ನಾನು ಅಂಧಕನಾಗಿ
ಜನಿಸಿರಲುಬಹುದು
ಅದಕೆ ಕಾರಣಗಳೇನೇ
ಇರಲುಬಹುದು|
ಆದರೆ ಎನಗೆ ಬದುಕಲು
ಅವಕಾಶದ ನೀಡಿ||

ಅನುಕಂಪದ ಅಲೆಗಿಂತ
ಸ್ವಾಭಿಮಾನ ಒಳಿತು
ಆತ್ಮಾಭಿಮಾನ ಹಿರಿದು
ಅದಕೆ ನೀರೆರೆದು ಅಂಧಕಾರವ
ಹೊಡೆದೋಡಿಸಿ||

ಭಿಕ್ಷೆ ಬೇಡಲೆನಗೆ ಮನಸಿಲ್ಲಾ
ಹಣದ ಭಿಕ್ಷೆ ಅಲ್ಪತೃಪ್ತಿ
ಜ್ಞಾನಧೀಕ್ಷೆ ಮಹಾಶಕ್ತಿ|
ಕೈಯಲಾಗುವ ಕಾಯಕವ ಮಾಡಿ
ಬದುಕಲಿಚ್ಚೆಯುಳ್ಳವರಿಗೆ
ಅನುಭವಗಳಿಸೆ ಅವಕಾಶ ನೀಡಿ|
ಹರಸೆಮ್ಮ ಅಭಿಲಾಶೆಯ
ಪೂರೈಸಿರೆಮ್ಮ ಮನದಿಚ್ಚೆಯ||

ಕಣ್ಣಿದ್ದು ಅಂಧರಂತೆ
ನಟಿಸ ಬೇಡಿ|
ಕಿವಿ, ಬಾಯಿಯಿದ್ದು
ಮೂಗನಂತೆ ವರ್ತಿಸಬೇಡಿ|
ಅಂಗವಿಕಲರನ್ನ ಕಡೆಗಣಿಸಬೇಡಿ
ವಿಕಲ ಚೇತನರಿಗೂ ಬದುಕಲು
ಹಕ್ಕಿದೆ, ಆದರದನೆ ಕಸಿದು
ಭಿಕ್ಷಾಟನೆಗೆ ನೂಕಬೇಡಿ|
ನನ್ನ ಈ ಕುರುಡ ಮೂಗನ
ಪ್ರಾರ್ಥನೆಯ ಪರೀಕ್ಷಿಸದಿರಿ
ಮುಂದೆ ಪಶ್ಚಾತ್ತಾಪ ಪಡದಿರಿ||
*****

ಜಾನಕಿತನಯಾನಂದ
Latest posts by ಜಾನಕಿತನಯಾನಂದ (see all)