ಚಲುವಿ ಚಲುವಿ ಚಂಪಕ್ಕಾ
ಟೂವಿ ಟೂವಿ ಟಿಂವಕ್ಕಾ ||ಪಲ್ಲ||

ಹಳದಿ ಪತ್ಲಾ ಕೆಳದಿ ಕೊತ್ಲಾ
ಕುಬ್ಸಾ ಕುಮಟಾ ಟೆಂಗಕ್ಕಾ
ಟೊಂಕಾ ಟಾಂಗಾ ಬಿಂಕಾ ಬೋಂಗಾ
ನೀನೀ ನೀನೀ ನಾಗಕ್ಕಾ ||೧||

ಎದಿಯಾ ಮ್ಯಾಗೆ ಕಳ್ಳೆ ಮಳ್ಳೆ
ಒಳಗೆ ಹುಂಚಿ ಕಾಯಕ್ಕಾ
ನಡದು ನಡದು ತೊಡಿಯಾ ಘಾಯಾ
ತೊಂಡೆ ಹಣ್ಣು ಆತಕ್ಕಾ ||೨||

ಕುಂತಾಗೊಮ್ಮೆ ಕುಂಬ್ಳಾ ಬಳ್ಳಿ
ನಿಂತ್ರಾ ನಿಂಬಿ ಹಣ್ಣಕ್ಕಾ
ಕಣ್ಣಾ ಮುಚ್ಚಿ ಕಣ್ಣಾ ಕಂಡ್ರೆ
ಕವಳಿ ಹಣ್ಣಾ ಕಡಿಯಕ್ಕಾ ||೩||

ಬಂದೇ ಬಂದಿ ನಿಂತೇ ನಿಂತಿ
ನಿನ್ನಾ ಗೆಣಿಯಾ ಎಲ್ಲೆಕ್ಕಾ
ಮುಗಿಲಾ ಹಕ್ಕಿ ಪಲ್ಲಕ್ಕ್ಯಾಗಿ
ಪಿಳ್ಳಂ ಗೋವಿ ಹಾಡ್ತಕ್ಕಾ ||೪||

ಕತ್ಲಾ ಬಂದ್ರೆ ಪತ್ಲಾ ಕಳದು
ಹಿತ್ಲಾ ದಾಟಿ ಓಡಕ್ಕಾ
ಮುಂಗ್ಲಿ ಮಾವಾ ಮೆಲ್ಲಗ ಬಂದ್ರ
ಗಲ್ಲಾ ಬೆಲ್ಲಾ ಕೊಡಕ್ಕಾ ||೫||
*****
ಚಂಪಕ್ಕ = ಸುಂದರ ಆತ್ಮ
ಹಳದಿ ಪತ್ಲ = ವರ್ಣ ರಂಜಿತ ಮಾಯೆಯ ಆವರಣ
ನಡದು = ಸುಖಕ್ಕಾಗಿ ಬೆನ್ನು ಹತ್ತಿ
ಗೆಣಿಯಾ = ಪರಮಾತ್ಮ
ಕತ್ಲಾ = ಅಜ್ಞಾನ
ಪತ್ಲಾ = ದೇಹಾಭಿಮಾನ (Gross Physical Consciousness)
hitlA = haddina mAye (Ego centred self);
ಮುಂಗ್ಲಿ ಮಾವ = ಭಗವಂತ