ನಗುನಗುತ್ತಾ ದಿನವನ್ನು ಸ್ವಾಗತಿಸಿ

ನಗುನಗುತ್ತಾ ದಿನವನ್ನು ಸ್ವಾಗತಿಸಿ

‘ನಗುವುದು ಸಹಜದ ಧರ್ಮ ನಗಿಸುವುದು ಪರಧರ್ಮ- ಎನ್ನುವ ಮಾತು ತಿಮ್ಮನ ಹಿತ ನುಡಿಯಂತೆ, ‘ನಗು’ ಒಂದು ಹಿತವಾದ ಅನುಭವ. ನಗು ಚೆಲ್ಲದ ಬದುಕು ಬೆಂಗಾಡಿನಂತೆ. ನಗುವಿನಲ್ಲಿ ಬದುಕಿನ ಜೀವಸೆಲೆ ಇದೆ.’

ನಗು ಮಾನವನ ಅತೀ ಉತ್ತಮ ಹಾಗೂ ಆಕರ್ಷಣೀಯ ಮುಖ ಲಕ್ಷಣ. ಮುಖದಲ್ಲಿ ಮಿನುಗುವ ಮುಗುಳ್ನಗೆಯನ್ನು ಮೋಡಗಳ ಮರೆಯಿಂದ ನುಸುಳಿ ಬರುವ ಸೂರ್ಯ ರಶ್ಮಿಗೆ ಹೋಲಿಸಬಹುದು. ಹೆಣ್ಣಿನ ಮುಖದಲ್ಲಿ ಲಾಸ್ಯವಾಡುವ ನಸುನಗು ಅವಳು ಧರಿಸುವ ಯಾವ ಬೆಲೆಬಾಳುವ ಒಡವೆಗಳಿಗಿಂತಲೂ ಹೆಚ್ಚು ಪ್ರಕಾಶಮಾನವಾದದ್ದು. ಇದರಿಂದಾಗಿಯೇ ‘ನಕ್ಕರದೇ ಸ್ವರ್‍ಗ’ ಎನ್ನುವ ಮಾತಿಗೆ ಸರಿಹೊಂದುವ ಮಾತು ಎಲ್ಲಾ ಭಾಷೆಯಲ್ಲೂ ಪ್ರಚಲಿತದಲ್ಲಿರುವುದು. ನಗುವಿನ ಮಹತ್ವ ತಿಳಿದೇ ಇರಬೇಕು `SMILE A WHILE’ ಎಂದು ಹಿರಿಯರನೇಕರು ಹೇಳುತ್ತಾ ಬಂದಿರುವುದು.

ಜೀವನದಲ್ಲಿ ನೋವುಗಳು ಅನಿವಾರ್ಯ. ಈ ಅನಿವಾರ್ಯ ನೋವುಗಳನ್ನು ಮರೆತು ನಗಬಲ್ಲವನು ಭೂಮಿಯಲ್ಲಿಯೇ ಸ್ವರ್ಗವನ್ನು ನಿರ್ಮಿಸಬಲ್ಲವನಾಗುತ್ತಾನೆ. ಜೀವನದ ನೋವುಗಳನ್ನು ನುಂಗಿ ನಗುನಗುತ್ತಾ ಜೀವನವನ್ನು ಎದುರಿಸುವುದರಲ್ಲಿ ಜೀವಿಸುವ ಸಾರ್ಥಕತೆಯಿದೆ.

ಅಳು ನಮಗೆ ಮಾತ್ರ ಆದರೆ ನಗು ಎಲ್ಲರಿಗೆ ಎನ್ನುವ ಸತ್ಯವನ್ನು ಮನವರಿಸಿಕೊಂಡಾಗ ಯಾರ ಮುಖದಲ್ಲೇ ಆಗಲಿ ಮಂದಸ್ಮಿತ ಮಿನುಗುವುದು ಅಸಾಧ್ಯವೇನಲ್ಲ. ನಗುವಿನ ಮಹತ್ವ ತಿಳಿದೇ ಹಿರಿಯರು ‘ನಗುನಗುತ್ತಾ ಬಾಳಿ ಎಂದು ಆಶೀರ್ವದಿಸುವುದಿರಬೇಕು.

ನಗು ಒಂದು ಸಂಜೀವಿನಿ. ವೈದ್ಯಕೀಯವಾಗಿಯೂ ಅದಕ್ಕೆ ಅದರದ್ದೇ ಮಹತ್ವವಿದೆ. ದೇಹದ ಬಿಗಿದುಕೊಂಡ ಸ್ನಾಯುಗಳನ್ನು, ನರಗಳನ್ನು ಸಡಿಲಿಸಿ, ನೋವಿನ, ಸೋಲಿನ ಭಾವನೆಗಳನ್ನು, ಮಾನಸಿಕ ಒತ್ತಡಗಳನ್ನು ಶಾಂತಗೊಳಿಸುವ ಗುಣ ನಗುವಿಗಿದೆ. ಯಾವ ಬಿಗಿ ಪರಿಸ್ಥಿತಿಯಲ್ಲೂ ಮನತುಂಬಿ ನಕ್ಕಾಗ ಎಲ್ಲ ನೋವುಗಳನ್ನೂ ಮರೆಯುವುದು ಸಾಧ್ಯವಾಗುತ್ತದೆ. ಕಾಡುವ ನೋವುಗಳಿಂದ ದೂರವಾಗುವುದು ಮಾನಸಿಕ ಹಾಗೂ ದೈಹಿಕ ದೃಷ್ಟಿಯಿಂದ ಆರೋಗ್ಯಕರ. ಮಕ್ಕಳಂತೂ ಅಳುವಿನ ಮಧ್ಯೆ ಒಮ್ಮೆ ನಕ್ಕರೆ ತಮಗರಿವಿಲ್ಲದಂತೆ ತಮ್ಮ ನೋವನ್ನೆಲ್ಲಾ ಮರೆತೇ ಬಿಡುತ್ತಾರೆ.

ನಗುವಿಗೊಂದು ಮಾದಕ, ಸಮ್ಮೋಹಕ ಗುಣವಿದೆ. ಕಂಡೂ ಕಾಣದ ತಿಳಿನಗು ಗಂಡಸರಿಗೆ ಶೋಭಿಸಿದರೆ, ಮಂದಸ್ಮಿತ ನಗು ಹೆಂಗಸರಿಗೊಪ್ಪುತ್ತದೆ. ಮುಖದ ಸ್ನಾಯುಗಳು ತಮ್ಮ ಬಿಗಿತವನ್ನು ಸಡಿಲಿಸಿ, ನಗುವಿನ ರೇಖೆಗಳು ಮುಖದಲ್ಲಿ ಹಾದು ಹೋಗುವಾಗ ಗಂಡಸಾಗಲೀ ಹೆಂಗಸಾಗಲೀ ಪ್ರಶಾಂತರಾಗಿ, ಆಕರ್ಷಣೀಯರಾಗಿ, ಆತ್ಮೀಯರಾಗಿ ಆದರಣೀಯರಾಗಿ, ಗೌರವಾನ್ವಿತರಾಗಿ ಕಾಣುತ್ತಾರೆ. ನಗುವಿನ ಮಹತ್ವ ತಿಳಿಯದ ಅನೇಕರು ಸದಾ ಮುಖ ಗಂಟಿಕ್ಕಿಕೊಂಡು, ತನ್ನ ಮುಖದ ಬಿಗಿಯನ್ನು ಪರಿಸರಕ್ಕೂ ಹರಡಿಕೊಂಡು ಜೀವಿಸುವುದೇ ಜೀವನವೆಂದು ತಿಳಿದುಕೊಂಡವರು ಅವರು. ಅಂತಹವರಿದ್ದಲ್ಲಿ ಒಂದು ರೀತಿಯ ನೀರಸ ವಾತಾವರಣ ಮೂಡುತ್ತದೆ. ಅವರು ನಗುವುದು ಬಿಡಿ ಇತರರು ನಗುವುದನ್ನೂ ಸಹಿಸಲಾರರು. ಒಂದು ರೀತಿಯ ‘ಅಲರ್ಜಿ’ ತರುವ ಜೀವಿಗಳು ಅವರು. ನಗದೇ ಜೀವನದಲ್ಲಿ ನರಕದ ನೋವು ಅನುಭವಿಸುವ ನತದೃಷ್ಟರು!

ನಗುವಿನಲ್ಲಿ ಹಲವು ವಿಧಗಳಿವೆ. ಬೇರೆ ಬೇರೆ ಪರಿಸರಗಳಿಗೆ, ಘಟನೆಗಳಿಗೆ, ಪ್ರತಿಕ್ರಿಯಿಸುವಾಗ ಬೇರೆ ಬೇರೆ ರೀತಿಯ ನಗು ಉಕ್ಕಿ ಬರುತ್ತದೆ. ಸಂತಸದ ನಗು, ತೃಪ್ತಿಯ ನಗು, ಅಟ್ಟಹಾಸದ ನಗು, ವಕ್ರ ನಗು, ಕೊಂಕು ನಗು, ಕುಹಕದ ನಗು, ಅಹಂಕಾರದ ನಗು, ಸೋತ ನಗು. ಹೀಗೆ ಹಲವು ರೀತಿಯ ನಗುಗಳಿವೆ. ನಗುವಿನಲ್ಲಿ ನವರಸಗಳನ್ನು ಪ್ರತಿನಿಧಿಸುವುದು ಸಾಧ್ಯ. ಅಹಂಕಾರಿಗಳು ತಿಳಿನಗು ನಗಲಾರರು. ಕುಹಕಿಗಳೂ ಅಷ್ಟೇ. ಅವರೆಂದೂ ಮನತುಂಬಿ ನಗಲಾರರು. ಸೋತಾಗ ನಗು ಉಕ್ಕಲಾರದು. ದೈನಂದಿನ ಜೀವನದಲ್ಲಿ ಯಾವುದಾದರೂ ಒಂದು ರೀತಿಯ ನಗು ನಗುವ ಕ್ಷಣ ನಮಗರಿಯದೇ ಬಂದು ಹೋಗುತ್ತದೆ. ನಾವು ಆ ಸಂದರ್ಭಕ್ಕೆ ತಕ್ಕಂತೆ ನಗುತ್ತೇವೆ ಕೂಡಾ.

‘ನಗುವುದು ಸಹಜದ ಧರ್ಮ ನಗಿಸುವುದು ಪರಧರ್ಮ’- ಎನ್ನುವಂತೆ ನಗುವುದು ಒಂದು ಕಲೆ. ಬೇರೆಯವರನ್ನು ನಗಿಸುವುದು ಇನ್ನೂ ದೊಡ್ಡ ಕಲೆ. ಎರಡೂ ದೈವದತ್ತವಾದುದು. ಇತರರನ್ನು ನಗಿಸುವ ಕಲೆಯಲ್ಲಿ ಪಳಗಿದ ಮಂದಿ ಅತಿ ವಿರಳ, ಅವರೆಲ್ಲಿದ್ದರೂ ಕೂಡಲೇ ತಿಳಿಯುತ್ತದೆ. ಏಕೆಂದರೆ ಸಿಹಿಗೆ ಇರುವೆ ಮುತ್ತಿದಂತೆ ಅಂತಹ ವ್ಯಕ್ತಿಗಳ ಸುತ್ತಲೂ ಜನರು ಮುತ್ತುತ್ತಿರುತ್ತಾರೆ. ಅಲ್ಲಿ ನಗುವಿನ ಸದ್ದು ಸದಾ ಕೇಳಿಬರುತ್ತಿರುತ್ತದೆ. ಹಾಸ್ಯಗಾರರು, ನಗಿಸುವವರು, ನಗೆ ಬರಹಗಾರರು, ನಗೆ ನಟರು, ಇವರೆಲ್ಲಾ ಜನರನ್ನು ನಗಿಸಲೆಂದೇ ಹುಟ್ಟಿದವರು. ಮಾತಲ್ಲಿ, ಬರಹದಲ್ಲಿ ನಟನೆಯಲ್ಲಿ ನಗಿಸುವವರನ್ನು ಜನರು ಎಂದಿಗೂ ಮರೆಯುವುದಿಲ್ಲ. ಹೀಗೆ ನಗಿಸುವವರಿಂದ ಜನರ ಮಾನಸಿಕ ಒತ್ತಡ ಬಹಳಷ್ಟು ಕಡಿಮೆಯಾಗುವುದೆಂದು ಹೇಳಬಹುದು. ಇದೇ ಕಾರಣಕ್ಕೆ ಇರಬಹುದು ಹಿಂದಿನ ರಾಜರ ಆಸ್ಥಾನಗಳಲ್ಲಿ ಹಾಸ್ಯವನ್ನು ಉಕ್ಕಿಸುವ ವಿಕಟಕವಿಗಳನ್ನು ಇಟ್ಟುಕೊಂಡಿರುತ್ತಿದ್ದುದು. ಈಗ ಆ ಕೆಲಸವನ್ನು ಹಾಸ್ಯಕೂಟಗಳು, ನಗೆಕೂಟಗಳು ಮಾಡುತ್ತಿವೆ. ನಗಲೆಂದೇ ನಡೆಸುವ ಇಂತಹ ಕಾರ್ಯಕ್ರಮಗಳಿಗೆ ಜನ ಮುಗಿಬಿದ್ದು ಸೇರುತ್ತಾರೆ. ಮನತುಂಬಿ ನಕ್ಕಾಗ ಬೇರೆಲ್ಲಾ ಕಹಿ ಭಾವನೆಗಳು ಮರೆಯಾಗುತ್ತವೆ. ಒಂದು ರೀತಿಯ ಅನುಭಾವದ ಮನಸ್ಥಿತಿಯನ್ನು ಅನುಭವಿಸುವುದು ಸಾಧ್ಯವಾಗುತ್ತದೆ.

ಸುತ್ತುಮುತ್ತಲ ಜನರ ಮೇಲೆ ಒಳ್ಳೆಯ ಪ್ರಭಾವ ಬೀರುವ ಮೊದಲ ಅಸ್ತ್ರವೆಂದರೆ ನಗು. ಉದಾಹರಣೆಗೆ- ಒಂದು ಸಮಾರಂಭಕ್ಕೆ ಹೋಗುತ್ತೇವೆಯೆಂದುಕೊಳ್ಳಿ. ಅಲ್ಲಿ ಎಲ್ಲರ ಪರಿಚಯ ನಮಗಿರುವುದಿಲ್ಲ. ಪರಿಚಯವಿದ್ದ ಕೆಲವು ಮಂದಿ ಎಲ್ಲೆಲ್ಲೋ ಕುಳಿತಿರುತ್ತಾರೆ. ನಾವು ಅಪರಿಚಿತರ ಮಧ್ಯೆಯೇ ಕುಳಿತಿರಬೇಕಾಗುತ್ತದೆ. ಆಗ ಮುಖವನ್ನು ಗಂಟು ಹಾಕಿಕೊಂಡು ನಮಗಿಲ್ಲಿ ಯಾರ ಪರಿಚಯವೂ ಇಲ್ಲ ಎಂದು ಕುಳಿತರೆ ಮುಳ್ಳಿನ ಮೇಲೆ ಕುಳಿತಂತಾಗುತ್ತದೆ. ಅದಕ್ಕೆ ಬದಲಾಗಿ ಮುಖದ ಸ್ನಾಯುಗಳನ್ನು ಸ್ವಲ್ಪ ಸಡಿಲಿಸಿ, ಪಕ್ಕದಲ್ಲಿ ಕುಳಿತವರ ಕಡೆ ನೋಡಿ ಒಂದು ಮುಗುಳ್ನಗೆ ಚೆಲ್ಲಿದರೆ ವಾತಾವರಣವೇ ಬದಲಾಗುತ್ತದೆ. ಅವರೂ ನಮ್ಮನ್ನು ನೋಡಿ ನಗೆ ಚೆಲ್ಲುತ್ತಾರೆ. ಆ ನಗುವಿನಲ್ಲಿ ಒಂದು ಸ್ನೇಹಸೇತುವೆ ನಿರ್ಮಾಣವಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಗೆಳೆತನ ಬೆಳೆಯುತ್ತದೆ. ಪರಸ್ಪರ ಪರಿಚಯವಾಗುತ್ತದೆ. ಹೊತ್ತು ಕಳೆದ ಪರಿವೆಯಾಗುವುದಿಲ್ಲ. ಹೀಗೆ ನಕ್ಕು ಸ್ನೇಹ ಬೆಳೆಸುವ ಗುಣ ಕೆಲವರಲ್ಲಿ ಹುಟ್ಟಿನಿಂದ ಬೆಳೆದು ಬಂದಿರುತ್ತದೆ. ಹಾಗಿಲ್ಲವಾದಲ್ಲಿ ಸ್ವಲ್ಪ ಪ್ರಯತ್ನದಿಂದ ಬೆಳೆಸಿಕೊಳ್ಳುವುದು ಸಾಧ್ಯ. ಒಂದೆರಡು ಬಾರಿಯ ಪ್ರಯತ್ನ ಸಾಕು. ಮತ್ತೆ ಆ ಕಲೆ ನಮ್ಮದಾಗುತ್ತದೆ.

ನಗು ಹುಚ್ಚರ ಸೊತ್ತಲ್ಲ. ಅದೊಂದು ಸ್ನೇಹದ ಆತ್ಮೀಯತೆಯ ಸಂಕೇತ. ಮಾನವನ ವ್ಯಕ್ತಿತ್ವಕ್ಕೊಂದು ವಿಶೇಷ ಆಭರಣ. ಆದರೆ ಯಾವುದೂ ಅತಿಯಾದರೆ ಅಪಾಯ. ನಗೆಯೂ ಹಾಗೇ. ಕಡಿವಾಣವಿರಲೇಬೇಕು. ಮಾತುಮಾತಿಗೆ ನಗುವ ಗಂಡಸರನ್ನು, ಮಾತು ಮಾತಿಗೆ ಅಳುವ ಹೆಂಗಸರನ್ನು ನಂಬಬಾರದು ಎನ್ನುವ ಗಾದೆಯೇ ಇದೆ. ಮಿತಿಯಲ್ಲಿ ಅರೋಗ್ಯ, ಅತಿಯಲ್ಲಿ ಅಪಾಯ ಎನ್ನುವುದನ್ನು ಮರೆಯಬಾರದು.

ಸುಖ-ದುಃಖ ಕೇವಲ ಮಾನಸಿಕ ಸ್ಥಿತಿಗಳು. ಇವುಗಳನ್ನು ಎದುರಿಸಲು ಸಾಧ್ಯವಾಗುವುದು ಮನಸ್ಸಿನ ಮೇಲೆ ಇರುವ ಹತೋಟಿಯಿಂದ, ಮೊದಲೇ ಹೇಳಿರುವಂತೆ ಜೀವನದಲ್ಲಿ ನೋವುಗಳು ಅನಿವಾರ್ಯ, ಮನುಷ್ಯ ಮನುಷ್ಯರೊಳಗಿನ ಸಂಬಂಧಗಳು, ವ್ಯವಹಾರಗಳು ಜಾಸ್ತಿಯಾದಷ್ಟೂ ನೋವಿನ, ನಲಿವಿನ ಕ್ಷಣಗಳು ಹೆಚ್ಚುತ್ತವೆ. ಜೀವನದಲ್ಲಿ ಅನಿವಾರ್ಯವಾಗಿರುವ ನೋವುಗಳಲ್ಲಿನ ಸಿಹಿಯನ್ನು ಅರಿತುಕೊಳ್ಳುವ ಮಾನಸಿಕ ದಾರ್ಡ್ಯತೆ ಬೆಳೆಸಿಕೊಂಡರೆ ಜೀವನದಲ್ಲಿ ಉತ್ತೀರ್ಣರಾದಂತೇ. ಯಾಕೆಂದರೆ ಪ್ರತಿ ನೋವಿನ ಹಿಂದೆಯೂ ನಗುವಿನ ರೇಖೆಯಿದೆ- `Every cloud has a silver lining’ ಎನ್ನುತ್ತಾರಲ್ಲ ಹಾಗೆ.

ಚೀನಾ ದೇಶದಲ್ಲಿ ನಗಲಾರದವನು ತನ್ನ ಸುತ್ತಲಿನವರೊಡನೆ ಯೋಗ್ಯವಾಗಿ ವ್ಯವಹರಿಸಲಾರದವನೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಅವನು ಯಾವ ವ್ಯಾಪಾರಕ್ಕೂ ಇಳಿಯಬಾರದು ಎನ್ನುವ ಹೇಳಿಕೆಯೇ ಇದೆ.

ಪ್ರತಿದಿನಗಳು ಜೀವನವೆನ್ನುವ ಮಹಾಗ್ರಂಥದ ಒಂದೊಂದು ಪುಟಗಳು. ಆ ಪುಟಗಳಲ್ಲಿ ನಗುವಿನ ರೇಖೆಗಳನ್ನು ಎಳೆದರೆ, ನಗುವಿನ ಚಿತ್ತಾರಗಳನ್ನು ತುಂಬಿದರೆ ಜೀವನದಲ್ಲಿ ಸಂತಸ ತುಂಬಬಹುದು. ಪ್ರತೀ ದಿನ ಬೆಳಗ್ಗೆ ಏಳುವಾಗ ಹಿಂದಿನ ದಿನದ ಜಂಜಾಟಗಳನ್ನು ಮರೆತು ಇದೊಂದು ಹೊಸ ದಿನವೆನ್ನುವ ಹುರುಪಿನಿಂದ ಆ ದಿನವನ್ನು ಸ್ವಾಗತಿಸುತ್ತಾ ಎದ್ದರೆ ಜೀವನದ ಕಡೆಗೆ ದೃಷ್ಟಿಯೇ ಬೇರಾದೀತು. ಕೆಲವರಿರುತ್ತಾರೆ ‘ಅಯ್ಯೋ ಇನ್ನೊಂದು ಬೆಳಗಾಯಿತಲ್ಲ? ಇವತ್ತು ಏನೇನು ಕಷ್ಟನಷ್ಟಗಳು ಕಾದಿವೆಯೋ?’ ಎಂದು ಗೊಣಗಿಕೊಂಡೇ ಏಳುವವರು. ಹೀಗೆ ಎದ್ದಾಗ ಆ ದಿನ ದೀರ್ಘವಾಗದೇ ಇನ್ನೇನಾದೀತು? ಈ ರೀತಿಯ ಸ್ವಾಗತಕ್ಕಿಂತ ‘ಹೌದು, ಇನ್ನೊಂದು ಬೆಳಗಾಯಿತು. ನಿನ್ನೆ ಮಾಡಿದ ತಪ್ಪುಗಳು ಇವತ್ತು ಪುನರಾವರ್ತಿತವಾಗಬಾರದು. ಇವತ್ತಿನ ಸವಾಲುಗಳನ್ನು ಧೈರ್ಯದಿಂದ, ಶಾಂತಿಯಿಂದ, ಅತ್ಮವಿಶ್ವಾಸದಿಂದ ಎದುರಿಸಬೇಕು’ ಎಂದು ಯೋಚಿಸುತ್ತಾ ಎದ್ದರೆ ಅಂತಹ ದಿನದಲ್ಲಿ ಮುಖದಲ್ಲಿ ನಗು ತನ್ನಿಂದ ತಾನೇ ಸ್ಪುರಿಸಿತು. ಜೀವದಲ್ಲಿ ಉತ್ಸಾಹ ತುಂಬೀತು.

ಪ್ರತಿಯೊಂದು ದಿನ ನಮಗೆ ಉತ್ತಮವಾಗಿ ಜೀವಿಸುವ ಪ್ರಯತ್ನ ಮಾಡಲು ಸಿಗುವ ಮತ್ತೊಂದು ಅವಕಾಶ. ಈ ಅವಕಾಶವನ್ನು ಕಳೆದು ಹೋಗಲು ಬಿಡದೆ ಸದುಪಯೋಗಿಸುವ ಪ್ರಯತ್ನ ಮಾಡುವುದು ನಮ್ಮ ಕೈಯಲ್ಲಿದೆ. ಹಾಗಾಗಿ ಮತ್ತೊಂದು, ಮಗದೊಂದು ಅವಕಾಶವನ್ನು ಕೊಡುವ ಪ್ರತಿ ದಿನಗಳನ್ನು ಸ್ವಾಗತಿಸುವಾಗ ನಗುನಗುತ್ತಾ ಸ್ವಾಗತಿಸಿ ಜೀವನವನ್ನು ಸಮೃದ್ಧವಾಗಿಸಿಕೊಳ್ಳುವುದು ಬುದ್ಧಿವಂತರ ಲಕ್ಷಣ.

ನಗುನಗುತ್ತಾ ದಿನಗಳನ್ನು ಸ್ವಾಗತಿಸಿ, ಜೀವನವನ್ನು ಹಗುರವಾಗಿಸಿ. ಉಲ್ಲಾಸಮಯವಾಗಿಸಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರದ ಮಹತ್ವ
Next post ನಿಸರ್‍ಗ

ಸಣ್ಣ ಕತೆ

 • ಹೃದಯ ವೀಣೆ ಮಿಡಿಯೆ….

  ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

 • ಮನೆ “ಮಗಳು” ಗರ್ಭಿಣಿಯಾದಾಗ

  ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys