ದುಡಿವ ರಟ್ಟೆಗೆ ಶರಣು ಕೊಡುವ ಹೊಟ್ಟೆಗೆ ಶರಣು
ಪರರ ಎಂಜಲು ತಿಂಬ ದಾಹಬೇಡ
ಗುರುಬರಲಿ ಹರಬರಲಿ ಶಿವಬರಲಿ ಯಾರಿರಲಿ
ಬೆವರಿಲ್ಲದಾ ಅನ್ನ ಅರುಹು ಬೇಡ
ಶ್ರಮವಿಲ್ಲದಾ ದೇವ ಧರ್ಮಬೇಡಽಽಽಽ
ಗುರುವಿರಲಿ ದೊರೆಯಿರಲಿ ಅರಮನೆಯ ಅರಸಿರಲಿ
ಭೂಮಿತಾಯಿಗೆ ಶರಣು ಶರಣು ಶರಣೋ
ಮಣ್ಣು ಕೂಡಲಸಂಗ ಕಲ್ಲು ಕೂಡಲಸಂಗ
ಬೆವರು ಸುರಿಸಿದ ಜನಕೆ ಶರಣು ಶರಣೋ
ನಿನ್ನ ದೀಕ್ಷೆಗೆ ಶರಣು ನಿನ್ನ ರಕ್ಷೆಗೆ ಶರಣು
ಮಣ್ಣು ಬೆಣ್ಣೆಯ ಗೈದ ಗುರುವೆ ಶರಣು
ಮಣ್ಣು ಜಂಗಮಲಿಂಗ ರಟ್ಟೆ ಕೂಡಲಸಂಗ
ಜಗವೆ ರೈತನ ಗಾನ ಗುಡಿಯು ಶರಣು
ಓಂ ಶರಣು ಕಾಯಕಕೆ ಓಂ ಶರಣು ಕಾಯಕ್ಕೆ
ದುಡಿಮೆಯೆ ಗುರುಲಿಂಗ ನಂಬಿ ಬರಲಿ
ಸಿಕ್ಕಷ್ಟು ಶಿವಭಾವ ಕೊಟ್ಟಷ್ಟು ಗುರುಭಾವ
ಬದುಕೀಗೆ ಶಿವಜ್ಞಾನ ಗಾನ ತರಲಿಽಽಽಽ
*****
ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಬರೆದ ಕರ್ನಾಟಕದ ರೈತ ಸಮಸ್ಯೆಯ ಪ್ರಾಸಂಗಿಕ ಕವನ