ಗ್ರಂಥಾಲಯಗಳೂ ಓದುಗವಿರೋಧಿ ಗ್ರಂಥಪಾಲಕರೂ

ಗ್ರಂಥಾಲಯಗಳೂ ಓದುಗವಿರೋಧಿ ಗ್ರಂಥಪಾಲಕರೂ

ಹೆಚ್ಚಿನ ಶಾಲೆಗಳಲ್ಲಿಯೂ ಒಂದು ಗ್ರಂಥಾಲಯವಿರುತ್ತದೆ. ಆದರೆ ಅದು ಹೇಗಿರುತ್ತದೆ, ಅದರ ಉಪಯೋಗ ಹೇಗೆ ಆಗುತ್ತದೆ ಎಂಬ ಬಗ್ಗೆ ಯಾರಾದರೂ ಯೋಚಿಸಿದ್ದಾರೆಯೇ? ಕಳೆದ ಶತಮಾನದ ನನ್ನದೇ ಕೆಲವು ಅನುಭವಗಳನ್ನು ಓದುಗರ ಜತೆ ಹಂಚಿಕೊಳ್ಳುವುದಾದರೆ, ನಾನು ಓದುತ್ತಿದ್ದ ಹೈಸ್ಕೂಲಿನಲ್ಲಿ ಒಳ್ಳೆಯದೊಂದು ಗ್ರಂಥಾಲಯವಿತ್ತೆಂದೇ ಹೇಳಬಹುದು. ಹಾಗೂ ವಿದ್ಯಾರ್ಥಿಗಳು ಸಾಕಷ್ಟು ಪಠ್ಯೇತರ ಪುಸ್ತಕಗಳನ್ನು ಓದಬೇಕೆನ್ನುವುದು ಶಾಲಾಡಳಿತದ ಆಶಯವೂ ಆಗಿದ್ದಿತು. ಆಗಿನ ಕಾಲದಲ್ಲಿ ಪ್ರಕಟವಾಗುತ್ತಿದ್ದ ಅ.ನ.ಕೃ.. ತ.ರಾಸು.. ಶಿವರಾಮ ಕಾರಂತ ಮುಂತಾದವರ ಕೃತಿಗಳು ಹೊಸದರಲ್ಲೇ ಅಲ್ಲಿಗೆ ಬರುತ್ತಲೂ ಇದ್ದುವು ಆದರೆ…. ಆಹಾ! ಈ ಆದರೆ ಎನ್ನುವುದೊಂದು ಕಂಟಕವಾಗಿತ್ತು. ಅದು ಇನ್ನೇನೂ ಅಲ್ಲ, ಅಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸುವ ವ್ಯಕ್ತಿಯೇ ಈ ಕಂಟಕ. ಈತ ಶಾಲೆಯಲ್ಲಿ ಫೀ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದ. ನಾವೆಲ್ಲ ತಿಂಗಳಿನಲ್ಲಿ ನಿಗದಿತವಾದ ವಾರ ಈತನ ಆಫೀಸಿನ ಹೊರಗೆ ಕಿಟಿಕಿಯ ಬಳಿ ನಿಂತು ಫೀ ಪಾವತಿ ಮಾಡಿ ರಸೀತಿ ಪಡೆದುಕೊಳ್ಳುತ್ತಿದ್ದೆವು. ಆಗಲೇ ನಮಗೆ ಈ ಮನುಷ್ಯನ ಹಣೇಬರಹದ ಪರಿಚಯವಾಗಿತ್ತು, ಸಿಡುಕು ಮೋರೆಯ ಈತ ಯಾರನ್ನೂ ಸ್ನೇಹದಿಂದ ಮಾತಾಡಿಸಿದ್ದೇ ಇಲ್ಲ. ಆದರೂ ಸಮಾಜದ ಶ್ರೀಮಂತವರ್‍ಗದಿಂದ ಬಂದ ವಿದ್ಯಾರ್ಥಿಗಳನ್ನು ಮಾತ್ರ ಓಲೈಸಿಕೊಂಡಿದ್ದ. ವಾರದಲ್ಲಿ ಒಂದು ಸಾಯಂಕಾಲ ನಮಗೆ ಗ್ರಂಥಾಲಯದಿಂದ ಪುಸ್ತಕಗಳನ್ನು ವಿತರಿಸುವುದು, ನಾವು ಮರಳಿಸುವ ಪುಸ್ತಕಗಳನ್ನು ಸ್ವೀಕರಿಸುವುದು ಈತನೇ ಆಗಿದ್ದ. ಪುಸ್ತಕಗಳೆಲ್ಲ ಗಾಜಿನ ಕಪಾಟಿನೊಳಗಿರುತ್ತಿದ್ದುವು. ಹೆಸರಿಗೆ ಒಂದು ಕ್ಯಾಟಲಾಗೂ ಇದ್ದಿತು. ಆದರೆ ಈ ಕ್ಯಾಟಲಾಗು ಸುಲಭದಲ್ಲಿ ಲಭ್ಯವಾಗುತ್ತಿರಲಿಲ್ಲ. ಆಯಾ ಸಾಯಂಕಾಲ ಪುಸ್ತಕ ಬೇಕಾದವರು ಮಾತ್ರ ಪುಸ್ತಕದ ಹೆಸರು, ಲೇಖಕನ ಹೆಸರು, ಪುಸ್ತಕದ ನಂಬರು ಇತ್ಯಾದಿಗಳನ್ನು ಒಂದು ಜೇಟಿಯಲ್ಲಿ ಬರೆದು ಮುಂಜಾನೆಯೇ ಒಂದೆಡೆ ನೀಡಬೇಕಾಗಿದ್ದಿತು. ನಮಗೆ ಬೇಕಾದ ಪುಸ್ತಕಗಳನ್ನು ಆರಿಸಿಕೊಳ್ಳುವುದರಲ್ಲಿ ಬರುವ ಸಮಸ್ಯೆ ಇದೇ ಆಗಿದ್ದಿತು. ಸಾಧಾರಣವಾಗಿ ಈ ‘ಅರೆಕಾಲಿಕ’ ಗ್ರಂಥವಿತರಕ ತನ್ನ ಮೇಜಿನ ಮೇಲೆ ಹತ್ತಾರು ಪುಸ್ತಕಗಳನ್ನು ಇರಿಸಿಕೊಂಡು ವಿದ್ಯಾರ್ಥಿಗಳು ಅವುಗಳಿಂದಲೇ ತಮಗೆ ಬೇಕಾದ್ದನ್ನು ಆರಿಸಲು ಇಷ್ಪಪಡುತ್ತಿದ್ದ. ಆದ್ದರಿಂದ ಗ್ರಲಥಾಲಯಕ್ಕೆ ಹೊಸಪುಸ್ತಕಗಳು ಬಂದರೂ ಅವು ನಮಗೆ ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಈ ಹೊಸ ಪುಸ್ತಕಗಳು ಮೊದಲು ಅಧ್ಯಾಪಕರಿಗೆ, ನಂತರ ಈ ಗಂಥಪಾಲಕನ ‘ಆತ್ಮೀಯ’ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದುವು. ಹಾಗೂ ಕಪಾಟುಗಳಲ್ಲಿದ್ದ ಪುಸ್ತಕಗಳು ಹಾಗೇ ಇರುತ್ತಿದ್ದುವು. ಹೀಗೆ ಗ್ರಂಥಾಲಯದಲ್ಲಿ ನೆಲೆಯೂರಿದ್ದ ನಿಜಸ್ಥಿತಿಯ ಅರಿವು ಆಡಳಿತದವರಿಗೆ ಇದ್ದಿತೋ ಇಲ್ಲವೋ.

ಒಮ್ಮೆ ‘ದೌಲತ್’ ಎಂಬ ಹೊಚ್ಚ ಹೊಸ ಪುಸ್ತಕವೊಂದು ಅಧ್ಯಾಪಕರ ಕೈಯಲ್ಲಿ ನನಗೆ ಕಾಣಿಸಿತು. ವೀರಕೇಸರಿ ಸೀತಾರಾಮ ಶಾಸ್ತ್ರಿಯವರು ಟಿಪ್ಪುಸುಲ್ತಾನನ ಬಗ್ಗೆ ಬರೆದ ಐತಿಹಾಸಿಕ ಕಾದಂಬರಿ ಅದು ಎಂದು ನನ್ನ ನೆನಪು. ಆ ಕಾಲದಲ್ಲಿ ಕಾದಂಬರಿಗಳು ವರ್ಣರಂಜಿತವಾಗಿ ಮುದ್ರಣಗೊಳ್ಳಲು ಆರಂಭವಾಗಿದ್ದುವು. ಕೈಹೊತ್ತಗೆಗಳ ಕ್ರಾಂತಿಕಾರೀ ಕಾಲ ಅದು. ಅದು ಗ್ರಂಥಾಲಯಕ್ಕೆ ಮರಳಿದ್ದನ್ನು ಪತ್ತೆ ಹಚ್ಚಿ ನಾನು ಈ ಕಾದಂಬರಿ ನನಗೆ ಬೇಕೆಂದು ಚೀಟಿ ನೀಡಿದೆ. ಪುಸ್ತಕವನ್ನು ನನಗೆ ಕೊಡಲು ಯಾವ ಕಾರಣವನ್ನೂ ನೀಡದೆ ಗಂಥಪಾಲಕ ನಿರಾಕರಿಸಿದ. ಒತ್ತಾಯಿಸಿದಾಗ, ಅದೆಲ್ಲ ನಿನಗೆ ಅರ್ಥವಾಗುವುದಿಲ್ಲ, ಇತರರು ಓದಬೇಕು ಎಂದೆಲ್ಲ ಹಾರಿಕೆಯ ಕಾರಣ ಹೇಳಿ ನನ್ನನ್ನು ದಬಾಯಿಸಿದ. ಕೆಲವು ಸಲ ಮಕ್ಕಳಲ್ಲಿ ಹಠ ಸುರುವಾಗುವುದು ಹೀಗೇ-ದೊಡ್ಡವರು ವಿಚಾರಶೀಲರಾಗಿ ವರ್ತಿಸಿದರೆ ಸಣ್ಣವರು ಒಪ್ಪಿಕೊಳ್ಳುತ್ತಾರೆ; ಆದರೆ ಅವೈಚಾರಿಕವಾಗಿಯೋ, ತಿರಸ್ಕಾರದಿಂದಲೋ ವರ್ತಿಸಿದರೆ ಹಠ ಬೆಳೆಯುತ್ತದೆ. ಈ ಹಿಂದೆ ಎಂದೂ ಆಡಳಿತದವರನ್ನು ಹೋಗಿ ಕಂಡಿರದ ನಾನು ನನ್ನ ಕೇಸನ್ನು ಅಲ್ಲಿತನಕ ಕೊಂಡೊಯ್ದು ಪುಸ್ತಕ ಗಿಟ್ಟಿಸಿಕೊಳ್ಳಬೇಕಾಯಿತು. ಇಲ್ಲಿ ಈ ಆಡಳಿತದವರು ನನ್ನ ಪರವಾಗಿ ನಿಂತು ಪುಸ್ತಕ ಕೊಡಿಸಿದ್ದು ನನಗೆ ನಿಜಕ್ಕೂ ಅಚ್ಚರಿ ಹುಟ್ಟಿಸುವ ವಿಷಯ. ಯಾಕೆಂದರೆ ಹೆಚ್ಚಾಗಿ ಹೀಗಾಗುವುದಿಲ್ಲ-ಅವರು ವಿದ್ಯಾರ್ಥಿಗಳ ವಿರುದ್ಧ ತಮ್ಮ ಉದ್ಯೋಗಿಗಳನ್ನು ಸಮರ್ಥಿಸುವುದೇ ಜಾಸ್ತಿ. ಆದರೂ ಮುಂದೆ ನಾನು ಆ ಶಾಲೆಯಲ್ಲಿ ಇರುವಷ್ಟು ಕಾಲವೂ ಈ ಗ್ರಂಥವಿಧ್ವಂಸಕನ ಕೆಂಗಣ್ಣಿಗೆ ಗುರಿಯಾಗಬೇಕಾಯಿತೆನ್ನುವುದು ಸತ್ಯ. ನನಗೆ ಅಗತ್ಯವಾಗಿದ್ದುದು ಪುಸ್ತಕಗಳೇ ಹೊರತು ಇಂಥ ವೈಯಕ್ತಿಕ ದ್ವೇಷಗಳಾಗಿರಲಿಲ್ಲ. ಈ ಘಟನೆ ಚಿಕ್ಕ ವಯಸಿನಲ್ಲೇ ನನ್ನ ಮನಸ್ಸನ್ನು ವ್ಯಗ್ರಗೊಳಿಸಿತು ಎಂದು ಬೇರೆ ಹೇಳಬೇಕಾಗಿಲ್ಲ.

ಮುಂದೆ ನಾನು ಓದಿ ಅಧ್ಯಾಪಕನೂ ಆದ ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಇಂಥದೇ ವಿದ್ಯಮಾನವೊಂದನ್ನು ಕಂಡೆ. ಇಲ್ಲಿಯೂ ಸಾಕಷ್ಟು ಪುಸ್ತಕಗಳಿದ್ದ ಗ್ರಂಥಾಲಯವೊಂದಿತ್ತು. ಆದರೆ ಅಲ್ಲಿ ನಿಯುಕ್ತನಾದ ಮಾಣಿಕ್ಯಂ ಎಂಬ ವ್ಯಕ್ತಿಯೊಬ್ಬ ಆರಂಭದಲ್ಲಿ ಅಟೆಂಡರನಾಗಿ ನೌಕರಿ ಸೇರಿದವನು. ನಂತರ ಭಡ್ತಿ ಪಡೆದು ಲ್ಯಾಬ್ ಸಹಾಯಕನಾಗಿದ್ದ. ಆಮೇಲೆ ಇನ್ನೊಂದು ಭಡ್ತಿ ಪಡೆದು ಗ್ರಂಥಪಾಲಕ ಸ್ಥಿತಿಗೆ ಬಂದಿದ್ದ. ಆತನದು ಸದಾ ಸಿಡುಕು ಮೋರೆ. ವಿದ್ಯಾರ್ಥಿಗಳೇನಾದರೂ ಹೆಚ್ಚು ಮಾತಾಡಿದರೆ, ಹುಚ್ಚನಂತೆ ಬಯ್ಯುತ್ತಿದ್ದ, ಬೆದರಿಸಿ ಓಡಿಸುತ್ತಿದ್ದ. ಅವನೂ ತನ್ನ ಮೇಜಿನ ಮೇಲೆ ಕೆಲವು ಪುಸ್ತಕಗಳನ್ನು ಇಟ್ಟುಕೊಂಡು ಅವನ್ನೇ ವಿದ್ಯಾರ್ಥಿಗಳಿಗೆ ಕೊಡುತ್ತಿದ್ದುದು. ವಿದ್ಯಾರ್ಥಿಗಳಾದರೂ ಇಂಥ ಹುಚ್ಚನ ಹತ್ತಿರ ಬಂದು ಪುಸ್ತಕ ಕೇಳುವುದಕ್ಕೇ ಹೆದರುತ್ತಿದ್ದರು. ನಾನಾಗ ಅಧ್ಯಾಪಕನಾಗಿದ್ದುದರಿಂದ ನನ್ನ ಬಗ್ಗೆ ಆತ ಹೀಗೆ ವರ್ತಿಸುತ್ತಿರಲಿಲ್ಲವಾದರೂ ವಿದ್ಯಾರ್ಥಿಗಳ ಬಗ್ಗೆ ವಿನಾ ದೂರುತ್ತಿದ್ದ. ಕಪಾಟಿನ ಬೀಗ ತೆರೆದು ಪುಸ್ತಕಗಳನ್ನು ನೋಡಬಿಡುವುದಕ್ಕೆ ಯಾವ ಉತ್ಸಾಹವನ್ನೂ ತೋರಿಸುತ್ತಿರಲಿಲ್ಲ. ಕೇರಳದ ಎಲ್ಲಿಂದಲೋ ವರ್ಗವಾಗಿ ಉತ್ತರದ ಕೊನೆಗೆ ಬಂದಿದ್ದ ಇವನಿಗೆ ವಗಾವಣೆಯ ಭಯ ಕೂಡಾ ಇದ್ದಿರಲಿಲ್ಲ. ಕೇವಲ ಅಧ್ಯಾಪಕನಾಗಿದ್ದ ನನಗೆ ಅಥವಾ ನನ್ನಂಥವರಿಗೆ ಈತನ ಮೇಲೆ ಯಾವ ಅಧಿಕಾರವೂ ಇರಲಿಲ್ಲ; ಇವನನ್ನು ಸುಧಾರಿಸುವ ಉಪಾಯವೂ ನಮಗೆ ಗೊತ್ತಿರಲಿಲ್ಲ. ಆದ್ದರಿಂದ ಇಡಿಯ ಕಾಲೇಜು ಇವನನ್ನು ಸಹಿಸಿಕೊಂಡೇ ಇರಬೇಕಾಯಿತು. ಹೀಗೆಂದು ವಿದ್ಯಾರ್ಥಿಗಳಾದರೂ ಪಠ್ಯೇತರ ಪುಸ್ತಕಗಳನ್ನು ಓದುವ ಪರಮೋತ್ಸಾಹದಲ್ಲಿದ್ದರು ಎಂದೇನೂ ನಾನು ಹೇಳುವುದಿಲ್ಲ. ಸಾಮಾನ್ಯವಾಗಿ ವಿದ್ಯಾರ್ಥಿಗಳು ಗ್ರಂಥಾಲಯದತ್ತ ಹೆಜ್ಜೆಹಾಕುವುದೇ ಕಡಿಮೆ. ಅವರನ್ನು ಈ ದಿಕ್ಕಿನಲ್ಲಿ ಪ್ರಚೋದಿಸುವುದು ಅಧ್ಯಾಪಕರ ಮತ್ತು ಗ್ರಂಥಪಾಲಕರ ಕರ್ತವ್ಯ. ಆದರೆ ನಾನು ವಿವರಿಸಿದ ಸ್ಥಿತಿಯಲ್ಲಿ ಇದೆಲ್ಲ ಅಸಾಧ್ಯವೇ ಆಗಿತ್ತು.

ಇದೆಲ್ಲ ಅರ್ಧ ಶತಮಾನದಷ್ಟು ಹಿಂದಿನ ವಿಷಯ. ಆದರೂ ಶಾಲೆ ಕಾಲೇಜುಗಳ ಗ್ರಂಥಾಲಯಗಳ ಸ್ಥಿತಿ ಇದಕ್ಕಿಂತ ಉತ್ತಮಗೊಂಡಿದೆಯೆನಿಸುವುದಿಲ್ಲ. ಗ್ರಂಥಾಲಯ ವಿಭಾಗಗಳಲ್ಲಿ ಪುಸ್ತಕವಿರೋಧಿಗಳೇ ಕೆಲಸದಲ್ಲಿರುವುದು ಹೆಚ್ಚು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಪರಿಸ್ಥಿತಿ ಇದರ ಮುಂದುವರಿಕೆಯೇ ಆಗಿದೆಯೆನ್ನುವುದು ನನ್ನ ಅನುಭವ. ಓದಿನ ಸಂಸ್ಕೃತಿಯೇ ಇಲ್ಲದ ದೇಶಕ್ಕಂತೂ ಇದು ಮಾರಕವೆನ್ನುವುದರಲ್ಲಿ ಸಂದೇಹವಿಲ್ಲ. ದುರದೃಷ್ಟದ ಸಂಗತಿಯೆಂದರೆ, ಗ್ರಂಥಾಲಯಗಳಿಗೆಂದು, ಪುಸ್ತಕಗಳಿಗೆಂದು ಸರಕಾರ ಸಾಕಷ್ಟು ದುಡ್ಡು ಖರ್ಚು ಮಾಡುತ್ತಿದೆ. ಸರಕಾರದ ದುಡ್ಡು ಎಂದರೆ ಸಾರ್ವಜನಿಕರ ದುಡ್ಡು. ಇದರ ಸದುಪಯೋಗವಾಗುತ್ತಿದೆಯೇ ಎಂದು ಪರಿಶೀಲಿಸುವ ಯಾವುದೇ ವ್ಯವಸ್ಥೆ ಇಲ್ಲ.

ನನ್ನ ಶಿಕ್ಷಕ ವೃತ್ತಿಯ ಬಹಳಷ್ಟು ವರ್ಷಗಳನ್ನು ನಮ್ಮ ದೇಶದ ಒಂದು ಅತ್ಯುನ್ನತ ಸಂಸ್ಥೆಯ ಸೇವೆಯಲ್ಲಿ ಕಳೆಯುವ ಸೌಭಾಗ್ಯ ನನ್ನದಾಗಿತ್ತು. ಈ ಸಂಸ್ಥೆಯ ಗ್ರಂಥಾಲಯವೂ ಇತರ ಕಡೆಗಳಿಗೆ ಹೋಲಿಸಿದರೆ ಉತ್ತಮವೆಂದೇ ಹೇಳಬೇಕು. ಆದರೂ ಇಲ್ಲಿನ ಕುಂದುಕೊರತೆಗಳೂ ನನಗೆ ಹಾಗೂ ನನ್ನಂಥ ಪುಸ್ತಕಾಭ್ಯಾಸಿಗಳಿಗೆ ಕಿರಿಕಿರಿಯೊದಗಿಸುವಂಥವು. ಮೊದಲನೆಯದಾಗಿ ಈ ಗ್ರಂಥಾಲಯದ ಕಟ್ಟಡದ ರಚನೆ. ಮೂರು ಹಂತಗಳ ಈ ಕಟ್ಟಡದಲ್ಲಿ ಒಂದೊಂದು ಹಂತದಲ್ಲೂ ಎರಡೆರಡು ಭಾಗಗಳಿದ್ದು ಓಂದು ಭಾಗ ಕೆಳಗೆ ಇನ್ನೊಂದು ಮೇಲೆ ಇವೆ. ಹೀಗೆ ಒಂದರಿಂದ ಇನ್ನೊಂದಕ್ಕೆ ಹೋಗುವುದೆಂದರೆ ಒಂದೋ ಇಳಿಯಬೇಕು, ಇಲ್ಲವೇ ಹತ್ತಬೇಕು. ಮೂರನೆಯ ಅಂತಸ್ತಿಗೆ ಏರುವುದಕ್ಕೆ ಲಿಫ್ಟ್‌ನ ವ್ಯವಸ್ಥೆಯಿಲ್ಲ. ಇಂಥದೊಂದು ಕಟ್ಟಡವನ್ನು ಗ್ರಂಥಾಲಯಕ್ಕಾಗಿ ರೂಪಿಸಿದ ವಾಸ್ತುಶಿಲ್ಪಿ ಸ್ವತಃ ಪುಸ್ತಕದ್ವೇಷಿ ಎಂದೇ ತೋರುತ್ತದೆ. ಅರ್ಥಾತ್ ಪುಸ್ತಕ ಓದುವವನ ಸೌಲಭ್ಯದ ಬಗ್ಗೆ ಆತನಿಗೆ ಎಳ್ಳಷ್ಟೂ ಕಾಳಜಿಯಿಲ್ಲ.

ಇದೊಂದು ಮುಕ್ತಪ್ರವೇಶದ ಗ್ರಂಥಾಲಯ. ಎಂದರೆ ಇಲ್ಲಿ ಅಟ್ಟಳಿಕೆಗಳಲ್ಲಿ (ಕವಾಟುಗಳಲ್ಲಲ್ಲ) ಓರಣವಾಗಿಟ್ಟಿರುವ ಪುಸ್ತಕಗಳನ್ನು ನಾವು ತೆಗೆದು ನೋಡಬಹುದು. ಎತ್ತಿಕೊಂಡು ಹೋಗಿ ಜಾಗವಿರುವಲ್ಲಿ ಕೂತು ಓದಿ ಟಿಪ್ಪಣಿಗಳನ್ನು ಮಾಡಬಹುದು. ಇನ್ನೂ ಬೇರೆ ಬೇಕಿದ್ದರೆ ಬೇಕಾದಷ್ಟು ಸಲ ಹೋಗಿ ಬೇಕಾದಷ್ಟು ಪುಸ್ತಕಗಳನ್ನು ತಂದು ಕೂತು ಓದಬಹುದು. ಸದಸ್ಯತ್ವದ ಚೀಟಿಗಳನ್ನುಪಯೋಗಿಸಿ ಬೇಕಾದ ಪುಸ್ತಕಗಳನ್ನು ನಿಯಮಿತ ಪ್ರಮಾಣದಲ್ಲಿ ಮನೆಗೆ ಕೂಡಾ ಕೊಂಡೊಯ್ಯಬಹುದು. ಇಡೀ ಗ್ರಂಥಾಲಯ ವ್ಯವಸ್ಥೆಗಳಲ್ಲಿ ಈ ಮುಕ್ತಪ್ರವೇಶದ ವ್ಯವಸ್ಥೆಯೇ ಅತ್ಯುತ್ತಮವಾದ್ದು. ಹೆಚ್ಚಾಗಿ ಸಂಶೋಧನೆಗೆ ಮೀಸಲಾಗಿರುವ ಸಂಸ್ಥೆಗಳಲ್ಲಿ ಇಂಥ ಮುಕ್ತತೆಯನ್ನು ಕಾಣುತ್ತೇವೆ. ನಾನು ಆರಂಭದಲ್ಲಿ ಸಂಶೋಧಕನಾಗಿದ್ದು ನಂತರ ಅಧ್ಯಾಪಕನಾಗಿದ್ದ ಈ ಹೇಳುತ್ತಿರುವ ಸಂಸ್ಥೆಯಲ್ಲಿನ ಮುಕ್ತಪ್ರವೇಶ ವ್ಯವಸ್ಥೆ ತುಂಬಾ ಚೆನ್ನಾಗಿದ್ದುದರಲ್ಲಿ ಸಂಶಯವಿಲ್ಲ. ಹಲವು ವರ್ಷಗಳ ಕಾಲ ಇಲ್ಲೊಬ್ಬರು ಆದರ್ಶ ಗ್ರಂಥಪಾಲಕರು ಕೂಡಾ ಇದ್ದರು. ಇವರು ತಮ್ಮ ಕೆಲಸದಲ್ಲಿ ಎಷ್ಟೊಂದು ಆಸಕ್ತರಾಗಿದ್ದರೆಂದರೆ, ಓದಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೂ ಅವರ ಗಮನಕ್ಕೆ ತಂದರೆ ಸಾಕಾಗುತ್ತಿತ್ತು. ಬೇರೇನು ಕೆಲಸವಿದ್ದರೂ ಅದನ್ನು ಬದಿಗೊತ್ತಿ ಅವರು ನಮ್ಮ ಸಮಸ್ಯೆಯ ಪರಿಹಾರಕ್ಕೆ ಶ್ರಮಿಸುತ್ತಿದ್ದರು. ಅಷ್ಟು ಉತ್ತಮರಾಗಿದ್ದ ಗ್ರಂಥಪಾಲಕರು ಲೋಕದಲ್ಲಿ ಅತಿವಿರಳ. ಆದರೂ ಅವರ ಅಧಿಕಾರಾವಧಿಯ ಕೊನೆ ಕಾಲದಲ್ಲಿ ಅವರೇ ಕೆಲಸ ಕೊಡಿಸಿದ ಸಹಾಯಕರಿಂದಲೇ ಅವರಿಗೆ ಸಹಕಾರ ಸಿಗಲಿಲ್ಲ. ಯಾಕೆಂದರೆ, ಗ್ರಂಥಪಾಲಕರೆಲ್ಲರೂ ಗ್ರಂಥಾಲಯದಲ್ಲಿ ಆಸಕ್ತರಾಗಿರುವುದಿಲ್ಲ. ಬೇರೇನೂ ಸಿಗದ ಕಾರಣ ಸ್ವಲ್ಪ ಗ್ರಂಥಾಲಯವಿಜ್ಞಾನ ಓದಿಕೊಂಡು ಕೆಲಸಕ್ಕೆ ಸೇರಿರುತ್ತಾರೆ. ಒಮ್ಮೆ ಅವರಿಗೆ ಕೆಲಸ ದೊರೆತಮೇಲೆ ಅವರನ್ನೇನು ಮಾಡುವುದಕ್ಕೂ ಆಗುವುದಿಲ್ಲ. ಇಂಥದೇ ಅವ್ಯವಸ್ಥೆ ಮುಂದೆ ಈ ಗ್ರಂಥಾಲಯದಲ್ಲೂ ಕಾಲಿರಿಸಿತು. ಅಲ್ಲಿಗೆ ಓದಲು ಬರುವವರನ್ನು ತಮ್ಮ ಉದ್ಯೋಗಕ್ಕೆ ಕಾರಣವೆಂದು ಆದರಿಸುವ ಬದಲು ಅವರನ್ನು ಉಪದ್ರವಿಗಳೆಂದು ನೋಡಿದರೆ ಹೇಗೆ?

ಕಂಪ್ಯೂಟರೀಕರಣ ಆಗಿದೆ. ಆದರೆ ಗ್ರಂಥಾಲಯ ತೆರೆದ ವೇಳೆಗೆ ಕಂಪ್ಯೂಟರುಗಳನ್ನು ತೆರೆದಿರಿಸಬೇಕಲ್ಲವೇ? ಇಲ್ಲದಿದ್ದರೆ ಪುಸ್ತಕಪಟ್ಟಿ ದೊರಕುವುದಿಲ್ಲ. ಬಂದ ಜನರೊಂದಿಗೋ ಅಥವಾ ಫೋನಿನ ಮೂಲಕ ಇನ್ನು ಯಾರೊಂದಿಗೋ ಅದಲ್ಲದಿದ್ದರೆ ತಂತಮ್ಮಲ್ಲೋ ಸಹಾಯಕರು ದೊಡ್ಡಕೆ ಮಾತಾಡುತ್ತ ಅಟ್ಟಹಾಸದಿಂದ ನಗುತ್ತ ಇದ್ದರೆ ಓದುವವರಿಗೆ ತೊಂದರೆಯಾಗುತ್ತದೆ. ಇಡಿಯ ಕಟ್ಟಡಕ್ಕೇ ಇವರ ಮಾತು ಕೇಳಿಸುತ್ತ ಇರುತ್ತದೆ. ಇವರೇ ಇಲ್ಲಿನ ಶಿಸ್ತು ನೋಡಿಕೊಳ್ಳಬೇಕಾದವರು! ಇವರ ವಿರುದ್ಧ ದೂರು ಹೇಳುವುದು ಯಾರಿಗೆ? ಅಥವಾ ಒಂದು ವೇಳೆ ಇದನ್ನೊಂದು ಪ್ರಕರಣ ಮಾಡಿದರೆ ಮುಂದೆಂದೂ ಅವರು ನಿಮ್ಮನ್ನು ಕ್ಷಮಿಸುವುದಿಲ್ಲ. ಕಟ್ಟಡದ ಕೆಲವೆಡೆ ಬೆಳಕಿಲ್ಲದೆ ಹಗಲೂ ಪುಸ್ತಕ ಹುಡುಕುವುದು ಸಾಧ್ಯವಿಲ್ಲ. ಆದರೆ ಹಾಳಾದ ದೀಪಗಳನ್ನು ತೆಗೆದು ಹೊಸ ದೀಪಗಳನ್ನು ಇರಿಸುವುದಕ್ಕೆ ಯಾರೂ ಉಮೇದು ತೋರುವುದಿಲ್ಲ. ಹಾಲಿನಲ್ಲಿ ಹವಾನಿಯಂತ್ರಣ ವ್ಯವಸ್ಥೆಯನ್ನು ವಿರೋಧದ ನಡುವೆಯೂ ಗ್ರಂಥಪಾಲಕರೊಬ್ಬರು ಮಾಡಿದರು. ಈ ನೆಪದಿಂದ ಸ್ವಲ್ಪ ದುಡ್ಡು ಖರ್ಚುಮಾಡುವುದು ಅವರಿಗೆ ಬೇಕಾಗಿತ್ತು ಎಂದು ತೋರುತ್ತದೆ. ಈಗ ಆ ಗ್ರಂಥಪಾಲಕರಿಲ್ಲ. ಈಗ ಬರೇ ಗಾಜಿನ ಆವರಣ ಮಾತ್ರ ಇದೆ. ಹವಾನಿಯಂತ್ರಣಕ್ಕೆ ಬೇಕಾದ ವಿದ್ಯುತ್ತಿನ ಖರ್ಚಿಗೆ ಹಣವಿಲ್ಲ. ಆದ್ದರಿಂದ ಈ ಗಾಜಿನ ಗೂಡಿನೊಳಗೆ ಇನ್ನಷ್ಟು ಸೆಕೆ.

ನಿಯಮಪಕಾರ ಗ್ರಂಥಾಲಯ ಮುಚ್ಚುವುದು ಪ್ರತಿ ರಾತ್ರಿ ಎಂಟು ಗಂಟೆಗೆ. ಆದರೆ ಈ ಮುಚ್ಚುವ ಗಲಾಟೆ ಏಳೂವರೆಗೇ, ಕೆಲವೊಮ್ಮೆ ಅದಕ್ಕು ಮುನ್ನವೇ, ಸುರುವಾಗುತ್ತದೆ. ಕಾವಲುಗಾರ ಹೋಗಿ ದೀಪಗಳನ್ನೆಲ್ಲ ನಂದಿಸುತ್ತಾನೆ. ಎಲ್ಲರಿಗೂ ಸದ್ದು ಕೇಳಿಸುವಂತೆ ಕಿಟಿಕಿಗಳನ್ನು ಮುಚ್ಚುತ್ತಾನೆ. ಇನ್ನೂ ಅರ್ಧಗಂಟೆ ಇದೆಯಲ್ಲಾ, ಓದಿಕೊಳ್ಳೋಣ ಎಂದು ಕೂತ ನಿಮಗೆ ಆತಂಕ ಸುರುವಾಗುತ್ತದೆ. ಎಲ್ಲಾದರೂ ನೀವು ವಿರೋಧಿಸಿದರೆ ನಿಮ್ಮ ತಂಟೆಗೆ ಬಂದಿಲ್ಲವಲ್ಲಾ ಎಂಬ ರೀತಿ ಸಬೂಬು ನೀಡುತ್ತಾರೆ. ಆದರೆ ಕತ್ತಲಲ್ಲಿ ನೀವು ಪುಸ್ತಕ ಹುಡುಕುವುದು ಹೇಗೆ? ‘ಸಾರ್, ನೀವೊಬ್ಬರೇ ಈಗ ಲೈಬ್ರರಿಯಲ್ಲಿರೋದು, ಎಲ್ಲರೂ ಹೊರಟುಹೋಗಿದ್ದಾರೆ’ ಎಂಬ ಉತ್ತರವನ್ನೂ ನಾನು ಈ ಸಹಾಯಕರಿಂದ ಕೇಳಿದ್ದೇನೆ! ನೀವೊಬ್ಬರಾದರೂ ಇದ್ದೀರಲ್ಲ ಎಂಬ ಮಾತು ಕೇಳಿಲ್ಲ. ಎಲ್ಲೆಡೆಯಂತೆ ಇಲ್ಲೂ ಗ್ರಂಥಾಲಯ ಬೇಗ ಮುಚ್ಚುತ್ತದೆ, ತಡವಾಗಿ ತೆರೆಯುತ್ತದೆ. ಸಾರ್ವಜನಿಕ ಹಣದ ಶೇಕಡಾ ಹತ್ತರಷ್ಟು ಉಪಯೋಗವೂ ಆಗುವುದಿಲ್ಲ. ಎಷ್ಟೊಂದು ಪೋಲು! ಗ್ರಂಥಾಲಯಕ್ಕೆ ಓದುಗರು ಬರದಿರುವುದಕ್ಕೆ ನಾವೆಷ್ಟು ಕಾರಣರು ಎಂಬುದನ್ನು ಗ್ರಂಥಪಾಲಕರಾಗಲಿ, ಅವರ ಸಹಾಯಕರಾಗಲಿ ಕೇಳುವುದಿಲ್ಲ. ಶಿಕ್ಷಣ ಸಂಸ್ಥೆಗಳ ಗ್ರಂಥಾಲಯಗಳ ಅವಸ್ಥೆಯೇ ಇದಾದ ಮೇಲೆ ಇನ್ನು ಸಾರ್ವಜನಿಕ ಗ್ರಂಥಾಲಯಗಳ ಕತೆ ಕೇಳುವುದೇನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೦೧
Next post ಗಟ್ಟಿ ಮೇಳ

ಸಣ್ಣ ಕತೆ

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ನಾಗನ ವರಿಸಿದ ಬಿಂಬಾಲಿ…

  ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

 • ಕೇರೀಜಂ…

  ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…