ಇಮಾಂಬಾರಾ

ಅವಧವೆಂದರೆ ಅವಧ

ಅವದವೆಂದರೆ ಅವಧ
ಪ್ರತಿಯೊಬ್ಬನೂ ಬಲ್ಲ
ಅರಸನೆಂದರೆ ಅರಸ
ಆಸೀಫ್ ಉದ್‌ದೌಲ
ಅಂತೆಯೇ
“ಜಿಸ್‌ಕೊ ನ ದೇ ಮೌಲ
ಉಸ್‌ಕೊ ದೇ ಆಸೀಫ್‌ ಉದ್‌ದೌಲ”

ಕಿಸ್‌ಕೊ ದೇ
ಕಿಸ್‌ಕೊ ದೇ-ಎನ್ನದೇ
ಸಬ್‌ಕೋ ದೇ ಎಂದ
ಅಂಥ ಕ್ಷಾಮದ ಕಾಲ ಅದು
ಅನ್ನದ ಅಗತ್ಯ ಎಲ್ಲರಿಗೂ
ಹಜರತ್‌ ಇಮಾಮರಿಗು
ಮಹಲಿನಗತ್ಯ ಮನಗಂಡ

“ಆದರೆ ಮಾತ್ರ
ಹಿಂದೆಲ್ಲಿಯೂ ಇರದ ಹಾಗಿರಬೇಕು
ಮುಂದೆಯೂ
ಬರದ ಹಾಗಿರಬೇಕು! ”

ಹಿಂದಿರುವುದಿಲ್ಲ
ಮುಂದೆ ಬರುವುದು ಇಲ್ಲ
ಸುಲೆಮಾನರಿದ್ದ ಅರಮನೆಯಲ್ಲ
ಶಾಜಹಾನರ ತಾಜಮಹಲಲ್ಲ
ಕಲ್ಲಿರುವುದಿಲ್ಲ ಕಟ್ಟಿಗೆಯಿರುವುದಿಲ್ಲ
ಕಬ್ಬಿಣವಿರುವುದಿಲ್ಲ
ಬರೇ ಇಟ್ಟಿಗೆಯ ಹೊರತಾಗಿ
ಮತ್ತೇನು ಇರುವುದಿಲ್ಲ
ಆದರೂ-
ನಡೆದವರ ದಾರಿತಪ್ಪಿಸುವ
ಭೂಲ್‌ಭುಲಯ್ಯ
ಇಮಾಂಬಾರಾದೊಳಗೆ
ತೋರಿಸುವೆನೆಂದ‌
ಕೈಫಿಯತ್‌ ಉಲ್ಲ!

ನಾಳೆ ಮುಂಜಾನೆ ಮಚ್ಚೀಮಹಲಿಗೆ

ಕಟ್ಟೆಗಳ ಮೇಲೆ
ತಮಾಷೆ ಮಾತುಗಳ ಹೇಳಿ
ನಗುವವರು ನಗಲಿ !

ಅಮೀರರ ಮನೆಮುಂದೆ ಹಾಡಿ
ಕುಣಿವ ಭಾಂಡಿನವರು
ಕುಣಿಯಲಿ !

ನಗುವ ಕಾಲವಿದಲ್ಲ
ಕುಣಿವ ಕಾಲವು ಅಲ್ಲ
ಆದ್ದರಿಂದಲೆ ಪ್ರತಿಯೊಂದೂ
ದಾರುಣವಾಗುತ್ತ ಹೋಗುವುದು
ಕ್ಷಾಮದ ಹೊಡೆತ
ಸೂಳೆಯರ ಹೊಟ್ಟೆಗೂ
ತಟ್ಟಿದ ಹಾಗೆ ತೋರುವುದು

ಛದ್ಮವೇಷದಲಿ ಸುಲ್ತಾನ
ಸಕಲವ ಕಾಣುವ
ಕಣ್ಣಮುಂದೇ
ಏಳುವ ಕಟ್ಟಡ
ದುಡಿಯುವ ಜನತೆ
ಆದರೆ ಯಾರೀಕೆ
ಇಳಿ ಯೌವನದಾಕೆ
ಇವಳ ಕಣ್ಣಿನೊಳಗೇ ಬಿದ್ದು
ಮುಳುಗುವ ಹಾಗಿದೆ ಹೊತ್ತು
ಅವಧದ ವಿಧಿಯಂತೆ
ಹಿಂದುಮುಂದಣ ಯಾವತ್ತು

“ಈಗಲೇ ಬರುವಿಯ
ನಾಳೆ ಮುಂಜಾನೆ ಬರುವಿಯ
ಮಚ್ಚೀಮಹಲಿಗೆ
ಖುದು ಸುಲ್ತಾನ ಅಸೀಫ್‌ ಉದ್‌ದೌಲರ
ಅಪ್ಪಣೆ ಮೇರೆಗೆ”

ಸುರೈಯ

ಅಂಗಳದ ತುಂಬ ಪಾರಿಜಾತದ ಹೂ-
ಅಲ್ಲವೇ
ಮನೆ ಹಜಾರದಲಿ ಹಾಡುವವರೂ
ಆಗಲೇ ಸುರುವಾಗಿತ್ತು
ಯಾವುದೋ ಖಯಾಲು.
ಹಾಡಿದುದು ಮಾತ್ರ ನಾನಲ್ಲ-
ಹಾಡಿದವಳೇ ಬೇರೆ
ನನಗೆ ಖಸಖಸೆಯ ಮೇಲೆ
ನೀರ ಸಿಂಪಡಿಸುವ ಕೆಲಸ
ಆಮೇಲೆ ಶರಬತ್ತು
ತಂದು ಕೊಟ್ಟವಳೂ ನಾನೆ.
ಹೀಗೆ ಕಳೆಯಿತು ಸಂಜೆ
ರಾತ್ರಿಯೂ ಸರಿಯಿತು
ನಿಮ್ಮ ದೃಷ್ಟಿ ನನ್ನ ಮೇಲಿತ್ತೆಂದು
ನನಗಾದರೂ ಏನು ಗೊತ್ತಿತ್ತು ?
**

ಕಾಶ್ಮೀರಿ ರೇಶಿಮೆಯ
ಹಳದಿ ದುಪ್ಪಟದಿಂದ
ಮರೆಸಿದ್ದರೂ ನಿನ್ನ ಹೆರಳು
ಇಣುಕುತಿತ್ತು ಬೆನ್ನ ಮೇಲಿಂದ
ಕಾಲ ಕಿರುಗೆಜ್ಜೆ
ಮರೆಸಿದ್ದರೂ ಲಂಗದಲಿ
ಮರೆಯಾಗಿರಲಿಲ್ಲ ಅದರ
ಆಗಾಗಿನ ಸದ್ದು
ಇರುಳು ಸರಿದಂತೆ ನಿನ್ನ
ಮೂಗಿನ ನತ್ತು
ಹೊಳೆಯತೊಡಗಿತು-ಸುರೈಯ !
ಆ ರಾತ್ರಿ ನಾನು
ಸುಮ್ಮ ಸುಮ್ಮನೆ ಕುಡಿದ
ಶರಬತ್ತಿನ ಲೋಟಕ್ಕೆ
ಲೆಕ್ಕವೇ ಇರಲಿಲ್ಲ !
**

ಆಮೇಲೆ ಬಂದಿರಿ ನೀವು
ನಮ್ಮ ಮನೆಗೇ ನೇರ
ಲೆಕ್ಕಿಸದೆ ಊರವರ
ಲೆಕ್ಕಿಸದೆ ನೆರೆಯವರ-

ಯಾರು ಏನೆಂದೆ
ನನಗೆ ಗೊತ್ತಿರಲಿಲ್ಲ
ಅರಮನೆಯ ಮುಖವನ್ನೂ
ನಾನು ಕಂಡವಳಲ್ಲ

ದುಪ್ಪಟವು ಕೆಳಬಿತ್ತು
ಹೆರಳು ಇಳಿಬಿತ್ತು
ಸಮಯವೇ ನಿಂತಹಾಗಿತ್ತು
ದೊರೆಯೇ !
**

ಸಮಯ ನಿಂತಿರಲಿಲ್ಲ
ಯಾರಿಗೂ ಕಾದಿರಲು ಇಲ್ಲ
ಅದು ಶೂಜ ಉದ್‌ದೌಲರನು
ಬಲಿತೆಗೆದುಕೊಂಡಿತು
ಆಮೇಲೆ ನಾನು
ಅವಧೇಶ್ವರನಾದೆ !
ಫೈಜಾಬಾದಿನಿಂದ
ಲಖನೋವಿಗೆ ಬಂದೆ
ಗೋಮತೀ ತೀರದಲಿ
ಆಗಾಗ ನಡೆದೆ-ಸುರೈಯ !
ಸಮಯ ಗತಿಸುತ್ತಲೇ ಇತ್ತು.
**

ಅವಧೇಶ್ವರನಿರದ ಅವಧ ಅವಧವೇ ?
ಭಣಭಣಿಸುತಿತ್ತು
ಇಡೀ ಫೈಜಾಬಾದು
ನರ್ತನವಿಲ್ಲ, ಗಾಯನವಿಲ್ಲ
ವರ್ಷ ವರ್ಷದ ಮೊಹರಮಿನ
ಉತ್ಸಾಹವಿಲ್ಲ
ಆದರೂ ಕಾದಿದ್ದ ನಾನು.
**

ಬರಗಾಲ ನಿನ್ನನೂ ಬಿಡಲಿಲ್ಲ-
ಹಜರತ್‌ ಇಮಾಮರ ದಯೆ!
ನಾಳೆ ಸಂಜೆಗೆ ನಾನು ಬರುವೆ
ಬಿಳೀ ಕುದುರೆಯ ಮೇಲೆ
ಕೈ ಹಿಡಿದು ಕೂರಿಸುವೆ ನನ್ನ ಜತೆ
ಎಲ್ಲರೆದುರೆ
ಕಾದಿರುವಿಯಲ್ಲವೆ ಸುರೈಯ
ಈ ಮೊದಲು
ಕಾದಿದ್ದ ಹಾಗೆಯೆ
ಫೈಜಾಬಾದಿನಲಿ ?

ಕನಸುಗಳ ಕೊಡುವವನ

ಅಂದಿರುಳು ಕೇಳಿದನು ಅಸೀಫ್‌ ಉದ್‌ದೌಲ
ಕನಸುಗಳ ಕೊಡುವವನ
ಈ ರಾಜ್ಯ ಈ ಕೋಠಿ-
ಹಿಂತೆಗೆದುಕೋ ಇದೆಲ್ಲವ

ಎಲ್ಲಿ ಪಾರಿಜಾತದ ಹೂವು
ಮರತುಂಬ ಬಿರಿದು
ಅಂಗಳದ ಮೇಲೆಯೂ ಚೆಲುವುದೊ
ಎಲ್ಲಿ ಇರುಳಲ್ಲಿ ಸಂಗೀತದ ಮಧ್ಯೆ
ಕಾಲ ಕಿರುಗೆಜ್ಜೆಯೂ
ಶಬ್ದಿಸುವುದೊ
ಎಲ್ಲಿ ದುಪಟ್ಟಾದ ಕೆಳಗೆ ಮೂಗಿನ ನತ್ತು
ಮಿಂಚಿ ಮೀರುವುದೊ
ಸಕಲ ದೀಪಗಳ
ಕನಸುಗಳ ಕೊಡುವವನೆ ! ನನಗಿನ್ನೇನು ಬೇಡ
ಕೊಂಡೊಯ್ದು ಅಲ್ಲಿ
ಬಿಟ್ಟು ಬಿಡು ನನ್ನ
ಯಾರು ನಕ್ಕರು ? ನಗಲಿಲ್ಲ ಯಾರೂ
ರೆಕ್ಕೆ ಬಡಿಯುತಿದೆ
ಪಂಜರದ ಹಕ್ಕಿ.
ಅಸ್ಪಷ್ಟ ನೆನಪು
ಕಾಡುತಿರುವುದೊ ಹೇಗೆ
ಈ ಇಂಥ ಜೀವಕೂ ಸಿಕ್ಕಿ

ಬಿಳಿ ಕುದುರೆ ಹತ್ತಿ

ಬಿಳಿ ಕುದುರೆ ಹತ್ತಿ ಬಂದ ಆಮೇಲೆ
ಇಮಾಂಬಾರಾ ಮುಂದೆ ನಿಂದ
ಇಮಾಂಬಾರಾ ಮುಂದೆ ನಿಂದ ಸರದಾರ
ಕುದುರೆಯಿಂದಿಳಿದು ನಡೆದ

ಎಡಗಡೆ ಅವಳಿಲ್ಲ ಬಲಗಡೆ ಅವಳಿಲ್ಲ
ಹಿಂದುಗಡೆ ಇಲ್ಲ ಮುಂದುಗಡೆ ಇಲ್ಲ
ಹಿಂದಂಗಡೆ ಇಲ್ಲ ಮುಂದುಗಡೆ ಇಲ್ಲ ಸರದಾರ
ಯಾವ ಕಡೆ ನೋಡಿದರು ಇಲ್ಲ

ಅವರ ಕೇಳುವ ಇವರ ಕೇಳುವ
ಹೆಸರಿಡಿದು ನೆಟ್ಟಗೆ ಕೂಗುವ
ಹೆಸರಿಡಿದು ನೆಟ್ಟಗೆ ಕೂಗುವ ಸರದಾರ
ಎಲ್ಲಿ ಸುರೈಯಾ ಓಗೊಡುವ

ಬಿಳಿಕುದುರೆ ಹತ್ತಿ ಹೊರಟ ಆಮೇಲೆ
ಊರೂರು ಸುತ್ತಿ ನಡೆವ
ಊರೂರು ಸುತ್ತಿ ನಡೆವ ಸರದಾರ
ದಾರಿ ಸೆರಾಯಿಯಲಿ ಕಳೆವ

ಮೊಹರಮಿನ ಸಮಯ ! ಓ ಮೊಹರಮಿನ ಸಮಯ !
ಮಾರ್ಸಿಯಾ ಹಾಡಿ ನಡೆವವರೇ
ಮಾರ್ಸಿಯಾ ಹಾಡಿ ನಡೆವವರೇ ಸರದಾರ
ಮುಡಿ ಬಿಚ್ಚಿ ಹಾಕಿದ ಹೆಂಗಸರೇ

ಹಜರತ್‌ ಇಮಾಮರ ಗೋರಿಯ ಮುಂದೆ
ಎಲ್ಲಾ ತಲೆಬಾಗಿ ನಿತ್ತವರೇ
ಎಲ್ಲಾ ತಲೆಬಾಗಿ ನಿತ್ತವರೇ ಸರದಾರ
ಅವರವರ ಕರ್ಬಾಲ ಹೊತ್ತವರೇ

ಸೋಜ್ ಖ್ವಾನಿ

ಹಾಽ ಎಲ್ಲಾ ಎಲ್ಲಾ ಎಲ್ಲಾಽ
ಎಲ್ಲಾಽವ ಕಳಽಕೊಂಡು
ಹಾಽ ಎಲ್ಲಾಽವ ಕಳಽಕೊಂಡು

ಮದೀನಾದ ಕಾರವಾನ
ಶಾಮಾಕ್ಕೆ ಬಂದಿತ್ತು
ಹಽ ಶಾಮಾಕ್ಕೆ ಬಂದಿತ್ತು

ಶಾಮಾಕ್ಕೆ ಬಂದಾಗ
ಮೊದಲಲ್ಲೆ ಇತ್ತಲ್ಲ
ಹಾಽ ಮೊದಲಲ್ಲೆ ಇತ್ತಲ್ಲ

ಮೊದಲಲ್ಲೆ ಇತ್ತಲ್ಲ
ಹುಸೇನರ ರುಂಡ
ಹ್ಯಾಽ ಹುಸೇನರ ರುಂಡ

ಭರ್ಚಿಯ ಮೇಲದರ
ಹಾ ! ಎಂಥ ಛಂದ
ಹಾ ಎಂಥ ಛಂದ

ಒಟ್ಟಿಗೆ ಬಂದರು
ಬರಿತಲೆ ಹೆಂಗಸರು
ಹಾಽ ಬರಿತಲೆ ಹೆಂಗಸರು

ಬರಿತಲೆ ಹೆಂಗಸರು
ಎದೆ ಎದೆ ಬಡಕೊಂಡು
ಹಾಽ ಎದೆ ಎದೆ ಬಡಕೊಂಡು

ಹಾಽ ಎಲ್ಲಾ ಎಲ್ಲಾ ಎಲ್ಲಾಽ
ಎಲ್ಲಾಽವ ಕಳಕೊಂಡು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಸಂತನ ಮರೆ
Next post ಜಗದಂಬೆ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…