ಆಡಿ ಹಗುರವಾಗಲೇನಲ್ಲ! ನಿಜ!
ಕೇಳಿ ಬಿಸಿಲ ನಾಡಿನ ಬವಣೆ.

ರವಿ
ಹತ್ತಿರವೆ ಸರಿದವನಂತೆ
ಉದಯಾಸ್ತಗಳಲಿ ಒಗ್ಗರಣೆಗೆ ಸೌಮ್ಯನಾಗಿ
ಉಳಿದಂತೆ ಬೆಂಕಿ ಬಿಸಿಲನು ಕಾರಿ
ಕಾಲಗಳ ಕತ್ತು ಹಿಸುಕಿ
ಜೀವಗಳ ಜೀವಂತ ಬೇಯಿಸುವನು.

ಗಾಳಿ
ಎಲ್ಲೋ ಬಂಧಿಯಾಗಿ
ಸುಳಿಯದೆ
ಜೀವಕ್ಕೆ ಬಿಸಿಲ ಜ್ವರ ಬಡಿಸಿ
ಮೈ ಮನ ಕೆಂಡ ಮಾಡಿ
ಆಂತಿಕಾವಸ್ಥೆ ತಲುಪಿಸಿ
ನರಳಾಡಿಸುವುದು.

ಧಗೆ.
ಹೊರಗೂ ಒಳಗೂ ತಕ್ಕೈಸಿ
ನೆಲ್ಲು ಕಣ ಮಾಡುವಾಗ ಹಾರಿ
ಬೆವರಿಳಿವ ಮೈಯನ್ನೇರಿ ಕಚ್ಚುವ
ಅಸಾಧ್ಯ ತುರಿಕೆ ತರುವ ಸುಂಕಿನಂತೆ
ಜೀವ ಕಸಿವಿಸಿಗೊಳಿಸುವುದು.

ಗಿಡ ಮರಗಳು
ಮಾಟಕ್ಕೆ ಮಣಿದವರಂತೆ
ಸ್ಥಬ್ದವಾಗಿ
ಸೂತಕದ ಮನೆಯ ಜನರಂತೆ
ಅರಕ್ತ ಮುಖವ ಹೊತ್ತು
ಚಿತ್ರದಂತೆ ನಿಂತು ಕೊಲ್ಲುವವು.

ಬೆಟ್ಟ ಗುಡ್ಡಗಳು
ಅರುಣನ ವಿಕಟ ಅಟ್ಟಹಾಸಕ್ಕೆ ಶರಣಾಗಿ
ಬೆಂಕಿ ಉಂಡೆಗಳಾಗಿ
ಅಸ್ತವಾದ ಬಹು ಹೊತ್ತಿನವರೆಗೂ ಕಾವು ಕಕ್ಕಿ
ಜೀವಕ್ಕೆ ತಹತಹಿಕೆ ತರುವವು.

ಮಣ್ಣು
ನಿರುಪಾಯವಾಗಿ
ನಿರ್ದಯ ರವಿಯು ಕಾರುವ ಎಲ್ಲಾ ಉರಿ ಹೀರಿ
ಬಿರಿದು ಧೂಳಾಗಿ, ಮೇಲೇರಿ
ಒಡಲೊಳಗಿನ ಉರಿಯನ್ನು ಸೇರಿಸಿ
ಪರಿಸರ ಪೂರ ಕುಂಬಾರನ ಆವಿಗೆಯ ಮಾಡಿ
ಜೀವದ ಸಮಾಧಾನ ಕೆಡಿಸುವುದು.

ತಾಯಿ ತುಂಗಭದ್ರೆ
ದುರ್ಭರ ಬದುಕಿನ ಬೇಗೆಯಲಿ ಬೆಂದ ಜೀವದಂತೆ
ಬಲ, ಚೆಲುವು ಸೋರಿಹೋಗಿ.
ಅಸ್ಥಿ ಪಂಜರದಂತೆ ವಿಕಾರವಾಗಿ
ಧಿಗ್ಗನೆ ಎದುರಾದರೆ ಹೃದಯ ಸ್ಥಂಭಿಸುವ
ಭೂತದಂತಾಗಿದ್ದಾಳೆ.
*****