ಭ್ರಮಣ – ೬

ಭ್ರಮಣ – ೬

ತನ್ನದೇ ಆದ ವಿನೂತನ ಯೋಜನೆಯನ್ನು ರೂಪಿಸಿ ಅದರ ಬಗ್ಗೆ ಸ್ಕ್ವಾಡಿನ ಮುಖ್ಯಸ್ಥರೊಡನೆ ಚರ್ಚಿಸಿ ಅವರ ಒಪ್ಪಿಗೆ ಪಡೆದು ಬಂಡೇರಹಳ್ಳಿಗೆ ಬಂದಿದ್ದ ತೇಜಾ ಮೊದಲು ರಾಮನಗರದಲ್ಲಿ ಎಸ್.ಪಿ.ಯವರಿಗೆ ರಿಪೋರ್ಟ್ ಮಾಡಿದಾಗ ಅವನನ್ನು ತಮ್ಮ ಚೇಂಬರಿನಿಂದ ಬೇಗ ಅಟ್ಟುವ ಆತುರ ತೋರಿದ್ದರವರು. ಕ್ರಾಂತಿಕಾರಿಯರು, ಕಲ್ಲಕ್ಕ ಅವರ ದೃಷ್ಟಿಯಲ್ಲಿ ಯಾವ ಮಹತ್ವದ ವಿಷಯಗಳೂ ಆಗಿರಲಿಲ್ಲ. ಬಂಡೇರಹಳ್ಳಿಯಲ್ಲಿ ಪೋಲಿಸ್ ಸ್ಟೇಷನ್ ಹಾಕುವದೆಂದರೆ ಹುಚ್ಚುತನವೆಂದು ಅವನಿಗವರು ತಾವೇ ಬಾಯಿಬಿಟ್ಟು ಹೇಳಿದ್ದರು. ಮೇಲಧಿಕಾರಿಯರ ಆಜ್ಞೆಗೆ ತಲೆಬಾಗಬೇಕೆಂಬಂತೆ ತೇಜಾ ಹೇಳಿದ್ದಕ್ಕೆಲ್ಲಾ ಹೂಂಗುಟ್ಟಿದ್ದರು.

ಬಂಡೇರಹಳ್ಳಿಗೆ ಬಂದ ತೇಜಾ ಒಂದು ಹಳೆಯ ಕಟ್ಟಡವನ್ನು ಬಾಡಿಗೆಗೆ ಪಡೆಯುವ ವ್ಯವಸ್ಥೆ ಮಾಡಿದ್ದ. ಅದರ ಸಮೀಪದಲ್ಲೇ ಅವನ ವಾಸಸ್ಥಾನಕ್ಕೊಂದು ಮನೆ. ರಾಮನಗರದ ಮುಖ್ಯ ಕಾರ್ಯಾಲಯದಲ್ಲಿದ್ದ ಹಳೆಯ ಫರ್‌ನೀಚರ್‌ನ ರಿಪೇರಿ ಮಾಡಿಸಿ ವ್ಯಾನಿನಲ್ಲಿ ತಂದೂ ಆಗಿತ್ತು. ಅವನ ಸಹಾಯಕ್ಕೆ ಒಬ್ಬ ಎಸ್.ಐ. ಮತ್ತೊಬ್ಬ ಪೇದೆ ಮಾತ್ರ. ಆ ಇಬ್ಬರೊಡನೆ ಅವನೂ ಆಳಿನಂತೆ ಕೆಲಸ ಮಾಡಿ ಫರ್‌ನೀಚರನ್ನು ಜೋಡಿಸಿದ್ದ.

ಬಂಡೇರಹಳ್ಳಿಗೆ ಯಾವ ಪೋಲಿಸಿನವನೂ ಬರಲು ಸಿದ್ಧನಿಲ್ಲ. ಅಲ್ಲಿ ಆದಾಯದ ಯಾವ ಕಸಬು ಇಲ್ಲ. ಒಂದು ಗಂಟೆ ಹೊತ್ತು ಎಸ್.ಪಿ.ಯವರೊಡನೆ ಚರ್ಚಿಸಿ, ಸ್ಕ್ವಾಡಿನ ಮುಖ್ಯಸ್ಥರೊಡನೆ ಫೋನಿನಲ್ಲಿ ಮಾತಾಡಿ, ಒಬ್ಬ ಎಸ್.ಐ. ಒಬ್ಬ ಎಚ್.ಸಿ. ಮೂವರು ಪೇದೆಯರನ್ನು ಬಂಡೇರಹಳ್ಳಿಯ ಹೊಸ ಪೊಲೀಸ್ ಸ್ಟೇಷನ್ನಿ ವರ್ಗಾಯಿಸುವುದರಲ್ಲಿ ಸಫಲನಾಗಿದ್ದ. ಅವರೆಲ್ಲರಿಗೂ ತೇಜಾನ ಮೇಲೆ ಎಲ್ಲಿಲ್ಲದ ಕೋಪ. ಆದರದನ್ನು ಅವರು ಹೊರಗೆಡಹುವಂತಿಲ್ಲ.

ಆ ಮೊದಲ ದಿನವೆಲ್ಲಾ ಅದರಲ್ಲೇ ಕಳೆದುಹೋಗಿತ್ತು ಆಗ ತೇಜಾ ನಾಲ್ಕು ಸಲ ರಾಮನಗರದಿಂದ ಬಂಡೇರಹಳ್ಳಿಗೆ, ಬಂಡೇರಹಳ್ಳಿಯಿಂದ ರಾಮನಗರಕ್ಕೆ ಓಡಾಡಬೇಕಾಗಿಬಂದಿತ್ತು. ಎಸ್.ಐ. ಮತ್ತು ಎಚ್.ಸಿ. ತಾವು ರಾಮನಗರಕ್ಕೆ ಹೋಗಿ ನಾಳೆ ಬಂದು ಮಿಕ್ಕ ಕೆಲಸವನ್ನು ಮಾಡುತ್ತೇವೆಂದಿದ್ದರು. ಪೇದೆಯರನ್ನು ಆ ದಿನ ಬಂಡೇರಹಳ್ಳಿಯಲ್ಲೇ ಕಳೆಯುವಂತೆ ಆದೇಶಿಸಿದ್ದ. ಅವರು ಪೊಲೀಸ್ ಸ್ಟೇಷನ್ ಕಟ್ಟಡದಲ್ಲೇ ಮಲಗುವ ಏರ್ಪಾಡು ಮಾಡಿಕೊಂಡಿದ್ದರು. ಆ ಮೊದಲನೆಯ ದಿನವೇ ಹೊಸ ಪೋಲೀಸ್ ಸ್ಟೇಷನಿಗೆ ಫೋನಿನ ಕನೆಕ್ಷನ್ನೂ ಬರುವಂತೆ ಮಾಡಿದ.

ಇವೆಲ್ಲಾ ಕೆಲಸಗಳು ಮುಗಿಯುವುದರಲ್ಲಿ ಕತ್ತಲಾಗಿಹೋಗಿತ್ತು. ತರಾತುರಿಯಲ್ಲಿ ನಡೆಯುತ್ತಿರುವ ಈ ಕೆಲಸಗಳನ್ನೆಲ್ಲಾ ಬಹು ಆಸಕ್ತಿ, ಭಯಗಳಿಂದ ನೋಡುತ್ತಿದ್ದರು ಬಂಡೇರಹಳ್ಳಿಯ ಹಳ್ಳಿಗರು, ತಮ್ಮ ಊರಿನಲ್ಲಿ ಪೋಲಿಸ್ ಸ್ಟೇಷನ್ ಒಂದು ಹುಟ್ಟಿಕೊಳ್ಳುತ್ತಿದೆ ಎಂಬ ಮಾತು ಬಾಯಿಂದ ಬಾಯಿಗೆ ಹರಡಿ ಸಂಜೆಯವರೆಗೆ ಆ ಹಳ್ಳಿಯವರೆಲ್ಲಾ ಅದನ್ನು ನೋಡಿ ಹೋಗಿದ್ದರು. ಎಸ್.ಐ ಮತ್ತು ಎಚ್.ಸಿ.ಯವರು ರಾಮನಗರಕ್ಕೆ ಹೋದಮೇಲೆ ಪೇದೆಯೊಬ್ಬನಿಗೆ ಪಕ್ಕದಲ್ಲಿ ಇದ್ದ ಗುಡಿಸಲ ಹೋಟೆಲಿನಿಂದ ಕಾಫಿ ತರುವಂತೆ ಹೇಳಿ ಕಾಲು ಚಾಚಿ ಕುಳಿತು ದಣಿವು ಆರಿಸಿಕೊಳ್ಳುತ್ತಿದ್ದಾಗ ದಪ್ಪನೆಯ ಪೇಟಾ ಸುತ್ತಿದ ಒಬ್ಬ ದೃಢಕಾಯ ಆಳು ಅವನ ಕೋಣೆ ಪ್ರವೇಶಿಸಿದ. ಸರಿಯಾಗಿ ಕುಳಿತ ತೇಜಾ ಆತನನ್ನು ಆದರದಿಂದ ಸ್ವಾಗತಿಸಿ ಎದುರಿಗೆ ಕೂಡುವಂತೆ ಹೇಳಿದ. ಕುರ್ಚಿಯಲ್ಲಿ ಕೊಡುತ್ತಾ ಕೇಳಿದ್ದನಾತ

“ನೀವೇನಾ ಈ ಹೊಸ ಪೋಲೀಸ್ ಸ್ಟೇಷನ್ನಿನ ಇನ್ಸ್‌ಪೆಕ್ಟರ್?”

“ಹೌದು ನಾನೇ!… ನಿವ್ಯಾರು ಗೊತ್ತಾಗಲಿಲ್ಲ…”

“ಆದರೆ ಡ್ರೆಸ್‌ನಲ್ಲಿಲ್ಲ..”

“ಇಲ್ಲ. ಬಂಡೇರ ಹಳ್ಳಿಯಲ್ಲಿ ಇರುವ ತನಕ ನಾನು ಪೋಲಿಸ್ ಯುನಿಫಾರಂ ಹಾಕುವುದಿಲ್ಲ. ನಿಮ್ಮ ಹೆಸರು?” ಅವರ ಮಾತು ಪೂರ್ತಿಯಾಗುವ ಮುನ್ನ ಮಾತಾಡಿದ ತೇಜಾ, ಎದುರಿಗೆ ಕುಳಿತ ದಷ್ಟಪುಷ್ಟ ವ್ಯಕ್ತಿ ಎರಡೂ ಕೈಗಳಿಂದ ತನ್ನ ಪೇಟಾ ಸರಿಪಡಿಸಿಕೊಂಡು ಸ್ವಲ್ಪ ಗತ್ತಿನ ದನಿಯಲ್ಲಿ ಹೇಳಿದ

“ನನ್ನ ಸಿದ್ಧಾನಾಯಕ್ ಎನ್ನುತ್ತಾರೆ. ಇಲ್ಲಿಯ ಪಂಚಾಯಿತಿ ಪ್ರೆಸಿಡೆಂಟ್ ನಾನು, ನನ್ನ ಕೇಳಿದೇ ಇಲ್ಲಿ ಪೋಲಿಸ್ ಸ್ಟೇಷನ್ ಯಾಕೆ ಹಾಕಿದರು.”

ಎಲ್ಲರಿಗೂ ಅಧಿಕಾರದ ಮದ ಎಂದುಕೊಳ್ಳುತ್ತಾ ವಿನಯದ ದನಿಯಲ್ಲಿಯೇ ಹೇಳಿದ ತೇಜಾ.

“ಇದು ಮೇಲಿನಿಂದ ಬಂದ ಆಜ್ಞೆ, ಅದಕ್ಕೆ ತುರಾತುರಿಯಲ್ಲಿ ಕೆಲಸ ನಡೆದುಹೋಯಿತು. ಅದರಿಂದಾಗಿ ನಿಮಗೆ ತಿಳಿಸಲು ಆಗಿರಲಿಕ್ಕಿಲ್ಲ.”

ತೇಜಾನ ಕೊನೆಯ ಮಾತು ನಾಯಕನಲ್ಲಿ ಎಲ್ಲಿಲ್ಲದ ಹೆಮ್ಮೆ ಹುಟ್ಟಿಸಿತು. ಅಂತಹದೇ ದನಿಯಲ್ಲಿ ಹೇಳಿದ್ದ.

“ಏನೇ ಆಗಲಿ! ಒಳ್ಳೆಯದೇ ಆಯಿತು. ಪೊಲೀಸಿನವರಿದ್ದರೆ ಜನ ಹೆದರುತ್ತಾರೆ. ತಗ್ಗಿ ಬಗ್ಗಿ ನಡೆಯುತ್ತಾರೆ.”

ಅವನ ಮಾತು ತೇಜಾನಲ್ಲಿ ಆಶ್ಚರ್ಯ ಹುಟ್ಟಿಸಿತ್ತು. ಆದರೂ ಅದನ್ನು ಕೆದಕುವ ಸಮಯ ಇದಲ್ಲವೆಂದು ಸುಮ್ಮನಾಗಿಬಿಟ್ಟಿದ್ದ. ಮಂದೇನು ಮಾತಾಡಬೇಕೆಂದು ಆ ಪಂಚಾಯಿತಿ ಪ್ರೆಸಿಡೆಂಟನಿಗೆ ತೋಚಿದಹಾಗಿಲ್ಲ. ಸ್ವಲ್ಪ ಹೊತ್ತು ಕುರ್ಚಿಯಲ್ಲಿ ಮಿಸುಕಾಡಿ ಏಳುತ್ತಾ ಎಚ್ಚರಿಸುವಂತಹ ಮೆಲ್ಲನೆಯ ದನಿಯಲ್ಲಿ ಹೇಳಿದ್ದ.

“ನಾ ಬರುತ್ತೇನೆ! ಹುಶಾರಾಗಿರಿ ಇಲ್ಲಿಯ ಜನ ಒಳ್ಳೆಯವರಲ್ಲ ಅದರಲ್ಲಿ ನೀವು ಹೊಸಬರು ಬೇರೆ.”

ಮೊದಲ ದಿನವೇ ಇಂತಹ ವಿಚಿತ್ರ ವ್ಯಕ್ತಿಯ ಭೇಟಿಯಾಯಿತಲ್ಲಾ ಎಂದು ಅವನ ಬಗ್ಗೆ ಯೋಚಿಸುವದರಲ್ಲಿ ಸ್ವಲ್ಪ ಸಮಯ ಕಳೆದ. ಆ ಯೋಚನೆ ದೂರವಾಗುತ್ತಿದ್ದಂತೆ ಪೋಲಿಸ್ ಸ್ಟೇಷನ್ ಸ್ಥಾಪಿಸುವುದರಲ್ಲಿ ತಾನು ಪಟ್ಟ ಪಾಡು ನೆನಪಾಗಿ ಮನ ಗೊಂದಲಕ್ಕೀಡಾಗಿತ್ತು. ಇಲ್ಲಿ ಎಲ್ಲರೂ ಹೊಸಬರೆ. ಕನಿಷ್ಟ ತನ್ನ ಕೈಕೆಳಗೆ ಕೆಲಸ ಮಾಡುವವರನ್ನು ತಾನೇ ಆರಿಸಬೇಕಾಗಿತ್ತು. ಅವರ ಸ್ವಭಾವಗಳ ಪರಿಚಯವಿದ್ದರೆ ಎಲ್ಲವನ್ನೂ ವಿವರಿಸಬಹುದಾಗಿತ್ತು. ಇವರುಗಳೆದುರು ತನ್ನ ಯೋಜನೆ ಹೇಳಲು ಹೋದರೆ ಹುಚ್ಚನೆಂದುಕೊಳ್ಳಬಹುದು. ಅದೂ ಅಲ್ಲದೇ ತಾನಿಲ್ಲಿ ಬಂದ ಕೆಲಸವೇ ನಿಷ್ಪ್ರಯೋಜಕ ವಾಗಬಹುದು. ಹಾಗಾಗಬಾರದು ನಿಧಾನವಾಗಿ ಎಲ್ಲವನ್ನೂ ಸರಿಪಡಿಸುತ್ತಾ ಬರಬಹುದು ಎಂದುಕೊಂಡು ಪೋಲಿಸ್ ಸ್ಟೇಷನ್‌ನಿಂದ ಹೊರಬಿದ್ದಿದ್ದ.

ಕತ್ತಲಲ್ಲಿ ಅಲ್ಲಲ್ಲಿ ದೀಪಗಳು ಬೆಳಗುತ್ತಿದ್ದವು. ಸುತ್ತೂ ಕಣ್ಣು ಹಾಯಿಸಿದಾಗ ಬೆಳಗುತ್ತಿದ್ದ ದೀಪಗಳು ತುಂಬಾ ಕಡಿಮೆ ಇದ್ದಂತೆ ಕಂಡಿತ್ತು. ಮನೆಗೆ ಬಂದು ಬಟ್ಟೆ ಬದಲಿಸಿದ್ದ. ಪ್ಯಾಂಟು ಮತ್ತು ಟೀಶರ್ಟ್‌ನ ಸ್ಥಾನವನ್ನು ಪೈಜಾಮಾ ನೆಹರು ಶರ್ಟ್ ಅಲಂಕರಿಸಿತ್ತು. ಕಾಲಿಗೆ ಚಪ್ಪಲಿ, ಮನೆಯಿಂದ ಹೊರಬಿದ್ದ ತೇಜಾ ಗೊತ್ತು ಗುರಿ ಇಲ್ಲದಂತೆ ನಡೆಯುತ್ತಿದ್ದ. ಯೋಚನೆಗಳು ಬಹು ಗೊಂದಲಮಯವಾಗಿದ್ದವು.

ತಾನಿಲ್ಲಿ ಪೊಲಿಸ ಅಧಿಕಾರಿಯಾಗಿ ಬಂದು ತಪ್ಪು ಮಾಡಿದನೇನೋ ಎನಿಸುತ್ತಿತ್ತು. ಈಗ ತಾನೆಂದರೆ ಇಲ್ಲಿ ಎಲ್ಲರೂ ಭಯಪಡುತ್ತಾರೆ. ಯಾರೂ ಬಿಚ್ಚು ಮನಸ್ಸಿನಿಂದ ಮಾತಾಡಲಿಕ್ಕಿಲ್ಲ. ತಾನೀಗ ಅವರಲ್ಲಿ ಒಬ್ಬನಾಗುವುದೂ ಕಷ್ಟವೇನೋ ಎನಿಸುತ್ತಿತ್ತು. ಬೆಂಗಳೂರು ಬಿಡುವ ದಿನ ಕುಶಾಲನನ್ನು ಭೇಟಿಯಾದಾಗ ಇದರ ಬಗ್ಗೆ ಕೂಲಂಕುಷವಾಗಿ ಮಾತಾಗಿತ್ತು. ಬಂಡೇರಹಳ್ಳಿಯ ಜನರನ್ನು ಮೋಸಪಡಿಸುವುದು ಬೇಡವೆಂದಿದ್ದನವ. ಇನ್ಸ್‍ಪೆಕ್ಟರನಲ್ಲದೇ ಬೇರೇನಾದರೂ ಆಗಿರಬರಬಹುದಾಗಿತ್ತು. ಆದರೆ ಅದು ಗೊತ್ತಾದರೆ ಅವರ ನಂಬಿಕೆಗೆ ಪಾತ್ರನಾಗುವುದು ಅಸಂಭವ ಎಂದಿದ್ದ ಕುಶಾಲ, ಅದೂ ನಿಜವೆನಿಸಿತ್ತು. ಪೋಲಿಸಿನವರು ಸಾಮಾನ್ಯ ಪ್ರಜೆಗಳಲ್ಲ ಶತೃಗಳಲ್ಲ ಮಿತ್ರರು, ಅವರ ಅಪತ್ಭಾಂಧವರೆನ್ನುವುದನ್ನು ತೋರಿಸುತ್ತೇನೆ ಎಂದು ಕುಶಾಲನಿಗೆ ಹೇಳಿದ್ದ. ಅದು ಸುಲುಭದ ಕೆಲಸವಲ್ಲ. ಅದೂ ಬಂಡೇರಹಳ್ಳಿಯಲ್ಲಿ. ಇಲ್ಲಿನ ಬಹುಜನರು ಕಲ್ಲಕ್ಕನ ಸಮರ್ಥಕರೆ ಅಂದರೆ ಪೋಲಿಸಿನವರ ಶತ್ರುಗಳು. ಏನೇ ಆಗಲಿ ತಾನು ನಿರ್ಣಯ ತೆಗೆದುಕೊಂಡದ್ದನ್ನು ಸಾಧಿಸಿಯೇ ಸಾಧಿಸುತ್ತೇನೆ ಎಂಬ ಹಟದಿಂದ ಆ ಹಳ್ಳಿಯಲ್ಲಿದ್ದ ಎಲ್ಲರಿಗಿಂತ ದೊಡ್ಡ ಹೋಟೆಲಿನಲ್ಲಿ ಬಂದು ಕುಳಿತ.

ದೊಡ್ಡ ಹೋಟೆಲ್ ಎಂದರೆ ನಾಲ್ಕು ಟೇಬಲ್‌ಳು ಅವುಗಳೆದುರು ನಾಲ್ಕು ನಾಲ್ಕು ಕುರ್ಚಿಗಳು. ಹೋಟೆಲಿನ ಹೊರಭಾಗದಲ್ಲೇ ಒಲೆಗಳು. ಅವುಗಳ ಮೇಲೆ ಚಹಾ, ಕಾಫಿ ತಿಂಡಿಗಳ ತಯಾರಿ ನಡೆದಿತ್ತು. ಅವನಲ್ಲಿ ಕೂಡುತ್ತಿದ್ದಂತೆ ಹೆಗಲ ಮೇಲೆ ಹೊಲಸು ಟವಲ್ಲನ್ನು ಹಾಕಿಕೊಂಡಿದ್ದ ಸಪ್ಲೆಯರ್ ಅವನ ಹತ್ತಿರ ಬಂದು ವಿನಯವಾಗಿ ಕೇಳಿದ.

“ಏನು ಬೇಕು ಸ್ವಾಮಿ!”

“ಕಾಫಿ” ಎಂದ ತೇಜಾ ಅಲ್ಲಿ ಕುಳಿತವರ ಮೇಲೆ ನಿರಾಸಕ್ತಿಯಿಂದ ಕಣ್ಣಾಡಿಸಿದ. ಎಲ್ಲರೂ ಭಯಭಕ್ತಿಗಳಿಂದ ಅವನನ್ನೇ ನೋಡುತ್ತಿದ್ದರು. ಇಬ್ಬರಂತೂ ಅವನ ಕಣ್ಣಲ್ಲಿ ಕಣ್ಣು ಕಲಿಸುವ ಧೈರ್ಯವಿಲ್ಲದವರಂತೆ ತಲೆ ಕೆಳಗೆ ಹಾಕಿಕೊಂಡು ಹೊರಹೊರಟುಹೋದರು. ದೊಡ್ಡ ಸ್ವಚ್ಛ ಗಾಜಿನ ಗ್ಲಾಸಿನಲ್ಲಿ ಬಹು ವಿನಯವಾಗಿ ಅವನೆದುರು ನೀರನ್ನು ಇಟ್ಟು ಹೋಗಿದ್ದ ಸಪ್ಲೆಯರ್. ತಾನಿಲ್ಲಿ ಪೋಲಿಸ್ ಸ್ಟೇಷನ್ ಸ್ಥಾಪಿಸಿ ತಪ್ಪು ಮಾಡಿದನೇನೋ, ಇದರಿಂದ ಕ್ರಾಂತಿಕಾರಿ ಚಟುವಟಿಕೆಗಳು ಇನ್ನೂ ಹೆಚ್ಚಾಗುವವೇನೋ ಎಂದು ತೇಜಾ ಅಂದುಕೊಳ್ಳುತ್ತಿದ್ದಾಗ ಬಿಳಿಯ ದಪ್ಪನೆಯ ಗಡ್ಡದ ಮುದುಕ ಒಬ್ಬ ಅವನೆದುರು ಬಂದು ಕುಳಿತ. ಹಣೆ, ಕಣ್ಣುಗಳನ್ನು ಆವರಿಸಿದ ಸುಕ್ಕುಗಳಿಂದ ಅವನ ವಯಸ್ಸು ಅರವತ್ತೈದು ಎಪ್ಪತ್ತರ ನಡುವಿರಬಹುದೆನಿಸಿತ್ತು ತೇಜಾನಿಗೆ. ಕಣ್ಣುಗಳು ಸ್ವಾಭಿಮಾನ, ಸಿಟ್ಟುಗಳನ್ನು ಹೊರಗೆಡಹುತ್ತಿದ್ದವು. ಅವನು ಮಾತಾಡುವ ಮುನ್ನ ವ್ಯಂಗ್ಯದ ದನಿಯಲ್ಲಿ ಕೇಳಿದ್ದ ಮುದುಕ.

“ಕಲ್ಲಕ್ಕನನ್ನು ಹಿಡಿಯಲು, ಮುಗಿಸಲು ಬಂದಿದ್ದೀರಾ ಇನ್ಸ್‍ಪೆಕ್ಟರ್?”

ಆತನ ಮಾತಿನ ಧೋರಣೆಯಲ್ಲಿ ಯಾತಕ್ಕೂ ಭಯ ಪಡುವುದಿಲ್ಲವೆಂಬಂತಹ ಭಂಡ ಧೈರ್ಯವಿತ್ತು. ಮುಗಳ್ನಕ್ಕು ಹಿರಿಯರಿಗೆ ಕೊಡುವಂತಹ ಗೌರವದ ದನಿಯಲ್ಲಿ ಹೇಳಿದ್ದ ತೇಜಾ,

“ಇಲ್ಲ ತಾತಾ! ನಾನದಕ್ಕೆ ಬಂದಿಲ್ಲ. ಇಲ್ಲಿನ ಯಾವ ಯಾವ ವ್ಯವಹಾರಗಳು ಬಡತನಕ್ಕೆ ಕಾರಣವಾಗಿರಬಹುದು ತಿಳಿಯಲು, ಅದನ್ನು ಹತೋಟಿಗೆ ತರಲು ಬಂದಿದ್ದೇನೆ.”

“ಓಹೋ! ಅಂದರೆ ಬಂಡೇರಹಳ್ಳಿಯನ್ನು ಉದ್ಧಾರ ಮಾಡಲು ಬಂದಿದ್ದೀರಿ” ಮುದುಕನ ಮಾತಿನಲ್ಲಿ ವ್ಯಂಗ್ಯವಿನ್ನೂ ಹೆಚ್ಚಾಗಿತ್ತು. ಅದು ತೃಣಮಾತ್ರ ಉತೇಜಾನಲ್ಲಿ ಸಿಟ್ಟು ಹುಟ್ಟಿಸಲಿಲ್ಲ. ಹಗುರನಗೆ ನಗುತ್ತಾ ಹೇಳಿದ.

“ನಾನು ನಿಮಗಿಂತ ಬಹಳ ಚಿಕ್ಕವನು. ನನ್ನ ಬಹುವಚನದಲ್ಲಿ ಸಂಬೋಧಿಸಬೇಡಿ… ಹುಂ! ಬಂಡೇರಹಳ್ಳಿಯ ಉದ್ಧಾರದ ಕೆಲಸ ನನ್ನೊಬ್ಬನಿಂದಲೇ ಆಗದು… ಅದಕ್ಕೆ ನಿಮ್ಮಂತಹ ಹಿರಿಯರ ಮಾರ್ಗದರ್‍ಶನ ಸಹಕಾರಗಳು ಬೇಕು”

ಸ್ವಲ್ಪ ಅಚ್ಚರಿಯಿಂದ ತೇಜಾನ ಮುಖ ನೋಡಿ ಕೇಳಿದ್ದ ಹಿರಿಯ

“ಒಮ್ಮಿಂದೊಮ್ಮೆಲೆ ಸರಕಾರಕ್ಕೆ ಬಂಡೇರಹಳ್ಳಿ ಹೇಗೆ ನೆನಪಾಯಿತು”

ಆತನ ದನಿಯಲ್ಲಿ ಅಚ್ಚರಿಯೊಡನೆ ವ್ಯಂಗ್ಯವೂ ಸೇರಿತ್ತು. ಅದು ತನಗೂ ತಿಳಿಯದೆಂಬಂತಹ ಮುಖ ಮಾಡಿ ಹೇಳಿದ್ದ ತೇಜಾ.

“ಬಹುಶಃ ಅದಕ್ಕೆ ಕಾರಣ ಕಲ್ಲಕ್ಕನೇ ಇರಬಹುದೇನೋ”

ಅದರ ಬಗ್ಗೆ ಯೋಚಿಸುತ್ತಿರುವಂತೆ ಕಂಡ ಆ ಹಿರಿಯ ಹೇಳಿದ್ದ.

“ನೀವು ಮೊದಲು…”

“ನೀವೂ ಅಲ್ಲ. ನೀನು ಅನ್ನಿ… ಕಾಫಿ ಕುಡಿಯುತ್ತೀರಾ?” ಅವರ ಮಾತನ್ನು ನಡುವೆಯೇ ತಡೆದು ಹೇಳಿದ್ದ ತೇಜಾ. ಅದಕ್ಕವರು ಹೇಗೆ ಪ್ರತಿಕ್ರಿಯಿಸಬೇಕೋ ತೋಚದಂತೆ ಮುಖ ಮಾಡಿದ್ದಾಗ ಸಪ್ಲೆಯರನ್ನು ಕರೆದು ಇನ್ನೊಂದು ಕಾಫಿ ತರುವಂತೆ ಹೇಳಿದ್ದ ತೇಜಾ. ಆಗಲೇ ರಸ್ತೆಯ ಮೇಲೆ ನಡೆದಾಡುತ್ತಿದ್ದ ಜನರು ಅಚ್ಚರಿಯಿಂದ ಹೋಟಲಿನಲ್ಲಿ ಕುಳಿತ ಇಬ್ಬರನ್ನು ನೋಡಿಹೋಗುತ್ತಿದ್ದರು. ಕೆಲಹುಡುಗರಂತೂ ಗುಂಪು ಕಟ್ಟಿ ರಸ್ತೆಯ ಆಚೆ ನಿಂತು ನಿಸ್ಸಂಕೋಚದಿಂದ ಈ ಇಬ್ಬರನ್ನೇ ನೋಡುತ್ತಿದ್ದರು. ಸಪ್ಲೆಯರ್ ಗಡ್ಡಧಾರಿ ಹಿರಿಯನೆದುರು ಕಾಫಿ ತಂದಿಟ್ಟ.

“ಕುಡಿಯಿರಿ” ಎನ್ನುತ್ತಾ ತನ್ನ ಗ್ಲಾಸನ್ನು ಎತ್ತಿಕೊಂಡಿದ್ದ ತೇಜಾ ಯೋಚನೆಯಿಂದ ಚೇತರಿಸಿಕೊಂಡ ಹಿರಿಯರು ಗ್ಲಾಸನ್ನು ಎತ್ತಿಕೊಳ್ಳುತ್ತಾ ಹೇಳಿದರು.

“ಮೊದಲು ಒಂದು ಚಿಕ್ಕ ಕೆಲಸ ಮಾಡಬೇಕು. ಅದನ್ನು ಮಾಡಬಲ್ಲಿರಾ.”

“ಮತ್ತೆ ಬಹುವಚನ! ಮಾಡುತ್ತೀಯಾ ಎಂದು ಕೇಳಿ. ಆಮೇಲೆ ಅದೇನೆಂಬುವುದು ಮಾತಾಡುವ” ನಗುತ್ತಾ ಹೇಳಿದ ತೇಜಾ. ಒಮ್ಮೆ ಆ ಬಿಳಿಯ ಗಡ್ಡಧಾರಿ ಎತ್ತರದ ದನಿಯಲ್ಲಿ ನಕ್ಕು ಕೇಳಿದ.

“ಸರಿ! ಒಂದು ಚಿಕ್ಕ ಕೆಲಸ ಮಾಡುತ್ತೀಯಾ?”

“ಅದೇನು ಆಜ್ಞಾಪಿಸಿ” ಅವರ ಮಾತು ಮುಗಿಯುತ್ತಲೇ ಕೇಳಿದ ತೇಜಾ.

“ಇಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆ ಸಾರಾಯಿ ಮಾರಾಟವಾಗುತ್ತಿರುತ್ತದೆ ಅದನ್ನು ನಿಲ್ಲಿಸುತ್ತಿಯಾ?” ಸವಾಲಿನಂತಿತ್ತು ಹಿರಿಯನ ಮಾತು. ಅದಕ್ಕೆ ನಗುತ್ತಲೇ ಮರುಪ್ರಶ್ನಿಸಿದ್ದ ತೇಜಾ.

“ಅದರಿಂದ ಬಂಡೇರಹಳ್ಳಿ ಉದ್ಧಾರವಾಗುತ್ತದೆಯೇ?”

“ಎಷ್ಟೋ ಜನ ಬರೀ ಕುಡಿತಕ್ಕೆ ಗುಲಾಮರಾಗಿ ತಮ್ಮ ತಮ್ಮ ಸಂಸಾರಗಳನ್ನು ಭಿಕ್ಷೆ ಬೇಡುವ ಗತಿಗೆ ತಂದಿದ್ದಾರೆ. ಕುಡಿದೂ ಕುಡಿದೂ ನನ್ನ ಮೂವತ್ತು ವರ್ಷದ ಮಗ ಸತ್ತ. ಈಗ ಈ ವಯಸ್ಸಿನಲ್ಲಿಯೂ ಅವನ ಸಂಸಾರದ ಭಾರ ನನ್ನ ಮೇಲೆ ಬಿದ್ದಿದೆ” ಹಿರಿಯನ ಮಾತಿನಲ್ಲಿ ಸಾರಾಯಿ ಮಾರಾಟಗಾರರ ಮೇಲೆ ಎಲ್ಲಿಲ್ಲದ್ದ ಸಿಟ್ಟು ತುಂಬಿ ಬಂದಿತ್ತು.

ಕಾಫಿ ಕುಡಿದಾದ ಮೇಲೆ ಅವರಿಬ್ಬರೂ ಹಾಗೇ ಸ್ವಲ್ಪ ಹೊತ್ತು ಮಾತಾಡುತ್ತಾ ಕುಳಿತರು. ಅದೇ ವಿಷಯ. ಕಲ್ಲಕ್ಕನ ಹೆಸರನ್ನು ಒಂದು ಸಲವೂ ತೆಗೆಯಲಿಲ್ಲ ತೇಜಾ. ಅವಳೇ ಈ ಕೆಲಸವೇಕೆ ಮಾಡಲಿಲ್ಲವೆಂದು ಕೇಳಲಿಲ್ಲ. ಸಾರಾಯಿಖಾನೆ ನಿಗದಿತ ಸಮಯದಲ್ಲಿ ಮಾತ್ರ ತೆಗೆದಿರುವುದಲ್ಲದೇ ಕುಡಿತದ ಚಟವನ್ನು ಬಿಡಿಸುವುದು ಹೇಗೆ ಎಂಬ ಬಗ್ಗೆ ಕೂಡಾ ಮಾತು ನಡೆಯಿತು.

ಅವರಿಬ್ಬರೂ ಅಲ್ಲಿಂದ ಏಳುವಾಗ ರಾತ್ರಿಯ ಎಂಟೂವರೆ ದಾಟಿತ್ತು ಸಮಯ. ಹೋಟೆಲಿನವ ತೇಜಾ ಕಾಫಿಗೆ ಹಣ ಕೊಡಲು ಹೋದಾಗ ತೆಗೆದುಕೊಳ್ಳಲು ನಿರಾಕಿಸಿದ್ದಲ್ಲದೇ ಅದು ಅವನದೇ ಹೋಟಲೆಂದು ತಿಳಿಯಬೇಕೆಂದು ಹೇಳಿದ. ಅವನು ಹೀಗೆ ವರ್ತಿಸಲು ಕಾರಣ ಪೋಲಿಸಿನವರ ಭಯವೆಂಬುವುದು ತೇಜಾನಿಗೆ ಹೇಳಬೇಕಾದ ಅವಶ್ಯಕತೆ ಇರಲಿಲ್ಲ. ಬಲವಂತವಾಗಿ ಅವನಿಗೆ ಹಣ ಕೊಟ್ಟು, ಯಾವ ಪೋಲಿಸಿನವನಿಗೂ ಯಾವದನ್ನೂ ಬಿಟ್ಟಿಗೆ ಕೊಡಬಾರದೆಂದು ಆದೇಶಿಸಿದ್ದ. ಹಣವನ್ನು ತೆಗೆದುಕೊಂಡ ಹೋಟೆಲಿನ ಒಡೆಯ ದಿಗ್ಭ್ರಾಂತಿಯಿಂದ ಯಾವುದೋ ಹೊಸ ವಸ್ತುವನ್ನು ನೋಡುವಂತೆ ತೇಜಾನನ್ನು ನೋಡುತ್ತಿದ್ದಾಗ ಅವರಿಬ್ಬರೂ ಹೋಟೆಲಿನಿಂದ ಹೊರಬಿದ್ದಿದ್ದರು.

ಹೋಟೆಲಿನ ಹೊರಗಡೆ ಅವರಿಬ್ಬರನ್ನೂ ಆಸಕ್ತಿ ಕಾತುರಗಳಿಂದ ನೋಡುತ್ತಿರುವವರು ಹೆಚ್ಚಾಗಿದ್ದರು. ಅವರುಗಳ ಕಡೆ ಆ ಹಳ್ಳಿಯ ಹಿರಿಯ ಒಂದು ಸಲ ಹೆಮ್ಮೆಯಿಂದ ನೋಡಿದ್ದನ್ನು ಗಮನಿಸಿದ್ದ ತೇಜಾ ಅವರುಗಳ ಇರುವನ್ನೇ ಮರೆತಂತೆ ಅವನೊಡನೆ ನಡೆಯುತ್ತಿದ್ದ. ಬಂಡೇರಹಳ್ಳಿಯಲ್ಲಿ ಎರಡು ಸರಕಾರಿ ಸಾರಾಯಿಖಾನೆಗಳಿವೆ ಎಂಬುವುದು ಗೊತ್ತಾಗಿತ್ತು. ಒಂದು ಬಡಬಗ್ಗರು ವಾಸಿಸುವ ಮನೆ ಗುಡಿಸಲುಗಳ ನಡುವೆ ಮತ್ತೊಂದು ಬಸ್‌ಸ್ಟಾಂಡಿನ ಹತ್ತಿರ. ಅವರಿಬ್ಬರೂ ಬಸ್‌ಸ್ಟಾಂಡಿನ ಕಡೆ ನಡೆಯುತ್ತಿದ್ದರು. ಹಿಂದೆ ಯುವಕರ ಗುಂಪೊಂದು ಬರುತ್ತಿತ್ತು. ಅವರ ಕಡೆ ತೇಜಾನ ಗಮನವೇ ಇರಲಿಲ್ಲ.

ಬಸ್‌ಸ್ಟಾಂಡಿನಿಂದ ಸ್ವಲ್ಪ ದೂರದಲ್ಲಿರುವ ಸರಾಯಿಖಾನೆಯನ್ನು ಪ್ರವೇಶಿಸಿದಾಗ ತೇಜಾನಿಗೆ ಎಲ್ಲಿಲ್ಲದ ಆಶ್ಚರ್ಯ. ಬಂಡೇರಹಳ್ಳಿಯಂತಹ ಹಳ್ಳಿಯಲ್ಲಿ ಇಷ್ಟು ದೊಡ್ಡ ಸರಾಯಿಖಾನೆ ಇರಬಹುದೆಂದು ಅವನು ಊಹಿಸಿರಲಿಲ್ಲ. ಅಲ್ಲಿ ಕುಡಿತದ ಜತೆ ತಿನ್ನಲು ಬೇಕಾದುದ್ದನ್ನು ಮಾರುವ ಮೂರು ಗುಡಿಸಲಿನ ತರಹದ ಅಂಗಡಿಗಳಿದ್ದವು. ಕುಡುಕರು ಕುಳಿತು ಕುಡಿಯಲು ಬೆಂಚುಗಳು, ಸರಾಯಿ ಮಾರಾಟದ ಎರಡು ಕೌಂಟರುಗಳು, ತೇಜಾ ಮತ್ತು ಹಿರಿಯ ಹತ್ತಿರವಾಗುತ್ತಿದ್ದಂತೆ ಮಾರಾಟ ಮಾಡುವವರ ನೋಟಗಳು ಅವರ ಕಡೆ ತಿರುಗಿದ್ದವು. ಕೌಂಟರ್‌ನಲ್ಲಿ ಕುಳಿತು ಮಾರುತ್ತಿರುವವರು ತೇಜಾನನ್ನು ನೋಡಿರಲಿಲ್ಲ. ಕುಡುಕರಿಂದ ತಮ್ಮ ಹಳ್ಳಿಯಲ್ಲಿ ಒಂದು ಪೋಲಿಸ್ ಸ್ಟೇಷನ್ ಮಾತ್ರ ಹುಟ್ಟಿಕೊಂಡಿದೆ ಎಂಬುವುದು ಅವರಿಗೆ ಗೊತ್ತಾಗಿತ್ತು. ಬಿಳಿಯ ಗಡ್ಡದ ಹಿರಿಯನನ್ನು ಇಡೀ ಬಂಡೇರಹಳ್ಳಿಯೇ ಗುರುತಿಸುತ್ತಿತ್ತು. ತೇಜಾ ಒಂದು ಕೌಂಟರಿನ ತೀರಾ ಸಮೀಪ ಬಂದಾಗ ಎಷ್ಟು ಬೇಕು ಎಂದು ಕೇಳುವಂತಹ ನೋಟದಲ್ಲಿ ಅವನನ್ನು ನೋಡಿದ ಎತ್ತರದಲ್ಲಿ ಕುಳಿತು ಸರಾಯಿ ಮಾರುವಾತ.

“ಎಷ್ಟು ಗಂಟೆಯವರೆಗೆ ತೆಗೆದಿರುತ್ತೀರಿ?” ಸಾಮಾನ್ಯ ಮಾಹಿತಿಯೊಂದನ್ನು ಅರಿಯುವಂತಹ ದನಿಯಲ್ಲಿ ಕೇಳಿದ ತೇಜಾ.

“ನಿನಗೆ ಯಾವಾಗ ಬೇಕೆಂದರಾಗ ಸಿಗುತ್ತದೆ. ರಾತ್ರಿ ತಡವಾದರೆ ಬಾಗಿಲು ಬಡಿಯಿರಿ ಎದ್ದು ಕೂಡುತ್ತೇವೆ” ಕೂಡಲೇ ಉತ್ತರಿಸಿದ ಕೌಂಟರಿನ ಹಿಂದೆ ಕುಳಿತವ. ದಷ್ಟಪುಷ್ಟನಾದ ಅವನ ದನಿಯಲ್ಲಿ ಇಂತಹ ಮಾತುಗಳಿಗೆ ಸಮಯವಿಲ್ಲವೆಂಬ ಭಾವ ಎದ್ದು ಕಾಣುತ್ತಿತ್ತು. ಬಹು ಹಗುರದನಿಯಲ್ಲಿ ಮರು ಪ್ರಶ್ನಿಸಿದ ತೇಜಾ.

“ಇಲ್ಲಿ ಯಾವ ನೀತಿ ನಿಯಮವೂ ಇಲ್ಲವೇ?”

“ನೀನ್ಯಾರು ಅದನ್ನೆಲ್ಲಾ ಕೇಳಲು?” ಕದನಕ್ಕೆ ಕಾಲು ಕೆದರುವಂತಿತ್ತವನ ದನಿ. ತಕ್ಷಣ ತೇಜಾನ ಬಲಗೈ ಎತ್ತರದಲ್ಲಿ ಕುಳಿತಿದ್ದವನ ಕಾಲರನ್ನು ಬಿಗಿಯಾಗಿ ಹಿಡಿಯಿತು ಹಾಗೇ ಅವನನ್ನು ಕುಳಿತಲ್ಲಿಂದ ಎಬ್ಬಿಸಿದ. ಅನಿರೀಕ್ಷಿತ ಘಟನೆಯಿಂದ ದಿಗ್ಭ್ರಾಂತಿಯಾಯಿತವನಿಗೆ, ದಿಗಿಲಾಗಲಿಲ್ಲ ಎತ್ತರದ ದನಿಯಲ್ಲಿ ಕೂಗಿದ.

“ಯಾರೋ ನೀನು ಬೋಳಿಮಗನೇ?”

ಆ ಮಾತು ಮುಗಿಯುತ್ತಿದ್ದಂತೆ ಅವನನ್ನು ಕೆಳಗೆಳೆದ. ಕೌಂಟರಿಗೆ ಹಾಕಿದ ಕಟ್ಟಿಗೆಗಳು ಮುರಿಯಿತು. ಅವನು ಕೆಳಗೆ ಬಂದಮೇಲೆ, ಕಾಲರ್ ಬಿಟ್ಟ ತೇಜಾ ಅವನ ಮುಖಕ್ಕೊಂದು ಬಲವಾಗಿ ಗುದ್ದಿ ಹೇಳಿದ

“ನಾನ್ಯಾರು ಗುರುತಿಸು ನೋಡುವ.”

ಆಗಲೇ ಅಲ್ಲಿ ಕುಡಿಯುತ್ತಿದ್ದ ಕುಡುಕರೂ ತಮ್ಮ ಕುಡಿತವನ್ನು ಮರೆತು ಗಾಬರಿಯಿಂದ ಈ ಘಟನೆಯನ್ನು ನೋಡುತ್ತಿದ್ದರು. ತೇಜಾ ಮತ್ತು ಹಿರಿಯನ ಹಿಂದೆ ಬಂದ ಯುವಕರು ಸರಾಯಿಖಾನೆಯ ಬಾಗಿಲ ಬಳಿಯೇ ನಿಂತು ಇದೆಲ್ಲವನ್ನೂ ನೋಡುತ್ತಿದ್ದರು. ಇನ್ನೊಬ್ಬ ಸರಾಯಿ ಮಾರುತ್ತಿದ್ದವ ತನ್ನ ಹಣವನ್ನು ಜೋಪಾನಪಡಿಸಿ ಸರಾಯಿಯ ಬ್ಯಾರೆಲ್‌ಗೆ ಬೀಗ ಹಾಕಿ ಇವರ ಬಳಿಬಂದ. ಅಲ್ಲಿ ಕೆಲಸ ಮಾಡುತ್ತಿದ್ದ ಬೇರೆ ಕೆಲಸಗಾರರೂ ತೇಜಾನನ್ನು ಸುತ್ತುವರಿದರು. ಮೊದಲ ಹೊಡೆತದಿಂದ ಚೇತರಿಸಿಕೊಂಡ ಸರಾಯಿ ಮಾರುವವ ಸೇಡು ತೀರಿಸಿಕೊಳ್ಳುವವನಂತೆ ಮುಷ್ಟಿ ಬಿಗಿದು ಮುಂದೆ ಬಂದಾಗ ಮಿಂಚಿನ ಗತಿಯಲ್ಲಿ ತಾನೇ ಮುಂದೆ ಬಂದ ತೇಜಾ ಅವನ ಸೊಂಟಕ್ಕೆ ಬಲವಾಗಿ ಒದ್ದ ಅದರ ರಭಸಕ್ಕೆ ಎರಡು ಹೆಜ್ಜೆ ತೂರಾಡಿ ಬಿದ್ದನವ. ಆಗಲೆ ಗುಂಪಿನಲ್ಲಿ ಯಾರೋ ಹೇಳಿದರು.

“ಇನ್ಸ್‌ಪೆಕ್ಟರ್ ಸಾಹೇಬರು”

ಆ ಮಾತು ಗುಸಗುಸನೆ ಹರಡಿತು. ಆಗ ಅವರ ಹತ್ತಿರ ಬಂದಿದ್ದ ಇನ್ನೊಬ್ಬ ಸಾರಾಯಿ ಮಾರುವವನನ್ನು ಉದ್ದೇಶಿಸಿ ಕೇಳಿದ ತೇಜಾ.

“ನಾನ್ಯಾರೆಂದು ಗೊತ್ತಾಯಿತೆ?”

“ಗೊತ್ತಾಯಿತು ಸ್ವಾಮಿ! ಇನ್ಸ್‌ಪೆಕ್ಟರ್ ಸಾಹೇಬರು”

ಆವರೆಗೆ ಕೆಳಗೆ ಬಿದ್ದವ ಎದ್ದು ತನ್ನ ಸಂಗಡಿಗನ ಬಳಿ ಬಂದಿದ್ದ. “ನೀ ಹೇಳು ನನಗಿದೆಲ್ಲಾ ಕೇಳುವ ಅಧಿಕಾರವಿದೆಯೇ ಇಲ್ಲವೆ?”

ಹೊಡೆತ ತಿಂದ ಅವನಲ್ಲಿ ಇನ್ಸ್‌ಪೆಕ್ಟರ್‌ ಎಂಬ ಶಬ್ದ ಭಯವನ್ನು ಹುಟ್ಟಿಸಿತ್ತು. ತನ್ನ ನೋವನ್ನು ಅವಮರ್ಯಾದೆಯನ್ನು ಮರೆತು ಹೇಳಿದನವ

“ಇದೆ”

ಆವರೆಗೆ ಕುಡುಕರು ಕೂಡ ತಮ್ಮ ತಮ್ಮ ಗ್ಲಾಸುಗಳನ್ನು ಹಿಡಿದು ಅಲ್ಲಿ ಬಂದಿದ್ದರು. ಬಾಗಿಲಲ್ಲಿ ನಿಂತ ಯುವಕರಿಗೆ ಬಂಡೇರಹಳ್ಳಿಯಲ್ಲಿ ಒಂದು ಇತಿಹಾಸ ಸೃಷ್ಟಿಯಾಗುತ್ತಿರುವುದನ್ನು ನೋಡುವ ಅವಕಾಶ ಕಳೆದುಕೊಳ್ಳುವ ಇಷ್ಟವಿರಲಿಲ್ಲ. ಅವರೂ ಒಂದು ಗುಂಪನ್ನು ಸೇರಿಕೊಂಡರು. ಎಲ್ಲರನ್ನೂ ಉದ್ದೇಶಿಸಿ ಎಂಬಂತೆ ಎತ್ತರದ ದನಿಯಲ್ಲಿ ಮಾತಾಡಿದ ತೇಜಾ.

“ಬೆಳಿಗ್ಗೆ ಹನ್ನೊಂದರ ನಂತರ ಸಾರಾಯಿ ಖಾನೆ ತೆಗೆಯಬೇಕು. ರಾತ್ರಿ ಒಂಭತಕ್ಕೆಲ್ಲಾ ಇದು ಮುಚ್ಚಬೇಕು. ಈ ನಿಯಮವನ್ನು ಉಲ್ಲಂಘಿಸಿದರೆ, ಸಾರಾಯಿ ಜಪ್ತಾಗುತ್ತದೆ. ಮಾರುವವರಿಗೆ ಕಠಿಣ ಶಿಕ್ಷೆಯಾಗುತ್ತದೆ. ಅದೂ ಅಲ್ಲದೇ ಈಗ ಕೊಟ್ಟಿರುವ ಲೈಸೆನ್ಸ್ ರದ್ದಾಗುತ್ತದೆ. ಬೆಳಗಿನ ಹೊತ್ತು ಯಾರಾದರೂ ಕುಡಿದು ತೂರಾಡುತ್ತಾ ರಸ್ತೆಯ ಮೇಲೆ ಕಾಣಿಸಿದರೆ ಅವರಿಗೂ ಶಿಕ್ಷೆಯಾಗುತ್ತದೆ. ಅರ್ಥವಾಯಿತೆ?”

ಬಹು ಪ್ರಭಾವಯುಕ್ತವಾಗಿತ್ತು ತೇಜಾನ ಕಂಠ, ಅದಕ್ಕೆ ಸಾರಾಯಿ ಮಾರುವವರಿಬ್ಬರೂ ಹೆಚ್ಚು ಕಡಿಮೆ ಒಂದೇ ದನಿಯಲ್ಲಿ ಹೇಳಿದರು

“ಅರ್ಥವಾಯಿತು ಸರ್.”

ತನ್ನ ಕೈಗಡಿಯಾರ ನೋಡಿಕೊಂಡು ಮಾತಾಡಿದ ತೇಜಾ.

“ಈಗ ಒಂಬತ್ತು ದಾಟಿದೆ. ಇನ್ನು ನಿಮ್ಮ ವ್ಯವಹಾರ ಮುಗಿಸಿ ಮನೆಗೆ ಹೋಗಿ” ಗ್ಲಾಸುಗಳನ್ನು ಹಿಡಿದು ನಿಂತ ಕುಡುಕರನ್ನು ಉದ್ದೇಶಿಸಿ ಮಾತು ಮುಂದುವರೆಸಿದ.

ಆ ಮಿಕ್ಕದನ್ನು ಕುಡಿದು ಮನೆಗೆ ಹೋಗಿ ಹಾಯಾಗಿ ಮಲಗಿ, ಯಾರೇ ಆಗಲಿ ಕಳ್ಳತನದಿಂದ ಈ ನಿಯಮವನ್ನು ಮುರಿದು ಸಾರಾಯಿ ಮಾರಿದರೆ ಅವರಿಗೂ ಕುಡಿದವರಿಗೂ ಕಠಿಣ ಶಿಕ್ಷೆಯಾಗುತ್ತದೆ. ಕಾನೂನಿನ ವಿರುದ್ಧ ನೀವು ಯಾವುದೇ ಕೆಲಸ ಮಾಡಿ ಅದು ನನಗೆ ಗೊತ್ತಾಗುತ್ತದೆ. ಜಾಗ್ರತೆಯಾಗಿರಿ… ಹೂಂ ಇಲ್ಲೇ ಯಾಕೆ ನಿಂತಿದ್ದೀರಿ. ಹೋಗಿ ಅಂಗಡಿಯನ್ನು ಮುಚ್ಚಿ.”

ಸಾರಾಯಿ ಮಾರುವವರು ಲಗುಬಗೆಯಿಂದ ಅಂಗಡಿ ಮುಚ್ಚುವ ಕೆಲಸದಲ್ಲಿ ನಿರತರಾದರು. ಕುಡುಕರು ತಮ್ಮ ತಮ್ಮ ಮಿಕ್ಕ ಪೇಯ ಕುಡಿದು ಅಲ್ಲಿಂದ ಓಡಿದರು. ತಿನಿಸುಗಳನ್ನು ಮಾರುವ ಅಂಗಡಿಯವರು ತಮ್ಮ ವ್ಯಾಪಾರವನ್ನು ಅಲ್ಲಿಗೇ ನಿಲ್ಲಿಸಿದರು. ಎಲ್ಲರೂ ಅಲ್ಲಿಂದ ಹೋಗಿ ಸಾರಾಯಿ
ಅಂಗಡಿಗೆ ದಪ್ಪನೆಯ ಬೀಗ ಹಾಕುವವರೆಗೂ ಅಲ್ಲೇ ನಿಂತಿದ್ದ ತೇಜಾ, ಅವನ ಹಿಂದೆ ಬಂದ ಯುವಕರು ದೂರದಲ್ಲಿ ನಿಂತು ತಮ್ಮ ತಮ್ಮಲ್ಲೇ ಏನೇನೋ ಮಾತಾಡಿಕೊಳ್ಳುತ್ತಿದ್ದರು.

ಬಿಳಿಯ ಗಡ್ಡದ ಮುದುಕ ಬಾಯಿ ಕಟ್ಟಿದ್ದವನಂತೆ ಇದೆಲ್ಲವನ್ನೂ ನೋಡುತ್ತಿದ್ದ. ಈ ಇನ್ಸ್‌ಪೆಕ್ಟರನಿಗೆ ಇಂತಹ ಎದೆಗಾರಿಕೆ ಇರಬಹುದೆಂದು ಅವನು ಕನಸುಮನಸಿನಲ್ಲಿಯೂ ಊಹಿಸಿರಲಿಲ್ಲ. ಇಬ್ಬರೂ ಕಲೆತು ಮತ್ತೆ ಮುಂದೆ ನಡೆಯಲಾರಂಭಿಸಿದಾಗ ಆವರೆಗೆ ಆದುದೆಲ್ಲಾ ನಿಜವೆಂದು ತನಗೆ ತಾನೆ ಹೇಳಿಕೊಂಡು ಪ್ರಶಂಸೆಯ ನೋಟದಿಂದ ತೇಜಾನನ್ನು ನೋಡುತ್ತಾ ಹೇಳಿದ.

“ನೀವು…”

“ಮತ್ತೆ ಅದೇ ಮಾತು ನೀವು ಅಲ್ಲ ನೀನು” ಹಗುರ ನಗೆ ನಗುತ್ತಾ ಆತ ಆರಂಭಿಸಿದ ಮಾತನ್ನು ಸರಿಪಡಿಸಿದ. ಅದನ್ನು ಅರ್ಥಮಾಡಿಕೊಳ್ಳಲು ಹಿರಿಯನಿಗೆ ಕೆಲಕ್ಷಣಗಳು ಹಿಡಿದವು ಅರ್ಥವಾದ ನಂತರ ಮನಃಪೂರ್ವಕವಾಗಿ ಅವನ ಬೆನ್ನು ತಟ್ಟತ್ತಾ ಮಾತು ಮುಂದುವರೆಸಿದ.

“ನೀನು ಇಂತಹ ಎದೆಗಾರನೆಂದುಕೊಂಡಿರಲಿಲ್ಲ. ಈಗ ನಾನು ನಿನ್ನ ಪ್ರತಿ ಮಾತನ್ನೂ ನಂಬುತ್ತೇನೆ. ನಡಿ ಮುಂದೇನು ಮಾಡುತ್ತಿಯೇ ನೋಡುವ”

ಬಡವರ ಗುಡಿಸಲ, ಮನೆಗಳ ನಡುವೆ ಒಂದು ಸಾಕಷ್ಟು ದೊಡ್ಡ ಮನೆಯಲ್ಲಿತ್ತು ಸಾರಾಯಿಖಾನೆ. ದೊಡ್ಡ ಹಜಾರದಲ್ಲಿ ಅಲ್ಲಲ್ಲಿ ಜನ ಕುಳಿತು ಕುಡಿಯುತ್ತಿದ್ದರು. ತೇಜಾ ಎರಡು ಹೆಜ್ಜೆ ಒಳಗಿಡುವುದರಲ್ಲಿ ಅವನ ಎದುರು ಬಂದ ಸಿದ್ಧಾನಾಯಕ ಎರಡೂ ಕೈಗಳಿಂದ ತನ್ನ ಪೇಟಾ ಸರಿಪಡಿಸಿಕೊಳ್ಳುತ್ತಾ ಅಧಿಕಾರವಾಣಿಯಲ್ಲಿ ಕೇಳಿದ.

“ಆ ಸಾರಾಯಿ ಖಾನೆಯಲ್ಲಿ ಏನೋ ಶೂರತ್ವ ತೋರಿಬಂದಿರಂತೆ”

ಆ ಮಾತನ್ನು ಕೇಳಿಸಿಕೊಳ್ಳದವನಂತೆಯೇ ನಯವಾದ ಆಶ್ಚರ್ಯದ ದನಿಯಲ್ಲಿ ಹೇಳಿದ ತೇಜಾ.

“ಓ ನೀವೇ ಪ್ರೆಸಿಡೆಂಟ್ ಸಾಹೇಬರೇ! ಇಲ್ಲೇನು ಮಾಡುತ್ತಿದ್ದೀರಿ!”

“ನಾಟಕ ಬೇಡ ಇನ್ಸ್‌ಪೆಕ್ಟರ್‌! ಇವೆರಡೂ ನನ್ನ ಸಾರಾಯಿಖಾನೆಗಳು. ಇಲ್ಲಿ ನಿನ್ನ ಕಾನೂನು ತೋರಿಸಬೇಡ. ರಾತ್ರಿ ಬಹಳವಾಗಿದೆ ಹೋಗಿ ಮಲಗು” ಅಧಿಕಾರ ತುಂಬಿತ್ತು. ನಾಯಕನ ದನಿಯಲ್ಲಿ, ಒಮ್ಮೆಲೇ ತನ್ನ ಕಂಠವನ್ನು ಬದಲಾಯಿಸಿ ಎತ್ತರದ ದನಿಯಲ್ಲಿ ಹೇಳಿದ ತೇಜಾ.

“ಮಾರಾಟ ನಿಲ್ಲಿಸಿ! ಕುಡಿಯುತ್ತಿರುವವರು ಮನೆಗೆ ಹೋಗಿ, ಇಲ್ಲದಿದ್ದರೆ ಎಲ್ಲರನ್ನೂ ಪೋಲಿಸ್ ಸ್ಟೇಷನ್‌ಗೆ ಎಳೆದುಕೊಂಡು ಹೋಗಬೇಕಾಗುತ್ತದೆ.

“ನಾ ಹೇಳಿದ್ದು ಕೇಳಿಸುತ್ತಿಲ್ಲವೇ?” ಕಿರುಚಿ ಹೇಳಿದ ನಾಯಕ ನಯವಾಗಿ ಅವನನ್ನು ಪಕ್ಕಕ್ಕೆ ನೂಕಿ ಮುಂದೆ ಬಂದ ತೇಜಾ ಸಾರಾಯಿ ಕುಡಿಯಿತ್ತಿದ್ದವನ ಹೊಟ್ಟೆಗೆ ಬಲವಾಗಿ ಒದ್ದ. ಆ ರಭಸಕ್ಕೆ ಸ್ವಲ್ಪ ಮುಂದೆ ಬಿದ್ದ ಅವನು ಎಲ್ಲವನ್ನೂ ಮರೆತು ಅಲ್ಲಿಂದ ಓಡಿದ. ಮಿಕ್ಕ ಕುಡುಕರ ಹತ್ತಿರ ಅವನು ಹೋಗುವ ಮೊದಲು ಅಪಾಯವನ್ನು ಅರಿತ ಅವರು ಅಲ್ಲಿಂದ ಜಾಗ ಖಾಲಿ ಮಾಡಿದರು. ಅಪನಂಬಿಕೆಯಿಂದ ಅದನ್ನೆಲ್ಲಾ ನೋಡುತ್ತಿದ್ದ ನಾಯಕ ಒಮ್ಮೆಲೆ ಚೇತರಿಸಿಕೊಂಡಂತೆ ಕೂಗಿದ.

“ನಾನು ಇಲ್ಲಿನ ಪಂಚಾಯತಿಯ ಪ್ರೆಸಿಡೆಂಟ್! ನಾನೇನೆಂದುಕೊಂಡೆ. ಕಲೆಕ್ಟರ್, ಎಸ್‌ ಪಿ, ನನ್ನ ಸ್ನೇಹಿತರು. ನನ್ನೊಡನೆಯೇ ಹೀಗೆ ವರ್ತಿಸುತ್ತೀಯಾ, ನಾಳೆ ನಿನ್ನ ಕೆಲಸ ಮಾಡುತ್ತೇನೆ” ಮೊದಲ ಸಲ ಅವನನ್ನು ಪರೀಕ್ಷಾತ್ಮಕವಾಗಿ ನೋಡಿ ಶಾಂತ ದನಿಯಲ್ಲಿ ಹೇಳಿದ ತೇಜಾ

“ನಾಯಕರೇ! ನೀವಿನ್ನೂ ಬಂಡೇರಹಳ್ಳಿ ಬಿಟ್ಟು ಹೊರಗೆ ಹೋದ ಹಾಗಿಲ್ಲ. ಕಾನೂನೆಂದರೆ ಎಲ್ಲರಿಗೂ ಒಂದೇ. ಪ್ರಧಾನಮಂತ್ರಿಯವರು ಅನೈತಿಕ ಕೆಲಸ ಮಾಡಿದರೆ ಅವರನ್ನು ಜೈಲಿನಲ್ಲಿ ಹಾಕುವ ಕಾಲವಿದು. ಅವರೆದುರು ಬಂಡೇರಹಳ್ಳಿಯ ಪಂಚಾಯತಿಯ ಪ್ರೆಸಿಡೆಂಟ್ ಯಾವ ಲೆಖ್ಖ… ಒಂದು ಸಲ ಹೊರಗೆ ನೋಡಿ ನಿಮ್ಮ ಕಾರುಭಾರವನ್ನು ಬಯಲು ಮಾಡಲು ಎಷ್ಟು ಜನ ಸೇರಿದ್ದಾರೆ. ನಾಳೆ ರಾಮನಗರದಲ್ಲಿ ನೀವು ಇದೇ ಮಾತನ್ನು ಹೇಳಬೇಕು. ಕಲೆಕ್ಟರ್ ಸಾಹೇಬರಿಗೆ, ಎಸ್.ಪಿ. ಸಾಹೇಬರಿಗೆ ಲಂಚ ತಿನ್ನಿಸಿ ಈ ವ್ಯವಹಾರವನ್ನು ನಡೆಸುತ್ತಿದ್ದೇನೆಂದು. ಅದರಿಂದ ಅವರ ಕೆಲಸಗಳು ಹೋಗುವುದೇ ಅಲ್ಲ ಜೈಲಿನ ಕಂಬಿಗಳನ್ನೂ ಲೆಕ್ಕಿಸಬೇಕಾಗುತ್ತದೆ… ಈಗ ಈ ವ್ಯವಾಹರ ನಿಲ್ಲಿಸುತ್ತಿರೋ ಅಥವಾ ಬ್ಯಾರಲುಗಳೊಂದಿಗೆ ಪೋಲೀಸ್ ಸ್ಟೇಷನ್ ಬರುತಿರೋ”

ಆ ಹಳ್ಳಿಯ ಪಂಚಾಯತಿ ಪ್ರೆಸಿಡೆಂಟ್ ಅವನ ಪ್ರತಿ ಮಾತನ್ನೂ ನಂಬಿದ.

ಸಿಟ್ಟಿನ ದನಿಯಲ್ಲಿ ತನ್ನ ಅನುಚರರಿಗೆ ವ್ಯಾಪಾರ ನಿಲ್ಲಿಸುವಂತೆ ಆದೇಶಿಸಿದ. ಆ ಮನೆಗೆ ಬೀಗ ಹಾಕುವವರೆಗೆ ಅಲ್ಲಿದ್ದ ತೇಜಾ ಹೋಗುವಾಗ ನಾಯಕರಿಗೆ ಕೇಳಿದ

“ನಾಳೆ ನನ್ನ ಜೀಪಿನಲ್ಲೇ ರಾಮನಗರಕ್ಕೆ ಬರುತ್ತೀರೋ?”

ಅದಕ್ಕೆ ಆತ ಏನೂ ಉತ್ತರಿಸಲಿಲ್ಲ. ಬಿಳಿಯ ಗಡ್ಡದ ಮುದುಕನೊಡನೆ ಅವನು ಮುಖ್ಯರಸ್ತೆಗೆ ಬಂದಾಗ ದೂರದಲ್ಲಿ ನಿಂತ ಯುವಕರ ಗುಂಪು ಹೆಚ್ಚಾದಂತೆ ಕಂಡಿತು.

ರಸ್ತೆಯಲ್ಲಿ ಕೆಲ ಹೆಜ್ಜೆಗಳು ನಡೆದಮೇಲೆ ಹೇಳಿದ ಹಿರಿಯ

“ಈ ನಾಯಕ ಸಾಮಾನ್ಯನಲ್ಲ. ರಾಮನರಗದಲ್ಲಿ ಅವನಿಗೆ ಎಲ್ಲಾ ಅಧಿಕಾರಿಯರ ಪರಿಚಯವಿದೆ” ಮುಂದೇನಾಗುವುದೋ ಎಂಬ ಭಯವಿತ್ತು ಅವನ ದನಿಯಲ್ಲಿ. ಗಂಭೀರ ದನಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ ತೇಜಾ

“ಒಂದು ಒಳ್ಳೆಯ ಕೆಲಸ ಮಾಡಲು ಬಹಳ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಂತಹದನ್ನೆಲ್ಲಾ ಎದುರಿಸಲು ನಾನು ಸಿದ್ಧನಾಗಿಯೇ ಬಂದಿದ್ದೇನೆ”

ಆ ಮಾತು ಹಳ್ಳಿಯ ಹಿರಿಯನ ಮೇಲೆ ಬಹಳ ಪ್ರಭಾವ ಬೀರಿತು. ತುಂಬು ಹೃದಯದಿಂದ ಹೇಳಿದ

“ನೀನು ಬಂಡೇರಹಳ್ಳಿಯ ಅವಸ್ಥೆಯನ್ನು ಸುಧಾರಿಸಬಹುದು. ನಿನಗೆ ನನ್ನ ಪೂರ್ಣ ಸಹಕಾರವಿದೆ. ನನ್ನದೇ ಅಲ್ಲ ನಮ್ಮ ಹಿಂದೆ ತಿರುಗುತ್ತಿದ್ದಾರಲ್ಲ ಯುವಕರದೂ, ಆ ಹುಡುಗರ ಒಬ್ಬರ ಹಿಂದೆ ಹತ್ತು ಹತ್ತು ಜನರಿದ್ದಾರೆ.”

“ಹಾಗಾದರೆ ನೀವು ಭೇಟಿಯಾದದ್ದು ನನ್ನ ಪುಣ್ಯ” ಹೇಳಿದ ತೇಜಾ.

“ನಾ ನಿನ್ನೊಡನೆ ಜಗಳವಾಡಲು ಬಂದಿದ್ದೆ. ಕಲ್ಲಕ್ಕನನ್ನು ಹಿಡಿಯಲು ಎಷ್ಟೋ ಪ್ರಯತ್ನಗಳು ನಡೆದಿವೆ. ಯಾವುದೂ ಸಫಲವಾಗಿಲ್ಲ ಎಂಬ ಮಾತನ್ನು ಕೇಳಿದ್ದೆ. ಮೊನ್ನೆ ಆದ ಮೂರು ಕೊಲೆಗಳ ಹಿಂದೆ ಕಲ್ಲಕ್ಕನ ಕೈವಾಡವಿದೆ ಎಂಬುವುದು ಎಲ್ಲರಿಗೂ ಗೊತ್ತು. ಅದರ ವಾಸನೆ ಹಿಡಿದು ಸರಕಾರ ನಿನ್ನ ಇಲ್ಲಿ ಹಾಕಿರಬಹುದು ಎಂದುಕೊಂಡಿದ್ದೆ” ಆವೇಶದಲ್ಲಿ ಮನಸಿನಲ್ಲಿದ್ದ ಮಾತನ್ನು ಹೇಳಿದ ಹಿರಿಯ. ಆ ಮಾತು ಅಷ್ಟು ಮುಖ್ಯವಲ್ಲವೆಂಬಂತೆ ಹೇಳಿದ ತೇಜಾ.

“ನನಗೆ ಹಸಿವಾಗುತ್ತಿದೆ.”

ಆವರೆಗಾದದ್ದು ಎಲ್ಲವನ್ನೂ ಮರೆತಂತೆ ಅಚ್ಚರಿಯ ದನಿಯಲ್ಲಿ ಕೇಳಿದ ಹಿರಿಯ.

“ನಾನದನ್ನು ಮರೆತೇಹೋಗಿದ್ದೆ… ಹಾಗಾದರೆ ನೀವೀಗ ಊಟ ಮಾಡುವುದೆಲ್ಲಿ?”

ಅದರ ಬಗ್ಗೆಯೇ ಯೋಚಿಸಿದವನಂತೆ ಹೇಳಿದ ತೇಜ.

“ಏನು ಸಿಕ್ಕರದು ಸ್ವಲ್ಪ ತಿಂದು ಮಲಗುತ್ತೇನೆ”

ಹೇಳಬೇಕೋ ಬೇಡವೋ ಎಂಬಂತೆ ಹಿಂದುಮುಂದೇ ನೋಡಿ ಸರಿಯಾದ ಶಬ್ದಗಳಿಗಾಗಿ ಹುಡುಕಾಡಿ ಹೇಳಿದ ಹಿರಿಯ.

“ನೀವು ನಮ್ಮ ಮನೆಯಲ್ಲಿ…”

“ಊಟ ಮಾಡಬಹುದೆ! ಅದಿರಂದ ಯಾರಿಗೂ ಎಂತಹ ತೊಂದರೆಯೂ ಆಗುವದಿಲ್ಲವೆ!” ಅವನಿಗೆ ಕಷ್ಟ ಬೇಡವೆಂಬಂತೆ ತಾನೇ ಆತುರದ ದನಿಯಲ್ಲಿ ಅವನ ಮಾತನ್ನು ಮುಗಿಸಿದ. ಶಬ್ದಗಳಿಗೆ ನಿಲುಕದಂತಹ ಭಾವಗಳು ತುಂಬಿಬಂದವು. ಬಿಳಿಗಡ್ಡದ ಮುದುಕನ ಮುಖದಲ್ಲಿ ಹಲವು ಕ್ಷಣಗಳ ನಂತರ ಅವನ ಬಾಯಿಗೆ ಮಾತು ಬಂತು.

“ನೀವು ನಮ್ಮ ಮನೆ…”

“ಮತ್ತೆ ಮತ್ತೆ ತಾವು ತಪ್ಪು ಮಾಡುತ್ತಿದ್ದೀರಿ.”

ಮನಃಪೂರ್ವಕವಾಗಿ ನಕ್ಕು ಹೇಳಿದ ಹಿರಿಯ.

“ನೀನು ನಮ್ಮ ಮನೆಯಲ್ಲಿ ಊಟ ಮಾಡುತ್ತೀಯಾ… ನಾವು..”

“ಸಾಕು! ಸಾಕು! ಮಾತು ಅಲ್ಲಿಗೇ ನಿಲ್ಲಲಿ. ನೀವು ಮನುಷ್ಯರಲ್ಲವೇ. ನಾನೂ ನಿಮ್ಮಂತೆಯೇ ಮನುಷ್ಯ, ನನಗ್ಯಾವ ವಿಶಿಷ್ಟ ರೆಕ್ಕೆಪುಕ್ಕಗಳು, ಕವಚ ಕುಂಡಲಗಳು ಹುಟ್ಟಿಕೊಂಡಿಲ್ಲ… ನಿಮಗೆ ಕಷ್ಟವಾಗುವ ಹಾಗಿದ್ದರೆ ಅದು ಬೇರೆ ಮಾತು.”

ಅವನ ಮಾತನ್ನು ನಡುವೆಯೇ ತಡೆದು ಮಾತಾಡಿದ ತೇಜಾ ನಿರಾಸೆಯ ದನಿಯಲ್ಲಿ ತನ್ನ ಮಾತನ್ನು ಮುಗಿಸಿದ.

“ಹಂಗೇನೂ ಇಲ್ಲ. ನನ್ನದು ದೊಡ್ಡ ಸಂಸಾರ. ಒಬ್ಬರು ಊಟ ಮಾಡಿದರೆ ಯಾರಿಗೇನೂ ಕಡಿಮೆಯಾಗುವುದಿಲ್ಲ… ಆದರೆ ನಮ್ಮ ಮನೆಯ ಊಟ ನಿನಗೆ ಹಿಡಿಸುತ್ತದೆಯೋ ಎಂಬ ಅನುಮಾನ” ಅವಸರದ ದನಿಯಲ್ಲಿ ಮಾತು ಆರಂಭಿಸಿ ಅವನೂ ತನ್ನ ಅಳಕಿನೊಡನೆ ಅದನ್ನು ಮುಗಿಸಿದ. ಅದಕ್ಕೆ ಯಾವ ಸಂಕೋಚವೂ ಇಲ್ಲದೇ ತನ್ನಭಿಪ್ರಾಯ ವ್ಯಕ್ತಪಡಿಸಿದ ತೇಜಾ.

“ಮನುಷ್ಯ ಬದುಕಲು, ಆರೋಗ್ಯವಂತನಾಗಿ ಉಸಿರಾಡುತ್ತಿರಲು ಊಟ ಬೇಕಷ್ಟೆ, ನಾನು ಊಟ ಮಾಡಲೆಂದೇ ಬದುಕಿರುವವರಲ್ಲಿ ಒಬ್ಬನಲ್ಲ.”

“ಸಂತೋಷ! ಬಾ ಹೊಟ್ಟೆ ತುಂಬ ಊಟ ಮಾಡು… ನಿನ್ನ ಇವತ್ತಿನ ಕೆಲಸಗಳನ್ನು ನೋಡಿದರೆ ಒಳ್ಳೆಯ ಔತಣ ಕೊಡಬೇಕೆನಿಸುತ್ತಿದೆ. ಆದರೆ ಈಗ ಅದಕ್ಕೆ ಸಮಯವಿಲ್ಲ” ತುಂಬುಮನಸ್ಸಿನಿಂದ ಹೇಳಿದ ಹಿರಿಯ.

ಇಬ್ಬರೂ ಅವನ ಮನೆಗೆ ಹೋದರು. ದೊಡ್ಡ ಮನೆ. ಮನೆಗೆ ಯಾರು ಬಂದಿದ್ದಾರೆಂದು ತಿಳಿದಾಕ್ಷಣ ಕೆಲ ಹೆಂಗಸರು ತೇಜಾನನ್ನು ಇಣಕಿ ನೋಡಿಹೋದರು. ಅವನ ಬೆಳೆದ ಇಬ್ಬರು ಮೊಮ್ಮಕ್ಕಳು, ಒಬ್ಬ ಮಗ ಗೌರವದಿಂದ, ಸಂತಸಾತೀರೇಕದಿಂದ ಅವನಿಗೆ ಕೈಜೋಡಿಸಿ ನಮಸ್ಕರಿಸಿದರು. ಗೋಧಿಯ ರೊಟ್ಟಿ, ಸೊಪ್ಪಿನ ಹುಳಿ ಮತ್ತು ಅಲ್ಲಿಯದೇ ಪ್ರತ್ಯೇಕವಾದ ಚಟ್ನಿಯೊಡನೆ ಆರಂಭವಾದ ಊಟ ಅನ್ನ ಹುಳಿಯೊಡನೆ ಮುಗಿಯಿತು. ಮನೆಯ ಎಲ್ಲರೂ ಅವನ ಉಪಚಾರ ಮಾಡುವವರೆ, ಹೀಗೆ ಇಷ್ಟು ಜನ ಆತ್ಮೀಯರೊಡನೆ ಕುಳಿತು ಊಟ ಮಾಡಿ ಯಾವ ಕಾಲವಾಯಿತೋ ಎಂದುಕೊಂಡ ತೇಜಾನಿಗೆ ಇಂತಹ ಸುಖಸಂಸಾರವನ್ನು ದಿಕ್ಕುಪಾಲು ಮಾಡುವ ಅಧಿಕಾರ ಯಾರಿಗೂ ಇಲ್ಲ ಎನಿಸಿತು.

ಊಟದ ನಂತರ ಎಲೆ ಅಡಿಕೆಯ ಉಪಚಾರ, ಅದಾದಮೇಲೆ ಅವನ ಮನೆಯವರೊಂದಿಗೆಲ್ಲಾ ಹಾರ್ದಿಕವಾಗಿ ಮಾತಾಡಿ ತಾನು ಮತ್ತೆ ಬರುವುದಾಗಿ ಅಲ್ಲಿಂದ ಹೊರಟ ತೇಜ. ಅವನನ್ನು ಮನೆಯವರೆಗೆ ಬಿಡಲು ಮುದುಕ ಮತ್ತು ಅವನ ಹಿರಿಯ ಮೊಮ್ಮಗ ಬಂದಿದ್ದರು. ನಾಳೆ ಅವನಿಗಾಗಿ ಒಬ್ಬ ಪ್ರತ್ಯೇಕ ಆಳನ್ನು ಹುಡುಕಿಕೊಡುವುದಾಗಿ, ಅವಳು ಅಡುಗೆ, ಮುಸರೆ ಅಲ್ಲದೇ ಮನೆಯ ಇನ್ನಿತರ ಕೆಲಸಗಳನ್ನೆಲ್ಲಾ ನೋಡಿಕೊಳ್ಳುವುದಾಗಿ ಹೇಳಿದನಾತ.

ಬಹಳ ದಣಿದಿದ್ದರೂ ಆ ರಾತ್ರಿ ತೇಜಾನಿಗೆ ಬೇಗ ನಿದ್ದೆ ಹತ್ತಲಿಲ್ಲ. ಗಾಢವಾದ ನಿದ್ದೆಯಲ್ಲಿದ್ದಾಗ ಪೇದೆ ಬಂದು ಬೆಂಗಳೂರಿನಿಂದ ಅರ್‍ಜೆಂಟ್ ಫೋನು ಬಂದಿದೆ ಎಂದು ಎಬ್ಬಿಸಿದ್ದ. ಸ್ಕ್ವಾಡ್‌ನ ಮುಖ್ಯಸ್ಥರು ಶ್ರೀವಾಸ್ತವ ದೇವನಹಳ್ಳಿಯ ವಿಷಯ ತಿಳಿಸುತ್ತಲೇ ಎಲ್ಲವನ್ನೂ ಮರೆತು ಪೇದೆಗೆ ಹೇಳಿ ಜೀಪಿನಲ್ಲಿ ಅಲ್ಲಿಗೆ ಓಡಿದ್ದ.

ಪಟವಾರಿಯವರ ಮನೆಯಲ್ಲಿ ಮಾತುಕತೆ ಮುಗಿದ ಮೇಲೆ ಸ್ಕ್ವಾಡಿನ ಮುಖ್ಯಸ್ಥರೊಡನೆ ಅವನೊಬ್ಬನೇ ಬಹಳ ಹೊತ್ತು ವಿಚಾರ ವಿಮರ್ಶೆ ನಡೆಸಿದ್ದ. ತಾನು ಬಂಡೇರಹಳ್ಳಿಯಲ್ಲಿ ಮಾಡುವ ಕೆಲಸಕ್ಕೆ ಯಾವ ರಾಜಕೀಯ ನಾಯಕರಾಗಲಿ ರಾಮನಗರದ ಕಲೆಕ್ಟರ್‌, ಎಸ್.ಪಿ.ಯೇ ಆಗಲಿ ಅಡ್ಡಗಾಲು ಹಾಕಬಾರದೆಂದು ತನಗಲ್ಲಿ ಸ್ಟೇಚ್ಛೆಯಿಂದ ಕೆಲಸ ಮಾಡುವ ಅವಕಾಶ ಒದಗಿಸಿಕೊಡಬೇಕೆಂದು ಹೇಳಿದ್ದ. ಅವನಲ್ಲಿ ಏನೇನು ಮಾಡಬಯಸಿದ್ದಾನೆ, ಬಂಡೇರಹಳ್ಳಿಗೆ ಏನೇನು ಬೇಕೆಂದು ತೇಜಾ ಹೇಳಿದ್ದನೆಲ್ಲಾ ಏಕಚಿತ್ತದಿಂದ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು. ಅವನು ಹೇಳಿದ್ದರ ಬಗ್ಗೆ ಯೋಚಿಸಿ ತಾವು ಆದಷ್ಟು ಬೇಗ ಮುಖ್ಯಮಂತ್ರಿಯವರೊಡನೆ ಮಾತಾಡಿ ಅವನ ಬೇಡಿಕೆಗಳು ಅವರಿಗೆ ವಿವರಿಸಿ ಆದಷ್ಟು ಬೇಗ ಅದರ ಕುರಿತು ಏನಾದರೂ ಮಾಡುವ ಆಶ್ವಾಸನೆ ನೀಡಿದ್ದರು. ಅವರು ತಮ್ಮ ವಾಹನದ ಕಡೆ ಹೆಜ್ಜೆ ಹಾಕುತ್ತಾ ಹೇಳಿದ್ದರು.

“ಈ ದೇವಿಯಾದವನನ್ನು ಮುಗಿಸಿ ಕಲ್ಯಾಣಿ ಪುಣ್ಯ ಕಟ್ಟಿಕೊಂಡಳು! ಈ ದರಿದ್ರ ದೇಶಕ್ಕೆ ಚದುಲಿನ ಹಾಗೆ ತಗಲಿಕೊಂಡಿದ್ದ.”

ಅದಕ್ಕೆ ಏನೂ ಹೇಳಿರಲಿಲ್ಲ ತೇಜಾ. ಅದರಿಂದ ಅವನ ಮನದಲ್ಲೂ ಹಳೆಯ ಯೋಚನೆಗಳು ಮರುಕಳಿಸಿ ಹೋಗಿದ್ದವು.

ಅಲ್ಲಿಂದ ಅವನು ಬಂಡೇರಹಳ್ಳಿಗೆ ಮರಳಿದಾಗ ಬೆಳಗಿನ ಆರೂವರೆಯಾಗುತ್ತಿತ್ತು. ಎಲ್ಲ ಬಗೆಯ ಯೋಚನೆಗಳು ಅವನ ದಣಿವನ್ನು ದೂರ ಓಡಿಸಿಬಿಟ್ಟಿದ್ದವು. ಪೋಲೀಸ್ ಸ್ಟೇಷನ್‌ನೆದುರು ಜೀಪು ನಿಂತಾಗ ಬಾಗಿಲು ಹಾಕಿಕೊಂಡು ಮಲಗಿದ್ದ ಪೇದೆ ಇನ್ನೂ ನಿದ್ದೆಯಿಂದ ಎಚ್ಚರಗೊಂಡಿರಲಿಲ್ಲ. ಅವನನ್ನು ಎಬ್ಬಿಸದೇ ನಡೆದೇ ಮನೆಗೆ ಬಂದ.

ಬಟ್ಟೆ ಬದಲಿಸಿ ಬೆಳಗಿನ ವಿಧಿಗಳನ್ನು ಆರಂಭಿಸಿದಾಗ ಅಲ್ಲಿನ ಜನರು ಅನುಭವಿಸುತ್ತಿರುವ ಕಷ್ಟದ ಅರಿವಾಯಿತು. ನೀರಿಗಾಗಿ ಪರದಾಟ, ವಾಂತಿ ಬರಿಸುವಂತಹ ಶೌಚಾಲಯ. ಅಲ್ಲಿ ಇದ್ದುದರಲ್ಲೇ ಇದು ಒಳ್ಳೆ ಮನೆ ಎಂದು ಹೇಳಿದ್ದ ಅಲ್ಲಿಯವನೊಬ್ಬ, ಒಳ್ಳೆಯ ಮನೆಯದೇ ಈ ಗತಿಯಾದರೆ ಬೇರೆ ಮನೆಗಳ ಗತಿ ಹೇಗಿರಬಹುದು ಎಂದು ಯೋಚಿಸುತ್ತಲೇ ತಡೆಯಲಾಗದಂತಹ ನೈಸರ್ಗಿಕ ವಿಧಿಗಳನ್ನು ಮುಗಿಸಿದ. ಸ್ನಾನಕ್ಕೆ ಪಾತಾಳಕ್ಕೆ ಸೇರಿದ ಬಾವಿಯಿಂದ ನೀರು ತೋಡಬೇಕು ಎಂದುಕೊಳ್ಳುತ್ತಿರುವಾಗ ಬಿಳಿಯ ಗಡ್ಡದ ಹಿರಿಯ ಬಂದ. ಅವನೊಡನೆ ಒಬ್ಬ ನಲವತ್ತನ್ನು ಸಮೀಪಿಸುತ್ತಿದ್ದ ಹೆಂಗಸಿದ್ದಳು. ಸ್ನಾನದ ವಿಷಯ ಮರೆತು ಹಿರಿಯನೊಡನೆ ಕುಳಿತು ತಾನಲ್ಲಿ ಇದ್ದುದರಲ್ಲೇ ಸುಖವಾಗಿ ಹೇಗೆ ಬಾಳಬಹುದೆಂಬ ಮಾತು ಆರಂಭಿಸಿದ.

ಅಡುಗೆಮನೆಯಲ್ಲದೇ ಎರಡು ದೊಡ್ಡ ಕೋಣೆಗಳಿರುವ ಮನೆಯದು. ಅದನ್ನೊಮ್ಮೆ ಸುತ್ತು ಹಾಕಿ ಒಂದು ಮನೆಗೆ ಆಗತ್ಯವಾಗಿ ಬೇಕಾದ ವಸ್ತುಗಳ ತಟ್ಟೆಯನ್ನು ಒರೆಸತೊಡಗಿದ. ಅವನ ಜತೆಗೆ ಬಂದ ಹೆಣ್ಣು ಅದರಲ್ಲಿ ತನ್ನ ಸಲಹೆಗಳನ್ನು ಸೇರಿಸುತ್ತಿದ್ದಳು. ಅದೆಲ್ಲಾ ತಲೆನೋವು ಬೇಡ, ನೀನೇ ಎಲ್ಲಾ ವ್ಯವಸ್ಥೆ ಮಾಡೆಂದು ಆ ಹಿರಿಯನಿಗೆ ಹಣ ಕೊಟ್ಟ ತೇಜಾ, ಎಲ್ಲಾ ಸಾಮಾನುಗಳನ್ನು ರಾಮನಗರದಿಂದಲೇ ತರಬೇಕು. ತನ್ನ ಮೊಮ್ಮಗನಿಂದ ಎಲ್ಲಾ ತರಿಸುವುದಾಗಿ ಹೇಳಿ ಹಣವನ್ನು ಕಿಸೆಯಲ್ಲಿ ಹಾಕಿಕೊಂಡ ಹಿರಿಯ ಆಗ ಆತನ ಹೆಸರು ಗುಂಡು ಎಂದು ಗೊತ್ತಾಯಿತು. ಅದಕ್ಕೆ ಹಿಂದೆ ಮುಂದೆ ಏನೂ ಇಲ್ಲ ಬರಿ ಗುಂಡು, ಹಿಗ್ಯಾಕೆಂದು ಕೇಳಿದಾಗ, ಅವನ ತಂದೆ ತಾಯಿಗೆ ಹುಟ್ಟಿದ ಮಕ್ಕಳೆಲ್ಲಾ ಆರು ತಿಂಗಳೊಳಗೆ ಸತ್ತು ಹೋಗುತ್ತಿದ್ದರಂತೆ ಹಾಗೆ ಐವರು ಮಕ್ಕಳು ತೀರಿಕೊಂಡ ಮೇಲೆ ಇವನು ಹುಟ್ಟಿದ್ದ. ಇವನಾದರೂ ಗುಂಡುಕಲ್ಲಿನಂತೆ ಬದುಕಿರಲಿ ಎಂದು ಆಸೆಪಟ್ಟಿದ್ದರಂತೆ. ತನ್ನೆದುರು ಎಷ್ಟೋ ಜನ ತೀರಿಕೊಂಡರು ತಾನಿನ್ನು ಗುಂಡಕಲ್ಲಿನ ಹಾಗೆ ಇದ್ದೀನೆಂದು ನಗುತ್ತಲೇ ಹೇಳಿದ ಅವನು ಶೌಚಾಲಯವನ್ನು ಶುಚಿಮಾಡಿಸುವ ಕೆಲಸ ಈಗಲೇ ಮಾಡಿಸುವುದಾಗಿ ಹೊರಹೋದ.

ಸ್ನಾನ ಮುಗಿಸಿ ಸ್ವಚ್ಛವಾದ ಪ್ಯಾಂಟು, ಟೀಶರ್ಟನ್ನು ತೊಟ್ಟು ಅವಳಿಂದ ಆದಷ್ಟು ಮನೆ ಶುಚಿ ಮಾಡಬೇಕೆಂದು ಗುಂಡು ತಾತ ಕೆಲಸ ಮುಗಿಸಿದ ಬಳಿಕ ಮನೆ ಬೀಗ ಹಾಕಿ ಯಾರ ಕೈಯಲ್ಲಾದರೂ ಅದನ್ನು ಕಳುಹಿಸುವಂತೆ ಹೇಳಿ ಪೋಲೀಸ್ ಸ್ಟೇಷನಿಗೆ ಹೊರಟ.

ತೇಜಾ ಪೋಲಿಸ್ ಸ್ಟೇಷನ್ನಿಗೆ ಬಂದಾಗ ಅಲ್ಲಿ ಮೂವರು ಪೇದೆಯರು ಮಾತ್ರವಿದ್ದರು. ಇನ್ನೂ ಎಸ್.ಐ., ಎಚ್.ಸಿ. ಬಂದಿರಲಿಲ್ಲ. ಇವರು ಕೂಡಾ ಇಲ್ಲಿ ನಿಷ್ಪ್ರಯೋಜಕವೇನೋ ಎನಿಸುತ್ತಿದ್ದಾಗ ಮರೆತದ್ದೇನೋ ಹೊಳೆದಂತಾಯಿತವನಿಗೆ. ಸಾರಾಯಿಖಾನೆಗಳು ತೆಗೆದು ಸಾರಾಯಿಯಾದರೂ ಮಾರುತ್ತಿದ್ದಾರೆನೋ ನೋಡಿ ಬರಲು ಇಬ್ಬರನ್ನು ಕಳುಹಿಸಿದ. ಆಗಿನ್ನೂ ಹತ್ತು ಕಾಲು. ತನ್ನ ರಾತ್ರಿಯ ಮಾತಿನ ಪರಿಣಾಮ ಏನಾದರೂ ಆಗಿದೆಯೇ ಇಲ್ಲವೇ ಎಂದು ನೋಡುವ ಆಸೆ.

ಕೋಣೆಯಲ್ಲೊಬ್ಬನೇ ಕುಳಿತ ತೇಜಾನ ತಲೆಯಲ್ಲಿ ತಾನು ಸ್ಕ್ವಾಡಿನ ಮುಖ್ಯಸ್ಥರೊಡನೆ ಆಡಿದ ಮಾತುಗಳು ಸುಳಿಯುತ್ತಿದ್ದವು. ಮುಖ್ಯಮಂತ್ರಿಯವರಿಗೆ ಎಲ್ಲವನ್ನೂ ವಿವರಿಸಿತ್ತೇನೆಂದು ಹೇಳಿದ್ದಾರವರು. ಆದರೆ ಅವರು ಸ್ಕ್ವಾಡಿನ ಮುಖ್ಯಸ್ಥರ ಮಾತನ್ನು ಒಪ್ಪಬಹುದೇ! ಈ ರಾಜಕಾರಣಿಯರ ಸ್ವಭಾವವನ್ನೇ ಅರಿಯುವುದು ಕಷ್ಟ. ಆದರೆ ಈ ಸಿ.ಎಂ. ಸಾಹೇಬರು ತಮ್ಮ ರಾಜ್ಯವನ್ನು ಪ್ರಗತಿಯ ಕಡೆ ಒಯ್ಯುತ್ತಿದ್ದಾರೆ ಅದರಲ್ಲಿ ಸಂದೇಹವಿಲ್ಲ. ಹಾಗೇ ಅವರೀ ಕ್ರಾಂತಿಕಾರಿ ಚಳುವಳಿಯನ್ನು ಬುಡಸಮೇತ ನಿರ್ಮೂಲ ಮಾಡುವ ಪಣ ಕೂಡ ತೊಟ್ಟಿದ್ದಾರೆ. ಅವರು ಕ್ರಾಂತಿಕಾರಿಯರ ಬಗ್ಗೆ ತೋರುತ್ತಿರುವ ಉದಾರ ನೀತಿಯ ಕಾರಣವಾಗೇ ಹಲವಾರು ಕ್ರಾಂತಿಕಾರಿಯರು ತಮ್ಮ ತಂಡದವರೊಡನೆ ಶರಣಾಗತರಾಗಿದ್ದಾರೆ. ಬಂಧಿಸಲ್ಪಟ್ಟ ಕೆಲವರು ತಮ್ಮ ಯೋಚನಾ ವಿಧಾನ ಬದಲಾಯಿಸಲು ಸಿದ್ಧರಿಲ್ಲ. ಅವರಿಗೆ ಕಠಿಣ ಶಿಕ್ಷೆಯಾಗಿದೆ. ತಾನು ಇಲ್ಲಿಗೆ ಬರುವ ಮುನ್ನ ಜೈಲಿನಲ್ಲಿ ಮಾತಾಡಿಸಿದ್ದು ಅಂತಹವರನ್ನ ಮುಖ್ಯಮಂತ್ರಿಯವರು ಸ್ಕ್ವಾಡಿನ ಮುಖ್ಯಸ್ಥರ ಮಾತನ್ನು ಒಪ್ಪಿಕೊಳ್ಳಬಹುದು. ಯಾಕೆಂದರೆ ಕ್ರಾಂತಿಕಾರಿಯರ ಪೈಕಿ ಈ ಕಲ್ಯಾಣಿಯೊಬ್ಬಳೇ ಇಡಿ ರಾಜ್ಯಕ್ಕೆ ದೊಡ್ಡ ತಲೆನೋವಾಗಿ ಬೆಳೆದುಬಿಟ್ಟಿದ್ದಾಳೆ. ಒಂದು ವೇಳೆ ಅವರು ತನ್ನ ಸಲಹೆಗಳನ್ನು ಒಪ್ಪಿಕೊಂಡರೆ ಬಂಡೇರಹಳ್ಳಿಯಲ್ಲಿ ಏನು ಮಾಡಬಹುದೆಂಬ ಕನಸು ಕಾಣತೊಡಗಿದ ತೇಜಾ.

ಹನ್ನೊಂದರ ನಂತರ ಬಂದರು. ಎಸ್.ಐ. ಮತ್ತು ಎಚ್.ಸಿ. ಬಸ್ಸು ಸರಿಯಾದ ಸಮಯಕ್ಕೆ ಸಿಗಲಿಲ್ಲ ಅದಕ್ಕೇ ತಡವಾಯಿತೆಂದು ಹೇಳಿದರವರು. ಪೇದೆಯಿಂದ ತಿಂಡಿ ತರಿಸಿಕೊಂಡು ತಿಂದು ತನ್ನ ಆಗಿನ ಹಸಿವನ್ನೂ ನೀಗಿಸಿಕೊಂಡ. ಸಾರಾಯಿಖಾನೆಯ ವಿಷಯ ತಿಳಿಯಲು ಹೋದ ಪೇದೆಯರು ಇನ್ನೂ ಬಂದಿರಲಿಲ್ಲ. ಈ ಇಬ್ಬರಿಗೂ ಏನಾದರೂ ಕೆಲಸ ಹಚ್ಚಬೇಕೆಂದುಕೊಂಡು ಅವರಿಗೆ ಹಳ್ಳಿಯೆಲ್ಲಾ ಸುತ್ತಾಡಿ ಅಲ್ಲಿನ ಜನರ ಸಮಸ್ಯೆ ಏನಿದೆ ಎಂಬುದನ್ನು ಹಲವರೊಡನೆ ಮಾತಾಡಿ ಅರಿಯಲು ಕಳುಹಿಸಿದ. ದಣಿವಿನ ಕಾರಣ, ರಾತ್ರಿಯೆಲ್ಲಾ ನಿದ್ದೆ ಕೆಟ್ಟ ಕಾರಣ ಅವನ ಕಣ್ಣುಗಳು ಮುಚ್ಚಿಕೊಂಡು ಹೋಗುತ್ತಿದ್ದವು. ಯಾರೂ ಇನ್ನೂ ಮನೆಯ ಬೀಗದಕೈ ತಂದುಕೊಟ್ಟಿರಲಿಲ್ಲ. ಮನೆಗೆ ಹೋಗಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಬರುವುದು ಒಳ್ಳೆಯದೆನಿಸಿ ಪೇದೆಗೆ ಹೇಳಿ ಮನೆಯ ಕಡೆ ನಡೆದ.

ಕೆಲಸದಾಳು ಅವನಿಗಾಗಿ ಅಡುಗೆ ಮಾಡುವ ಕೆಲಸ ನಡೆಸಿದ್ದಳು. ಮನೆ ಸಾಕಷ್ಟು ಶುಭ್ರಗೊಂಡಿತ್ತು. ತಾನೀಗ ಮಲಗುವುದಾಗಿ ಅವಳು ತನ್ನ ಕೆಲಸ ಮುಗಿಸಿ ಬಾಗಿಲು ಹತ್ತಿರ ಎಳೆದುಕೊಂಡು ಹೋಗಬೇಕಾಗಿ ಹೇಳಿ ಹಾಸಿಗೆಯಲ್ಲಿ ಉರಳಿದ. ಅದಕ್ಕಾಗೇ ಕಾಯುತ್ತಿದ್ದಂತಿತ್ತು ನಿದ್ದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೀಲಿಕೈ
Next post ಮತ್ತೆ ಹುಟ್ಟುವುದಾದರೆ…

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys