀರೂ ಸಾಕು ರಾಜಕೀಯನ ತೃಷೆಗೆ,
ಬೇಕೇಕೆ ಬೇರೆ ಒರತೆ ?
ಜಂಗಮ ಜಗತ್ತಿನಲಿ ರಾಜ್ಯಧುರಧೀರರದು
ಇಹುದಣ್ಣ ತುಂಬ ಕೊರತೆ.

ಭೂಮಿ ಭೂಮಾನಂದಕಾಗಿ ಓಗರೆದಿತ್ತು
ಬಂತು ಬೇರೆಯ ನೆಲೆಯ ಹಿರಿಯ ಮಹಿಮೆ.
ದೇವದ್ರವ್ಯವೆ ಇಳಿದು ಮನುಜರೂಪವ ತಳೆದು
ತೋರಿತ್ತು ಗುರುವಿನಾ ದೊರೆಯ ಗರಿಮೆ.

ಹೋ ಶ್ರದ್ದೆ, ಭೌತಿಕವು ಆದರೂನೂ
ಆ ಶ್ರದ್ದೆ ಕ್ರಿಯಾಶೀಲ
ನಂ, ಬಿಗಿಯೆ ಬಿಗಿಯು ಅದು ಪುರುಷ
ಧಾತು ಶ್ರೀಶ್ರದ್ದೆ ಜೀವಕೀಲ.

ಅನುಭವ ಸಹ ಅನುಭಾವವು
ಅನುಭೂತಿಯ ಕಂಪ
ಆಳದೊಳಿದೆ ಬಾಳಿನ ಬೆಲೆ
ಭಾವಿಸು ಆ ತಂಪ.

ಪ್ರಕೃತಿ ಯಂತ್ರಕೃತ ಒಡವೆಯಲ್ಲ
ಈ ಒಡೆಯನ ಒಡನಾಡಿ
ಅದರ ಗತ್ತು ಓ ಈ ಜಗತ್ತು ತಾನ್
ಅದೇ ಗಾಡಿ ನೋಡಿ

ಅತ್ತರೆ ಮುತ್ತಿಲ್ಲ,
ನಸುನಗೆ ಭಂಗಾರ;
ಮುತ್ತಿಗೆ ಅತ್ತಿಲ್ಲ,
ಬೆರೆವುದೆ ಶೃಂಗಾರ

ಉದಾಸೀನದಲಿ ಬರುವ ವಿಸ್ಮೃತಿಯ
ಛೇದ ಭೇದ ಮಾಡಿ
ಬೇಡಿಕೊಳುತಿರುವೆ, ತೋಡಿಕೊಳುತಿರುವೆ
ನಿನ್ನ ಅರಿವು ಮೂಡಿ

ಈ ವಿಚಾರ ಸಂತತಿಯು ಸಂಚರಿಸ
ದಂತೆ ಅದರ ಜೋಡಿ
ನೀನು ಎಡೆಬಿಡದೆ ಬಾರೊ ದೊರೆಯೆ,
ಬಗೆಬಗೆಯ ಕೂಡಿ ಕೂಡಿ.

ಏಕಾಕಿ, ಪರಮಶಮಿ ಆಗಿ ನಮ್ಮೀಮನವು
ನಿನ್ನ ನೆಲೆಯಲ್ಲಿಯೇ ನೆಲೆಸಬೇಕು
ಆ ಗಿರಿಯ ತುದಿಯಿಂದ ಚೊಕ್ಕನೈಜವ ಕಂಡು
ಭ್ರಮೆಯಿಂದ ಐಕ್ಯಕ್ಕೆ ಒಲಿಸಬೇಕು

ಚೈತನ್ಯವು ಸ್ಥಿರಸ್ಥಾಣುವಿನಂತೆ
ಕದಲುಬದಲಿರಲಿ ತೋರಿಕೆಗೆಂತೇ
ಎಷ್ಟೆ ಇರಲಿ ಸಂಗ್ರಾಮದ ಚಿಂತೆ

ಮೌನಗರ್ಭದಲಿ,
ನಿರಾಕಾರ ನಿಃಸೀಮಾನಂದವ ಕಂಡೆ

ಲೋಕವು ಯಾವುದೆ ಬರಲಿ
ಭೂಮಿಕೆ ಯಾವುದೇ ಇರಲಿ
ಸತ್‌ಚಿತ್ ಆನಂದದ ಮುರಲಿ
ಚೈತನ್ಯದ ಅರಿವಿನೊಳಿರಲಿ

ಅತಿದುರ್ಗಮ
ಅತ್ಯವಶ್ಯ
ಪಾರ್ಥಿವ ಭೂಮಿಕೆಯಲ್ಲಿ
ಭಗವತ್ ಚೇತನವಲ್ಲಿ
ನೆಡುವುದು, ನಾಟುವುದು.

ಚೆಲುವಿದ್ದಲ್ಲಿಯೆ
ನಲಿವಿಹುದು.
ಅದರ ಒಲುವಿನಲೆ
ಬಲವಿಹುದು.

ಸಂಗ್ರಾಹಕ ಐಕ್ಯದೊಳಿದೆ
ಸರ್ವೈಕ್ಯದ ಹಾದಿ

ಮಾತು ಹಡೆಯುವದೆಲ್ಲ, ಮೌನಗರ್ಭದ ಬದುಕು
ಬಾಯ್ಬಡಕಗೇನು ಗೊತ್ತು!
ಬೆಳಕು ಕತ್ತಲೆಯಾಟ ತಿರುಗುತಿರೆಗೆ ಇದೆ
ಸೂರ್ಯನಿಗೊ ಒಂದೆ ಹೊತ್ತು.

ಕೈಗೂಡಬಹುದು ಏನೂನು ಮೂಲದಲಿ ದೇವಸ್ಪರ್ಶ ಬೇಕು
ಇದ್ದರಾಯ್ತು ಭಗವತ್ ಸ್ಪರ್ಶ, ಕೊನೆಗಾಣಬಹುದು ಏನೂ
ಮಾಡಲಹುದು ಏನನ್ನು ಕೂಡ ಬೇಕಲ್ಲಿ ದೇವಸ್ಪರ್ಶ
ಆಗರ್ಭಜಾತ ಅಧಿಕಾರ ದೇವನಾನಂದ ದಿವ್ಯ ಐಕ್ಯ

ದೇವಗರ್ಭದಿಂದ ಭೂಮಿ, ಭುವಿಯ ಗರ್ಭದೇವನು
ಅಡಗಿ ಒಳಗೆ ಇರುವದನ್ನೆ ಹೊರಗೆ ತರುವ ಯಾವನೂ ?

ಆತ್ಮಮೋಚನವ ಮಾಡುತಿರುವದೇ ಬೆಳಕಿಗೊಂದು ಆದಿ
ಸೃಷ್ಟಿಯಲ್ಲಿ ಪರಿಪೂರ್ತಿಗೊಂಬುದೇ ಐಶ್ವರ್ಯದ ಹಾದಿ.

ಹೊನ್ನಾಗಿಸುತಿವೆ ಹೂವು ನೆಲದೀ ಕೆಮ್ಮಣ್ಣ
ಕಾಣದೆ ಅರಳುತ್ತಲೆ ಇದೆ ಶಿವಕರುಣೆಯಣ್ಣ

ರಾತ್ರಿಯಲ್ಲ ನಮ್ಮ ಆದಿ ರಾತ್ರಿಯಲ್ಲ ಅಂತ್ಯವು
ತಾಯ ಬಸಿರ ಬೆಳಕೆ ನಮ್ಮ ಚಿರಂತನದ ಚಿಂತ್ಯವು
ಬೆಳಕಿನ ಬಾಂಧವ್ಯದಿಂದ ತಾಯ ಸೆರಗ ಹಿಡಿದೆವು.
ಬೆಳಕಿನಿಂದ ಬಂದೆವಣ್ಣ ಬೆಳಕಿನತ್ತ ನಡೆದೆವು

ಬೇನೆ ಬಲ್ಲ ತಾಯಿಗೆಲ್ಲ ಗೊತ್ತು ಹೊತ್ತು ಕಾಲವು

ಮೂರ್ತಿ ಮಾಡುತ್ತಿಹುದು ಮರವೆಯ ಮುದ್ದೆಯಾದೀ ಮಣ್ಣನು
ಒಗರು-ಹುಳಿಗಳ ಪಾಕದಲ್ಲಿಯೇ ಬೆಳೆಸುವನು ಸವಿಹಣ್ಣನು.

ಎದೆಯ ಶೂಲಿ ಲಯಗೊಳಿಸಬೇಕು ತಾನಾ ತ್ರಿಶೂಲಿಯಲ್ಲಿ
ಒಳಗೆ ಹೂತಿಹುದು ಒಂದು ಶಕ್ತಿ, ಅದು ತೆರೆವುದೊಂದು ಕಣ್ಣ
ನಮ್ಮ ಮನನವನು ಮಿಕ್ಕು ನಾವು ಮೇಲಾಗಿ ಇರುವೆವಣ್ಣ
ಅದನೆ ಒಮ್ಮೊಮ್ಮೆ ಮೂಡಿಸುವದು ಈ ಭೂಮಿ ಬಸಿರ ಬಣ್ಣ

ನಮ್ಮ ಕಾಣ್ಕೆ ಒಮ್ಮೊಮ್ಮೆ ಮೂಡುವದು ತೆರೆದು ಮಣ್ಣ ಕಣ್ಣ
ಒಂದು ಶಕ್ತಿ ಇದೆ ಒಳಗೆ, ಅದರಿದಿರು ನಮ್ಮ ಜ್ಞಾನ ಸಣ್ಣ
ನಂ ವಿಚಾರಗಳಿಗಿಂತ ನಾವು ಮಿಗಿಲಾಗಿ ಇರುವೆವಣ್ಣ
ಭೂಮಿ ಒಮ್ಮೊಮ್ಮೆ ತೆರೆದು ತೋರುವದು ಆ ಕಾಣ್ಕೆಯನ್ನೆ

ಅಮೃತ ಆತ್ಮಗೈಯುವದು ಕಾರ್ಯವನು ಗಹನಗುಹೆಯ ಸೇರಿ
ಹೃದಯ ಮನಗಳನ್ನು ರೂಪುಗೊಳಿಸುವದು ಸ್ವಪ್ರಭಾವ ಬೀರಿ
ಅಮೃತವಾಗುವವು ಆತ್ಮದೊತ್ತಡಕೆ ಮರ್ತ್ಯತೆಯನು ಮೀರಿ

ನಿನ್ನ ಹೃದಯದಲಿ ವೇದಗಳ ಧರಿಸುವಳು
ಜಯಶೀಲ ಕರವಾಳದಂತೆ ಬಲ ಮೆರೆಸುವಳು
ನೋಡುತಿರುವಂತೆಯೇ ಚಿರಸುಖವ ಹರಿಸುವಳು

ಮರಗೂಳಿ ಮಣ್ಣಿನಲಿ ಬೆಳಕು-ನೆರೆ ತುಂಬಿತ್ತು
ಕುಡಿ ಹೊತ್ತಿ ಮಡಿ-ಮೂರ್ತಿ ಮಾಡಲಾಯ್ತು
ಧ್ಯಾನದೀಪಿತ ಕಿರಣ ನಮ್ಮ ನೆಲ ಮುಟ್ಟಿತ್ತು
ದೇವ-ಜೀವರ ಮನಕೆ ಆಯ್ತು ಸೇತು


ಹಸಿವೆಯಾಗಿ ಬಂದಿತ್ತು ಬಸಿರಿನಲಿ ಹಸಿದು ವಿಶ್ವದಗಲ
ಬಯಕೆಯಾಗಿ ಬೀಸಿತ್ತು ಒಲವು ತಾನಾಗಿ ಪ್ರಾಣನನಿಲ
ಬ್ರಹ್ಮಕರ್ಮ ಪ್ರತಿಸರ್ಗದಲ್ಲಿ ಬರೆ ತಾ ವಿಸರ್ಗವೆನಿಸಿ
ನೆಲದ ಒಲವಿನಲಿ ಚೆಲುವೆ ಹೂತಿತ್ತು ತಾ ನಿಸರ್ಗವೆನಿಸಿ

ಜೀವನಲ್ಲಿ ತುಂಬಿಹಳು ತಾಯಿ ತಾನಾಗಿ ದೇವನೊಲವು
ಮನೋರಾಜ್ಯವನ್ನು ನಂಬಿ ಆಳುವಳು ಅರಳಿ ಅರಿವಿನೊಳವು
ಚುಂಬಿಸುವಳು ತನ್ನತ್ತ ಎಲ್ಲ ಹೊಮ್ಮಿರಲು ಪ್ರಾಣಬಲವು
ಬಿಂಬಿಸುವಳು ಪ್ರತಿಬಿಂಬದಂತೆ ಅಂಗಾಂಗವಾಗಿ ಚೆಲುವು

ಇದ್ದುದೆಲ್ಲವೂ ತಿರುಳಿನೊಳವು, ಹಿರಿಬಲವು, ಚೆಲುವು ಒಲವು,
ನಿದ್ದೆ ತಿಳಿದು ಎದ್ದಾಗ ಬೀಜವೇ ಮರವು ಹಲವು ಫಲವು,
ಹಿಗ್ಗಿದಾಗ ಕಾಣುವದು ಕಾಣದಾನಂದಮಗ್ನನಲ್ಲಿ
ಭೂಮವೆಂಬಂತೆ ಭೂಮಿ ಮೆರೆಯೆ ವಿಜ್ಞಾನಲಗ್ನದಲ್ಲಿ

ಸದ್ಭಾವದೊಂದು ಎದೆಮಿಡಿತದಂತೆ ಓಂಕಾರ ಧ್ವನಿಸುತಿಹುದು
ಚಿತ್ತ ಚೇತನವು ಅರಿತುದನ್ನೆ ಮರೆತಂತೆ ನೆನಿಸುತಿಹುದು
ವಾಚ್ಯ ನಟಿಸಿತ್ತು ರಂಗಭೂಮಿಯಲಿ ಅನಿರ್ವಾಚ್ಯವಾಗಿ
ಸಾಕ್ಷಿ ಪ್ರೇಕ್ಷಕನ ಚಿತ್ತರಂಗದಲಿ ಹೃದಯ ಸೂಚ್ಯವಾಗಿ

ದಿವ್ಯನಾಕದಲಿ ದಿವ್ಯಲೋಕದಲಿ ದಿವ್ಯ ಪಾಕವಿದ್ಯೆ
ಶುದ್ದ ರಸವೆ ಓ ಸಿದ್ದ ರಸವೆ ಇರುವರಿವು ಹಿಗ್ಗಿ ಇದ್ದೆ
ದಿವ್ಯತೂರ್ಯ ಎಚ್ಚರಿಸುತಿರಲು ಸುತ್ತೆಲ್ಲ ದಿವ್ಯ ನಿದ್ದೆ
ದಿವ್ಯಸ್ವಪ್ನ ಕಣ್ತೆರವಿ ಮಾಡೆ ಅಹ ದಿವ್ಯ ಕಾಣಲೆದ್ದೆ


ಮಮತೆಯಲ್ಲಿಯೂ ಸಮತೆ ಬೇಕು, ವಿಶ್ರಾಂತಿಯಲ್ಲಿ ಶಾಂತಿ.
ದುಃಖ ಸುಲಿದು ಸುಖವುಣ್ಣ ಬೇಕು, ನಗೆಯಲ್ಲಿ ಬೇಡ ಭ್ರಾಂತಿ,
ವೈರವಿಲ್ಲದಾ ವೀರ್ಯ ಬೇಕು, ಸೊಕ್ಕಿರದ ಶಕ್ತಿ ಬೇಕು,
ಛಂಡಿತನವಿರದ ಹಠವು ಇರಲಿ, ಆ ಸತ್ತ್ವಶ್ರದ್ದೆ ಸಾಕು.

ಭವವು ಬೇಕು, ಅನುಭವವು ಬೇಕು, ಅನುಭಾವ ಬೇಕು ಒಳಗೆ,
ಸ್ವಯಂಭುತ್ವದಾ ಜ್ಞಾನ ಬೇಕು, ಆ ಧೀಸಮಾಧಿ ಬೆಳಗೆ
ಮೂರು ಕಾಲಕೂ ನೂರು ಕಾಲದಾ ಸೃಷ್ಟಿ ದೃಷ್ಟಿ ಇರಲಿ
ಅಷ್ಟ ಸಿದ್ಧಿಗಳು ಅಷ್ಟತನುವೊ ಎನೆ ಕಟ್ಟಿಕೊಂಡು ಬರಲಿ.

ದೇಹದಲ್ಲಿ ಸೌಂದರ್ಯವಿರಲಿ, ಆರೋಗ್ಯ ಪ್ರಾಣದಲ್ಲಿ;
ಮನಸಿನಲ್ಲಿ ಉತ್ಥಾನವಿರಲಿ, ಆನಂದ ಜೀವನಲ್ಲಿ;
ಕರ್ಮದಲ್ಲಿ ಬೆಳಗಿರಲಿ ಜೀವನವು, ಧರ್ಮದಲ್ಲಿ ಕಾಮ;
ಕಾಲಿಕೈಯ ಕೈದಾಗಿ ಕುಣಿಸುವಾ ಕೃಷ್ಣಯೋಗ ನೇಮ.

ಸಹಜವೆಂದು ಇದ್ದಂತೆ ಇರಲು ಅದು ಶುದ್ದವಲ್ಲ ಹಾದಿ.
ಸ್ವಸ್ವಭಾವದಲಿ ಆತ್ಮಮುಕ್ತ ಸಂಬಂಧವಿದೆ ಅನಾದಿ.
ಬದ್ದರಂತೆ ತಿಣುಕುವದದೇಕೆ ಆ ಸಿದ್ದ ಮಾರ್ಗ ಬೇರೆ.
ಭುಕ್ತಿಮುಕ್ತಿ ಬಾಯ್ಗೂಡಿಸಿಹವು; ಯೋಗಕ್ಕೆ ಇದುವೆ ಮೇರೆ.

ಏಕವಿದ್ದರೂ ಸರ್ವವೇಕೆ ಒಳಗೊಳ್ಳಬಾರದಣ್ಣ ?
ಸಾಂತವೆಲ್ಲ ಆನಂತ್ಯಮುಖವು ಅದಕ್ಕೆ ತೋರ-ಸಣ್ಣ ?
ಜ್ಞಾನದಲ್ಲಿ ಆನಂದವಿರಲಿ, ಆನಂದದಲ್ಲಿ ಜ್ಞಾನ,
ಬ್ರಹ್ಮಮಾನದಲಿ ಬ್ರಹ್ಮಗಾನದಲಿ ಬ್ರಹ್ಮವೇಕತಾನ.


ಒಲವಿನಲ್ಲಿ ಬೆಳಿ, ಒಲವಿನಲ್ಲಿ ಉಳಿ, ಒಲವೆ ಬಾಳ ಚೆಲುವು,
ಒಲ್ಲದಿಲ್ಲ, ಒಲಿಯುವದು ಎಲ್ಲ, ಒಲಿಯುವದೆ ಬದುಕು-ಬಲವು.
ನಾಂದ ನಾಲಗೆಯ ನೀರಿನಲ್ಲಿ ನೆನೆಯುವದು ನಲುಮೆ-ನಲಿವು.
ನಲ್ಲರೆದೆಯ ನನ್ನಿಯಲಿ ಹೂತು ಜಗ ತುಂಬುತಿಹವು ಹಲವು.

ಹುಂಜ ಹೇಂಟೆಗಳ ಕಾವಿನಲ್ಲಿ ರೂಪಾಯ್ತು ನೀರತತ್ತಿ
ಆಕಾಶ ತುಂಬಿ ಆನಂದವಿತ್ತು ಆನಂದವನ್ನೆ ಬಿತ್ತಿ
ಜಗವು ಜಂಗಮವು ಜೀವ-ಪ್ರಾಣಿಗಳ ಚಿತ್ರಕಾಯ್ತು ಭಿತ್ತಿ
ಇದು ಹಸ್ತ-ಮಳೆಯ ಬಿಸಿಯುಸಿರು ಹಸಿರು, ಅಲ್ಲಣ್ಣ ಕುರುಡು-ಚಿತ್ತಿ.

ಇದು ಪ್ರಕೃತಿ-ಪುರುಷ, ಓ ಬ್ರಹ್ಮಮಾಯೆ, ಅಲ್ಲಲ್ಲ! ಶೈವ-ಭಕ್ತಿ.
ಮಾತೆ ಭಂಗಾರ, ಮಾತೆ ಸಿಂಗಾರ, ಮಾಟ ಕಾವ್ಯಯುಕ್ತಿ.
ಎಲ್ಲಿಹುದು ಭಕ್ತಿ, ಅಲ್ಲಿಹುದು ಶಕ್ತಿ, ಬೇಕೇಕೆ ಒಣ ವಿರಕ್ತಿ ?
ಜ್ಞಾನಬೀಜದಲಿ ಚಿಗುರಿಬಂತು ಸಚ್ಚಿದಾನಂದ ಮುಕ್ತಿ

ಭ್ರಾಂತಿಗೀಂತಿ ಹೊರಹೊಳಪು ತರದು, ಇದು ಅಲ್ಲ ರಜತಶುಕ್ತಿ.
ಇದು ನೇತಿಯಲ್ಲ, ಇತಿಪ್ರೀತಿಸ್ವಾತಿ ಮೌಕ್ತಿಕದ ದೈವ-ಭುಕ್ತಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಫಿಯ ಕೆರೆ
Next post ಸುಭದ್ರೆ – ೧೪

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

cheap jordans|wholesale air max|wholesale jordans|wholesale jewelry|wholesale jerseys