ಪದ ಜನಪದ

ಪದ ಜನಪದ

ನಾನೊಬ್ಬ ಅಕ್ಷರಮೋಹಿ ಹೇಗೋ ಅದೇ ರೀತಿ ಪದಮೋಹಿಯೂ ಹೌದು. ಒಮ್ಮೆ ಊರಿಗೆ ಹೋಗಿದ್ದಾಗ ಕನ್ನಡದ ಕವಿಯಿತ್ರಿ ಸಂಧ್ಯಾದೇವಿ ಫೋನ್ ಮಾಡಿದ್ದರು. ಆಗ ನಾನು ಹೊರಗೆಲ್ಲೋ ತೆರಳಿದ್ದೆ. ನಂತರ ಮನೆಗೆ ಮರಳಿದಾಗ ಗೊತ್ತಾಗಿ ನಾನೇ ಅವರಿಗೆ ಫೋನ್ ಮಾಡಿದೆ. ಮಾತಿಗೆ ಮೊದಲೇ ಸಂಧ್ಯಾದೇವಿ ಅಂದದ್ದು: ನೀವು ಹೊರಗೆ ಹೋಗಿದ್ದೀರಿ, ಬೈಸಾರಿ ಬರುತ್ತೀರಿ ಅಂತ ನಿಮ್ಮ ಮಾವ ಹೇಳಿದರು; ಅವರು ಉಪಯೋಗಿಸಿದ ‘ಬೈಸಾರಿ’ ಎಂಬ ಶಬ್ದ ಕೇಳಿ ನನಗೆ ಖುಷಿಯಾಯಿತು – ಎಂಬುದಾಗಿ. ಈ ಸಂಧ್ಯಾದೇವಿ ಕೂಡಾ ಒಬ್ಬ ಪದಮೋಹಿ ಎಂದು ತಿಳಿದು ನನಗೆ ಸಂತೋಷವಾಯಿತು. ಬೈಸಾರಿ (ಬೈಸಾರೆ) ಎಂಬ ಪದವನ್ನು ನಾನು ಸ್ವತಃ ಉಪಯೋಗಿಸುವುದು ಬಹಳ ಅದು ನನಗೂ ಖುಷಿ ಕೊಡುವ ಪದವೇ. ದಕ್ಷಿಣ ಕನ್ನಡ ಪ್ರದೇಶಕ್ಕೆ ಸೇರಿದ್ದು, ಈಗ ಕಡಿಮೆ ಬಳಕೆಯಲ್ಲಿರುವ ಶಬ್ದ ಇದು. ‘ಬೈಸಾರಿ’ ಎಂದರೆ ಸಂಜೆ ಎಂದರ್ಥ. ‘ಬೈಗು’ ಪದಕ್ಕೆ ಸಮಾನ. ತುಳುವಿನಲ್ಲಿ ‘ಬಯ್ಯ’ ಎಂದರೆ ಇದೇ ಅರ್ಥ. ಬಯ್ಯಮಲ್ಲಿಗೆ ಎಂದರೆ ಸ೦ಜೆಮಲ್ಲಿಗೆ. ಲೆಕ್ಕೊ ಪಕ್ಕೊ ಬಯ್ಯಾಡ್ತ್ ಬುಕ್ಕೊ ಎಂದರೆ ಲೆಕ್ಕ ಗಿಕ್ಕ ಸಂಜೆಯಾದ ಮೇಲೆ ಎಂದು; ಇದು ದೊಡ್ಡವರು ಮಕ್ಕಳನ್ನು ಗದರಿಸುವ ತುಳು ಮಾತು. ‘ಸಾರಿ’ (ಸಾರೆ) ಎಂದರೆ ಕನ್ನಡದಲ್ಲಿ ಸಲ, ಸರ್ತಿ ಎಂಬುದಾಗಿ. ಈ ಸಾರಿ ಕೊಯ್ಲು ಕಡಿಮೆ ಎಂದರೆ ಈ ಸಲ ಕೊಯ್ಲು (ಬೆಳೆ) ಕಡಿಮೆ ಎಂದು ತಿಳಿಯಬೇಕು. ‘ಬೈಸಾರಿ’ ಪದದ ‘ಸಾರಿ’ ಇದೋ ಅಥವಾ “ಹೊತ್ತಾರೆ” ಎಂಬ ಪದದಲ್ಲಿನ ಹಾಗೆ ಬೇರೆ ರೀತಿಯದೋ ನನಗೆ ಗೊತ್ತಿಲ್ಲ. ಬೈಸಾರಿಗೆ ಹವ್ಯಕ ಕನ್ನಡದಲ್ಲಿ ‘ಮೂರುಸಂದಿ’ ಎನ್ನುತ್ತಾರೆ. ಇದರ ಅರ್ಥ ಈ ಪದದಲ್ಲೇ ಇದೆ: ಮೂರನೆಯ ಸಂದಿ (ಸಂಧಿಕಾಲ), ಅರ್ಥಾತ್ ಮುಸ್ಸಂಜೆ. ಹೊತ್ತು ಇಳಿದು ಕತ್ತಲು ಕಾಲಿಡುವ ಸಮಯಕ್ಕೆ ಇದೇ ಭಾಷೆಯಲ್ಲಿ ‘ಮಯ ಮಯ’ ಎನ್ನುವುದಿದೆ. ಇದನ್ನು ವಿವರಿಸುವ ಅಗತ್ಯವಿಲ್ಲ; ಬಹುಶಃ ಇದೊಂದು ಅನುಕರಣ ಪದ ಇದ್ದೀತು. ಏನಿದ್ದರೂ ‘ಮಯ ಮಯ’ದೊಳಗಣ ಮಾಯೆಯ ಮೋಡಿ ಸಣ್ಣದಲ್ಲ!

ಲಲಿತಾ ಸಿದ್ದಬಸವಯ್ಯ ಎಂಬ ಕವಿಯಿತ್ರಿಯ ಕವಿತೆಗಳು ನನಗೆ ಇಷ್ಟ. ಇದಕ್ಕೆ ಒಂದು ಕಾರಣ ಅವರು ತಮ್ಮ ಕವಿತೆಗಳಲ್ಲಿ ಉಪಯೋಗಿಸುವ ವಿಶಿಷ್ಟವಾದ (ಹಾಸನದ ಕಡೆಯ) ಪ್ರಾದೇಶಿಕ ಪದಗಳು. ಅವರ ಕವನ ಸಂಕಲನವೊಂದರ ಹೆಸರೇ “ಕಬ್ಬೆನೆಲ.’ ಅದರಲ್ಲೊಂದು ಕವಿತೆಯ ಹೆಸರು ‘ಲಾವಾಜಮೆ.’ ಇದೇನು ಕಬ್ಬೆನೆಲ, ಇದೇನು ಲಾವಾಜಮೆ ಎಂದೆಲ್ಲ ಆಶ್ಚರ್ಯವಾಗಬೇಕು. ಅದೇ ರೀತಿ ಜಿ. ಕೆ. ರವೀಂದ್ರಕುಮಾರರ ಕವಿತೆ ‘ಅಮಟೆ’. ಇದು ಕನ್ನಡ ಮಕ್ಕಳು ಆಡುವ ಸಂದರ್ಭದಲ್ಲಿ ಅವರ ಬಾಯಲ್ಲಿ ಇಂಗ್ಲಿಷ್‌ನ Am I out ಪಡೆದ ರೂಪಾಂತರ. ಎಷ್ಟು ಸು೦ದರವಾಗಿದೆ! ಅದೇ ರೀತಿ ಕುಂ. ವೀರಭದ್ರಪ್ಪನವರು ಪ್ರಚುರಗೊಳಿಸಿದ appleನ ತದ್ಭವ ‘ಯಾಪಲ್ಲು’. ದೇವನೂರ ಮಹಾದೇವರ ‘ಕುಸುಮ ಬಾಲೆ’ಯನ್ನು ಅದರ ಕಠಿಣ ಪದಗಳಿಗಾಗಿಯೋ, ಮಾಯಾವಾಸ್ತವ ಕಥನಕ್ಕಾಗಿಯೋ ಕೆಲವರು ಆಕ್ಷೇಪಿಸುತ್ತಿದ್ದಾಗ ನನಗೆ ಆ ಪುಟ್ಟ ಕೃತಿ ಅದೇ ಕಾರಣಕ್ಕಾಗಿ ಇಷ್ಟವಾಯಿತು!

ವಿಮರ್ಶಕ ಜಿ. ರಾಜಶೇಖರರು ಒಮ್ಮೆ ಸಾಂದರ್ಭಿಕವಾಗಿ ನನ್ನನ್ನು ‘ನಿಮ್ಮ ಕಾಷ್ಠವ್ಯಸನಗಳೇನು?’ ಎಂದು ಕೇಳಿದ್ದರು. ಅವರು ಉಪಯೋಗಿಸಿದ ‘ಕಾಷ್ಠವ್ಯಸನ’ ಎಂಬ ಪದ ನನ್ನನ್ನು ಕ್ಷಣಕಾಲ ಬೆರಗುಗೊಳಿಸಿತು. ಈ ಪದಪುಂಜ ನನಗೆ ಹೊಸದಲ್ಲವಾದರೂ, ಅದನ್ನೀಗ ಬಳಸುವವರು ಅಪರೂಪವೇ ಸರಿ. ನಾನಂತೂ ಅದನ್ನು ಮರೆತೇ ಇದ್ದೆ. ರಾಜಶೇಖರ್ ಅದನ್ನು ಬಳಸಿ ನನಗೆ ಜ್ಞಾಪಿಸಿದ್ದಕ್ಕೆ ನನಗೆ ಸಂತೋಷವೇ ಆಯಿತು. ಕಾಷ್ಠವ್ಯಸನ ಎಂದರೆ ಸತ್ತು ಚಿತೆಯೇರುವ ತನಕ ನಮ್ಮ ಜತೆ ಬರುವ ವ್ಯಸನ (ಚಟ, ಹವ್ಯಾಸ, ಬೇಸರ). ಕಾಷ್ಠ ಎಂದರೆ ಕಟ್ಟಿಗೆ ಎ೦ದು ನೆನಪಿಸಿಕೊಂಡರೆ ಈ ಅರ್ಥ ಹೇಗೆ ಬಂತು ಎನ್ನುವುದು ಸ್ಪಷ್ಟವಾಗುತ್ತದೆ. ನಾನವರಿಗೆ ಏನು ಉತ್ತರಿಸಿದೆನೆನ್ನುವುದು ಇಲ್ಲಿ ಮುಖ್ಯವಲ್ಲ; ಆದರೆ ಆ ಪದ ನನಗೆ ಇಷ್ಟವಾಯಿತು ಹಾಗೂ ನಾನದರ ಮೋಹಕ್ಕೊಳಗಾದೆ ಎನ್ನುವುದು ಮುಖ್ಯ. ಅದೇ ರೀತಿ ‘ವ್ಯಸನ’ ಎನ್ನುವ ಪದ ‘ಶ್ರೇಷ್ಠತೆ’ಯ ಜತೆ ಸೇರಿ ‘ಶ್ರೇಷ್ಠತೆಯ ವ್ಯಸನ’ವಾಗಿ (ಬಹುಶಃ ಕೆ. ವಿ. ಸುಬ್ಬಣ್ಣನವರ ಲೇಖನದ ಕಾರಣ) ಕನ್ನಡ ವಿಮರ್ಶಾ ಪರಿಭಾಷೆಗೊಂದು ಕೊಡುಗೆ ನೀಡಿದ್ದನ್ನೂ ಇಲ್ಲಿ ನೆನೆಯಬಹುದು.

ಈ ಕಾಷ್ಠವ್ಯಸನ ಘಟನೆಯ ನಂತರ ನಾನೊಬ್ಬ ಕೇವಲ ಪದಮೋಹಿ ಮಾತ್ರವೇ ಅಲ್ಲ, ಪದವ್ಯಸನಿಯೂ ಹೌದು ಎಂದು ಅನಿಸತೊಡಗಿದೆ. ಪದವ್ಯಸನಿಗಳು ಪದೇ ಪದೇ ಪದದ ಬಗ್ಗೆ ಚಿಂತಿಸುತ್ತಿರುತ್ತಾರೆ. ಹೊಸತೊಂದು ಪದ ಸಿಕ್ಕಿದರೆ ಧನ ಸಿಕ್ಕಿದುದಕ್ಕಿಂತ ಹೆಚ್ಚು ಸಂತೋಷಪಡುತ್ತಾರೆ; ಆ ಬಗ್ಗೆ ಮಾತಾಡಲು ಇಚ್ಛಿಸುತ್ತಾರೆ. ಅದೇ ರೀತಿ ಪದವೊಂದು ಕಳೆದುಹೋದರೆ ತುಂಬಾ ದುಃಖಪಡುತ್ತಾರೆ. ಪದ ಕಳೆದುಹೋಗುವುದು ಎಂದರೇನು? ಒಂದೋ ರೂಢಿಯಿಂದ ಕಳೆದುಹೋಗುವುದು. ಇಲ್ಲವೇ ಮರೆತುಹೋಗುವುದು. ಅಯೋವಾದಲ್ಲಿ ನಾನು ಕಲಿಸುತ್ತಿದ್ದಾಗ ನನಗೊಂದು ಪದ ಮರೆತುಹೋದಂತೆ ಅನಿಸಿತು. ಮೂಲತಃ ಫ್ರೆಂಚ್ ಭಾಷೆಯ ಈ ಪದ ಇಂಗ್ಲಿಷ್ನಲ್ಲಿ ಚಾಲ್ತಿಯಲ್ಲಿರುವಂಥದೇ. ಫಕ್ಕನೆ ಶ್ರೀಮಂತಿಕೆ ಬಂದ, ಆದರೆ ಶ್ರೀಮಂತ ವರ್ಗದ ಸಂಸ್ಕೃತಿಯನ್ನು ರೂಢಿಸಿಕೊಳ್ಳದ ವ್ಯಕ್ತಿಗಳ ಕುರಿತಾಗಿ ಸ್ವಲ್ಪ ತಾತ್ಸಾರದಿಂದ ಉಪಯೋಗಿಸುವ ಪದ ಇದು. ಕ್ಲಾಸಿನಲ್ಲಿ ಯಾವುದೋ ಸಂದರ್ಭದಲ್ಲಿ ನನಗೀ ಪದ ಬೇಕಿತ್ತು. ಎಷ್ಟು ಯತ್ನಿಸಿದರೂ ನೆನಪಾಗಲಿಲ್ಲ. ಇದರಿಂದ ನಾನು ವಿಷಣ್ಣನಾದೆನೆಂದೇ ಹೇಳಬೇಕು. ಆ ದಿನ ಎಲ್ಲಿ ಹೋದರೂ ನನಗೀ ನೆನಪಿಗೆ ಬರದ ಪದದದ್ದೇ ಚಿಂತೆ. ನಂತರ ರಾತ್ರಿ ನಿದ್ರಿಸುತ್ತಿರಬೇಕಾದರೆ ಥಟ್ಟನೆ ನೆನಪಾಯಿತು: ಪಾರ್‍ವೆನೂ (parvenu)! ಕೂಡಲೇ ಎದ್ದು ಒಂದೆಡೆ ಬರೆದಿಟ್ಟೆ. ಹೀಗೆ ಬರೆದಿಟ್ಪುದರಿಂದ ಹೆಚ್ಚೇನೂ ಪಯೋಜನವಿಲ್ಲ ಎನ್ನುವುದು ನನಗೆ ಗೊತ್ತು; ಪದಗಳು ನಮ್ಮ ಮನಸ್ಸಿನಲ್ಲಿದ್ದು ಬೇಕೆಂದಾಗ ಉಪಯೋಗಕ್ಕೆ ಬರಬೇಕು. ಇದೇ ತರ ನೆನಪಿಗೆ ಬರದೆ ನನ್ನನ್ನು ಕಾಡಿದ ಅನೇಕ ಪದಗಳಿವೆ. ಇಂಗ್ಲಿಷ್‌ನ ಉದಾಹರಣೆಯನ್ನೇ ಕೊಡುವುದಾದರೆ, imbricate ಎನ್ನುವ ಪದ. ಒಂದರ ಮೇಲೊಂದನ್ನು (ಹಕ್ಕಿಗಳ ರೆಕ್ಕೆಗಳಂತೆ) ಮಡಿಕೆ ಮಡಿಕೆಯಾಗಿ ಇರಿಸುತ್ತ ಹೋಗುವ ರಚನೆಗೆ ಇಂಗ್ಲಿಷ್ನಲ್ಲಿ ಈ ಪದವನ್ನು ಬಳಸುತ್ತಾರೆ. ಮನೆಛಾವಣಿಗಳಿಗೆ ಹುಲ್ಲಾಗಲಿ, ಹೆಂಚಾಗಲಿ ಹೊದೆಸುವುದು ಈ ರೀತಿ ಇರುತ್ತದೆ.

ಭಾಷಾಂತರದಲ್ಲಿ ಆಸಕ್ತಿಯಿರುವವರಿಗೆ ತಮಗೆ ಬೇಕಾದ ಪದಗಳು ಸಿಗದಿರುವಾಗ ಅವರು ಹತಾಶರಾಗುತ್ತಾರೆ, ತಲ್ಲಣಗೊಳ್ಳುತ್ತಾರೆ. ಉದಾಹರಣೆಗೆ, ಈparvenu ಹಾಗೂ imbricate ಎ೦ಬ ಪದಗಳನ್ನು ಸುಲಭವಾಗಿ ಕನ್ನಡಕ್ಕೆ ಭಾಷಾಂತರಿಸುವ ಹಾಗಿಲ್ಲ. ಕನ್ನಡ ಭಾಷಾಸಂಪದದ ಬಗ್ಗೆಯೇ ಕೆಲವೊಮ್ಮೆ ಅನುಮಾನ ಉಂಟಾಗಲೂಬಹುದು. ಆದರೆ ನಿಖರ ಅನುವಾದದ ಸಾಧ್ಯತೆ ಭಾಷಾಸಂಪದದ ಅಂಕಸೂಚಿಯೇನೂ ಅಲ್ಲ. ಹಾಗಿದ್ದರೂ ನಮ್ಮ ಭಾಷೆಯ ಪದ ಸಂಪತ್ತನ್ನು ನಾವು ಅಭಿವೃದ್ಧಿಪಡಿಸಿಕೊಳ್ಳುವ ಅಗತ್ಯವಿದೆ. ಯಾವುದೇ ಒಂದು ಭಾಷೆ ಪ್ರಮಾಣೀಕೃತ (standardized) ಆಗಬೇಕಿದ್ದರೆ ಅದು ವಿದ್ಯಾಭ್ಯಾಸ, ಮಾಧ್ಯಮ, ರಾಜ್ಯಾಂಗ, ಕಾರ್‍ಯಾಂಗ, ನ್ಯಾಯಾಂಗ, ಮನೋರಂಜನೆ ಮುಂತಾದವುಗಳಲ್ಲಿ ಪ್ರಮುಖ ಪಾತ್ರವಹಿಸಬೇಕು ಮಾತ್ರವೇ ಅಲ್ಲ; ಅದರಲ್ಲಿ ಸಾಹಿತ್ಯ ಕೃತಿಗಳ ಜೊತೆ ಜೊತೆಗೇ ವಿಮರ್ಶೆ, ವಿಜ್ಞಾನ, ಸಮಾಜ ವಿಜ್ಞಾನ, ಇತಿಹಾಸ, ಗಣಿತ ಮುಂತಾದ ಶಿಸ್ತುಗಳ ಕುರಿತಾದ ಕೃತಿಗಳೂ ಬರಬೇಕು. ಅದೇ ರೀತಿ, ವ್ಯಾಕರಣ ಗ್ರಂಥಗಳೂ, ನಿಘ೦ಟುಗಳೂ, ಭಾಷಾ ವಿಶ್ಲೇಷಣೆಯೂ, ಪ್ರಮಾಣಗ್ರಂಥಗಳೂ ನಮ್ಮ ವಾಙ್ಮಯ ಲೋಕದ ಅ೦ಗಗಳಾಗಬೇಕು.

ಇಂದು ಜಗತ್ತಿನಲ್ಲಿ ಅತಿ ಹೆಚ್ಚು ಪ್ರಮಾಣೀಕೃತವಾದ ಭಾಷೆ ಇಂಗ್ಲಿಷ್. ಈ ಭಾಷೆಯಲ್ಲಿ ಬರುತ್ತಿರುವಷ್ಟು ವ್ಯಾಕರಣ ಪುಸ್ತಕಗಳಾಗಲಿ, ನಿಘ೦ಟುಗಳಾಗಲಿ ಬಹುಶಃ ಇತರ ಯಾವುದೇ ಭಾಷೆಯಲ್ಲೂ ಬರುತ್ತಿಲ್ಲವೆಂದು ತೋರುತ್ತದೆ. ಆದರೆ ಇದೆಲ್ಲ ಮೂರು ನಾಲ್ಕು ಶತಮಾನಗಳಲ್ಲಿ ನಡೆದ ಬೆಳವಣಿಗೆ. ಶೇಕ್ಸ್‌ಪಿಯರನ ಕಾಲದಲ್ಲಿ ಇಂಗ್ಲಿಷ್‌ನ ಅಕ್ಷರಸೂತ್ರ (spelling) ಇನ್ನೂ ಪ್ರಮಾಣಬದ್ಧವಾಗಿರಲಿಲ್ಲ. ಆಗ ಇಂಗ್ಲಿಷ್ ಇನ್ನೂ ವಿದ್ಯಾಭ್ಯಾಸದ ಸ್ವೀಕೃತ ಭಾಷೆಯಾಗಿರಲಿಲ್ಲ. ಆದ್ದರಿಂದ ಇಂಗ್ಲಿಷ್‌ನಲ್ಲಿ ಅದೆಷ್ಟು ವ್ಯಾಕರಣ ಪುಸ್ತಕಗಳಿದ್ದುವೋ ತಿಳಿಯದು. ಆದರೆ ಶೇಕ್ಸ್‌ಪಿಯರನ ಕಿರಿಯ ಸಮಕಾಲೀನನೂ ಕವಿಯೂ ನಾಟಕಕಾರನೂ ಆಗಿದ್ದ ಬೆನ್ ಜಾನ್ಸನ್ ಇಂಗ್ಲಿಷ್‌ನಲ್ಲಿ ಬರೆದ ವ್ಯಾಕರಣ ಪುಸ್ತಕವೊಂದು ಲಭ್ಯವಿದೆ. ಸಾಹಿತಿಗಳಿಗೆ ಭಾಷಾಸಕ್ತಿಯೂ ಇತ್ತು ಎಂಬುದಕ್ಕೆ ಇದೊಂದು ದೊಡ್ಡ ಸಾಕ್ಷಿ. ಮುಂದೆ ಹದಿನೆಂಟನೆಯ ಶತಮಾನದಲ್ಲಿ ಇನ್ನೊಬ್ಬ ಜಾನ್ಸನ್ (ಡಾಕ್ಟರ್ ಜಾನ್ಸನ್) ತಯಾರುಪಡಿಸಿದ ನಿಘಂಟೇ ಇಂಗ್ಲಿಷ್ ಭಾಷೆಯ ಮೊದಲ ಇಂಥ ಪ್ರಯತ್ನ. ಆದರೆ ಎರಡೇ ಎರಡು ಶತಮಾನಗಳಲ್ಲಿ ಇಂಗ್ಲಿಷ್ ಸಕಲ ಕ್ಷೇತ್ರಗಳಲ್ಲಿಯೂ ಎಷ್ಟೊಂದು ಬೆಳೆದುಬಿಟ್ಟದೆಯೆಂದರೆ, ನಿಘಂಟು ಒಂದನ್ನೇ ತೆಗೆದುಕೊಂಡರೆ ಸಾಕು: ಆಕ್ಸ್ಫರ್ಡ್, ಕೇಂಬ್ರಿಜ್, ಲಾಂಗ್‌ಮನ್, ವೆಬ್‌ಸ್ಟರ್, ಚೇಂಬರ್ಸ್, ಪೆಂಗ್ವಿನ್ ಮುಂತಾಗಿ ಹತ್ತು ಹಲವು ಪ್ರಕಾಶನ ಸಂಸ್ಥೆಯವರು ದೊಡ್ಡ, ಸಣ್ಣ, ಪಂಡಿತ, ಸಾಮಾನ್ಯ, ಸಮಕಾಲೀನ, ಮೂಲಸಹಿತ ಎಂಬ ವಿವಿಧ ರೀತಿಯ ನಿಘಂಟುಗಳನ್ನು ಪ್ರತಿ ವರ್ಷವೆ೦ಬಂತೆ ತರುತ್ತಲೇ ಇದ್ದಾರೆ.

ಕನ್ನಡದ ಮೊದಲ ನಿಘಂಟು ರೆವರೆಂಡ್ ಕಿಟ್ಟೆಲರು ಸಂಗ್ರಹಿಸಿ ಬಾಸೆಲ್ ಮಿಶನ್ನವರು ಪ್ರಕಟಿಸಿದ ಕೃತಿ. ದೂರದ ಜರ್ಮನಿಯ ಈ ಧರ್ಮಪ್ರಚಾರಕ ಕರ್ನಾಟಕಕ್ಕೆ ಬ೦ದು ಕನ್ನಡ ಕಲಿತು, ಒಂದೊಂದೇ ಪದಗಳನ್ನು ಕನ್ನಡ ಕಾವ್ಯಗಳಿಂದಲೂ ಜನರಿಂದಲೂ ಸಂಗ್ರಹಿಸಿ ಅತ್ಯಂತ ಪ್ರೀತಿಯಿಂದ ಹೊರತಂದ ಈ ನಿಘಂಟು ಕನ್ನಡಿಗರಿಗೊಂದು ಅಮೂಲ್ಯ ನಿಧಿಯೇ ಸರಿ. ಮದರಾಸ್ ಯುನಿವರ್ಸಿಟಿಯಲ್ಲಿ ಕನ್ನಡ ಪ್ರೊಫೆಸರರಾಗಿದ್ದ ಎಂ. ಮರಿಯಪ್ಪ ಭಟ್ಟರು ಅಷ್ಪೇ ಆಸಕ್ತಿಯಿಂದ ಅದನ್ನು ಪರಿಷ್ಕರಿಸಿದರು. ನಂತರದ ಕನ್ನಡ ನಿಘಂಟುಕಾರರಿಗೆ ಕಿಟ್ಟೆಲ್ ಕೋಶ ಒಂದು ಮಾದರಿಯಾಯಿತು. ಆದರೂ ನಾವು ಇವರ ಕೊಡುಗೆಯನ್ನು ನೆನೆದುಕೊಳ್ಳುವುದರಲ್ಲಿ ಹಿಂದೆ ಬಿದ್ದಿದ್ದೇವೆಯೇ? ಯಾವುದೇ ಸಾಹಿತ್ಯ ಸಭೆಗಳಲ್ಲಾಗಲಿ, ಚರ್ಚೆಗಳಲ್ಲಾಗಲಿ ರಾಜಕೀಯ ಕೇಳುತ್ತೇವಲ್ಲದೆ ಕನ್ನಡ ಪದಕೋಶಗಳ ಕುರಿತಾಗಿ ಯಾರೂ ಮಾತೆತ್ತುವುದು ಕೇಳಿಸುತ್ತಿಲ್ಲ. ಇಂಥ ಕೆಲಸಗಳನ್ನೆಲ್ಲ ನಾವು ಒಣ ಪಂಡಿತರಾದ ವೆಂಕಟಸುಬ್ಬಯ್ಯ, ಎಲ್. ಎಸ್. ಶೇಷಗಿರಿರಾವ್ ಮುಂತಾದವರಿಗೆ ಬಿಟ್ಪುಬಿಟ್ಟಿದ್ದೇವೆ. ನಿಘಂಟು ಕಾರ್ಯ ಬಹುತಃ ಜಾಡಮಾಲಿಗಳ ಕೆಲಸ, ನಮ್ಮದೇನಿದ್ದರೂ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವಂಥ ಉನ್ನತವೂ ವೈಚಾರಿಕವೂ ಆದ ಕ್ರಿಯೆ ಎ೦ಬ ಭಾವನೆ ಕೆಲವು ಆಧುನಿಕರಿಗೆ ಇದ್ದರೂ ಇರಬಹುದು. ಆದರೆ ಶಿವರಾಮ ಕಾರಂತರಂಥವರು ಕೂಡಾ ಕಸ್ತೂರಿ ಕೋಶ ಎಂಬ ಚಿಕ್ಕದೊಂದು ನಿಘಂಟನ್ನು ಒಬ್ಬಂಟಿಯಾಗಿ ಹೊರತಂದರು ಎನ್ನುವುದನ್ನು ನೆನೆದುಕೊಳ್ಳಬೇಕು. ಅವರಿಗೆ ಅದೊಂದು ಅಮುಖ್ಯ ಕಾರ್ಯವೆಂದು ಅನಿಸಲೇ ಇಲ್ಲ. ತಮ್ಮ ಸಾಹಿತ್ಯದ ನಡುವೆ ಅವರು ಅದಕ್ಕೂ ಸಮಯ ಮೀಸಲು ಮಾಡಿಕೊಂಡರು. ಪದಕೋಶಗಳನ್ನು ಪ್ರಕಟಿಸುವುದು ಒಂದಾದರೆ ಅವನ್ನು ಕೊಂಡು ಉಪಯೋಗಿಸುವುದು ಇನ್ನೊಂದು. ಕನ್ನಡಿಗರಲ್ಲಿ ಪುಸ್ತಕ ಓದುವ ಹವ್ಯಾಸವೇ ಕಡಿಮೆ; ಇನ್ನು ಪದಗಳಿಗಾಗಿ ಪದಕೋಶಗಳನ್ನು ಹುಡುಕುವ ಕೆಲಸ ಯಾರು ಮಾಡುತ್ತಾರೆ? ಕವಿಗಳಲ್ಲಿ ಗೋಪಾಲಕೃಷ್ಣ ಅಡಿಗರು ಈ ಕೆಲಸ ಮಾಡುತ್ತಿದ್ದರು; ಕಿಟ್ಟೆಲ್ ನಿಘಂಟು ಅವರ ಪ್ರೀತಿಯ ಪುಸ್ತಕಗಳಲ್ಲಿ ಒಂದಾಗಿತ್ತು. ಕುವೆಂಪುವಾಗಲಿ, ಗೋಕಾಕರಾಗಲಿ ಪದಕೋಶಗಳ ಸಹಾಯವಿಲ್ಲದೆ ತಮ್ಮ ಮಹಾಕಾವ್ಯಗಳನ್ನು ರಚಿಸುವುದು ಸಾಧ್ಯವಿರಲಿಲ್ಲ. ಅವರ ಕೃತಿಗಳನ್ನು ಓದಿ ಗಹಿಸಿಕೊಳ್ಳಬೇಕಾದರೆ ಓದುಗರಿಗೂ ಈ ಪದಕೋಶಗಳ ಸಹಾಯ ಬೇಕಾಗುತ್ತದೆ. ಆದರೆ ಕವಿತೆಯೊಂದರಲ್ಲಿ ಕಠಿಣ ಪದವೊಂದು ಬಂದರೇ ಗೊಣಗುವವರು ನಾವು; ಎಲ್ಲವೂ ನಮಗೆ ಸುಲಭವಾಗಿ ‘ಅರ್ಥ’ವಾಗಬೇಕು. ಇನ್ನು ಹಳೆಗನ್ನಡ, ನಡುಗನ್ನಡ ಕಾವ್ಯಗಳನ್ನು ಓದುವುದಾದರೂ ಹೇಗೆ? ಓದುವುದು ಕಷ್ಟವಾದಾಗ, ಯಾಕಾದರೂ ಓದಬೇಕು ಎಂಬ ಉಡಾಫೆಯ ಪ್ರಶ್ನೆಯೂ ಬರುತ್ತದೆ. ಕನಿಷ್ಠ ನಿಘಂಟೊಂದನ್ನು ತೆರೆದು ಕಠಿಣ ಪದಾರ್ಥ ಹುಡುಕಲಾರದ ‘ವಿದ್ಯಾವ೦ತ’ ವ್ಯಕ್ತಿಗೆ ಜ್ಞಾನಾರ್‍ಜನೆಯ ದಾಹವಿಲ್ಲ. ನಮ್ಮ ಪದಸಂಪತ್ತು ಹೆಚ್ಚಾಗಬೇಕಾದರೆ, ನಾವು ಸಮಕಾಲೀನತೆಯ ಜತೆಗೇ ಸಾರ್ವಕಾಲೀನತೆಯನ್ನೂ ಮೈಗೂಡಿಸಿಕೊಳ್ಳಬೇಕಾಗುತ್ತದೆ. ಸಮಕಾಲೀನತೆಯೆ೦ದರೆ ಜನಸಂಪರ್ಕ ಎಂದು ಅರ್ಥ. ಯಾಕೆಂದರೆ ನಿಜಕ್ಕೂ ಪದಸಂಪದ ಇರುವುದು ಜನಪದದಲ್ಲೇ – ಜನರ ಸಾಮಾನ್ಯ ಹಾಗೂ ಸರ್ವಾಂಗೀಣ ಬದುಕಿನಲ್ಲಿ. ಅದೇ ರೀತಿ ನಮ್ಮ ಸಾಹಿತ್ಯಸಂಪದದಲ್ಲಿ. ನಮ್ಮ ಓದು ಹೆಚ್ಚಾದಂತೆ ಪದಸಂಪತ್ತು ಕೂಡಾ ಹೆಚ್ಚಾಗುತ್ತದೆ. ಮಾತ್ರವಲ್ಲ; ನಮಗೆ ಹೆಚ್ಚೆಚ್ಚು ಭಾಷೆ ಗೊತ್ತಿದ್ದಷ್ಟೂ ಕನಿಷ್ಠ ಈ ಕುರಿತಾದ ಅರಿವಾದರೂ ಹರಿತವಾಗುತ್ತ ಹೋಗುತ್ತದೆ. ಉದಾಹರಣೆಗೆ, ಅರಬಿ ಮತ್ತು ಪರ್ಶಿಯನ್ ಭಾಷೆಗಳು ಗೊತ್ತಿದ್ದರೆ ನಮ್ಮ ದೈನಂದಿನ ಮಾತಿನಲ್ಲಿ ಈ ಮೂಲದ ಅದೆಷ್ಟು ಪದಗಳು ಸೇರಿಕೊಂಡಿವೆ ಎನ್ನುವುದು ಗೊತ್ತಾಗುತ್ತದೆ. ಕಾಯಿದೆ, ವಕೀಲ, ಫಾಯ್ದೆ, ಮುನಾಫೆ ಎಲ್ಲವೂ ಅರಬಿ. ನಾವೆಲ್ಲರೂ ಪ್ರೀತಿಸುವ ಗುಲಾಬಿ ಪರ್ಶಿಯನ್! ಅದರ ಅತ್ತರು ಅರಬಿ! ಆದರೆ ಈ ಪದಗಳೆಲ್ಲ ಹಲವಾರು ವರ್ಷಗಳಿಂದ ನಮ್ಮ ಜನಪದದಲ್ಲಿ ಸೇರಿರುವ ಕಾರಣ ಅವೀಗ ನಮ್ಮವೇ ಆಗಿವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂಜೆಯ ಹಾಡು
Next post ಒರೆಸಿಹೋಗುತ್ತವೆ

ಸಣ್ಣ ಕತೆ

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಮೌನರಾಗ

  ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ಆವಲಹಳ್ಳಿಯಲ್ಲಿ ಸಭೆ

  ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…