ಯಾರಿವಳೀ ದೀಪಿಕಾ
ಕವಿಕನಸಿಗೆ ಕಣ್ಣು ಬಂತೊ, ಉಸಿರಾಡಿತೊ ರೂಪಕ!
ಬಿಸಿಯೂಡಿಸಿ ಹಸಿರಾಡಿಸಿ
ಕನವರಿಕೆಯ ನಾಡಿಗೆ
ಹಳಿಯನೆಳೆದ ಹದಿನಾರರ ಬಿರಿವ ಹೂವ ಮಾಲಿಕಾ
ದೀಪಿಕಾ ದೀಪಿಕಾ

ಕನಕಾಂಬರ ಬೆಳೆಕಹೊದ್ದ ಮುಗಿವ ಹಗಲ ತುದಿಗೆ
ಮೊಲ್ಲೆ ಮಾಲೆಯಾಗಿ ತೂಗಿ ನೀಲನಭದ ಜಡೆಗೆ,
ಚಿತ್ರವಾಗಿ ಅರಳಿ
ವಿಚಿತ್ರವಾಗಿ ಹೊರಳಿ
ಬರೆದು ಅಳಿಸಿ ಬರೆದು ಸರಿವ ಬೆಳ್ಳಕ್ಕಿಯ ಗೆರೆಯೆ
ಸಿಕ್ಕಿದಂತೆ ಸಿಕ್ಕದಂತೆ ಹರಿವ ಜಿಂಕೆಮರಿಯೆ
ಯಾರೇ ನೀ ದೀಪಿಕಾ?
ಒಳಗೆ ಬರುವೆ ತೆಗೆಯೇ ನಿನ್ನೆದೆ ಬಾಗಿಲ ಚಿಲಕ.

ಕಣ್ಣಪಟ್ಟಿ ಕಟ್ಟಿನಡೆದ ಬಿನ್ನಾಣದ ಚೆಲುವೆ
ಬೇರೇನೂ ಕಾಣದೀಗ ಬರಿಯ ನಿನ್ನೆ ನಿಲುವೆ
ನೋಟಕಷ್ಟೆ ಸಿಕ್ಕು
ಉಳಿದುದಕ್ಕೆ ಮಿಕ್ಕು
ಕೆರೆಯ ನಡುವೆ ನಿಂತು ಅರಳಿ ನಗುವ ಕೆಂಪು ಕಮಲೆ
ಉರಿಯ ನೂರು ಬುಗ್ಗೆ ಹಿರಿಯುತಿರುವ ಚಿಗುರುಹಿಗ್ಗೇ!
ನೀ ಹಚ್ಚಿದ ಪಂಚಾಗ್ನಿಯ ವೃತ್ತದಲ್ಲಿ ಉರಿದೆ
ಕಬ್ಬಿನಾಲೆಯಲ್ಲಿ ಸಿಕ್ಕ ಜಲ್ಲೆಯಂತೆ ನುರಿದೆ;
ನೋವೇ ಹೂವಾಗಿದೆ ಇಗೊ ಒಪ್ಪಿಕೊಳ್ಳಿ ದೀಪಿಕಾ
ಕೆಂಡಸಂಪಿಗೆಯನೆ ಕಟ್ಟಿತಂದ ಭಾವಮಾಲಿಕಾ.
ದೀಪಿಕಾ ದೀಪಿಕಾ
ಕವಿಕನಸಿಗೆ ಕಣ್ಣು ಬಂದು ಉಸಿರಾಡುವ ರೂಪಕ!
*****
ದೀಪಿಕಾ ಕವನಗುಚ್ಛ

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)