ಅನಂತಮೂರ್ತಿಯವರ `ಭವ`

`ಭವ’ ಕೈಗೆತ್ತಿಗೊಳ್ಳುವುದು ಆಧ್ಯಾತ್ಮಿಕ ಪ್ರಶ್ನೆಗಳನ್ನು : `ನಾನು ಯಾರು?’ ; `ನಾನು ಏನಾಗಿದ್ದೇನೆ?’ ; `ನಾನು ಏನಾಗಬೇಕು?’ ಎಂಬುವನ್ನು. ಇವು ಮೇಲೆ ನೋಟಕ್ಕೆ ಸರಳ ಪ್ರಶ್ನೆಗಳೆಂಬಂತೆ ಕಂಡರೂ, `ಭವ’ (ಅಸ್ತಿತ್ವ)ದ ಮೂಲಭೂತ ಪ್ರಶ್ನೆಗಳು. `ಭವ ಎಂದರೆ ಇರುವಿಕೆಯೂ ಹೌದು, ಆಗುವಿಕೆಯೂ ಹೌದು.’
ಕಾದಂಬರಿಯ ಹರಹು ವಿಸ್ತಾರವಾಗುವುದು ಅದು `ಇರುವಿಕೆ’ಯ ಬಗ್ಗೆ ಚರ್ಚಿಸುತ್ತಲೇ `ಆಗುವುದರ’ ಕಡೆಗೆ ಗಮನಹರಿಸುವ ಬಹುಮುಖತ್ವವನ್ನು ತೋರಿಸುತ್ತ ಹೋಗುವಾಗ.

ಕಾದಂಬರಿಯ ಪಾತ್ರಗಳು ಎರಡು ರೀತಿಯವಾಗಿವೆ : ಒಂದು `ಭವ’ದಲ್ಲಿದ್ದುಕೊಂಡು, `ಭವ’ವನ್ನು ಮೀರುವ ಪಾತ್ರಗಳು: ಇನ್ನೊಂದು, ಮೇಲೆ ಹೇಳಿದ ಪ್ರಶ್ನೆಗಳನ್ನು ಲೌಕಿಕವಾಗಿಯೂ ಆಧ್ಯಾತ್ಮಿಕವಾಗಿಯೂ ಹಾಕಿಕೊಂಡು, `ನಾನು ಏನಾಗಬೇಕು?’ ಎಂಬ ಪ್ರಶ್ನೆಯ ಕಡೆಗೆ ಹೊರಳುವ ಪಾತ್ರಗಳು. ಸೀತಮ್ಮ, ಚಂದ್ರಪ್ಪ, ರಾಧೆ-ಇವರುಗಳೆಲ್ಲ `ಭವ’ದಲ್ಲಿದ್ದೆ ಭವ’ವನ್ನು ಮೀರುವವರು. ಕಾದಂಬರಿಯ ಮುಖ್ಯ ಪಾತ್ರಗಳಾದ ಶಾಸ್ತ್ರಿ ಮತ್ತು ದಿನಕರ `ನಾನು ಯಾರು?’, `ನಾನು ಏನಾಗಬೇಕು?’ ಎಂಬ ಹುಡುಕಾಟ ನಡೆಸುವರು; ತಮ್ಮ `ಭವ’ದ ಬಗ್ಗೆ ಚಿಂತಿಸುವವರು.


ಸೀತಮ್ಮ, ಚಂದ್ರಪ್ಪ, ರಾಧೆ-ಈ ಎಲ್ಲರು ಭವದಲ್ಲಿದ್ದು ಕೊಂಡೇ ಭವವನ್ನು ಮೀರುವವರು. `ಇರುವಿಕೆ’ಯಿಂದಲೇ `ಆಗುವಿಕೆ’ಯನ್ನು ಪಡೆಯುವವರು.

ಸೀತಮ್ಮ, ಮಡಿ ಹೆಂಗಸು, ಪ್ರಪಂಚಕ್ಕೆ ಅಂಟಿಯೂ ದೂರ ನಿಲ್ಲುವ ಯೋಗಿಯ ತರಹ. ವೇಶ್ಯೆಯ ಮಗಳಾದ ಗಂಗೂಬಾಯಿ, ಮುಗ್ದನಾದ ಚಂದ್ರಪ್ಪ, ಇವರ ಮಗನಾದ ಪ್ರಸಾದ, ತಂದೆತಾಯಿಲ್ಲದ ದಿನಕರ-ಈ ಎಲ್ಲರಿಗೂ ಸಮನಾದ ಪ್ರೀತಿ ತೋರಿಸುತ್ತಾರೆ ಸೀತಮ್ಮ. ತನ್ನ ಮಗ ನಾರಾಯಣತಂತ್ರಿ ಗಂಗೂಬಾಯಿಯ ಜತೆ ಅನೈತಿಕ ಸಂಬಂಧವಿಟ್ಟುಕೊಂಡಿರುವುದು ತಿಳಿದರೂ, ಸೀತಮ್ಮ ಅವರಿಗೆ ತೋರಿಸುವ ಪ್ರೀತಿಯಲ್ಲಿ ಯಾವುದೇ ವ್ಯತ್ಯಾಸ ಕಾಣುವುದಿಲ್ಲ. ಯಾರೂ ಆಸಕ್ತಿ ತಾಳದ ಚಂದ್ರಪ್ಪನ ಜೊತೆಗೆ ಮಾತನಾಡಿ, ಅವನೂ ಒಬ್ಬ ಮನುಷ್ಯ ಎಂಬುದನ್ನು ತೋರಿಸಿಕೊಡುವವರು ಸೀತಮ್ಮ. ಆದರೆ ಈ ಎತ್ತರವನ್ನು ಅವರು ಸಾಧಿಸುವುದು ತಮ್ಮ ಮಿತಿಯಲ್ಲಿದ್ದುಕೊಂಡೆ :

“ಮಡಿ ಮುಸುರೆಗಳಲ್ಲಿ ನಿಷ್ಠವಾದ ಸೀತಮ್ಮ ಚಂದ್ರಪ್ಪನಿಗಾಗಲೀ, ಗಂಗೂಬಾಯಿಯಾಗಲೀ, ಅವಳ ಮಗ ಪ್ರಸಾದನಿಗಾಗಲೀ ಒಳಗೆ ಬಡಿಸರು; ಆದರೆ ಏನಾದರೂ ತಿನ್ನಲು ಕೊಡದೆಯೊ ಉಪಚಾರ ಮಾಡದೆಯೊ ಕಷ್ಟ ಸುಖ ಕೇಳದೆಯೊ ಎಂದೆಂದೂ ಅವರನ್ನು ಹಿಂದೆ ಕಳಿಸರು” (ಪು. ೫೬.). ಸೀತಮ್ಮನವರ ಪ್ರೀತಿ ಪ್ರಾಂಜಲ ಮನಸ್ಸಿನಿಂದ ಹುಟ್ಟುವಂಥದ್ದು. ಭಾಷೆ ಬಾರದ ದಿನಕರನನ್ನು ಅವರು ಉಪಚರಿಸುವ ರೀತಿ, ಈ ರೀತಿಯ ಪ್ರಾಂಜಲ ಮನಸ್ಸಿನಿಂದಲೇ ಹುಟ್ಟುವಂಥದ್ದು. ಒಮ್ಮೆ ದಿನಕರನ ಎದುರಲ್ಲಿ ಗಂಗೂಬಾಯಿಯನ್ನು ಸೀತಮ್ಮ ಸಂತೈಸುವಾಗ, ತನಗೇ ಅರ್ಥವಾಗದ ಭಾಷೆಯಲ್ಲಿ ಅವರು ಎಲ್ಲರನ್ನು ಮುಟ್ಟುವುದನ್ನು ದಿನಕರ ಗಮನಿಸುತ್ತಾನೆ.

ಚಂದ್ರಪ್ಪ ಹೆಸರಿಗೆ ಗಂಗೂಬಾಯಿಯ ಗಂಡ. ಮನೆಯಲ್ಲಿ ದನ ಇಟ್ಟುಕೊಂಡು ಹಾಲು ಕರೆಯುತ್ತಾನೆ, `ಹಸೂನಂಥ ಮನುಷ್ಯ’. ಗಂಗೂಬಾಯಿಯ ಅನೈತಿಕ ಸಂಬಂಧಗಳನ್ನು ತನ್ನ ಮುಗ್ದತೆಯಿಂದಲೇ ಸ್ವೀಕರಿಸುವ ಚಂದ್ರಪ್ಪನಿಗೆ, ಪ್ರಸಾದನ ಮಹತ್ ಸಂಗೀತವನ್ನೂ ಮುಗ್ದತೆಯಿಂದಲೇ ಸಂತೋಷಿಸುವ ಗುಣ. ಆದ್ದರಿಂದಲೆ ಮೇಲಿಂದ ಮೇಲೆ ಹಸುವಿನ ಮುಗ್ದತೆಯ ಜೊತೆ ಅವನ ಹೆಸರು ಸೇರುತ್ತದೆ. ಈ ರೀತಿಯ ಮುಗ್ದತೆಯಿಂದಲೇ ಚಂದ್ರಪ್ಪ ಭವದಲ್ಲಿಯೇ ಭವದಿಂದ ಮುಕ್ತವಾಗುತ್ತಾನೆ.

ಇನ್ನು ರಾಧೆ, ಶಾಸ್ತ್ರಿ ಬೊಂಬಾಯಿಯಿಂದ ಕರೆದುಕೊಂಡು ಬರುವ ಹೆಣ್ಣು. ಅವಳು ಶಾಸ್ತಿಗಳ ಪ್ರೇಯಸಿಯಾದರೂ ಸ್ವಾರ್ಥಲಾಲಸಿಯಲ್ಲ. ಅವರ ಅಪಾರ ಆಸ್ತಿಯ ಬಗ್ಗೆ ಆಸೆಪಟ್ಟವಳಲ್ಲ. ಮಾತ್ಸರ್ಯವಿಲ್ಲದೆ ಶಾಸ್ತ್ರಿಗಳಿಗೆ ಒಂದಾದ ಮೇಲೊಂದು ಮದುವೆ ಮಾಡಿಸಿ, ತಾನು ಧನ್ಯತೆ ಪಡೆದುಕೊಳ್ಳುತ್ತಾಳೆ. ಇದು ಅವಳ ಬದುಕಿನ ರೀತಿ. ಆದರೆ ರಾಧೆ ಕೂಡ ಇದನ್ನು ತನ್ನ ಮಿತಿಯಲ್ಲಿದ್ದುಕೊಂಡೆ ಸಾಧಿಸುತ್ತಾಳೆ :

“ಶಾಸ್ತ್ರಿಗಳು ಅವರ ಆನುಭವದಲ್ಲಿ ರಾಧೆಯಂತಹ ಇನ್ನೊಂದು ಜೀವವನ್ನು ಕಂಡಿರಲಿಲ್ಲ. ಅವಳಿಗೆ ಆಸೆ ಇಲ್ಲವೆಂದಲ್ಲ. ಆದರೆ ಅವಳ ಆಸೆ ಸಂಸಾರದ ಮಿತಿಯಲ್ಲಿತ್ತು. ಗಂಜಿಗೆ ತೆಂಗಿನ ಹಾಲೂ, ಮಾವಿನ ಮಿಡಿಯ ಉಪ್ಪಿನಕಾಯಿಯೂ ಸಿಕ್ಕಂತಾಯಿತಲ್ಲ ಎಂದೇ ಅವಳಿಗೆ ಸಂತೋಷ” (ಪು. ೨೫-೨೬).

ತಮ್ಮ ಇರುವಿಕೆಯನ್ನು ಪ್ರಶ್ನಿಸಿಕೊಳ್ಳುತ್ತಲೆ, `ಆಗುವಿಕೆ’ಯ ಬಗ್ಗೆ ಹಂಬಲಿಸುವವರು. ಶಾಸ್ತ್ರಿ ಮತ್ತು ದಿನಕರ. ಶಾಸ್ತ್ರಿಗಳು ರೈಲಿನಲೊಮ್ಮೆ ಪ್ರಯಾಣ ಮಾಡುವಾಗ ದಿನಕರಕನನ್ನು ಭೇಟಿಯಾಗುತ್ತಾರೆ. ಅವನ ಕೊರಳಿನಲ್ಲಿದ್ದ ತಾಯತ ಕಂಡು ಅವರಿಗೆ ಭವದ ಬಗ್ಗೆ ಜಿಜ್ಞಾಸೆ ಶುರುವಾಗುತ್ತದೆ. ಇನ್ನು ದಿನಕರ ದೇಶದುದ್ದಕ್ಕು ಟಿ.ವಿ. ಯ ಮೂಲಕ ಜನಪ್ರಿಯನಾದವನು. ತಂದೆ ತಾಯಿ ಯಾರೆಂದು ತಿಳಿಯದೆ, ತಾನು ಯಾರೆಂದು ಹುಡುಕಲು ಅಯ್ಯಪ್ಪ ಸ್ವಾಮಿಯ ವೇಷ ಹಾಕಿಕೊಂಡು ತನ್ನ ಭವದ ಬಗ್ಗೆ ಚಿಂತಿಸುತ್ತಾನೆ. ಆದರೆ ಈ ಪಾತ್ರಗಳ ವೈಫಲ್ಯ ಏನೆಂದರೆ, ಅವರ ಹುಡುಕಾಟಗಳು ಪೊಳ್ಳಾಗಿ ಉಳಿಯುವುದು. ಇವರಿಗೆ ಈ ಭವದಲ್ಲಿದುಕೊಂಡಿರಲು ಅಗುವುದಿಲ್ಲ. ಆದರೆ ಅದನ್ನು ದಾಟಲು ಬೇಕಾದ ಮೌಲ್ಯವೂ ಇವರಲ್ಲಿಲ್ಲ. ಆದ್ದರಿಂದ ಇವರಿಗೆ ಇರುವಿಕೆಯೂ ಇಲ್ಲದೆ, ಆಗೂವಿಕೆಯೂ ಇಲ್ಲದೆ, ಅತಂತ್ರರಾಗುವುದು `ಭವ’ದ ನೆಲೆ.

ಶಾಸ್ತ್ರಿಗಳು ಕಾದಂಬರಿಯ ಮೊದಲಲ್ಲಿ ಜ್ಞಾಪಿಸಿಕೊಳ್ಳುವ ಅವರ `ಬೊಂಬಾಯಿ ವೇಷ’ ಅವರ ಅತಂತ್ರ ಸ್ಥಿತಿಯ ಮುನ್ನುಡಿಯಂತಿದೆ. `ಶರ್ಟ್ ಪೈಜಾಮಗಳನ್ನು ಧರಿಸಿ, ಜುಟ್ಟು ಮುಚ್ಚಲೆಂದು ತಲೆಯ ಮೇಲೆ ಟೋಪಿಯನ್ನು ಧರಿಸಿ ತಮ್ಮ ಅಸ್ತಿತ್ವನ್ನು ಬದಲಾಯಿಸಲು ಪ್ರಯತ್ನಪಟ್ಟಿದ್ದು ಒಂದು ದೊಡ್ಡ ವ್ಯಂಗದಂತಿದೆ. ಮದುವೆಯಾದಾಗಿನಿಂದಲೂ ಸರೋಜ ತೋರಿಸುವ ನಿರ್ಲಕ್ಷ್ಯ ಶಾಸ್ತ್ರಿಗಳಿಗೆ ಕಸಿವಿಸಿಯುಂಟು ಮಾಡುತ್ತದೆ. ಕರುಣಾಕರ ಪಂಡಿತನ ಆಗಮನದಿಂದ ತಮ್ಮ `ಇರುವಿಕೆ’ಯ ಬಗ್ಗೆ ಅನುಮಾನ, ತೊಳಲಾಟಗಳುಂಟಾಗುತ್ತವೆ. ಸರೋಜ-ಪಂಡಿತ ಇವರ ಸಂಬಂಧ ಎಂಥದ್ದು? -ಇದರಲ್ಲಿ `ನಾನು ಯಾರು?’, `ನಾನು ಏನಾಗಬೇಕು?’ ಎಂಬ ಪ್ರಶ್ನೆಗಳು ಆವರನ್ನು ಬಾಧಿಸುತ್ತವೆ. ಎಷ್ಟೋ ವರ್ಷಗಳ ನಂತರ ದಿನಕರನನ್ನೂ ಅವನ ಕೊರಳಿನ ತಾಯತವನ್ನೂ ನೋಡಿದಾಗ ಅವನು ತಮ್ಮ ಮಗನಾಗಿದ್ದಿರಬಹುದೆಂಬ ಸಂದೇಹ ಅವರ ಇರುವಿಕೆಯನ್ನು ಇನ್ನಷ್ಟು ಅಲ್ಲಾಡಿಸುತ್ತದೆ. ದಿನಕರ ನನ್ನ ಮಗನೋ ಆ ಪಂಡಿತನ ಮಗನೋ ಎಂಬ ಅನುಮಾನ ಮೀರಿ ಆಗುವಿಕೆಯನ್ನು ಪಡೆಯಬೇಕೆಂದು ಅವರ ಹಂಬಲ. ಆದರೆ ಅಸ್ತಿತ್ವದ ಗೊಂದಲ ಅವರಲ್ಲಿ ಹಾಗೆಯೇ ಉಳಿಯುತ್ತದೆ:

“ನಿನ್ನ (ರಾಧೆ) ಜೊತೆ ಮಾತನಾಡಿಕೊಂಡಿರುವ ನಾನು ಯಾರು? ಮಗನೆಂದು ಕುಟ್ಟವಲಕ್ಕಿ ತಿನ್ನುವುದನ್ನು ನೋಡುತ್ತ ಕರುಳು ಹಿಂಡುವಷ್ಟು ವಾತ್ಸಲ್ಯಭಾವ ಹುಟ್ಟಿದ ನಾನು ಯಾರು? (ಪು. ೪೫).

ದಿನಕರನನ್ನು ಮಗನೆಂದು ಒಪ್ಪಿಕೊಳ್ಳಬೇಕೆ? ಬೇಡವೆ?- ಎಂಬ ದ್ವಂದ್ವ ಅವರಲ್ಲಿ ಕೊನೆಯ ತನಕ ಉಳಿಯುತ್ತದೆ. ಒಮ್ಮೆ ದಿನಕರ ಅವರ ಮಗನಾಗಿ ಕಂಡು, ವಾತ್ಸಲ್ಯ ಹುಟ್ಟಿದರೆ, ಇನ್ನೊಮ್ಮೆ `ಒಂದು ಪಕ್ಷ ದಿನಕರ ನನ್ನ ಮಗನಲ್ಲದಿದ್ದರೆ, ಆ ಬಂಗಾರ ಎಲ್ಲವೂ ನನ್ನುವ ಗಳಿಗೇ ಸೇರಬೇಕಲ್ಲವೆ’ ಎಂದು ಪ್ರತಿ ಆಲೋಚನೆ ಹುಟ್ಟುತ್ತದೆ.

ಶಾಸ್ತ್ರಿಗಳು ವಿಶ್ಲೇಷಣೆಯಲ್ಲಿ ಆಸಕ್ತಿ ಉಳ್ಳವರೇ ಹೊರತು, ತಾವು ಅಂದುಕೊಂಡದ್ದನ್ನು, ನಂಬಿದ್ದನ್ನು ಆಗುವವರಲ್ಲ. ಪುರಾಣಪ್ರವಚನ ಮಾಡುವಾಗ ತಂತಮ್ಮ ತಂದೆಗೆದುರಾಗಿ ನಿಂತ ಧ್ರುವ ಪ್ರಹಲ್ಲಾದರನ್ನು ಕೊಂಡಾಡುವ ಅವರಿಗೆ, ತಮ್ಮ ಮಗಳು ಕ್ರಾಂತಿಕಾರಿ ಹುಡುಗನನ್ನು ಮದುವೆಯಾಗಿ ತಮಗೆದುರಾಗಿ ನಿಂತಾಗಿ ಕಸಿವಿಸಿ ಅನುಭವಿಸುತ್ತಾರೆ; ಅದನ್ನು ಒಪ್ಪಿಕೊಳ್ಳಲಾರದೇ ಹೋಗುತ್ತಾರೆ. ಅವರೇ ಒಮ್ಮೆ ವಿಶ್ಲೇಷಿಸಿಕೊಳ್ಳುವಂತೆ; “ತಾನು ಸದಾ ತನ್ನಿಂದ ಓಡಿ ಹೋಗುತ್ತಿದ್ದೇನೆ ಎನ್ನಿಸಿದ್ದಿದೆ” (ಪು. ೨೧). ಕಾದಂಬರಿಯ ಮೊದಲಲ್ಲಿ ಪ್ರಾರಂಭವಾದ ತಮ್ಮ ಅಸ್ತಿತ್ವದ ಬಗೆಗಿನ ಗೊಂದಲ ಕಾದಂಬರಿಯ ಕೊನೆಯವರೆಗೂ ಯಾವ ಬದಲಾವಣೆಯೂ ಇಲ್ಲದೆ ಮುಂದುವರೆಯುತ್ತದೆ. ಶಾಸ್ತ್ರಿಗಳಲ್ಲಿ ಆಗುವಿಕೆಯ ಹಂಬಲವಾಗಿ ಮಾತ್ರ ಉಳಿಯುತ್ತದೆ.

ಅಯ್ಯಪ್ಪಸ್ವಾಮಿ ದೀಕ್ಷೆ ಹಿಡಿದು ಸ್ವಾಮಿಯಾಗಿರುವ ದಿನಕರನಲ್ಲು ಇರುವುದು ಅಸ್ತಿತ್ವದ ಗೊಂದಲ. `ನಾನು ಯಾರು?’ ಎನ್ನುವುದು ಅವನ ಮುಖ್ಯ ಪ್ರಶ್ನೆ. ಅಯ್ಯಪ್ಪನ ವ್ರತ ಹಿಡಿದ ಮೇಲೆ ತಮ್ಮ ಹೆಸರು, ವಾಸನೆಗಳನ್ನು ಬಿಟ್ಟುಕೊಡಬೇಕು. ಆದರೆ ದಿನಕರನಲ್ಲಿ ಅವನ ಅಸ್ತಿತ್ವದ ಬಗ್ಗೆ ಗೊಂದಲ ಇರುವುದರಿಂದ ಸ್ವಾಮಿಯಾದರೂ ಅವನು ತನ್ನ ಭವವನ್ನು ಬಿಟ್ಟಿಲ್ಲ. ರೈಲಿನಲ್ಲಿ ಶಾಸ್ತ್ರಿಗಳು ಅವನ ಹೆಸರನ್ನು ಕೇಳಿದಾಗ, ದಿನಕರ, `ನಾನು ಹೆಸರು ಹೇಳುವಂತಿಲ್ಲ’ ಎಂದು ಕಪ್ಪು ಬಟ್ಟೆಯನ್ನು ತೋರಿಸುತ್ತಾನೆ. ಮುಂದೆ ಸ್ವಲ್ಪ ಹೊತ್ತಿನಲ್ಲೆ `ನೀವು ಬೇಕಾದರೆ ನನ್ನನ್ನು ಪುಟಾಣಿ ಎಂದು ಕರೆಯಬಹುದು’ ಎಂದು ಸೂಚಿಸುತ್ತಾನೆ. ತನ್ನನ್ನು ಸಾಕಿದ ಸೀತಮ್ಮನವರ ಮನೆಗೆ ಶಾಸ್ತ್ರಿಗಳು ಕರೆದೊಯ್ಯುವುದಾಗಿ ಹೇಳಿದಾಗ, ದಿನಕರ ಹೇಳುವುದು :
“ನಾನು ಯಾರೆಂದು ಹೇಳಬೇಡಿ. ಅಮ್ಮನಿಗೆ ಈ ಇಪ್ಪತ್ತೈದು ವರ್ಷಗಳ ನಂತರ ಗುರ್ತುಹತ್ತುತ್ತೋ ನೋಡುವ, ಅದೂ ಈ ನನ್ನ ವೇಷದಲ್ಲಿ, ಹತ್ತಿದರೆ ದಿನಕರ ಇನ್ನೂ ನಿರ್ನಾಮವಾಗಿಲ್ಲ ಅಂತ” (ಪು:೧೩).

ಅಂದರೆ ದಿನಕರ ತನ್ನ ಹಳೆಯ ಅಸ್ತಿತ್ವವನ್ನು ಕಳೆದುಕೊಂಡಿಲ್ಲ. ದಿನಕರ ಸ್ವಾಮಿ ದೀಕ್ಷೆ ತೆಗೆದುಕೊಂಡು, ತನ್ನನ್ನು ತಾನು ಕಳೆದುಕೊಂಡು ಹೊಸ ಭವವನ್ನು ಇಷ್ಟ ಪಡುತ್ತಾನಾದರೂ, ಅದು ಅವನಲ್ಲಿ ಹಂಬಲ ಮಾತ್ರವಾಗಿ ಉಳಿಯುತ್ತದೆ. ಹಳೆಯದನ್ನು ಕಳೆದುಕೊಳ್ಳದೆ ಹೊಸದು ಸಾಧ್ಯವಿಲ್ಲ. ಆದ್ದರಿಂದ ದಿನಕರನ ಎಲ್ಲ ಹುಡುಕಾಟಗಳೂ ಪೊಳ್ಳು ಎನ್ನಿಸಿಬಿಡುವ ಸ್ಥಿತಿಯಲ್ಲಿವೆ. ಹೀಗಾಗಿ ಅವನಿಗೆ ಅಯ್ಯಪ್ಪಸ್ವಾಮಿ ದರ್ಶನಕ್ಕಾಗಿ ಬೆಟ್ಟ ಹತ್ತಿ ಇಳಿಯುವುದು ಪಿಕ್ನಿಕ್ ಮಟ್ಟಕ್ಕಿಂತ ಮೇಲೇರುವುದಿಲ್ಲ.

ಎಲ್ಲವನ್ನು ನಂಬುವ, ಪ್ರೀತಿಸುವ ಮುಗ್ದತೆ ದಿನಕರನಿಗೆ ಇಲ್ಲವಾದ್ದರಿಂದಲೆ ಅವನಿಗೆ ಭವದಿಂದ ಮುಕ್ತನಾಗುವುದು ಸಾಧ್ಯವಾಗುವುದಿಲ್ಲ. ಅವನು ಹುಟ್ಟಾ ಅನುಮಾನಿ. ಅವನೇ ಹೇಳಿಕೊಳ್ಳುವಂತೆ :

“ತಾನು ಎಂದೆಂದೂ ಮುಗ್ದಸ್ಥಿತಿಯಲ್ಲಿ ಇದ್ದುದೇ ಇಲ್ಲ. ಮುಗ್ಧನಾಗದೆ ಮುಕ್ತಿಯಿಲ್ಲ. ಮುಗ್ಧನಾಗುವುದು ಈ ಪ್ರಪಂಚದಲ್ಲಿ ಇರುವ ತನಕ ತನಗೆರ ಸಾಧ್ಯವಿಲ್ಲ” (ಪು. ೭೪೧).

ಪರಮಹಂಸರಿಗೆ ಕಾಳಿ ಕರಿಬೆಕ್ಕಿನ ಮೂಲಕ ಕಾಣಿಸಿಕೊಂಡದ್ದನ್ನು ತಾನಾಗಿದ್ದರೆ ನಂಬುತ್ತಿರಲಿಲ್ಲ, ಅದನ್ನು ಬೆಕ್ಕೆಂದೇ ತಿಳಿದುಕೊಳ್ಳುತ್ತಿದ್ದೆ ಎಂದು ದಿನಕರ ಯೋಚಿಸುತ್ತಾನೆ.

ದಿನಕರ ಶಾಸ್ತ್ರಿಗಳಂತೆ ವಿಶ್ಲೇಷಣಾ ಹಂತದಲ್ಲೆ ನಿಲ್ಲುತ್ತಾನೆ. ಅವನಲ್ಲೂ ಇರುವುದು `ಆಗುವಿಕೆ’ಯ ಹಂಬಲ ಮಾತ್ರವೇ ಹೊರತು ನಿಜವಾದ ಆಗುವಿಕೆಯಲ್ಲ :

“ತನಗೆ ಸ್ವರ್ಗವೂ ಇಲ್ಲ, ನರಕವೂ ಇಲ್ಲ, ಇರುವುದೆಂದರೆ ಗೋಳುಮಾತ್ರ”.
“ತನ್ನಂಥ ಅತಂತ್ರರಿಗೆ ಸಂಸಾರವೂ ಇಲ್ಲ, ಸನ್ಯಾಸವೂ ಇಲ್ಲ. ತನಗೆ ನೆಲೆಯೇ ಇಲ್ಲ. ತಾನು ಯಾರೆಂದು ಹುಡುಕಿದರೂ ಸಿಗುವುದೇ ಇಲ್ಲ” (ಪು. ೭೧-೭೨).


ಶಾಸ್ತ್ರಿ ಮತ್ತು ದಿನಕರನಿಗೆ ಭವವನ್ನು ಮೀರಬೇಕಾಗಿದೆ. ಆದರೆ ಸಾಮರಸ್ಯದ ಕೊರತೆ ಇದೆ. ಸಾಮರಸ್ಯ ಏರ್ಪಡುವ ಎಲ್ಲ ಎಲ್ಲ ತನ್ಮಯೀ ಭಾವಗಳಿಂದ ಈ ಇಬ್ಬರೂ ದೂರವಿರುತ್ತಾರೆ. ಈ ದೃಷ್ಟಿಯಿಂದ ಸಂಗೀತದ ಮೆಟಫರ್ ಸಾವಯವ ಸತ್ವ ಪಡೆಯುತ್ತದೆ. ಇಲ್ಲಿ ಸಂಗೀತ ಮತ್ತು ಕಾಮವನ್ನು ಅಭಿನ್ನವಾಗಿ ಕಲ್ಪಿಸಿ, ಮೂಲಧಾತುವಾಗಿ ಮಾಡಲಾಗಿದೆ. ಸಂಗೀತ ದಿನಕರ ಶಾಸ್ತ್ರಿಗಳಿಂದ ದೂರವಾಗುತ್ತ, ಅವರ ಪ್ರತಿಪಾತ್ರಗಳಲ್ಲಿ ಸೇರುತ್ತಾ ಹೋಗುತ್ತದೆ.

ಕರುಣಾಕರನ ಮುಂದೆ ತನ್ಮಯತೆಯಿಂದ ಹಾಡುವ ಸರೋಜಳನ್ನು ನೋಡುವಾಗ ಶಾಸ್ತ್ರಿಗಳಿಗೆ ಕಸಿವಿಸಿ ಉಂಟಾಗುತ್ತದೆ. ಈ ಕಸಿವಿಸಿ ಉಂಟಾಗುವುದು ಅವರ ಅನುಮಾನದಿಂದ. ತಮಗಿಂತ ಮುಂಚೆ ಪಂಡಿತ ಸರೋಜಳ ಸಂಗೀತದಿಂದ ಉಂಟಾದ ಕಾಮಸದೃಶ ತನ್ಮಯತೆಯನ್ನು ಅನುಭವಿಸಿದ್ದಾನೆಂಬ ಅನುಮಾನದಿಂದ ನರಳುವ ಶಾಸ್ತ್ರಿಗಳು ಸಾಮರಸ್ಯದಿಂದ ತಮಗರಿವಿಲ್ಲದಂತೆ ದೂರವಾಗುತ್ತಾರೆ. ಇದರಿಂದ `ಊಳಿಡುವ’, `ವಿಕಾರಶೃತಿಯಂತೆ’ ಇರುವ ಧ್ವನಿ ಅವರಲ್ಲಿ ಬೆಳೆಯುತ್ತಾ ಹೋಗುತ್ತದೆ.

ದಲೈಲಾಮಾರ ಮಂತ್ರಪಠಣವನ್ನು ವಾಕ್‍ಮನ್‍ನಲ್ಲಿ ದಿನಕರ ಕೇಳುವುದು ಕಾದಂಬರಿಯಲ್ಲಿ ಸಾಂಕೇತಿಕವಾಗಿದೆ :
“ಓ ಓ ಓ ಎನ್ನುವ ಮಂದರನಾದ… ನಾದವೆಲ್ಲವೂ ತನಗೇ ತಾನು ಒಳಗಿಂದ ಮಾಡಿಕೊಂಡಂತೆ. ಇನ್ನೂ ಇನ್ನೂ ಒಳಗೊಳಗೇ ಹೋಗುವಂತೆ ಸಂಚರಿಸುತ್ತ ಹುಡುಕುವ ತಾಳತಾಳದ ನಾದ. ಮುಗಿಯಿತೆನ್ನುವಷ್ಟರಲ್ಲೇ ಇನ್ನೊಂದು ಇನ್ನೂ ಆಳದ ಕುಂಡಲಿನಿಯಿಂದ ಎದ್ದಂತಿದ್ದ ನಾದ” (ಪು. ೫೭).

ಪ್ರಜ್ಞಾಬಾಧಿತನಾದ ದಿನಕರನಿಗೆ ಈ ಮಧುರನಾದದಲ್ಲಿ ಲೀನವಾಗಲು ಆಗುವುದಿಲ್ಲ. ತನ್ನ ದ್ವಂದ್ವವನ್ನು ಮುಂದುವರಿಸುವ ಅವನಿಗೆ ಸಾಮರಸ್ಯೆ ದೂರವಾಗುತ್ತದೆ :

“ರಾತ್ರಿ ತನ್ನ ಕೋಣೆಗೆ ಹೋದ ದಿನಕರನಿಗೆ ನಿದ್ದೆ ಬರಲಿಲ್ಲ…. ವಾಕ್‍ಮನ್‍ನಿಂದ ಸಂಗೀತ ಕೇಳಿಸಿಕೊಳ್ಳಲು ಪ್ರಯತ್ನಿಸಿದ, ರುಚಿಸಲಿಲ್ಲ. ಟೆಬೆಟನ್ನರ ಪ್ರಾರ್ಥನೆ ಕೃತಕವೆನ್ನಿಸಿತು. ತನ್ನ ಹೃದಯದಲ್ಲೇ ಅದಕ್ಕೆ ಸ್ಪಂದನವಿರದೇ ಹೋಗಿತ್ತು” (ಪು. ೭೮).

ಸಂಗೀತದಲ್ಲಿ ತನ್ಮಯತೆ ಇಲ್ಲದ ಶಾಸ್ತ್ರಿಗಳಿಗೆ ಸರೋಜ ಪ್ರತಿಪಾತ್ರವಾದರೆ, ದಿನಕರನಿಗೆ ತಾನು ಆ ಸಾಮರಸ್ಯದಿಂದ ದೂರವಿರುವುದು ಪರೋಕ್ಷವಾಗಿ ಗೋಚರಿಸುತ್ತದೆ. :

“ಅವನ ಆಲಾಪ ಅಲೆಅಲೆಯಾಗಿ ಅಲೆದು, ತಾನು ಹೊರಹೊಮ್ಮಿದ ಮೂಲ ಶೃತಿಗೆ ಮತ್ತೆ ಮತ್ತೆ ತಣಿದು, ಇಗೋ ಸರಳವಾಗಿ ಬಿಡುತ್ತ, ಇಗೋ ಮತ್ತೆ ಬಿಗಿಯಾಗಿ ಬಿಡುತ್ತ, ಏರಿಳಿಯುವ ಸೋಜಿಗದಲ್ಲಿ ಪ್ರಸಾದ ತಾನು ಮುಟ್ಟಬೇಕಾದ್ದನ್ನು ಮುಟ್ಟಿದವನಂತೆ ಕಂಡಿದ್ದ” (೧೦೫).

ಸಂಗೀತ ಕೇಳುತ್ತಿದ್ದಂತೆ ಶಾಸ್ತ್ರಿಗಳಿಗೆ ಹೇಗೆ ಕಾಮುಕತೆಯುಂಟಾಗುತ್ತದೊ, ಹಾಗೆ ದಿನಕರನಿಗೂ ಪ್ರಸಾದನ ಸಂಗೀತ ಕಾಮುಕತೆಯನ್ನುಂಟುಮಾಡುತ್ತದೆ. “ಬ್ರಹ್ಮ ಸೂತ್ರಕ್ಕೆ ಭಾಷ್ಯ ಬರೆಯುತ್ತಿದ್ದ ಆದಿಶಂಕರರು ಇವನಂತೆಯೇ ಇದ್ದಿರಬೇಕು. ಬಾಲ ಸಂನಾಸಿಯಾಗಿದ್ದೂ ಅವರು ಗಾಢವಾದ ರತಿವಿಜ್ಞಾನವಿದ್ದವರನ್ನು ಮೀರಿಸುವಂತೆ ದೇವಿಯನ್ನು ನಖಶಿಖಾಂತ ವರ್ಣಿಸಿದ್ದರು” (ಪು. ೧೦೫). ಪ್ರಸಾದನ ಸಂಗೀತ ದಿನಕರನಲ್ಲಿ
ಶಂಕರಾಚಾರ್ಯರ ನೆನಪು ತರುವುದು ಸಂಗೀತ-ಕಾಮದ ಅಭಿನ್ನತೆ ಹೇಳುವ ಮುಖ್ಯ ಘಟನೆಯಾಗಿದೆ.

ಸಂಗೀತದ ತದಾತ್ಮ್ಯ ಒಂದು ಬಗೆಯದಾದರೆ, ಸೀತಮ್ಮನ ಗೃಹಕೃತ್ಯದ ತನ್ಮಯತೆ ಇನ್ನೊಂದು ಬಗೆಯದು. ದೈನಂದಿನ ಎಲ್ಲಾ ಕೆಲಸಗಳಲ್ಲೂ `ಏಕಾಗ್ರವಾದ ತೊಡಗುವಿಕೆ’ ಸಾಮರಸ್ಯವೇ ಹೌದು. ಆದ್ದರಿಂದಲೇ ಇದು ಸಂಗೀತದ ಸಾಮರಸ್ಯದಷ್ಟೆ ಮುಖ್ಯವಾದದ್ದು. ಸೀತಮ್ಮನನ್ನು ಮೊದಲ ಬಾರಿಗೆ ದಿನಕರ ನೋಡಿದಾಗ ಅವರು ರಂಗೋಲೆ ಬಿಡಿಸುತ್ತಿರುತ್ತಾರೆ. ಅಲ್ಲಿ ವ್ಯಕ್ತವಾಗುವ ತಾದಾತ್ಮ್ಯವನ್ನು ಗಮನಿಸಬೇಕು :

ಹೆಬ್ಬರಳಿಂದಲೂ ತೋರುಬೆರಳುಗಳಿಂದಲೂ ರಂಗೋಲಿಪುಡಿಯನ್ನು ಹಿಡಿದು, ಅದನ್ನು ಬೆರಳಿನಲ್ಲಿ ತಿಕ್ಕುತ್ತ ಬಿಗಿಮಾಡಿ, ರೇಖೆಗೆ ಅಗತ್ಯವಾದಷ್ಟು ಅದನ್ನು, ಸರಿಸುತ್ತ, ಕ್ಷಣಾರ್ಧದಲ್ಲಿ ಸಾರಿಸಿ ಅಂಗಳದ ನಡುವಿನಲ್ಲೆಂದರೆ ನಡುವಿನಲ್ಲಿ, ಎರಡು ತ್ರಿಕೋಣಗಳನ್ನು ಒಂದರೊಳಗೊಂದು ಮೂಡಿಸಿದ್ದರು (ಪು. ೧೫-೧೬).

ಕಾದಂಬರಿಯ ಕೊನೆಗೆ ಸೀತಮ್ಮ ಬಿಡಿಸುವ ಶ್ರೀಚಕ್ರ ಇದೇ ರೀತಿಯ ತಾದಾತ್ಮ್ಯದಿಂದ ಹುಟ್ಟುತ್ತದೆ. ಇಲ್ಲಿ ರಂಗೋಲೆಯೆ ಒಂದು ಮೆಟಫರ್ ಆಗಿ ಬಿಡುತ್ತದೆ.

ಅಡುಗೆ ಮಾಡುವಾಗ ಕಟ್ಟಿಗೆಗಳನ್ನು ದಬ್ಬುತ್ತ, ಅವು ಉರಿಯಲು ಒಂದರ ಮೇಲೊಂದು ಇಟ್ಟು, ಸ್ವಲ್ಪ ಆರಿಸಿ, ಉರಿಯನ್ನು ಹದವಾಗಿ ಮಾಡುವ ಏಕಾಗ್ರತೆ, ರಂಗೋಲೆ ಹಾಕುವಾಗಿನ ಏಕಾಗ್ರತೆಗಿಂತ ಬೇರೆಯಾದುದಲ್ಲ.

ದಿನಕರನಿಗೆ ಬದುಕನ್ನು ಅನುಭವಿಸುವ ಶ್ರದ್ದೆ, ತನ್ಮಯತೆಗಳಿಲ್ಲ. ಎಲ್ಲಾ ಅನುಭವಗಳನ್ನು ತನ್ನ ಪ್ರಜ್ಞೆಯಲ್ಲಿ ನಿಂತೇ ನೋಡಬೇಕೆನ್ನುವ ಧೋರಣೆ ಅವನಿಗಿರುವುದರಿಂದ ತೊಡಗುವಿಕೆ ಇಲ್ಲವಾಗುತ್ತದೆ. ಈ ದೃಷ್ಟಿಯಿಂದ ದಿನಕರನಿಗೆ ಸೀತಮ್ಮ ಪ್ರತಿಪಾತ್ರ.


ಭವದ ಮುಖ್ಯ ನೆಲೆ ಕಾಮ. ಕಾದಂಬರಿಯ ಆಶಯ ಏನೆಂದರೆ, ಕಾಮದಲ್ಲಿ ದೇಹ-ಮನಸ್ಸಿನ ಅಭಿನ್ನತೆ, ಅಂದರೆ ಸಾಮರಸ್ಯ. ಈಗಾಗಲೇ ಗಮನಿಸಿರುವಂತೆ ಶಾಸ್ತ್ರಿ ಮತ್ತು ದಿನಕರರು ಎಲ್ಲಾ ಬಗೆಯ ಸಾಮರಸ್ಯಗಳಿಂದ ದೂರವಾದವರು. ಮೂಲ ಧಾತುವಾಗಿರುವ ಕಾಮ ಕೂಡ ಅವರಲ್ಲಿ ಸಾಮರಸ್ಯ ತರುವುದಿಲ್ಲ. ಕಾಮ ತನ್ನ ಸ್ವಾರಸ್ಯವನ್ನು ಕಳೆದುಕೊಂಡು <ಲನ್ಗ್=ಎನ್ಗ್|ಫ಼ೊನ್ತ್=”ಆರಿಅಲ್”>ದೆಗ್ರದೆದ್ ಸೆ಼<ಲನ್ಗ್=ಕನ್|ಫ಼ೊನ್ತ್=”ಭ್ರ್‍ಃ ಖನ್ನದ”> ಆಗಿ ಉಳಿದುಬಿಡುತ್ತದೆ. ಇದನ್ನು ಮೃಗತ್ವದ, ಪೈಶಾಚಿಕ ಪ್ರತಿಮೆಗಳ ಮೂಲಕ ಹೇಳಲಾಗಿದೆ.

ಶಾಸ್ತ್ರಿಗಳಲ್ಲಿ, ಅವರೇ ಗುರುತಿಸಿಕೊಳ್ಳುವಂತೆ, ಅವರ ಕಾಮದಲ್ಲಿ ಮೃಗತ್ವದ, ಮತ್ತು ಪೈಶಾಚಿಕ ನೆಲೆಗಳಿವೆ. ರಕ್ತದಾಹಿಯಾದ ದೆವ್ವ, ಮಿದುಳಿನಲ್ಲಿ ಉರಿಯುತ್ತಿರುವ ಕೆಂಗಣ್ಣು ಅವರಲ್ಲಿ ಪಶುತ್ವದ ಸಂಕೇತವಾಗಿ, ಅಶಾಂತತೆಯನ್ನು ಹೆಚ್ಚಿಸುತ್ತ ಬೆಳೆಯುತ್ತವೆ. ಶಾಸ್ತ್ರಿಗಳು ತಮ್ಮನ್ನು ತಾವು ವಿಶ್ಲೇಷಿಸಿಕೊಳ್ಳುವಾಗ ಮೃಗೀಯ ಸಂಕೇತಗಳು ಪುನರಾವರ್ತಿತವಾಗುತ್ತವೆ. ಸರೋಜಳ ಜೊತೆ ಕಾಮ ಸಾಮರಸ್ಯವನ್ನು ಕಾಣದಿದ್ದಾಗಲೆಲ್ಲ
ಅವರಲ್ಲಿನ ಪಶುತ್ವ ಹೆಡೆಯಾಗುತ್ತದೆ :

“ದಟ್ಟವಾದ ಕಾಡಿನಲ್ಲಿ ಪೊದೆಗಳ ನಡುವೆ ಗುಪ್ತವಾಗಿ ಸಂಚರಿಸುವ ಕ್ರೂರವಾದ ಪಶುವಿನಂತೆ ಮುಚ್ಚಿದ ಬಾಯಲ್ಲೇ ಭಯಾನಕವಾದ ಶಬ್ಬ ಹೊರಡಿಸಲು ತೊಡಗಿದರು. ಆ ಶಬ್ಬ ದೀರ್ಘವಾಗಿತ್ತು. ಏರುತ್ತೇರುತ್ತ ಹೋಗಿ ಹಾಗೆಯೇ ಇಳಿಯುತ್ತಿಳಿಯುತ್ತ ಮೌನವಾಗಿ, ಮತ್ತೆ ಏರುತ್ತಿತ್ತು. ಅದು ನರಳುವ ಶಬ್ಬದಂತೆಯೂ ಕ್ರೂರಪ್ರಾಣಿ ಘೀಳಿಟ್ಟಂತೆಯೂ ಇತ್ತು. ಮನುಷ್ಯ ಪ್ರಾಣಿ ಹೊರಡಿಸುವ ಶಬ್ದಂತಿರಲಿಲ್ಲ” (ಪು. ೩೬).

ಪಂಡಿತ ಮತ್ತು ಸರೋಜಳ ಬಗ್ಗೆ ಸಂಶಯ ಬೆಳೆಸಿಕೊಳ್ಳುತ್ತ ಹೋದ ಶಾಸ್ರಿಗಳು ಸರೋಜ ಗರ್ಭೀಣಿಯಾಗಿದ್ದಾಳೆಂಬ ಸುದ್ದಿ ಕೇಳದವರೆ, “ಮುಂಡೇ, ಬಸುರಾಗಿ ಬಿಟ್ಟೆಯಾ” ಎಂದು ದೆವ್ವದಂತೆ ಕೇಳಿದರು… ಒಳಗಿನ ದೆವ್ವ ವಿಕಾರವಾಗಿ ನಗಲು ಪ್ರಾರಂಭಿಸಿತ್ತು (ಪು. ೪೪).

ದಿನಕರ ಮತ್ತು ಮಗನೊ ಅಲ್ಲವೊ ಎಂಬ ಅನುಮಾನ ಹುಟ್ಟದಾಗ, “ನಾನೇ ದೆವ್ವದಂತೆ ಊಳಿಡುತ್ತ ಅವನನ್ನು ಹುಟ್ಟಸಿರಬಹುದಲ್ಲವೆ?” (ಪು. ೪೬) ಎಂದು ಯೋಚಿಸುವ ಶಾಸ್ತ್ರಿಗಳಿಗೆ, `ಈ ದೆವ್ವ ಹೊಕ್ಕ ಶರೀರ ಏನೂ ಕಲಿಯದೆ ಉಳಿದು ಬಿಟ್ಟಿತು’ (ಪು. ೪೫) ಎಂಬ ಅರಿವೂ ಇದೆ.

ದಿನಕರ ಮತ್ತು ಶಾಸ್ರಿಗಳು ಪ್ರತಿಫಲಿತ ಪಾತ್ರಗಳಾದ್ದರಿಂದ, ಶಾಸ್ತ್ರಿಗಳಲ್ಲಿ ಕಾಣಿಸಿಕೊಳ್ಳುವ ಮೃಗತ್ವ ದಿನಕರನಲ್ಲೂ ಸ್ವಲ್ಪ ಪ್ರಮಾಣದಲ್ಲಿರುವುದನ್ನು ಕಾಣಬಹುದು. ನಾರಾಯಣ ತಂತ್ರಿ ಗಂಗೂಬಾಯಿಯೊಂದಿಗಿನ ತನ್ನ ಸಂಬಂಧವನ್ನು ಹೇಳುವಾಗ, ದಿನಕರನಿಗೆ ತಕ್ಷಣ ಅನ್ನಿಸುವುದು; `ಅವಳನ್ನು ಮೊದಲು ಪಡೆದದ್ದು ನಾನು. ಅವಳು ಇನ್ನೂ ಕುಮಾರಿಯಾಗಿದ್ದಳು’ ಎಂದು. ಆದರೆ `ತನಗೆ ಹಾಗೆ ಅನ್ನಿಸಿದ್ದರ ಹಿಂದಿರುವ ಪಶುತ್ವಕ್ಕೆ ನಾಚಿ’ ಸುಮ್ಮನಾಗುತ್ತಾನೆ.

ಶಾಸ್ತ್ರಿಗಳು ಕಾಮ ಮೃಗತ್ವದಿಂದ ನರಳಿದರೆ, ದಿನಕರನಲ್ಲಿ ಕಾಮ repeatitionನಿಂದ ನರಳುತ್ತದೆ. ದಿನಕರನಲ್ಲಿ ಕಾಮ degraded sex ಆಗಿ ಉಳಿಯುತ್ತದೆ. ಎಲಿಯಟ್‍ನಂತಹ ಆಧುನಿಕ ಕವಿಗಳಲ್ಲಿ ನಾವು ನೋಡುವಂತೆ ಕಾಮಧಾತುವೇ ಆಧ್ಯಾತ್ಮಿಕಧಾತುವಾಗುತ್ತದೆ. ಸಂಗೀತದ ಆಧ್ಯಾತ್ಮ ಭಾವಕ್ಕೆ ಕಾಮವನ್ನು ಕಲ್ಪಿಸುವುದರ ಮೂಲಕ ಈ ಆಶಯ ಇಲ್ಲಿಯೂ ಹೊರಹೊಮ್ಮುವುದನ್ನು ನೋಡಬಹುದು. ಇಲ್ಲಿ ದಿನಕರನಿಗೆ ಕಾಮ ಅಂಥ ಒಂದು driving force ಆಗುವುದಿಲ್ಲ. `ಸರ್ಕಸ್ಸಿನ ಟೈಟ್‍ರೋಪ್ ವಾಕರ್‌ನಂತೆ’ ಪ್ರೇಯಸಿಯರನ್ನು ನಿರ್ವಹಿಸುವ ಕುಶಲಿಯಾಗಿ ದಿನಕರ ನಿಲ್ಲುತ್ತಾನೆ. ಅವನಲ್ಲಿ ಗಂಭೀರ ಹುಡುಕಾಟ ಇಲ್ಲವಾದ್ದರಿಂದ ಕಾಮ ಅವನಲ್ಲಿ ಲಂಪಟತೆಯ ಸಂಕೇತವಾಗಿ ಮಾತ್ರ ಉಳಿಯುತ್ತದೆ.

ಶಾಸ್ತ್ರಿ ಮತ್ತು ದಿನಕರರು ಈ ಭವವನ್ನು ಮೀರಲಾರರು; ಹೊಸ ಭವವನ್ನು ಸ್ವಾಗತಿಸಲಾರರು. ತಮಗೆ ತಾವೆ ನೈತಿಕ ವೃತ್ತಗಳನ್ನು ಹಾಕಿಕೊಂಡು, ಅದರ ಪೂರ್ಣತೆಯನ್ನು ಅನುಭವಿಸದಿರುವುದು ಅವರ ಭವ.
(ಸತ್ಯಶುದ್ದ ಕಾಯಕ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬ್ಯಾಸರಾದಿತು ಹೇಸಿ ಕವಿ
Next post ಸತ್ಯ

ಸಣ್ಣ ಕತೆ

 • ವಾಮನ ಮಾಸ್ತರರ ಏಳು ಬೀಳು

  "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

 • ಸಾವು

  ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

 • ಬಸವನ ನಾಡಿನಲಿ

  ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys