ಮುಸ್ಸಂಜೆಯ ಮಿಂಚು – ೭

ಮುಸ್ಸಂಜೆಯ ಮಿಂಚು – ೭

ಅಧ್ಯಾಯ ೭ ಅಪ್ಪನಿಂದಾಗಿ ದೂರವಾದ ಗಂಡ

ವಸು ಇಬ್ಬರು ಅಕ್ಕಂದಿರು, ಇಬ್ಬರು ತಮ್ಮಂದಿರ ನಡುವೆ ಮುಟ್ಟಿದವಳು. ಬರೀ ಹೆಣ್ಣೇ ಎಂದು ಅಸಹನೆಯಿಂದ ಸಿಡಿಯುತ್ತಿದ್ದ ಸಂಸಾರದಲ್ಲಿ ತಂಗಾಳಿಯಂತೆ ಹುಟ್ಟಿದ ಗಂಡುಮಕ್ಕಳು ಹೆಣ್ಣುಮಕ್ಕಳ ಪಾಲಿಗೆ ಬಿಸಿ ಗಾಳಿಯಾಗಿದ್ದರು. ಗಂಡು ಗಂಡು ಎಂದು ಅಟ್ಟಕ್ಕೇರಿಸಿ, ಆ ಮಕ್ಕಳಿಗಾಗಿ ಹೆಣ್ಣುಮಕ್ಕಳನ್ನು ಅಸಡ್ಡೆಯಿಂದ ನಿರ್ಲಕ್ಷಿಸುತ್ತಿದ್ದ ಅಪ್ಪನಿಂದಾಗಿ ಬಹಳವಾಗಿ ನೊಂದು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದರು ವಸು ಮತ್ತು ಅವಳ ಅಕ್ಕಂದಿರು. ಹೆತ್ತ ಮಕ್ಕಳೇ ಆದರೂ ಹೆಣ್ಣೆಂಬ ಕಾರಣಕ್ಕೆ ಅಲಕ್ಷಿಸಿ ತಾತ್ಸಾರ ತೋರಿ, ತಿರಸ್ಕಾರ ತೋರಿಸಿ ಹೂಮನಗಳನ್ನು ಸದಾ ನೋಯಿಸುತ್ತಿದ್ದು, ಖರ್ಚು ಎಂಬ ಕಾರಣಕ್ಕೆ ಶಾಲೆಯನ್ನು ಮೊಟಕುಗೊಳಿಸಿ, ಅನ್ನ ಹಾಕುವುದೇ ದಂಡ ಎಂಬಂತೆ ಸಿಕ್ಕವರಿಗೆ ಕೊಟ್ಟು ಕೈತೊಳೆದುಕೊಂಡು, ಮದುವೆ ಎಂಬ ಕಾರ್ಯವನ್ನು ಮುಗಿಸಿಬಿಟ್ಟ ಕಟುಕ ಹೃದಯಿ ಅಪ್ಪ, ಮಕ್ಕಳಿಗಾಗಿ ಮೌನವಾಗಿ ಕಣ್ಣೀರು ಮಿಡಿಯುವುದೇ ವಸುವಿನ ಅಮ್ಮನಿಗೆ ಸಾಧ್ಯವಾಗುತ್ತಿದ್ದದ್ದು. ಅಕ್ಕಂದಿರ ಯಾವ ಕಷ್ಟಗಳಿಗೂ ಸ್ಪಂದಿಸದ ವಸುವಿನ ಅಪ್ಪ ಕೊನೆಯವರೆಗೂ ಅವರಿಗೆ ಹತ್ತಿರವಾಗಲೇ ಇಲ್ಲ.

ಕೊನೆಯವಳಾಗಿ ಹುಟ್ಟಿದ್ದಕ್ಕೋ ಏನೋ ವಸು ಸ್ಕೂಲ್ ಫೈಲನ್ನು ಮುಗಿಸಿದ್ದಳು. ಹಟ ಮಾಡಿ ಕಾಲೇಜಿಗೂ ಸೇರಿದಳು. ಕಾಸುಕಾಸಿಗೂ ಲೆಕ್ಕ ಹಾಕುವ ಅಪ್ಪನಿಂದ ಫೀಸ್, ಪುಸ್ತಕಕ್ಕಾಗಿ ಹಣ ಪಡೆಯಲು ವಸು ಹರಸಾಹಸ ಪಡುತ್ತಿದಳು. ಕದ್ದು-ಮುಚ್ಚಿ ಅಮ್ಮ ಕೊಡುವ ಹಣವೇ ಆಧಾರವಾಗಿತ್ತು. ಪಿಯುಸಿ ಮುಗಿಸುವಷ್ಟರಲ್ಲಿ ಅಪ್ಪ, ಅಕ್ಕಂದಿರಿಗೆ ಕಟ್ಟಿದಂತೆಯೇ ತನ್ನನ್ನೂ ಯಾರಿಗೊ ಕಟ್ಟಿ ಸಾಗಹಾಕಲೆತ್ನಿಸಿದಾಗ ವಸು ಭೂಮಿಗಿಳಿದು ಹೋಗಿದ್ದಳು. ಅಕ್ಕಂದಿರು ಪಡುತ್ತಿರುವ ಕಷ್ಟಗಳನ್ನು ಕಂಡ ಮೇಲೂ ಮದುವೆಯಾಗುವ ಧೈರ್ಯ ಬಂದೀತೇ? ಆ ಸಮಯದಲ್ಲಿಯೇ ವೆಂಕಟೇಶ್ ವಸುವನ್ನು ಮೆಚ್ಚಿ ಒಪ್ಪಿ ಸರಳವಾಗಿ ಮದುವೆಯಾದದ್ದು.

ಅಪ್ಪನ ಆಯ್ಕೆಗೆ ಬಿಟ್ಟಿದ್ದರೆ ವಸುವಿನ ಸ್ಥಿತಿಯೂ ಬೇರೆಯಾಗಿಯೇನೂ ಇರುತ್ತಿರಲಿಲ್ಲ. ಆದರೆ ಈ ವಿಷಯದಲ್ಲಿ ವಸುವಿನ ಅಮ್ಮ ಹಟ ಹಿಡಿದು, ಮದುವೆಯೇ ಬೇಡ, ಓದು ಮುಂದುವರಿಸಿ ಕೆಲಸಕ್ಕೆ ಸೇರಿ, ನನ್ನ ಕಾಲ ಮೇಲೆ ನಾನು ನಿಲ್ಲಬೇಕೆಂದು ಗಲಾಟೆ ಮಾಡುತ್ತಿದ್ದ ವಸುವನ್ನು ಒಪ್ಪಿಸಿ, ವೆಂಕಟೇಶನಂಥ ಸಜ್ಜನನ ಕೈಗಿಟ್ಟಿದ್ದಳು.

ಓದುವ ಹುಚ್ಚು ಹೆಂಡತಿಗಿದೆ ಎಂದು ತಿಳಿದಾಗ ವೆಂಕಟೇಶ್, ವಸುವನ್ನು ಕಾಲೇಜಿಗೆ ಕಳುಹಿಸಿ, ಬಿ.ಎಡ್. ಮಾಡಿಸಿ, ಹೈಸ್ಕೂಲ್ ಶಿಕ್ಷಕಿಯಾಗುವಂತೆ ಮಾಡಿದ್ದರು, ಆಗಿನ ಕಾಲದಲ್ಲಿಯೇ. ಸುಖ ಅಂದರೇನು? ಸಂತೋಷ ಅಂದರೇನು ಎಂದು ವಸು ತಿಳಿದದ್ದೇ ಮದುವೆಯ ಅನಂತರ, ತನ್ನನ್ನು ಅತಿಯಾಗಿ ಪ್ರೀತಿಸುವ ಗಂಡ, ತನ್ನ ಸುಖಕ್ಕಾಗಿ, ನೆಮ್ಮದಿಗಾಗಿ ಏನನ್ನಾದರೂ ಮಾಡಲು ಸಿದ್ದವಿರುವ ವೆಂಕಟೇಶ್‌ನಿಂದಾಗಿ ಬದುಕೇ ರಮ್ಯವೆನಿಸಿತ್ತು. ಮಗ ಹುಟ್ಟಿದ ಮೇಲಂತೂ ಬದುಕು ಸ್ವರ್ಗವೇ ಆಗಿತ್ತು. ವಸುವಿನ ಸುಂದರ ಬಾಳನ್ನು ಕಂಡ ವಸುವಿನ ಅಮ್ಮ ಒಬ್ಬಳು ಮಗಳದಾದರೂ ಬದುಕು ಬಂಗಾರವಾಯ್ತಲ್ಲ ಎಂದೇ ನೆಮ್ಮದಿಯಿಂದ ಪ್ರಾಣಬಿಟ್ಟಳು. ಅಮ್ಮ ಸತ್ತದ್ದೇ ಒಳ್ಳೆಯದಾಯಿತು. ಅಪ್ಪನ ಪ್ರತಿರೂಪದಂತಿದ್ದ ಗಂಡುಮಕ್ಕಳಿಂದ ಅಮ್ಮ ಸುಖಪಡುವುದು ಅಷ್ಟರಲ್ಲಿ ಇತ್ತು ಎಂದು ಸಮಾಧಾನಗೊಂಡಿದ್ದಳು ವಸು.

ಹೆಣ್ಣುಮಕ್ಕಳನ್ನು ನಿಕೃಷ್ಟವಾಗಿ ಕಂಡಿದ್ದ ಅಪ್ಪ ಈಗ ಗಂಡುಮಕ್ಕಳ ದರ್ಬಾರಿನಲ್ಲಿ ಮೂಲೆಗುಂಪಾಗಿದ್ದು, ‘ಮಾಡಿದ್ದುಣೋ ಮಹಾರಾಯ’ ಎಂಬಂತೆ, ಮಹಾರಾಜನಂತೆ ಮೆರೆದಿದ್ದ ಅಪ್ಪ, ತಾನು ಮೆರೆಸಿದ್ದವರಿಂದಲೇ ದೀನಾವಸ್ಥೆ ತಲುಪಿಸುವ ಅಪ್ಪನ ಬಗ್ಗೆ ಆತನ ಹೆಣ್ಣುಮಕ್ಕಳಿಗೆ ಯಾವುದೇ ಕನಿಕರ ಹುಟ್ಟುವಂತಿರಲಿಲ್ಲ. ಪಾಪಿ, ಅನುಭವಿಸಲಿ ಅಂತ ತಿರುಗಿಯೂ ನೋಡದೆ ಸುಮ್ಮನಾಗಿಬಿಟ್ಟಿದ್ದರು. ಆದರೆ ವಸುವಿನಿಂದ ಹಾಗೆ ಇರಲು ಸಾಧ್ಯವಾಗಿರಲಿಲ್ಲ.

ದೀನಸ್ಥಿತಿಯಲ್ಲಿರುವ ಅಪ್ಪ, ಗಂಡುಮಕ್ಕಳ ನಿಕೃಷ್ಟಕ್ಕೆ ಬಲಿಯಾಗಿ, ದರ್ಪದಿಂದ ಬದುಕಿದ ಜೀವ, ಅಂಗೈಯಲ್ಲಿ ಜೀವ ಹಿಡಿದು, ಹಿಡಿ ಪ್ರೀತಿಗಾಗಿ ಒದ್ದಾಡುತ್ತಿರುವ ಅಪ್ಪನನ್ನು ನೋಡುತ್ತಾ ನೋಡುತ್ತಾ ಸುಮ್ಮನಿರದಾದಳು ವಸು. ಕಣ್ಣೀರು ತರಿಸುವ ಆತನ ಸ್ಥಿತಿ ಎಂಥವರ ಕಲ್ಲೆದೆಯನ್ನೂ ಕರಗಿಸುವಂತಿರುವಾಗ, ಹೆತ್ತ ಮಗಳಾದ ನಾನು ಹೇಗಿರಲಿ? ಹೆತ್ತ ಕರುಳಿಗಾಗಿ ಜೀವ ಬಾಧಿಸುವುದಿಲ್ಲವೇ? ಅಪ್ಪನನ್ನು ನೋಡಿಕೊಳ್ಳುವ ಕರ್ತವ್ಯ ನನಗೂ ಇದೆ ತಾನೇ? ಅಪ್ಪನನ್ನು ನಮ್ಮ ಮನೆಗೆ ಕರೆತಂದುಬಿಡೋಣ, ದೇವರು ಕೊಟ್ಟ ಅನುಕೂಲವಿದೆ, ಎದೆಯೊಳಗೆ ಹೆತ್ತವರಿಗಾಗಿ ಮರುಗುವ ಹೃದಯವಿದೆ, ಅಪ್ಪನ ಕೊನೆಗಾಲವನ್ನು ನೆಮ್ಮದಿಯಿಂದ, ಸಂತೋಷದಿಂದ ಕಳೆಯಲು ಅನುವು ಮಾಡಿಕೋಡೋಣ ಎಂದು ವೆಂಕಟೇಶನನ್ನು ಕೇಳಿದಳು.

ಆದರೆ ಮಾವನ ಸ್ವಭಾವ ತಿಳಿದಿದ್ದ, ತನ್ನ ವಸುವಿಗೆ ಆತ ಅದೆಷ್ಟು ಹಿಂಸಿಸಿದ್ದ? ಅನಾದರ ಮಾಡಿದ್ದ? ನಿಕೃಷ್ಟವಾಗಿ ಕಂಡಿದ್ದ ಎಂಬುದನ್ನು ತಿಳಿದಿದ್ದ ವೆಂಕಟೇಶ್ ಖಂಡಿತ ವಸುವಿನ ನಿರ್ಧಾರವನ್ನು ಒಪ್ಪದಾದನು. “ಅಪ್ಪ-ಅಮ್ಮನ್ನ ನೋಡಿಕೊಳ್ಳೋದು ಗಂಡುಮಕ್ಕಳ ಕರ್ತವ್ಯ. ಅವರೇನು ನಿಮ್ಮಪ್ಪನನ್ನ ಮನೆಯಿಂದ ಹೊರಗೆ ಹಾಕಿದ್ದಾರಾ? ಹೇಗಾದರೂ ನೋಡಿಕೊಳ್ಳಲಿ ಬಿಟ್ಟುಬಿಡು, ತಲೆಕೆಡಿಸಿಕೊಳ್ಳಬೇಡ. ಇಲ್ಲಿಗೆ ಮಾತ್ರ ಕರೆತರುವುದು ಬೇಡವೇ ಬೇಡ” ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಾಗ ವಸು ಬಹಳವಾಗಿ ನೊಂದುಕೊಂಡಳು.

ತಾನು ಎಷ್ಟು ದುಡಿದರೇನು? ಸ್ವಾವಲಂಬಿ ಉಸಿರೆಳೆಯುತ್ತಿರುವ ಜೀವಕ್ಕಿಷ್ಟು ತಂಪು ಕೊಡಲಾರದ ಅಸಹಾಯಕತೆ, ಜನ್ಮ ಕೊಟ್ಟಾತನಿಗೆ ಆಸರೆ ಕೊಡಲಾರದ ಈ ಪರಿಸ್ಥಿತಿ ಯಾರಿಗೂ ಬರಬಾರದೆಂದು ಹಲುಬಿದಳು. ವೆಂಕಟೇಶನಿಗೆ ತನ್ನ ತವರಿನವರನ್ನು ಕಂಡರೆ ಅಷ್ಟಕ್ಕಷ್ಟೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಆದರೆ, ಈ ಘಳಿಗೆಯಲ್ಲಿ ಮಾನವೀಯತೆ ಬೇಡವೇ?

ಏನಾದರಾಗಲಿ, ತಾನಂತೂ ತನ್ನ ನಿರ್ಧಾರ ಬದಲಿಸುವವಳಲ್ಲ. ವೆಂಕಟೇಶ್ ಅಸಮಾದಾನ ತೋರಿದರೂ ಸರಿಯೇ ಅಪ್ಪನನ್ನು ಕರೆತಂದೇ ತರುತ್ತೇನೆ ಎಂದು ಮನೆಗೆ ಕರೆತಂದೇ ಬಿಟ್ಟಳು.

ಅಮ್ಮನನ್ನು ನೋಡಿಕೊಳ್ಳುವ ಭಾಗ್ಯವಂತೂ ತನಗಿಲ್ಲ, ಅಪ್ಪನನ್ನಾದರೂ ನೋಡಿಕೊಂಡು ಅಮ್ಮನ ಋಣ ತೀರಿಸುತ್ತೇನೆ.

ತನಗಾಗಿ ಏನನ್ನಾದರೂ ತಿನ್ನಲು ತಂದಿದ್ದಾಳೆಯೇ ಎಂದು ಆಸೆಯಿಂದ ನೋಡುವ, ತಂದದ್ದನ್ನು ಕೊಟ್ಟ ಕೂಡಲೇ ಗಬಗಬನೇ ತಿನ್ನುವ, ಮಗ-ಸೊಸೆಯರಿಗೆ ಹೆದರಿ ನಡುಗುತ್ತ, ನನ್ನನ್ನು ಕರ್ಕೊಂಡು ನಿಮ್ಮ ಮನೆಗೆ ಹೋಗೇ ಎಂದು ಗೋಗರೆಯುವ ಅಪ್ಪ, ಅಕ್ಕಂದಿರ ಬಾಳನ್ನು ಹಸನು ಮಾಡದೆ, ದುಡಿದದ್ದೆಲ್ಲವನ್ನೂ ಮಕ್ಕಳ ಕೈಗೆ ಕೊಟ್ಟು ಕೈತೊಳೆದುಕೊಂಡು, ಅಸಾಹಯಕವಾಗಿರುವ ಅಪ್ಪ, ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದು, ಹಿಡಿ ಪ್ರೀತಿಗಾಗಿ ಹಂಬಲಿಸುತ್ತಿರುವ, ಹೆಣ್ಣು ಮಕ್ಕಳಿಗೆ ಮಾಡಿದ ಅನ್ಯಾಯಕ್ಕಾಗಿ ಪಶ್ಚಾತ್ತಾಪದ ಉರಿಯಲ್ಲಿ ಬೆಂದು, ನನ್ನ ಕ್ಷಮಿಸಿ, ಯಾರಾದರೂ ಈ ನರಕದಿಂದ ಕರೆದುಕೊಂಡು ಹೋಗ್ರೇ ಎಂದು ಬೇಡುತ್ತಿದ್ದ ಅಪ್ಪ ಇನ್ನು ಮುಂದೆ ಆ ಎಲ್ಲಾ ಚಿಂತೆಗಳಿಂದ ದೂರವಾಗಿ, ಸಾಯುವ ತನಕ ತನ್ನ ವಾತ್ಸಲ್ಯದ ತಂಪಿನಲ್ಲಿ ಸುಖವಾಗಿರಲಿ ಎಂದೇ ಗಂಡನ ಮುನಿಸನ್ನು ಲೆಕ್ಕಿಸದೆ ತನ್ನ ನಿರ್ಧಾರದಂತೆ ನಡೆದುಕೊಂಡಳು.

ವಸುವಿನ ಈ ನಿರ್ಧಾರದಿಂದ ಆಘಾತಗೊಂಡಿದ್ದು ಮಗ ವಿಕ್ರಮ, ಅಮ್ಮನಿಗೆ ರಿಟೈರ್ ಆದ ಕೂಡಲೇ ಅಮ್ಮ‌ಅಪ್ಪನನ್ನು ತಾನು ಇರುವಲ್ಲಿಗೆ ಕರೆದುಕೊಂಡು ಹೋಗಬೇಕು, ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಂಡಿದ್ದ ವಿಕ್ರಮ, ಅಮ್ಮನ ಈ ನಿರ್ಧಾರದಿಂದ ಅಪ್ಪನಿಗೂ ಬೇಸರವಾಗಿದೆ ಎಂದು ತಿಳಿದುಕೊಂಡವನೇ ಮನೆಗೆ ಓಡಿಬಂದ.

“ಅಪ್ಪನಿಗಿಂತ, ನನಗಿಂತ ನಿನಗೆ ತಾತನೇ ಹೆಚ್ಚಾದರೇ ?” ಎಂದು ಆಕ್ಷೇಪಿಸಿದ.

ಮಗನ ಆಕ್ಷೇಪಣೆಗೆ ಉತ್ತರವಾಗಿ, “ನನ್ನ ಮನಸ್ಸನ್ನ, ಭಾವನೆಗಳನ್ನ ಇಬ್ರೂ ಅರ್ಥಮಾಡಿಕೊಳ್ಳಿ. ಈಗ ನನ್ನ ಮನಸ್ಸು ಎಷ್ಟು ತೃಪ್ತಿಯಿಂದ ಬೀಗ್ತಾ ಇದೆ ಗೊತ್ತಾ? ಈ ಸಂತೋಷಾನ; ತೃಪ್ತಿನಾ ಎಷ್ಟು ಹಣ ಕೊಟ್ರೂ ಕೊಂಡುಕೊಳ್ಳೋಕೆ ಸಾಧ್ಯಾನಾ?” ಎಂದು ಮಗನ ಮನಸ್ಸನ್ನು ಒಲಿಸಲು ಪ್ರಯತ್ನಿಸಿದಳು.

“ಸ್ವಾರಿ ಅಮ್ಮ. ನೀನು ನನ್ನ ನಿರಾಶೆಪಡಿಸುತ್ತಾ ಇದ್ದೀಯಾ. ನಂಗೂ ಆ ತೃಪ್ತಿ ಬೇಡವಾ? ಇನ್ನೆಂಟು ತಿಂಗಳಲ್ಲಿ ರಿಟೈರ್ಡ್ ಆಗ್ತಿಯಾ ಈ ವಯಸ್ಸಿನಲ್ಲಿ ಹಣ್ಣಾಗಿರುವ ತಾತನನ್ನು ನೋಡಿಕೊಳ್ಳೋಕೆ ಸಾಧ್ಯಾನಾ? ಅಜ್ಜಿ-ತಾತನ ಜವಾಬ್ದಾರಿನೂ ನೀನೇ ಹೊತ್ಕೊಂಡು ಕಡೇ ಘಳಿಗೆವರೆಗೂ ನೋಡಿಕೊಂಡೆ. ಈಗಲಾದರೂ ನೀನು ನಿನ್ನ ಅತ್ತೆ-ಮಾವಂಗೆ ಮಾಡಿದಂತೆ ಸೇವನಾ ನಿನ್ನ ಸೊಸೆ- ಮಗನಿಂದ ಮಾಡಿಸಿಕೊಳ್ಳಬಾರದೇ? ನಿನ್ನ ಕರ್ಕೊಂಡು ಹೋಗಿ ಚೆನ್ನಾಗಿ ನೋಡ್ಕೊಬೇಕು ಅಂತ ಹಂಬಲಿಸುತ್ತಾ ಇದ್ದೀನಿ. ಕೆಲ್ಸ ಬಿಟ್ಟುಬಿಡು ಅಂದ್ರೂ ನೀನು ಬಿಡಲಿಲ್ಲ. ಕೊನೆವರೆಗೂ ನೀನು ಸೇವೆ ಮಾಡ್ತಾನೇ ಇರಬೇಕಾ? ನೀನು ಸೇವೆ ಮಾಡಿಸಿಕೊಳ್ಳೋದು ಯಾವಾಗ? ಮಗ-ಸೊಸ-ಮೊಮ್ಮಕ್ಕಳನಡೆ ನಗ್ತಾ ನಗ್ತಾ ಇರೋದು ಯಾವಾಗ?” ಕಟುವಾಗಿಯೇ ಹೇಳಿದ ವಿಕ್ರಮ್.

ವಸು ಮಾತಾಡದೆ ಮೌನದ ಮೊರೆ ಹೊಕ್ಕಿದ್ದಾಳೆ.

ಅವಳಿಗೆ ಗೊತ್ತು. ಮಗನಿಗೆ ತನ್ನ ಮೇಲೆ ಎಷ್ಟೊಂದು ಪ್ರೀತಿ ಇದೆ, ಕಾಳಜಿ ಇದೆ ಅಂತ. ತಾನು ನೋಯುವುದನ್ನು ಸಹಿಸಲಾರ, ತಾನು ಕಷ್ಟಪಡುವುದನ್ನು ನೋಡಲಾರ, ಅಮ್ಮನಿಗಾಗಿ ಏನು ಬೇಕಾದರೂ ಮಾಡಬಲ್ಲ ಅನ್ನುವುದೂ ಗೊತ್ತು. ಆದರೆ, ಅದೇ ಪ್ರೀತಿ, ಕಾಳಜಿ ನನ್ನ ಹತ್ತಪ್ಪನ ಮೇಲೆ ನನಗಿರಬಾರದೇ ? ಈ ಭೂಮಿಗೆ ತನ್ನನ್ನು ತಂದಾತನು ಇರುವ ಪರಿಸ್ಥಿತಿ ನೋಡಿಯೂ ನಾನು ನನ್ನವರೊಂದಿಗೆ ಸುಖವಾಗಿ, ಸಂತೋಷವಾಗಿ ಇದ್ದುಬಿಡುವುದು ನ್ಯಾಯವೇ? ಧರ್ಮವೇ?

ಅಮ್ಮನ ಮೌನ ಅಸಹನೆ ತಂದರೂ ಮಿದುವಾಗಿ ಒಲಿಸಿಕೊಳ್ಳಲೆತ್ನಿಸಿದ.

“ಅಮ್ಮ” ಜೇನಿನಲ್ಲಿ ಅದ್ದಿದ ಧ್ವನಿಯಲ್ಲಿ ಕರೆದ. ಹೆತ್ತೂಡಲಿಗೆ ತಂಪೇರಿದ ಭಾವ.

“ಅಮ್ಮ ತಾತಂಗಾದರೆ ಇನ್ನೂ ನಾಲ್ಕು ಜನ ಮಕ್ಕಳಿದ್ದಾರೆ. ಆದ್ರೆ ನಿಂಗೆ ನಾನೊಬ್ನೆ ಮಗ ಅಲ್ವೇನಮ್ಮ? ಇರೋ ಒಬ್ನೆ ಮಗನ ಜತೇಲಿ ನೀನಿರೋದೇ ಧರ್ಮ ಅಮ್ಮ. ಈ ವಯಸ್ಸಿನಲ್ಲಿ ತಾತನ ಜವಾಬ್ದಾರಿ ನಿಂಗ್ಯಾಕಮಾ?”

“ವಿಕ್ಕಿ, ನಿಮ್ಮ ಮಾವಂದಿರು ಅಪ್ಪನ್ನ ಯಾವ ಸ್ಥಿತಿಯಲ್ಲಿಟ್ಟಿದ್ದರು ಗೊತ್ತಲ್ಲವಾ ನಿಂಗೆ? ಅದನ್ನ ನೋಡ್ತಾ ಇದ್ರೆ, ನನ್ನ ಕರುಳು ಕಿತ್ತು ಬರುತ್ತಿತ್ತು” ಬಿಕ್ಕಳಿಸಿದಳು.

“ನಂಗೆ ಅರ್ಥ ಆಗುತ್ತೆ ಅಮ್ಮ, ಮೊದ್ಲೇ ನಿಂದು ಹೆಂಗರುಳು. ಯಾರೇ ಕಷ್ಟದಲ್ಲಿದ್ದರೂ ಸಹಿಸೋ ಶಕ್ತಿ ನಿಂಗಿಲ್ಲ, ಅಂಥದರಲ್ಲಿ ಹೆತ್ತ ಅಪ್ಪ ಕಷ್ಟದಲ್ಲಿದ್ದರೆ ಸಂಕಟಪಡ್ತಾ ಇದ್ದರೆ ನಿನ್ನಿಂದ ಸಹಿಸೋಕೆ ಆಗೋಲ್ಲ. ಆದರೆ ವಾಸ್ತವವನ್ನು ಅರ್ಥ ಮಾಡಿಕೋ. ತಾತನ್ನ ನೋಡಿಕೊಳ್ಳುವ ಜವಾಬ್ದಾರಿ ಅವರ ಗಂಡುಮಕ್ಕಳದ್ದು. ತಾತನಿಗೆ ತೀರಾ ವಯಸ್ಸಾಗಿದೆ. ಮಗು ಥರಾ ನೋಡ್ಕೋಬೇಕು, ನಿನ್ನ ಕೈಲಿ ಅದು ಸಾಧ್ಯಾನಾ?”.

“ಇದು ಸಾಧ್ಯ – ಅಸಾಧ್ಯದ ಪ್ರಶ್ನೆ ಅಲ್ಲ ವಿಕ್ಕಿ. ಇದು ಕರುಳಿಗೆ ಸಂಬಂಧಿಸಿದ ವಿಚಾರ, ಅಸಹಾಯಕ ವೃದನಿಗೆ ನಾನು ಮಾಡುವ, ಮಾಡ್ಲೇಬೇಕಾದ ಕರ್ತವ್ಯ, ಮಗಳಾಗಿ ನಂಗಿರೋ ಜವಾಬ್ದಾರಿ.”

“ಸರಿಯಮ್ಮಾ, ಆದ್ರೆ ನೀನು ಈ ವಯಸ್ಸಿನಲ್ಲಿ ನಮ್ಮಿಂದ ಸೇವೆ ಮಾಡಿಸ್ಕೋತ ಇರಬೇಕಾದ ಕಾಲ ಇದು. ಅದೂ ಅಲ್ಲದೆ ತಾತ ನಿಂಗೆ, ದೊಡ್ಡಮ್ಮಂದಿರಿಗೆ ಮಾಡಿರುವುದನ್ನು ನೋಡಿದರೆ ತಾತನ ಮುಖ ಕೂಡ ನೋಡಬಾರದು ಅನ್ನಿಸುತ್ತೆ. ಅವರ ಹಣೆಬರಹ, ಅನುಭವಿಸಿಕೊಳ್ಳಲಿ, ನೀನು ದೊಡ್ಡಮ್ಮಂದಿರಂತೆ ಸುಮ್ಮನಿರಬೇಕಾಗಿತ್ತು. ತಾತ ಇಲ್ಲಿರೋದು ಅಪ್ಪಂಗೂ ಇಷ್ಟವಾಗ್ತಾ ಇಲ್ಲ. ಅಪ್ಪನಿಗೆ ಬೇಸರಪಡಿಸಬೇಡ” ಎಂದನು.

ಅಪ್ಪ-ಮಗನ ತೀರ್ಮಾನ ಒಂದೇ, ಯಾವ ಕಾರಣಕ್ಕೂ ತನ್ನ ಈ ನಿರ್ಧಾರವನ್ನು ಬೆಂಬಲಿಸಲಾರರು. ವಿಕ್ಕಿ ಹೇಳುತ್ತಿರುವುದು ಸತ್ಯವೇ. ಅಪ್ಪ, ತನಗೆ, ಅಕ್ಕಂದಿರಿಗೆ ಮಾಡಿರುವುದನ್ನು ನೆನೆಸಿಕೊಂಡರೆ, ಮನಸ್ಸು ಬೆಂಕಿಯಂತೆ ಸುಡುತ್ತೆ, ನೋವಿನಿಂದ ನರಳುತ್ತದೆ, ವಿಷಾದದಿಂದ ತಪ್ತವಾಗುತ್ತೆ.

ಅಮ್ಮನ ಮನಸ್ಸು ಮಿದುವಾಗುತ್ತಿದೆ ಎಂದು ಭಾವಿಸಿದ ವಿಕ್ರಮ, “ತಾತನ ವಿಚಾರ ಬಿಟ್ಟುಬಿಡು, ನಿನ್ನ ಆರೋಗ್ಯ ನೋಡಿಕೋ, ತಾತನ್ನ ಅವರ ಮನೆಗೆ ಬಿಟ್ಟುಬರ್ತಿನಿ.”

ಈ ಮನಸ್ಸು ಎಂಬುದು ಹೇಳಿದವರ ಮಾತುಗಳಿಗೆಲ್ಲ ಬಗ್ಗುವಂಥದೇ. ಅಪ್ಪ ಏನೇ ಮಾಡಿರಲಿ ಗಂಡ, ಮಗನ ಸಹಕಾರ ಸಿಗದಿದ್ದರೂ ಚಿಂತೆ ಇಲ್ಲ, ತನ್ನ ತೀರ್ಮಾನ ಮಾತ್ರ ಬದಲಾಗದು, ಅಪ್ಪ ತಮಗೆ ಏನೇ ಅನ್ಯಾಯ ಮಾಡಿದರೂ ತನ್ನ ಹುಟ್ಟಿಗೆ ಕಾರಣನಾದವನು. ಅಂದಿನ ದರ್ಪ, ಪೌರುಷ, ಕೋಪ, ಆರ್ಭಟಗಳನ್ನೆಲ್ಲ ಕಳೆದುಕೊಂಡು ಮಗುವಿನಂತಾಗಿಬಿಟ್ಟಿದ್ದಾನೆ. ಅಂಥ ಸ್ಥಿತಿಯಲ್ಲಿರುವ ಅಪ್ಪನ ಮೇಲೆ ಸೇಡೇ? ತಪ್ಪು ತಪ್ಪು ಅಕ್ಕಂದಿರಂತೂ ಅತ್ತ ಸುಳಿಯಲೇ ಇಲ್ಲ. ಅಪ್ಪನ ಆದೇ ದರ್ಪ, ದುರಹಂಕಾರವನ್ನು ಉಳಿಸಿಕೊಂಡಿರುವ ಒಡಹುಟ್ಟಿದವರ ಬಗ್ಗೆ ತನಗೆ ಪ್ರೀತಿಯಾಗಲೀ ಮಮಕಾರವಾಗಲೀ ಬೆಳೆಯಲೇ ಇಲ್ಲ. ಆದರೆ ಅಪ್ಪನಿಗಾಗಿ ಅವರನ್ನು ಸಹಿಸಿಕೊಂಡಿದ್ದೆ. ಆ ಕಠಿಣ ಹೃದಯಿಗಳು ಅಪ್ಪನಿಗೆ ಊಟ-ತಿಂಡಿಯಿಂದ ಹಿಡಿದು ಎಲ್ಲದಕ್ಕೂ ಕಂಟ್ರೋಲ್ ಮಾಡಿಬಿಟ್ಟರು. ಪ್ರೀತಿ ಇಲ್ಲ, ವಿಶ್ವಾಸ ಇಲ್ಲ, ಮಮಕಾರ, ಕಾಳಜಿ ಮೊದಲೇ ಇಲ್ಲ. ಮುದುಕ ನಿವಾರಣೆ ಆದ್ರೆ ಸಾಕು ಅಂತ ಕಾಯ್ತಾ ಇದ್ದರು ವಂಶೋದ್ದಾರಕರು. ಈ ವಂಶೋದ್ದಾರಕರಿಗಲ್ಲವೇ ತನ್ನನ್ನು, ಅಕ್ಕಂದಿರನ್ನು ಕಡೆಗಣಿಸಿದ್ದು, ಅಸಡ್ಡೆ ಮಾಡಿದ್ದು, ಅದೆಲ್ಲವನ್ನೂ ಮರೆತು ಅಪ್ಪನನ್ನು ಮನೆಗೆ ಕರೆತಂದಾಗಿದೆ. ಅಪ್ಪನಿಗೆ ವೃದ್ದಾಪ್ಯ ಶಾಪವಾಗಬಾರದು, ಅಪ್ಪ ಸಂತೋಷವಾಗಿ ತನ್ನ ಕೊನೆಗಾಲವನ್ನು ಕಳೆಯಬೇಕು.

“ಬೇಡ ವಿಕ್ಕಿ, ನೀನಾಡೋ ಮಾತುಗಳನ್ನೆಲ್ಲ ಅಪ್ಪ ಕೇಳಿಸಿಕೊಂಡ್ರೆ, ಎಷ್ಟು ನೊಂದ್ಕೋತಾರೆ ಗೊತ್ತಾ? ಇಲ್ಲಿಗೆ ಬಂದ ಮೇಲೆ ಅವರು ಎಷ್ಟೊಂದು ಸಂತೋಷವಾಗಿದಾರೆ ಗೊತ್ತಾ? ಸದಾ ಹಾಸಿಗೆ ಹಿಡಿದೆ ಇರುತ್ತಿದ್ದ ಅಪ್ಪ, ಇವತ್ತು ತಾವೇ ಎದ್ದು ಓಡಾಡ್ತಾ ಇದ್ದಾರೆ. ಇನ್ನೆರಡು ದಿನ ಕಳೆದ್ರೆ ಕೆಳಗೂ ಇಳಿದು ಬರ್ತಾರೆ. ಈ ವಯಸ್ಸಿನಲ್ಲಿ ಅವರಿಗೆ ಬೇಕಾಗಿರುವುದು ಪ್ರೀತಿ, ಕಾಳಜಿ ಕಣೋ, ತನ್ನವರು ತೋರಿಸೋ ವಿಶ್ವಾಸ ಕಣೋ, ಸಾಯೋ ಜೀವ ಇನ್ನೇನು ಕೇಳುತ್ತೆ ಹೇಳು? ಇದೊಂದು ವಿಚಾರದಲ್ಲಿ ನಾನು ಬದಲಾಗಲಾರೆ ವಿಕ್ಕಿ” ಖಂಡಿತವಾದ ಧ್ವನಿಯಲ್ಲಿ ವಸು ಹೇಳಿದಳು.

“ಹಾಗಾದ್ರೆ ನನ್ನ ನಿರ್ಧಾರನೂ ಕೇಳು ಅಮ್ಮ. ನೀನು ನಿಮ್ಮಪ್ಪನ್ನ ನೋಡ್ಕೋ, ನಾನು ನಮ್ಮ ಅಪ್ಪನ್ನ ನೋಡ್ಕೋತೀನಿ” ಕಟುವಾಗಿ ನುಡಿದ.

ತನ್ನ ಯಾವ ಅನುನಯಕ್ಕೂ ಸ್ಪಂದಿಸದೆ ವೆಂಕಟೇಶ್ ವಿಕ್ರಮನ ಜತೆ ಹೊರಟು ನಿಂತಾಗ ಕುಸಿದು ಹೋದಳು ವಸು. ಮನಸ್ಸು ಕ್ಷಣ ಹೊಯ್ದಾಡಿತು. ಅಪ್ಪನನ್ನು ಕಳುಹಿಸಿ ಈ ಪ್ರಕರಣಕ್ಕೆ ತೆರೆ ಎಳೆದುಬಿಡಲೇ ಎಂದುಕೊಂಡಳು. ಥಟ್ಟನೆ ಅಪ್ಪನ ಮುಖ ನೆನಪಿಗೆ ಬಂದು, ಮಗಳ ಮನೆಗೆ ಬಂದಿರುವ ಸಂತೋಷದಲ್ಲಿ ತೇಲಾಡುತ್ತಿರುವ ಅಪ್ಪ, ಆ ಸಂತೋಷವನ್ನು ಕಿತ್ತುಕೊಂಡು ತಾನು ನೆಮ್ಮದಿಯಾಗಿರಲು ಸಾಧ್ಯವೇ? ತಮ್ಮಂದಿರು ಆಡಿಕೊಂಡು ನಗುವುದಿಲ್ಲವೇ? ಆ ದುಷ್ಟರ ಮುಂದೆ ತಾನು ಕೇವಲವಾಗುವುದೇ?

ಒಂದು ವೇಳೆ ಅಪ್ಪನನ್ನು ವಾಪಸ್ಸು ಕಳುಹಿಸಿಬಿಟ್ಟರೆ ಆ ಪಾಪ ಪ್ರಜ್ಞೆ ಕಾಡಿ, ನನ್ನ ಹಿಂಸಿಸುವುದಿಲ್ಲವೇ? ಬೇಡ ಬೇಡ, ತಾನು ಅಪ್ಪನನ್ನು ವಾಪಸ್ಸು ಕಳುಹಿಸಲಾರೆ. ತನ್ನ ಮಾತು ಕೇಳಲಿಲ್ಲವೆಂದು ವೆಂಕಟೇಶ್ ಮಗನ ಮನೆಗೆ ಹೋಗುತ್ತಿದ್ದಾರೆ, ಹೋಗಲಿ. ಆದಷ್ಟು ದಿನ ಈ ಕೋಪ? ತನ್ನ ಬಿಟ್ಟು ಇರಲು ಅವರಿಂದ ಸಾಧ್ಯವೇ? ಕೆಲವೇ ದಿನಗಳಲ್ಲಿ ವಾಪಸ್ಸು ಬರುತ್ತಾರೆ. ತುಂಬು ಭರವಸೆಯಿಂದ ಮನಸ್ಸಿಗೆ ಸಾಂತ್ವನ ತಂದುಕೊಂಡಳು. ತಾನು ಎಷ್ಟೇ ತಡೆದರೂ ವೆಂಕಟೇಶ್ ಇಲ್ಲಿ ನಿಲ್ಲಲಾರನೆಂಬ ಸತ್ಯ ಅರಿವಾದೊಡನೆ ತನ್ನ ಪ್ರಯತ್ನ ನಿಲ್ಲಿಸಿಬಿಟ್ಟಳು.

ವೆಂಕಟೇಶನಿಲ್ಲದ ಮನ ಬಣಬಣವೆನಿಸಿ, ಅವನಿಲ್ಲದೆ ತಾನು ಈ ಮನೆಯಲ್ಲಿ ಇರಲು ಅಸಾಧ್ಯವೆನಿಸುತ್ತಿದ್ದರೂ ಅಪ್ಪನಿಗಾಗಿ, ಅಪ್ಪನ ಮುಖದ ಮೇಲಿನ ನಗುವಿಗಾಗಿ ಎಲ್ಲವನ್ನೂ ಸಾಧ್ಯವಾಗಿಸಿಕೊಂಡಳು. ಸ್ಕೂಲ್, ಅಪ್ಪನ ಸೇವೆಯಲ್ಲಿಯೇ ದಿನ ಕಳೆದುಹೋಗುತ್ತಿತ್ತು. ಈಗೀಗ ವೆಂಕಟೇಶನ ನೆನಪಾಗುತ್ತಿದ್ದದ್ದು ರಾತ್ರಿ ಮಲಗುವಾಗ, ಬೆಳಗ್ಗಿನ ಆಯಾಸ ಅವಳನ್ನು ನಿದ್ದೆಗೆಳೆದು ಬಿಡುತ್ತಿತ್ತು.

ಗಂಡನಿಂದ ದೂರವಿರುವ ನೋವು ಕಾಡುತ್ತಿದ್ದರೂ ವೃದ್ದ ತಂದೆಯ ಸೇವೆಯಿಂದಾಗಿ ಧನ್ಯತೆಯ ಭಾವದಲ್ಲಿ ಮನ ಬೀಗುತ್ತಿತ್ತು. ಆತ್ಮತೃಪ್ತಿಯಿಂದ ಏನೋ ಸಾಧಿಸಿದೆನೆಂಬ ಭಾವ ಅವಳಲ್ಲಿ ಮೂಡಿ, ಹಿಂದಿನ ವಸುಧಾ ಕಳೆದೇ ಹೋಗಿದ್ದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಊರುಗೋಲಿನ ಸುತ್ತ
Next post ಸಾವು

ಸಣ್ಣ ಕತೆ

 • ಲೋಕೋಪಕಾರ!

  ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

 • ಹನುಮಂತನ ಕಥೆ

  ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

 • ಒಂಟಿ ತೆಪ್ಪ

  ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

cheap jordans|wholesale air max|wholesale jordans|wholesale jewelry|wholesale jerseys