ಇನ್ನೊಮ್ಮೆ ಪಾಡುವೆನ್ ನನ್ನ ದೊರೆ ಕೃಷ್ಣನನ್ –
ಇನ್ನೊಮ್ಮೆ ಪಾಡುವೆನ್ ರಾಜರ್ಷಿ ಕೃಷ್ಣನನ್.
ನನ್ನ ದೊರೆಗೆನ್ನ ಪೊರೆದಾಳ್ದಂಗೆ,
ನನ್ನೊಲವಿನಾಣ್ಮಂಗೆ,
ನನ್ನುಸಿರ ಭಕ್ತಿಯೊಡೆಯಂಗೆ,
ಭಕ್ತ ಕನಕಂಗೆ,
ಕಲಿಕಾಲ ಜನಕಂಗೆ,
ಕರ್ನಾಟಕ ಪ್ರೇಮಸಾಮ್ರಾಜ್ಯ ಪೂಜ್ಯಂಗೆ,
ಆದರ್ಶ ಪುರುಷಂಗೆ,
ಆದ ಕೃಷ್ಣಂಗೆ,
ಹಂಬಲಿಸಿ ನೆನೆದು ನೆನೆದು, ಕಂಬನಿಯ ಕರೆದು ಕರೆದು,
ಅಳುವರೊಡನತ್ತತ್ತು ಪಾಡದೆಂತಿರ್ಪೆನ್ ?
ಇನ್ನೊಮ್ಮೆ ಪಾಡುವಂ, ಬಾ ವಾಣಿ, ನಮ್ಮ ದೊರೆ ದೇವರೆರೆ ಕೃಷ್ಣನನ್
ನಾಲುಮಡಿ ಕೃಷ್ಣನನ್.
ಪಿಂತೊಮ್ಮೆ ನಾವಿರ್‍ವರುಂ ಪಾಡಿದಂತಲ್ತು,
ಸಂತಸದ ಹೆಬ್ಬೆಳೆಯ ಪೊನ್ನ ಪಾಡಲ್ತು
ಇಂದಿನೀ ಪಾಡು,
ಬೆಂದೆದೆಯ ಪಾಡು.
ಹಂಬಲಿಸಿ ಕೊರಗಿ ಕೊರಗಿ, ಕಂಬನಿಯ ಕರಗಿ ಕರಗಿ,
ಅತ್ಯತ್ತು ಸೊರಗಿ ಸೊರಗಿ,
ಸೆರೆಬಿಗಿದ ಕೊರಳಿಂದ ಪಾಡುವಂ, ಬಾ ವಾಣಿ, ನಮ್ಮಿನಿಯ
ದೊರೆಯನಿತ್ತೊಮ್ಮೆ.

ಆದನೇ ಕೃಷ್ಣನ್ !
ಪೋದನೇ ಕೃಷ್ಣನ್ !
ಆಯ್ಕೆ ಆ ಬಾಳ್ಕೆ !
ಪೋಯ್ತೆ ಪೊನ್ನಾಳ್ಕೆ !
ಕನ್ನಡದ ಕಣ್ಣಮಣಿ, ಕರ್ನಾಟ ಜೀವಮಣಿ ಬೆಳಗದಿನ್ನೆಮಗೆ,
ಧರ್‍ಮ ಪಥಮನ್ ತೊಳಗಿ ಬೆಳಗದಿನ್ನೆಮಗೆ,
ರಾಜ ಪಥಮನ್ ತೊಳಗಿ ಬೆಳಗದಿನ್ನೆಮಗೆ.
ನಡುವಗಲ ನೇಸರನು ಕರ್ಪು ಪಿಡಿದಿಡಿದಂತೆ,
ನೆರೆಯ ಬೆಳ್ದಿಂಗಳನು ಪಾವು ಗಿಡಿದಂತೆ,
ತಿಳಿಯಾದ ಬಾನಿಂದ ಬರಸಿಡಿಲ್ ಸಿಡಿದಂತೆ,
ಬೆನ್ನಿರಿವ ಕಳ್ಳಕೊಲೆ ಸುರಗಿಯಂತೆ,
ಎತ್ತಣಿಂದೆರಗಿತೋ ಮೃತ್ಯು !
ಓ ಹಾಳು ಮೃತ್ಯೂ,
ಇರಿದೆ ನೀನ್ ಭೂಲೋಕದಾದರ್ಶ ರಾಜನನ್.
ಇರಿದೆ ನೀನ್, ನಿಷ್ಕರುಣಿ, ಕಾವ್ಯರಸ ಭೋಜನನ್,
ಮುರಿದೆ ನೀನ್, ಓ ಪಾಪಿ, ಪೂರ್ಣ ಪುಣ್ಯಾತ್ಮನನ್,
ಮುರಿದೆ ಸಿಂಹಾಸನದ ನಿರ್ಮಲ ಮಹಾತ್ಮನನ್,
ಒಂದಿರಿತಕಿರಿದೆ ನೀನೆಲ್ಲರೆದೆಯನ್,
ಒಂದಾದ ಕರ್ನಾಟದಲ್ಲರೆದೆಯನ್,
ಚೆಂದ ಬಾಳನ್ ಮೆಚ್ಚುವೆಲ್ಲರೆದೆಯನ್ !

ಬೆಳಗಿನಲಿ ತಂಗಾಳಿ ನುಸುನುಸುಳಿ ಬಂದತ್ತು-
ಪೊಲ್ಲನುಡಿಯಲ್ಲಲ್ಲಿ ಸುಳಿಸುಳಿದು ಬಂದತ್ತು-
ಬೆಂಗಳೂರರಮನೆಯ ಕಾಂತಿ ಕುಂದಿತ್ತು-
ಮೈಸೂರಿನರಮನೆಯ ಕಳಶ ಕಳಚಿತ್ತು-
ದುಃಖ ಭಾರವ ಹೊತ್ತು,

ರಾಜಬೀದಿಯ ನೆರೆದ ಕಿಕ್ಕಿರಿದ ಕಣ್ಣು ಹಿರಿದತ್ತು,
ಅರಮನೆಯ ಕೊರಳೊಡನೆ ಕೊರಲಾಗಿ ನಾಡು ಬಿಕ್ಕಿತ್ತು,
ನಿಟ್ಟುಸಿರ ಬಿಸಿಯಳಲ ಹುಚ್ಚು ಹೊಳೆಯುಕ್ಕಿತ್ತು-
ಅದ ಕೇಳ್ವರಾರು ?
ಮೆಲ್ಲೆದೆಯ ಕಲ್ಲೆದೆಯಮಾಡಿ ಆದ ತಾಳ್ವರಾರು ?
-ಮುಂದೆ ನಡೆ, ಮುಂದೆ ನಡೆ, ಓ ವಾಣಿ-ಹೂವುಗಳ ಚೆಲ್ಲು ;
ಅಳಿ, ಅಮಂಗಳಮೇ-ಮಂಗಳಮೆ, ಗೆಲ್ಲು.

ಮಧುವನದೆ ತಾಯ ಬಳಿ ಚಂದನವನೊಟ್ಟಿ,
ವಿಧಿಕೊಂಡ ರಾಜಂಗೆ ರಾಜವೈಭವ ಕಟ್ಟಿ,
ಉಳಿದೆಮ್ಮ ಪುಣ್ಯಮಾ ಎಳ‌ಅರಸು ಮಗನುಂ,
ಕೆಳೆಯನಾ ಮಂತ್ರಿಯುಂ, ಪ್ರಜೆಗಳಾ ಪಿರಿಯರುಂ, ಪರಿವಾರಮುಂ,
ನಸುನಗುತೆ ಮಲಗಿದ್ದ ಸ್ವಾಮಿಯನ್ ಪರಸಿ,
ಕಡೆ ದರ್ಶನಂಗೊಂಡು, ಭಕ್ತಿಯಿನ್ ಕೈ ಮುಗಿದು,
ದೇವಲೋಕಕ್ಕುಯ್ಯೆ ಕಯ್ಯೆಡೆಯನಿಟ್ಟರ್,
ಅಗ್ನಿ ದೇವಂಗೆ ಕೊಟ್ಟರ್.

ಆ ದಿವ್ಯ ತೇಜೋಗ್ನಿಯಿಂದಗ್ನಿ ತೇಜಮದು ಕಳೆ ತುಂಬಿ ಬೆಳಗೆ,
ಪೊಗೆಪೊಗೆದು, ನೆಗೆನೆಗೆದು, ಮುಗಿಲ ಕಡೆ ನಡೆಯುತಿರೆ ಅಗ್ನಿ,
ಉರಿ ತಟ್ಟದವರಾರು?

ತಂದೆ ಕಳೆದೀ ನಮ್ಮ ಬಾಳೇತಕೆಂದು,
ನೋಯದವರಾರಂದು, ಬೇಯದವರಾರ೦ದು, ಸುಯ್ಯದವರಾರು ?
ಕರುಳಿಲ್ಲದಾ ಬಿದಿಯ ಬಯ್ಯದವರಾರು ?
ಸ್ವರ್ಣಯುಗಮಾಯ್ತೆಂದು ಮರುಗದವರಾರು ?
ಇನಿತಾಯ್ತೆ, ಹಿಡಿಮಣ್ಣು, ಹಿಡಿಬೂದಿ, ಆಳ ಬಾಳು ?
ಬಡವನೋ, ಬಲ್ಲಿದನೊ, ದೊರೆಯೊ, ಹುಳುವೋ,
ಇನಿತೆ ಈ ಬಾಳು ?

-ಮುಂದೆ ನಡೆ, ಮುಂದೆ ನಡೆ, ಓ ವಾಣಿ-ಹೂವುಗಳ ಚೆಲ್ಲು ;
ಅಳಿ, ಅಮಂಗಳಮೇ-ಮಂಗಳಮೆ, ಗೆಲ್ಲು.

ಮಂಗಳಮೆ ಗೆಲ್ಲು !
ಹೂವಾದ ಬಾಳುದಿರೆ, ಹಣ್ಣಾಗಿ ಬಹುದು-ಮತ್ತೆ ಹೂವಹುದು.
ಬೂದಿ ಬೂದಿಗೆ ಕೂಡೆ, ಮಣ್ಣು ಮಣ್ಣಾಗೆ,
ಮೃತನಮೃತನಾಗುವನು,
ದಿವ್ಯ ಕಳೆಯಿನ್ ಕೂಡಿದಾತ್ಮವಾಗುವನು.
ಆತ್ಮವಾತ್ಮಕೆ ಕೂಡಿ ಹಿಗ್ಗುತಿಹುದು.
ವಾಣಿ ಕಣ್ಣನ್ ಕೊಟ್ಟು ತೋರಿದಳ್‌-ತೋರಿದೊಡೆ ಹಿಗ್ಗಾಗಿ ಕಂಡೆನ್ !

ಬಾನ್ ಕೊಂಡ ಕೃಷ್ಣನ್,
ನೆಲನೆಲ್ಲವನ್ ಗೆಲ್ದು, ಬಾನುಮನ್ ಕೊಂಡ ಕೃಷ್ಣನ್ !
ವಾಣಿ ಕಣ್ಣನ್ ತೆರೆಯೆ, ಕಂಡೆನ್
ಬಾನೊಳೊಂದಾಟಮನ್,
ಪೊಸತು ಸಿರಿಮಾಟಮನ್,
ಕೃಷ್ಣಂಗೆ ಪಾಡುವಾ ಶಾಶ್ವತದ ಪಾಟಮನ್.

ಪೊನ್ನ ಪಲ್ಲಕ್ಕಿಯನ್ ಭಕ್ತಿಯಿನ್ ಪೊತ್ತು,
ಕಲ್ಪವೃಕ್ಷದ ಪೂವನೆರಚುತ್ತ ಸುತ್ತು,
ಆನಂದ ನೃತ್ಯಮನ್ ಕುಣಿದು ನಡೆದತ್ತು
ದೇವಗಣ ಮುಕ್ತಗಣದೆಡೆಗೆ.
ಲೋಕದಿನ್ ಲೋಕದೆಡೆಗೆ-
ಋಷಿಲೋಕ, ದೇವಲೋಕ,
ರವಿಲೋಕ, ಚಂದ್ರಲೋಕ,
ವೀರರಾ ಭೋಗದಾ ಸ್ವರ್ಗಲೋಕ,
ತಪಸಿನಾ, ಸತ್ಯದಾ ಧರ್‍ಮದಾ, ಬ್ರಹ್ಮದಾ ಲೋಕ,
ಶಿವಲೋಕ, ವಿಷ್ಣುಲೋಕ-

ಆ ಪರಮಪದವಾದ ಮೋಕ್ಷ ಲೋಕ-
ಲೋಕದಿನ್ ಲೋಕದೆಡೆಗೆ,
ದೇವಗಣ ಪೊತ್ತ ನಡೆಗೆ !
ಆನಂದ, ಆನಂದ, ನಿತ್ಯ ಶುಭಮಂಗಳಂ !
ಅಳಲದಿರಿ, ತೊಳಲದಿರಿ, ಆನಂದ, ಮಂಗಳಂ !
ಶ್ರೀ ಕೃಷ್ಣದೇವನಿಗೆ ನಿತ್ಯ ಶುಭಮಂಗಳಂ.

ಅಳಲೊಳಾನಂದಂ !
ಕೃಷ್ಣನಸ್ತಮನೆಯ್ದೆ, ನಿಸ್ತೇಜವಾಗಿರ್‍ದ ದೈವಂಗಳೆಲ್ಲಂ
ಅಳಿವುಳಿವು ನೆಲೆಯರಿತು ತೀವಿದುವು ಚೆಂದಂ.
ಕೃಷ್ಣನಾರಾಧನೆಯ ಶಕ್ತಿಗಳವೆಲ್ಲಂ
ಕಳೆದು ತಲ್ಲಣವೆಲ್ಲ ಮೂಡುತಿರೆ ನೆನಹಿನಲಿ ಗೆಲ್ಲಂ
ಕೃಷ್ಣ ಯೋಗೀಶ್ವರನ ಭಾವನೆಯ ಸಿದ್ದಿಯೊಂದಂದಂ
ಮೊಳೆವಂತೆ ಮಸಗಿದುವು ಚೈತನ್ಯ ದೆಸಕಂಗಳಿಂದಂ.
ಕೃಷ್ಣನೆಣಿಸಿರ್‍ದೆಣಿಕೆಯೊಂದೊಂದೆ ? ಗೆಯ್ಮೆಯೊಳ್ ಬಿತ್ತಿರ್‍ದುದೊಂದೆ ?
ಹೊಳೆವ ಕನಸೇನೊಂದೆ ? ಹೂಡಿರ್‍ದ ಬಯಕೆಯೊಂದೊಂದೆ ?
ಕೃಷ್ಣನೊಲಿದಾಳ್ಗೊಂಡ ಇಹಪರದ ಧ್ಯೇಯಂಗಳೆಲ್ಲಂ
ಬೆಳೆಯುತಿವೆ ಬೆಳಸುತಿರುವಭಿಮಾನಿ ದೇವತೆಗಳಿಂದಂ,
ಕೃಷ್ಣನಾಡಿದ ನುಡಿಯದೊಂದುಂ
ಅಳಿವ ನುಡಿಯಲ್ಲಂ-
ಮೈಸೂರ ಮೈಸಿರಿಯ ಬಳವಿ,
ಕರ್ನಾಟದೋರ್ನೋಟದಳವಿ
ಭಾರತದೊಳೊಕ್ಕೂಟದಾಳ್ಕೆ,
ಬಿಡುತೆಯೊಳಗೆಲ್ಲರಿಗೆ ಬಾಳ್ಕೆ,
ಬಡವರಲಿ ಸಿರಿ ಬರುವ ಸೊಂಪು,
ಕುಡಿವರಿದು ಕಲೆ ತರುವ ತಂಪು,
ಯುದ್ಧದಲಿ ದುರುಳರನು ಮುರಿದೆಸೆವ ಗೆಲವು,
ಶಾಂತಿಯಲಿ ಕಲ್ಯಾಣ ಗುಣದೊದವು ನಲವು,
ಕೃಷ್ಣ ತೋರಿದ ಬೆಳಕು ಹೆಚ್ಚುತ್ತ ನಿಂದು
ಬೆಳಗುತಿಹುದೆಂದೂ.
ಅಳಿದನೇ ಶ್ರೀಕೃಷ್ಣನಳಿಯನ್ !
ಇರ್‍ಪನೇ ಶ್ರೀಕೃಷ್ಣನಿರ್‍ಪನ್-ಧೀರಧರ್‍ಮಾತ್ಮರಲ್ಲಿರ್‍ಪನ್ !
ಅಲ್ಲಿರ್‍ಪನಿಲ್ಲಿರ್‍ಪನೆಲ್ಲೆಲ್ಲುಮಿರ್‍ಪನ್ !
ಬಸವಳಿದ ಭಾಗ್ಯದೇವತೆಗಳರಿತಿದನು,
ಪೊಸೆಯಿಸುವರಾನಂದ ನೃತ್ಯದೊಳಗಿದನು,
ಪಾಡುತ್ತ ಸ್ವರ್ಗದೊಳಗಿದನು.

ಆನಂದದಲಿ ಕೇಳಿ ಸ್ವರ್ಗದೊಳಗಿದನು
ಬಾನಂದವನು ಸವಿದ ಸುಖದ ಯದು ಭೂಪರ್,
ಪುಟ್ಟು ಪೊಂದುಗಳೊಳಗನರಿತಮೃತರೂಪರ್‌,
ಕಲೆತೆಲ್ಲ ಒಂದರ್,
ನಲಿಯುತಳ್ತೆಂದರ್‌

ಶ್ರೀ ಕೃಷ್ಣನನ್ ಕಾಣಲೊಗ್ಗಿನಲಿ ನಿಂದರ್.
ಆನಂದದಿನ್ ತಬ್ಬಿ, ಆನಂದ ಬಾಷ್ಪಮನ್ ಸುರಿದು,
ಆನಂದದೊಲವಿಂದ ಸೊಲ್ಲಿಸಿದರುಲಿದು-
ಯದುರಾಯ, ರಾಜೊಡೆಯ, ಚಿಕದೇವ, ಮುಮ್ಮಡಿ ಕೃಷ್ಣನ್,
ಹೊಸತೊಡಲು ಮಿಸುಗುತಿಹ ಚಾಮರಾಜೊಡೆಯನ್,
ಹೊಸ ನೆನಹು ಹೊಮ್ಮುತಿಹ ಕೆಂಪನಂಜಾಂಬೆ,
ಹೊಸಹೊಸತು ಸಗ್ಗಗಳ ಸುಳಿಯುತಿಹ ನರಸಿಂಹರಾಜನ್,

ಹಿಂದೆ ಬಾನ್‌ಕೊಂಡವರ್ ಪಿರಿಯರೆಲ್ಲರ್,
ತಂದೆ ತಾಯ್‌ ತಂಗಿ ತಮ್ಮಂದಿರೆಲ್ಲರ್‌.
ಒಂದಾಗಿ ಇದಿರ್‍ಗೊಂಡು ನುಡಿದರವರುಲಿದು-
“ಬಾ, ಕೃಷ್ಣ, ನಲ್‌ ಬರವು, ನಮ್ಮೊಳಗೆ ಸೇರು.
ದೇವರಲಿ ದೇವನೆನೆ ಗದ್ದುಗೆಯನೇರು.
ಭೂಮಿ ಭಾರದ ಹೊರೆಯನಿಳುಹು, ತಂಪಾಗು.
ದೇವರೂಳಿಗದೆಡೆಗೆ ದೂತನೆನೆ ಸಾಗು.
ಭೋಗ ಪೀಠದಲಿದ್ದು ಋಷಿಯಂತೆ ನಡೆದೆ.
ರಾಜರಲಿ ರಾಜನೆನೆ ಚಕ್ರವರ್ತಿಯ ಮೆಚ್ಚ ಮನ್ನಣೆಯ ಪಡೆದೆ.
ಲೋಕವೇ ಕೊಂಡಾಡೆ ನಲ್ಲಬಾಳ್ ಬಾಳ್ದೆ.
ನಮ್ಮ ಹೆಮ್ಮೆಯ ಮನೆಗೆ ಹಿರಿಯ ಹೆಸರಾಳ್ದೆ.
ಬಾ ಕೃಷ್ಣ, ನೀ ಧನ್ಯ, ನಿನ್ನಾಳ್ಕೆ ಧನ್ಯ,
ನಾಡಿಂಗೆ ನೀ ನೆಟ್ಟ ನಮ್ಮ ಜಯ ಧನ್ಯ,
ಶ್ರೀ ಜಯನನಲ್ಲಿಟ್ಟ ನೀನೆ ಧನ್ಯ.
ಅವನ ದಾರಿಯ ನಾವು ಶುಭದ ತಾರೆಗಳಾಗಿ ಬೆಳಗಿ.
ಹಿರಿಯರಲಿ ಹಿರಿಯನೆನೆ ಬೆಳಗಿಸುವ ತೊಳಗಿ.
ಬಾ ಕೃಷ್ಣ, ನಲ್‌ ಬರವು, ನಮ್ಮ ನನ್ನೊಲವು,
ನಮ್ಮ ಜಯನೊಲವು!”

ಜಯಮಕ್ಕೆ ಶ್ರೀ ಜಯಂಗೆ!
ಶುಭಮಕ್ಕೆ ಶ್ರೀ ಜಯಂಗೆ !
ಜಯಚಾಮರಾಜೇಂದ್ರ ಚಂದ್ರಂಗೆ ವಿಭವಮಕ್ಕೆ !
ಯದುಕುಲವ ಕಾಯುವಾ ಶಕ್ತಿಗಳ ದಿವ್ಯ ಪ್ರಸಾದಮಕ್ಕೆ !
ಮೈಸೂರ ಮೈಸಿರಿಗೆ ಕಳೆ ಪೆರ್ಚುತಿರ್ಕೆ !
ಕನ್ನಡಮ್ಮನ ಹೃದಯ ಕಾನಂದಮಿರ್ಕೆ !
ಶ್ರೀಕೃಷ್ಣದೇವನೆಮ್ಮನ್ ಪರಸುತಿರ್ಕೆ !
ಕನ್ನಡದ ಕುಲಕಿರ್ಕೆ ನಿತ್ಯ ಶುಭಮಂಗಳಂ,
ಜಾರದೆಯೆ ಜಯಮಂಗಳಂ !
ಭೂರಿಯಲಿ ಜಯಮಂಗಳಂ !
*****
೧೯೪೦