ಗಂಡಲ್ಲೊ ನೀನೂ ಗಂಡಲ್ಲಾ

ಗಂಡಲ್ಲೊ ನೀನೂ ಗಂಡಲ್ಲಾ ||ಪಲ್ಲ||

ಆಳಾಕ ಬರಲಿಲ್ಲ ವೇಳಾಕ ಬರಲಿಲ್ಲ
ಹೇಳಾಕ ಬರಲಿಲ್ಲ ಹಳೆಗಂಡೊ
ಪಡಿಗೋದಿ ಪರಮಾಶಿ ದಡಿಸೀರಿ ಮಕಮೀಸಿ
ಎದಿಯಾಗ ಸಾರೋ ಹುಳಿಸಾರೊ ||೧||

ಕಪಲೀಯ ತ್ವಾಟಕ್ಕ ಮಕಮಾರಿ ಬಲುಸುದ್ದ
ಉದ್ದುದ್ದ ತೆಂಗಾ ಮುಗಿಲುದ್ದೊ
ಬಾಳ್ಯಾಗ ವೇಳ್ಯಾವು ಕಳದದ್ದು ಗೊತ್ತಿಲ್ಲೊ
ಹೊಸಗಂಡೊ ಭಾರಿ ಜಿಗಿಬಿದ್ದೊ ||೨||

ಅಂಟಂಟು ಜಿಗಟಾಗಿ ಕೌದ್ಯಾಗ ಕುಂತೀದಿ
ಹಳೆಗಂಡ ನೀನೊ ಹಳಿಗುಂಡೋ
ಬಂಗಾರ ಸಿಂಗಾರ ಪುರವಾಶಿ ಮಾಡ್ತೀದಿ
ಬಂಗಾರ ಮನಸು ಬರಿಹೂಸೋ ||೩||

ಆಗಂಡ ಹಿಡದರ ಬೆಲ್ಲದ ಕುಳಪೆಂಟೆ
ತಿಂದರ ಕಡಿದರ ಕಲಸಕ್ರೆ
ನೀಸಕ್ರಿ ತಂದರ ನನಸಕ್ರಿ ಅಂದರ
ಸಕ್ರೆಲ್ಲೊ ನೀನೂ ವಣಚೆಕ್ಕೆ ||೪||

ಏನ್ಮಾಡ್ತಿ ಮಾಡ್ಕೊಳ್ಳೊ ಹೊಡಕೊಂತಿ ಹೊಡಕೊಳ್ಳೊ
ಮಚಿಗಾಲು ಎದಿಗಿಟ್ಟು ಓಡೇನೊ
ಹೊಸಗಂಡ ಹುಚಗಂಡ ಪೀರೂತಿ ಪುರಮಾಶಿ
ಸೋಡ್ಚೀಟಿ ನಿನಗೋ ಪುರಪುಶ್ಶೋ ||೫||
*****
ಹಳೆಗಂಡ = ಮಾಯೆ
ಹೊಸಗಂಡ = ಪರಮಾತ್ಮ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವೃದ್ಧ ಜೋಡಿ
Next post ಹ್ಯಾಗೆ

ಸಣ್ಣ ಕತೆ