ರುಡ್ಯಾರ್ಡ ಕಿಪ್ಲಿಂಗ್‌ನ ಕಥನ ಗೀತೆಗಳು – ಭಾಗ ೨

ರುಡ್ಯಾರ್ಡ ಕಿಪ್ಲಿಂಗ್‌ನ ಕಥನ ಗೀತೆಗಳು – ಭಾಗ ೨

ಆ ನಿವೃತ್ತ ಬ್ರಿಟೀಶ್ ಸೈನಿಕ ಲಂಡನ್ನಿನ ಇಕ್ಕಟ್ಟಾದ ಓಣಿಯಲ್ಲಿ ಕುಳಿತು ಬರ್ಮಾದಲ್ಲಿನ ತನ್ನ ಹಳೆಯ ನೆನಪುಗಳ ಹಗ್ಗವನ್ನು ಮತ್ತೊಮ್ಮೆ ಹೊಸೆಯುತ್ತಿದ್ದಾನೆ. ಆ ಪುರಾತನ ಬೌದ್ಧ ಪಗೋಡಾ ಅಲ್ಲಿ ಪಕ್ಕದಲ್ಲಿ ಆ ಸ್ನಿಗ್ಧ ಮುಖದ ಆ ಬರ್ಮಾ ಚಲುವೆ, ತನ್ನ ಮೊದಲ ಭೇಟಿ ಅವಳಿಗಿತ್ತ ಮೊದಲ ಮುತ್ತು, ದೇಗುಲದ ಘಂಟೆ ಎಲ್ಲವೂ ಸ್ಮೃತಿ ಪಟಲದಿಂದ ಪುಟಿದೇಳುತ್ತಿವೆ. ಕಣ್ಣಿನೊಳಗೆ ಬಣ್ಣಗೊಳ್ಳುತ್ತಿವೆ. ನೆನಪುಗಳಿಂದ ಹೊರಬರಲು ಲಂಡನ್ನಿನ ಒರಟು ಹಾಸುಗಳ ಮೇಲೆ ಬ್ರಿಟಿಶ್ ಹೆಣ್ಣುಗಳೊಂದಿಗೆ ಹಾಕಿದ ಸ್ನೇಹದ ಹೆಜ್ಜೆಗಳಿಗೂ ಆತನ ಒಳ ತುಡಿತ ಇಂಗಿಸಲಾಗಲಿಲ್ಲ. ಹೊಸ ಶೂಗಳು ಸವೆದವೆ ಹೊರತು ಕಾಲುಗಳು ಕುಣಿದಾಡಲಿಲ್ಲ. ಬರ್ಮಾ ಚಲುವೆಯ ನಿಷ್ಕಲ್ಮಶ ಪ್ರೀತಿಗೆ ಕರಗಿದ ಆ ಸೈನಿಕ ಲಂಡನ್ನಿನ ಹುಡುಗಿಯರ ಸೋಗಿನ ಪ್ರೀತಿಗೆ, ಬಡಿವಾಣಕ್ಕೆ ಕಣ್ಣು ಕಿರಿದಾಗಿಸುತ್ತಾನೆ. ಎಸಳು ಪ್ರೀತಿಯ ಹುಡುಗಿ, ಆ ಸಿಹಿ ಸಂವೇದನೆ ಆತನ ರಕ್ತನಾಳಗಳಲ್ಲಿ ತುಂಬಿ ಲಂಡನ್ನಿಗೆ ಮರಳಿದ ಮೇಲೂ ಕಾಡುವ ನೆನಪಾಗಿ ಉಳಿಯುತ್ತಾಳೆ.

ಇದು ಕಿಪ್ಲಿಂಗ್‌ನ ಪ್ರಸಿದ್ಧ ಕಾವ್ಯ ಸಂಪುಟ “ಬೆರ್‍ಯಾಕ್ ರೂಮ್ ಬ್ಯಾಲಡ್ಸ್” ನಲ್ಲಿಯ ಮ್ಯಾಂಡಲೇ ಎಂಬ ಅದ್ಭುತ ಕಥನ ಗೀತೆಯ ಸಾರ. ಮ್ಯಾಂಡಲೇ ಬರ್ಮಾದ ಅಂದಿನ ರಾಜಧಾನಿ, ಅಪೂರ್ವ ಪ್ರಾಕೃತಿಕ ಬಲೆ ಹೊದ್ದ ನಗರ. ಬ್ರಿಟೀಶ ಸೈನಿಕರು ಪೌರಾತ್ಯ ರಾಷ್ಟ್ರ್‍ಅಗಳಲ್ಲಿಯ ಭೂರಮೆಯ ಸೊಬಗಿಗೆ ಮರುಳಾಗುವ, ಇಲ್ಲಿಯ ಹೆಣ್ಣುಮಕ್ಕಳ ಮುಗ್ಧ ಪ್ರೀತಿಗೆ ಮನಸೋಲುವ ಪರಿಯನ್ನು ಆತ ಮನೋಜ್ಞವಾಗಿ ಚಿತ್ರಿಸಿದ್ದಾನೆ. ಲಂಡನ್ನಿನ ಕೃತಕ, ನಿಸ್ಸಾರ, ಮುಖವಾಡದ ಯಾಂತ್ರಿಕ ಬದುಕಿಗೂ ರಮ್ಯತೆಯ ಶ್ರೀಮಂತಿಕೆಯನ್ನು ಹೊಸೆದು ಬದುಕುವ ಬರ್ಮಾ ಬದುಕಿಗೂ ಹೋಲಿಸಿ ಸೈನಿಕ ಹೇಳುತ್ತಾನೆ “If one has lived in the east, no other place is worth caring”

ಶೇಕ್ಸಪೀಯರನ ನಂತರ ಬ್ರಿಟಿಷ ಸೈನಿಕರ ನೈಜ ಬದುಕಿನ ದುರ್ಗಮ ದಾರಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸಿದವ ಕಿಪ್ಲಿಂಗ್. ಆತನ ಬೆರ್‍ಯಾಕ್ ರೂಮ್ ಬ್ಯಾಲಡ್ಸ್ನ ‘ಗುಂಗಾ ದಿನ್’, ‘ಮ್ಯಾಂಡಲೇ’, ‘ಫಜ್ಜಿ ವುಜ್ಜಿ’, ‘ಡ್ಯಾನಿ ಡೀವರ’, ‘ಟೋಮಿ’, ಇತ್ಯಾದಿಗಳಲ್ಲೆಲ್ಲ ಆತ ಬ್ರೀಟಿಷ ಸೈನಿಕರನ್ನು ತನ್ನ ಕಾವ್ಯದ ನಾಯಕರನ್ನಾಗಿಸಿದ. ಅವರ ವೃತ್ತಿ ಬದುಕಿನ ಜೊತೆ ಆತನ ಕಾವ್ಯ ವ್ಯವಹರಿಸುವುದಿಲ್ಲ. ಬದಲಿಗೆ ಆತ ಒತ್ತು ಕೊಟ್ಟಿದ್ದು ಸೈನಿಕರ ದಮನಕ್ಕೊಳ್ಳಪಟ್ಟ ಸಾಮಾಜಿಕ ಬದುಕಿನ ಬಗ್ಗೆ. ಆತನ ‘ಟೋಮಿ’ಗಳು ಬ್ರೀಟಿಷ ಸೈನಿಕರು. ಬ್ರೀಟಿಷ ಸಮಾಜದ ಮೇಲ್ವರ್ಗದ ಜನರ ಬಡಾವಣೆಗಳಲ್ಲಿ ಇವರಿಗೆ ಸ್ಥಾನವಿಲ್ಲ. ಯುದ್ಧಕಾಲದ ಹೊರತಾಗಿ ಉಳಿದಂತೆ ಸೈನಿಕರು ಅವಗಣನೆ ಒಳಗಾದವರು. ಕಿಪ್ಲಿಂಗ್‌ನ ಕೃತಿಗಳು ಭಾರತ ಹಾಗೂ ಇನ್ನಿತರ ಪೂರ್ವದ ಬ್ರಿಟಿಷ ವಸಾಹತು ರಾಷ್ಟ್ರಗಳಲ್ಲಿ ಬ್ರಿಟೀಷ ಸಾಮ್ರಾಜ್ಯಶಾಹಿ ಭದ್ರ ಉಳಿವಿಗಾಗಿ ಹೋರಾಡುವ ಸೈನಿಕರ ಒಳಬದುಕಿನ ಕ್ಲೀಷೆಯನ್ನು, ದುರ್ಗಮ ಬದುಕನ್ನು ಜಗತ್ತಿಗೆ ಪರಿಚಯಿಸಿದವು. ಜಾಗತಿಕ ವಲಯದಲ್ಲಿ ಸೈನಿಕರ ಬಗ್ಗೆ ಇದುವರೆಗೆ ಇದ್ದ ಅಲಕ್ಷಿತ ಮನೋಭಾವ ಬದಲಾಗಿ ಲಕ್ಷಾಂತರ ಓದುಗರ ಕರುಣೆ ಹಾಗೂ ಗೌರವ ಪ್ರಾಪ್ತವಾದವು. ಸುಸಂಸ್ಕೃತ ಇಂಗ್ಲೀಷ ಭಾಷೆ ಬಲ್ಲ ಕಿಪ್ಲಿಂಗ್ ಇಲ್ಲಿ ಸೈನಿಕರದೇ ಆದ cockney ಎಂಬ ಉಪಭಾಷೆಯನ್ನು ಬಳಸಿದ. ವಾಸ್ತವಿಕತೆಯ ನೆರಳನ್ನು ದಟ್ಟವಾಗಿಸಿದ.

ಬ್ರೀಟಿಷ ಸಾಮ್ರಾಜ್ಯಶಾಹಿ ದೋರಣೆಯ ಪರವಾಗಿ ವಸಾಹತು ರಾಷ್ಟ್ರಗಳಲ್ಲಿ ಬ್ರೀಟಿಷ್ ಪ್ರಭುತ್ವವನ್ನು ಬಹುವಾಗಿ ಪ್ರತಿಪಾದಿಸಿದ ಕಿಪ್ಲಿಂಗ್ ‘ಬ್ರೀಟಿಷ ಸಾಮ್ರಾಜ್ಯಶಾಹಿಯ ಪ್ರವಾದಿ’ ಎಂದು ಪ್ರಸಿದ್ಧನಾಗಿದ್ದ. ವಸಾಹತು ರಾಷ್ಟ್ರಗಳ ಉದ್ಧಾರ ಬ್ರೀಟಿಷ ನೀತಿಯಿಂದ ಮಾತ್ರ ಸಾಧ್ಯ ಎಂದು ಸಂಕೇತಿಸುವ ಇತನ ಕೃತಿಗಳು ಕಟು ವಿಮರ್ಶೆಗೆ ಒಳಗಾದರೂ ಆತನ ಬಹುತೇಕ ಸಣ್ಣ ಕಥೆಗಳು ಹಾಗೂ ಕಥನ ಗೀತೆಗಳಿಗೆ ಭಾರತದ ಮತ್ತು ಇನ್ನಿತರ ಪೌರಾತ್ಯ ಸ್ಥಳಗಳೇ ನೆಲೆ. ಇಲ್ಲಿನ ನೈಸರ್ಗಿಕ ಸೌಂದರ್ಯ, ಸ್ನಿಗ್ಧ ಚೆಲುವಿನ ಮುಗ್ಧ ಮನಸ್ಸಿನ ಹೆಣ್ಣುಗಳು, ಅಶಿಕ್ಷಿತ, ನಿಷ್ಕಪಟ ಪೌರಾತ್ಯ ಪಾತ್ರಗಳು ಆತನ ಕೃತಿಗಳಲ್ಲಿ ಉದ್ದಕ್ಕೂ ಕಂಡುಬರುತ್ತಾರೆ. ಅವರನ್ನು ಮೆಚ್ಚಿ ಬರೆಯುತ್ತಾನೆ. ಅಂತದರಲ್ಲಿ ‘ಗುಂಗಾ ದಿನ್’ ಅಪೂರ್ವ ಕಥನ ಗೀತೆ.

‘ಭಿಸ್ತಿ’ ದಕ್ಷಿಣ ಏಷಿಯಾ ಭಾಗಗಳಲ್ಲಿ ಭಾರತ ಒಳಗೊಂಡು ರೆಜಿಮೆಂಟ್ಗಳಲ್ಲಿ ಸೈನಿಕರಿಗೆ ನೀರು ಹೊತ್ತು ತರುವ ಕೂಲಿಗೆ ಇರುವ ಹೆಸರು. ಗುಂಗಾದಿನ್ ಒಬ್ಬ ಭಿಸ್ತಿ. ಯುದ್ಧ ಭೂಮಿಯಲ್ಲಿ ದಾಹದಿಂದ ಬಸವಳಿದ ಸೈನಿಕರಿಗೆ ತನ್ನ ಆಡಿನ ಚರ್ಮದ ಚೀಲದಿಂದ ನೀರುಣಿಸಿ ತಣಿಸುವುದಷ್ಟೇ ಆತನಿಗೆ ಗೊತ್ತು. ಹೇಳವನಾದ ಆತ ಹಲವಾರು ಬಾರಿ ನಿಂದನೆಗೆ ಶಿಕ್ಷೆಗೆ ಒಳಗಾದರೂ ಅವನಲ್ಲಾವ ಬದಲಾವಣೆ ಇಲ್ಲ, ನಿರ್ಲಿಪ್ತತೆ ಹೊರತಾಗಿ. ಆದರೆ ಅದೇ ಆ ಸೈನಿಕ ಯುದ್ಧದಲ್ಲಿ ಗುಂಡೇಟಿಗೆ ಬಲಿಯಾದಾಗ ತನ್ನ ಪ್ರಾಣದ ಹಂಗುತೊರೆದು ನೀರುಣಿಸಿ ಸೈನಿಕನ್ನು ರಕ್ಷಿಸಲು ಯುದ್ಧಭೂಮಿಯಲ್ಲಿ ಹೊತ್ತು ಸಾಗುತ್ತಿದ್ದಾನೆ. ಮರುಕ್ಷಣ ಆ ಇನ್ನೊಂದು ಗುಂಡು ಆತನ ಎದೆ ಸೀಳಿ ನಕ್ಕಿತು. ಕೊನೆಯುಸಿರು ಬಿಡುತ್ತಾ ಆತ ಸೈನಿಕನಲ್ಲಿ ಕೇಳುತ್ತಾನೆ ನೀರು ನಿನಗೆ ಇಷ್ಟವಾಯಿತಲ್ಲವೇ? ಈಗ ಸೈನಿಕ ಅಂದುಕೊಳ್ಳುತ್ತಾನೆ, ಮನುಷ್ಯನ ನಿಜವಾದ ಶ್ರೇಷ್ಠತೆ ಜಾತಿ ಮತ್ತು ರಾಷ್ಟೀಯತೆಗಳಿಗೆ ಮೀರಿದ ಮಾನವೀಯತೆ. ಸೈನಿಕರು ಯುದ್ಧಭೂಮಿಯಲ್ಲಿ ಉದಾತ್ತ ಧೀಮಂತ ಕಾರಣಕ್ಕಾಗಿ ಹೋರಾಡಿದರೆ ಗುಂಗಾದಿನ್ ಅದಕ್ಕೂ ಶ್ರೇಷ್ಠವಾದ ಮಾನವತಾವಾದ, ಹಸಿವು ನೀರಡಿಕೆಗಳ ವಿರುದ್ಧ ಹೋರಾಡಿದ. ಶ್ರೇಷ್ಠರಲ್ಲಿ ಶ್ರೇಷ್ಠನಾಗಿ ಗುಂಗಾದಿನ್ ಸೈನಿಕನಿಗೆ ಕಂಡುಬರುತ್ತಾನೆ ಮತ್ತು ನಮಗೂ ಕೂಡ.

ಬ್ರೀಟಿಷ ವಸಾಹತು ನೀತಿಯನ್ನು ಬಹುವಾಗಿ ಪ್ರತಿಪಾದಿಸಿದ ಕಿಪ್ಲಿಂಗ್ ಅದು ದೇವರ ಆದೇಶವೆಂಬಂತೆ ಬಿಳಿಯರ ಆಡಳಿತವನ್ನು ಸಮರ್ಥಿಸಿಕೊಂಡಿದ್ದ. ಹಿಂದುಳಿದ ದೇಶಗಳ ಉದ್ದಾರಕ್ಕೆ ಇಂಗ್ಲೆಂಡಿನ ಸಾರ್ವಭೌಮತೆಯನ್ನು ಪ್ರತಿಪಾದಿಸಿದ್ದ. ಆತನಲ್ಲಿ ಬ್ರೀಟಿಷ್ ಸಾಮ್ರಾಜ್ಯಶಾಹಿಯ ಗುಣ ರಕ್ತಗತವಾಗಿತ್ತು. ಇಲ್ಲಿಯೇ ಜನಿಸಿದ್ದರೂ ಕಿಪ್ಲಿಂಗ್ ಭಾರತ ಮತ್ತು ಇಲ್ಲಿಯ ಆಚರಣೆ ಶ್ರೀಮಂತಿಕೆಯ ಕುರಿತು ಗೌರವ ಹೊಂದಿರಲಿಲ್ಲ ಎನ್ನುವುದೇ ಖೇದಕರ.

ಆದರೆ ಕಿಪ್ಲಿಂಗ್ ಕಲ್ಪನಾ ಸಾಮ್ರಾಜ್ಯದ ಚಕ್ರವರ್ತಿ. ಆತನ ‘ಜಂಗಲ್ ಬುಕ್’ ಮತ್ತು ‘ಕಿಮ್’ ಕಾದಂಬರಿಗಳು ಓದುಗರ ಮನಸ್ಸನ್ನು ಹರಳುಗಟ್ಟಿಸುವ ಕಾಲ್ಪನಿಕ ಪಾತ್ರಗಳಿಂದ ಜಾಗತಿಕ ವೇದಿಕೆಯಲ್ಲಿ ಮಿಂಚಿದವು. ಚಲನಚಿತ್ರವಾಗಿ ಜನಪ್ರಿಯವಾದ ಜಂಗಲಬುಕ್’ನ ಮೋಗ್ಲಿ ಮನೆಮನೆಯ ಮಕ್ಕಳ ಹೀರೋ. ಕಿಮ್ ಲಾಹೋರನಲ್ಲಿಯ ಅನಾಥ ಐರಿಶ್ ಹುಡುಗನ ಕಥೆ. ಆದರೂ ೧೯೩೬ ಜನವರಿ ೧೮ರಂದು ಅನಾರೋಗ್ಯಕ್ಕೆ ೭೦ ನೇ ವಯಸ್ಸಿಗೆ ಮರಣ ಹೊಂದಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಯಾಕೆ
Next post ಮಾಗಿ

ಸಣ್ಣ ಕತೆ

 • ಏಡಿರಾಜ

  ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

 • ಆಪ್ತಮಿತ್ರ

  ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

 • ನಿರೀಕ್ಷೆ

  ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

 • ಕೊಳಲು ಉಳಿದಿದೆ

  ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

 • ದೇವರೇ ಪಾರುಮಾಡಿದಿ ಕಂಡಿಯಾ

  "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…