ವಾಗ್ದೇವಿ – ೬

ವಾಗ್ದೇವಿ – ೬

“ವೆಂಕಟಪತಿಯು ಮನೆಯಲ್ಲಿ ಕುಂಭಕರ್ಣ ವ್ರತಾಚರಣೆಯಲ್ಲಿ ಅಮರಿ ಕೊಂಡಿರುವುದಿಲ್ಲವಷ್ಟೆ. ಇಲ್ಲವಾದರೆ ಇಷ್ಟು ಸಣ್ಣ ಕೆಲಸಮಾಡಿಕೊಂಡು ಬರುವುದಕ್ಕೆ ಎಷ್ಟು ಸಾವಕಾಶವಪ್ಪ! ತಾನುಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳುಮಾಡಿದ್ದು ಹಾಳೆಂಬ ಗಾದೆಯು ನಿಜವಾದದ್ದು. ನಾವು ಸ್ವತಃ ಈ ಕಾರ್ಯವನ್ನು ನೆರವೇರಿಸುವುದಕ್ಕೆ ಹೊರಟರೆ ಇಷ್ಟು ಸಮಯ ಬೇಕಾಗುವುದೇ? ನಮ್ಮ ಪದವಿಯು ಸೆರೆಮನೆಯಲ್ಲಿ ವಾಸಮಾಡಿ ಕೊಂಡಿರುವವರ ಹಾಗಿದೆ. ಸರ್ವಕೆಲಸಗಳೂ ಇನ್ನೊಬ್ಬನಿಂದಾಗಬೇಕು; ನಮ್ಮ ಶತ್ರುಗಳಿಗೂ ಸನ್ಯಾಸಬೇಡ; ನಾವು ಜ್ಞಾನಶೂನ್ಯರೆಂಬಂತೆ ವೆಂಕಟ ಪತಿಯು ಮೊದಲೇ ನಮಗೆ ತತ್ವಜ್ಞಾನ ಹೇಳಲೆಸಗಿದನು; ನಾವು ಅವ ನನ್ನು ಗದರಿಸಿಬಿಟ್ಟಮೇಲೆ, ಪೌರುಷವನ್ನಾಡಿ ಅರೆಮನಸ್ಸಿನಿಂದ ಹೊರಟು ಹೋದನು. ಯಾವ ಠಾವಿಗೆ ಹೋದನೋ, ಏನೆಲ್ಲ ಮಾಡಿರುವನೋ ಶ್ರೀಹರಿಗೇ ಗೋಚರ”ವೆಂದು ಚಂಚಲನೇತ್ರರು ಬಹು ಅವಸರದಿಂದ ಆಗಾಗ್ಗೆ ಬಾಗಲ ಕಡೆಗೆ ನೋಡುತ್ತಾ ವೆಂಕಟಪತಿಯ ಪುನರಾಗಮನ ನಿರೀಕ್ಷಣೆಯಲ್ಲಿಯೇ ಇದ್ದುಕೊಂಡರು.

ವೇದವ್ಯಾಸ ಉಪಾಧ್ಯನು ತನ್ನ ಪಾಂಡಿತ್ಯಕ್ಕೆ ಶ್ರೀಪಾದಂಗಳವರು ಮೆಚ್ಚದಿರಲಾರರೆಂಬ ಭರವಸೆಯಿಂದ ಸುಸ್ವರದಿಂದ ಪುರಾಣವನ್ನು ಓದಿ ಅದರ ಅರ್ಥವನ್ನು ವಿವರಿಸಿ ಕ್ಷಣೇ ಕ್ಷಣೇ ಕಣ್ಣೆತ್ತಿನೋಡುತ್ತಾ, ಗವಾಕ್ಷದ ಎದುರು ಕುಂತಿರುವನು. ಕೇಳಲಿಕ್ಕೆ ಬಂದವರನೇಕರು ಹೊರಪಾರ್ಶ್ವದಲ್ಲಿ ನಿಂತುಕೊಂಡಿರುವರು. ಚಂಚಲನೇತ್ರರ ಮನಸ್ಸು ಸಂಪೂರ್ಣವಾಗಿ ವಾಗ್ದೇ ವಿಯ ಮೇಲೆಯೇ ಸ್ಥಿರಗೊಂಡು ಅನ್ಯ ಪ್ರಸಕ್ತಿಗೆ ವ್ಯಾಪಿಸಲಾರದೆ, ಇರುವ ದಶೆಯಿಂದ ಪೂರ್ಣಮರವೆಯಲ್ಲಿರುತ್ತಿರುವ ಆ ಯತಿಗಳು “ವೇದವ್ಯಾಸ ಉಪಾಧ್ಯನು ಇನ್ನೂ ಕಾಣುವುದಿಲ್ಲ. ಎಲ್ಲಿಗೆ ಹೋಗಿಬಿಟ್ಟನೋ?” ಎಂದು ನುಡಿದರು. ಸಮ್ಮುಖದಲ್ಲಿ ಪುರಾಣಹೇಳುವ ಆ ಉಪಾಧ್ಯನು ಬೆರಗಾಗಿ ಈ ಯತಿಗೆ ಹುಚ್ಚು ಹಿಡಿಯಿತೋ ಎಂಬ ಅನುಮಾನದಿಂದ ಗೋಣು ಎತ್ತಿ ನೋಡಲು, ತನ್ನ ಹುಚ್ಚುತನವನ್ನು ತಾನೇ ಅರಿತು, ಚಂಚಲನೇತ್ರರು ವೆಂಕಟಪತಿ ಆಚಾರ್ಯನೆನ್ನುವದರ ಬದಲಾಗಿ ಉಪಾಧ್ಯನ ಹೆಸರು ಹೇಳಿಬಿಟ್ಟೆ ವೆಂದು ಹಾಸ್ಯಮುಖವನ್ನು ತಾಳಿ ತಕ್ಕಮಟ್ಟಿಗೆ ಸುಧಾರಿಸಿಕೊಂಡರು. ಪರಂತು ಈ ದೆಸೆಯಿಂದ ವೇದವ್ಯಾಸ ಉಪಾಧ್ಯಗೂ ಅವನಂತೆ ಬೇರೆ ಕೆಲವ ರಿಗೂ ಸಂಶಯ ನಿವಾರಣೆಯಾಗಲಿಲ್ಲ.

ಹಾಗೆಯೇ ಶಂಭೂರ ತಿಮ್ಮಣ್ಣಾಚಾರ್ಯನೆಂಬ ಪ್ರಮುಖ ಗ್ರಹಸ್ಥನು ಪ್ರಣಾಮಮಾಡಿ ತೀರ್ಥ ಪ್ರಸಾದಕ್ಕೆಂದು ಅಪ್ಪಣೆಯಾಗಲೆಂದು ಭಯ ಭಕ್ತಿ ಯಿಂದ ನಿಂತುಕೊಂಡಿರುವಾಗ “ಏನು ತಿಮ್ಮಣ್ಣಾಚಾರ್ಯರೇ, ನಿಮ್ಮ ಮಗನ ಉಪನಯನ ಯಾವಾಗ” ಎಂದು ಯತಿಗಳು ಪ್ರಶ್ನೆಮಾಡಿದರು. “ಪರಾಕೆ, ನನ್ನ ಮಗನ ಉಪನಯನವಾಗಿ ಈಗ ಒಂದು ತಿಂಗಳಾಯಿತು; ಉಪನಯನಕಾಲದಲ್ಲಿ ಸನ್ನಿಧಿಯ ಸವಾರಿಯು ಚಿತ್ತೈಸೋಣಾಗಿ ಸೇವಕನ ಕೃತಾರ್ಥತೆಯನ್ನು ಪಡಕೊಂಡ ವಿಷಯವು ಬೇಗನೇ ಮರವೆಗೆ ಬಂದು ಹೋಯಿತೇ? ಇನ್ನು ನನಗೆ ಇರುವದು ಹೆಣ್ಣು ಮಕ್ಕಳೇ ಸರಿ” ಎಂದು ತಿಮ್ಮಣ್ಣಾಚಾರ್ಯನು ಕೊಟ್ಟ ಪ್ರತ್ಯುತ್ತರವು ಚಂಚಲನೇತ್ರರನ್ನು ನಾಚಿಕೆ ಯಲ್ಲಿ ಮುಳುಗಿಸಿ ಬಿಟ್ಟಿತು.

ತ್ರೀಪಾದಂಗಳವರ ಮನಸ್ಸಿಗೆ ಏನೋ ಭ್ರಮೆ ತಗಲಿಕೊಂಡಿರುವು ದೆಂಬ ಅನುಮಾನಕ್ಕೆ ಆಸ್ಪದವಾಗುವಂತೆ ಅವರು ಆ ರಾತ್ರೆ ವೆಂಕಟಪತಿ ಆಚಾರ್ಯನು ಮರಳಿ ಬರುವ ಪರಿಯಂತರ, ಅಜೇ ರೀತಿಯಲ್ಲಿ ಅಸಹಾಸ್ಯ ಕರವಾದ ಹಲವು ಚೇಷ್ಟೆಗಳನ್ನು ತೋರಿಸಿಕೊಂಡರು.

ವೇದವ್ಯಾಸ ಉಪಾಧ್ಯನು ಹೇಳುವ ಪುರಾಣವು ಚಂಚಲನೇತ್ರರ ಕಿವಿಗೆ ಸಾವಿನ ಮನೆಯಲ್ಲಿ ಆಗುವ ರೋದನದಂತೆ ಕೇಳಿಸುತಿತ್ತು. ಇವನು ಬೇಗ ಪುಸ್ತಕವನ್ನು ಕಟ್ಟಿ ಮನೆಗೆಹೋಗದೆ ವೃಥಾ ಕಂಠಶೋಷಣೆ ಮಾಡು ತ್ತಾನೆಂಬ ಸಿಟ್ಟಿನಿಂದ ಸನ್ಯಾಸಿಯು ಫಕ್ಕನೆ ಎದ್ದು ನಿಂತುಕೊಂಡು, ‘ಇವನ ಸುಟ್ಟ ಪುರಾಣವಿನ್ನೂ ಮುಗಿಯುವದಿಲ್ಲ. ವೆಂಕಟಪತಿಯು ಯಾವ ಸುಡು ಗಾಡಿಗೆ ಹೋಗಿಬಿಟ್ಟನೋ ತಿಳಿಯದು” ಎಂದು ಸಿಂಹಾಸನವಿರುವ ಕೋಣೆ ಯಿಂದ ಮತ್ತೊಂದು ಕೋಣೆಗೆ ಹೋಗಿ ಮಂಚದಮೇಲೆ ಬಿದ್ದುಕೊಂಡರು.

ವೇದವ್ಯಾಸ ಉಪಾಧ್ಯನು ಪುರಾಣ ಪುಸ್ತಕವನ್ನು ಕಟ್ಟಿ ಬಿಟ್ಟು ಸನ್ಯಾಸಿಯ ಹಿಂದೆಯೇ ಬೇರೆ ಕೋಣೆಗೆ ಪ್ರವೇಶಿಸಿ “ನನ್ನ ಪುರಾಣ ಇಂದಿಗೆ ಮುಗಿಯಿತು. ಇನ್ನು ಮುಂದೆ ಪುರಾಣ ಹೇಳಲಿಕ್ಕೆ ಚಿತ್ತಕ್ಕೆ ಯುಕ್ತತೋರು ನವರಿಗೆ ನೇಮಕವಾಗಬಹುದು” ಎಂದು ನಮಸ್ಕಾರಮಾಡಿ ಪ್ರತ್ಯುತ್ತರ ವನ್ನು ಕಾಯದೆ ಮಠವನ್ನು ಬಿಟ್ಟು ವಾಯುವೇಗದಿಂದೆಂಬಂತೆ ಹೊರ ಬೀದಿಯನ್ನು ಸೇರಿ ಹಿಂದೆ ಮುಂದೆ ನೋಡದೆ ನಡೆಯುತ್ತಿರುವಾಗ ಎದುರಿ ನಿಂದ ಬರುತ್ತಿರುವ ವೆಂಕಟಪತಿ ಆಚಾರ್ಯನು ಅವನನ್ನು ನೋಡಿ ಏನೋ ವೈಷಮ್ಯ ನಡೆದಿರಬೇಕೆಂಬ ಸಂಶಯದಿಂದ,- “ಉಪಾಧ್ಯರೇ! ಎಲ್ಲಿಗೆ ಅವಸರ ದಿಂದ ಹೋಗುತ್ತೀರಿ?” ಎಂದು ವಿಚಾರಿಸಿದನು.

ತನಗೂ ಚಂಚಲನೇತ್ರರಿಗೂ ಹುಟ್ಟದ ಚಿಕ್ಕ ಕಲಹದ ವೃತ್ತಾಂತ ವನ್ನು ಉಪಾಧ್ಯನು ವಿವರಿಸಿದನು. ವೆಂಕಟಪತಿಯು ಆಶ್ಚರ್ಯಪಟ್ಟು ಸದ್ಗುಣಭರಿತನೆಂದು ಲೋಕದಲ್ಲೆಲ್ಲಾ ಖ್ಯಾತಿಗೊಂಡ ತನ್ನ ಧಣಿಯು ಕಡು ಮೂರ್ಖನಾಗಿ ಹೋದನೆಂಬ ವ್ಯಸನದಿಂದ ತಲೆತಗ್ಗಿಸಿಕೊಂಡು ವೇದವ್ಯಾಸ ಉಪಾಧ್ಯಗೆ ಪ್ರತ್ಯುತ್ತರ ಕೊಡದೆ ಮಠದ ಕಡೆಗೆ ಬಂದನು.

ಸನ್ಯಾಸಿಯು ಮರುಳು ಹಿಡಿದವನಂತೆ ಮಂಚದ ಮೇಲೆ ಬಿದ್ದು ಕೊಂಡಿರುವ ವದಂತಿಯು ಮಠದ ಚಾಕರರಿಂದ ವೆಂಕಟಪತಿಯು ಅರಿತು ಅವರ ಕೂಡೆ ಏನೊಂದೂ ಚರ್ಚೆಮಾಡದೆ ಮಂಚದ ಕೋಣೆಯ ಒಳಗೆ ಬಂದು ಸಮ್ಮುಖದಲ್ಲಿ ನಿಂತು ಪ್ರಣಾಮಮಾಡಿದ ವೇಳೆಯಲ್ಲಿ ಚಂಚಲ ನೇತ್ರರು ನಗುತ್ತಾ ಎದ್ದು ಕೂತುಕೊಂಡು- “ವೆಂಕಟಪತಿಯೇ! ನೀನು ಹೋದ ಕೆಲಸ ಮಾಡಿಕೊಂಡು ಬಂದಿಯಾ? ಬೇಗನೇ ಹೇಳಿ ಬಿಡು. ಉದ್ದ ಉದ್ದ ಮಾತುಗಳಿಂದ ನಮ್ಮ ಪ್ರಾಣವನ್ನು ತೆಗಿಯಬೇಡ ಮಹಾಯಾ ಧಣಿಯಕಾಂಕ್ಷೆಯನ್ನು ವೃದ್ಧಿಪಡಿಸಬೇಡ” ಎಂದು ಬೇಡಿಕೊಳ್ಳುವ ಯಜಮಾನನನ್ನು ಕುರಿತು ವೆಂಕಟಪತಿಯು— “ಬುದ್ಧೀ! ತಮ್ಮ ಕೆಲಸವನ್ನು ಜಯಪ್ರದ ಮಾಡಿಕೊಂಡೇ ಬಂದಿರುವೆನು; ಇಷ್ಟು ಸಂಕ್ಷೇಪದಲ್ಲಿಯೇ ಈ ಪ್ರಸ್ತಾಸನನ್ನು ತೀರಿಸಿಬಿಡಲೋ, ವಿವರಗಳನ್ನು ಅದ್ಯಂತನಾಗಿ ಅರಿಕೆ ಮಾಡಲೋ, ಅಪ್ಪಣೆಯಾಗಲಿ” ಎಂದನು.

ತನ್ನ ಅವಸರವು ವೆಂಕಟಪತಿಯನ್ನು ಸಿಟ್ಟಿಗೆಬ್ಬಿಸಿತೆಂಬ ಹೆದರಿಕೆಯಿಂದ ಚಂಚಲನೇತ್ರರು– “ನಿನ್ನಷ್ಟು ಸ್ವಾಮಿಭಕ್ತಿಯುಳ್ಳವನಿನ್ನೊಬ್ಬನನ್ನು ಇದು ವರೆಗೂ ನಾವು ಕಾಣಲಿಲ್ಲ. ಕೆಲಸವನ್ನು ಜಯಿಸಿಕೊಂಡು ಬಂದೆ ನಿನ್ನ ಸಾಹಸವು ನಮ್ಮ ಪ್ರಾಣವಾಯುವನ್ನು ಒಡಲು ಬಿಟ್ಟು ಅತ್ತಿತ್ತ ಚಲಿಸ ದಂತೆ ಕಟ್ಟಿ ಹಾಕಿಬಿಟ್ಟಿತು ಇನ್ನೂ ವಿವರಗಳನ್ನೆಲ್ಲಾ ಒಂದೂ ಬಿಡದೆ ಹೇಳಿ ನಮ್ಮ ಕೃತಜ್ಞತೆಗೆ ಪಾತ್ರನಾಗು” ಎಂದು ಪ್ರೇಮಯುಕ್ತವಾಗಿ ಪಾರುಪತ್ಯ ಗಾರಗೆ ಯತಿಗಳಪ್ಪಣೆಯಾಯಿತು. ವೆಂಕಟಪತಿಯು ತನಗೂ ವಾಗ್ದೇವಿಗೂ ಅವಳ ತಾಯಿ ಭಾಗೀರಥಿಗೂ ನಡೆದ ಸಂಭಾಷಣೆಯನ್ನು ಒಂದು ಅಕ್ಷರ ವಾದರೂ ಬಿಡದೆ ನಿವೇದಿಸಿದನು. ಚಂಚಲನೇತರು ಅಡಿಗಡಿಗೆ ಹರುಷವನ್ನು ತಾಳಿದರು. ಪರಂತು ವಾಗ್ದೇವಿಯು ತಾಯಿಯ ಮಾತನ್ನು ಉಲ್ಲಂಘಿಸಿ, ದೇವರ ಸನ್ಮುಖದಲ್ಲಿ ಪ್ರಮಾಣಪೂರ್ವಕ ವಾಗ್ದತ್ತವನ್ನೀಯಲು ಅಪೇಕ್ಷಿ ಸಿದ ವಿಷಯವು ಅವರ ಮನಸ್ಸಿಗೆ ಅತಿವಿಪರೀತನಾಗಿ ತೋರಿ. ರವಷ್ಟು ಕೋಪವನ್ನುಂಟುಮೂಡಿತೆಂಬ ಹಾಗೆ ಅವರ ಮುಖದ ವರ್ಣಭೇದದಿಂದ ಅರಿತ ವೆಂಕಟಪತಿಯು ಇದೇ ತನ್ನ ಸಾಧನೆಗೆ ಸುಸಮಯನೆಂಬ ಕೋರಿಕೆ ಯಿಂದ ತನ್ನ ಅಭಿಪ್ರಾಯವನ್ನು ತಿಳಿಸಲಿಕ್ಕೆ ಆಜ್ಞೆಯನ್ನು ಬೇಡಿದಾಗ- ಹೇಳಪ್ಪಾ ಹೇಳೆಂದು ಸ್ವಾಮಿಗಳ ಅನುಜ್ಞೆ ಯಾಯಿತು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುಡಿ
Next post ದೇವರ ಕಾಣಲು

ಸಣ್ಣ ಕತೆ

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys