ಒಡಲ ಕುಂಡದಲ್ಲಿ ಹೀಗೆ ನರಳಿ ಹೊರಳಿ
ಅರಳುವ ಒಂಟಿತನಕ್ಕೆ ಪಕ್ಕದಲ್ಲಿ
ಮರದಲ್ಲಿ ಕುಳಿತು ಹಕ್ಕಿ ಹಾಡಿತು,
ರೆಕ್ಕೆ ಬಿಚ್ಚಿ ಹಾರಲು ನೀಲಬಾನುವಿನ
ಆಳ ನಿರಾಳ ಲೋಕಕ್ಕೆ ಕಣ್ಣುಗಳು ಹೊರಳಿದವು,
ವಿವಶವಾಗಿ ಚಂಗನೆ ಚಿಗುರಿದ ವಿಸ್ಮಯಗಳು ಕಂಡು.

ರಾಗವಿಲ್ಲದ ಪದಗಳಿಗೆ ಹಕ್ಕಿ
ಮೆಲ್ಲಗೆ ನೇವರಿಸಿ ಪ್ರೀತಿ ಕೊರಳು ತುಂಬಿ
ಹಾಡು ಹಾಡಿತು, ಅಂಟುನಂಟಿಲ್ಲದ ಹಂಗಿನಲ್ಲಿ,
ಮೊಳಕೆ ಹರಡಿ ಚಿಗುರು ಚಿಮ್ಮಿ
ಹಸಿರೆಲ್ಲಾ ಮರದ ತುಂಬಾ ಹರಡಿ ಹಾಯಾಗಿ,
ನಕ್ಷತ್ರಗಳು ಹಿರಿಡಿದವು ಬಾನಿನಿಂದ ಇಳಿದು ಬಂತು
ಬೆಳಕು ನೆರಳುಗಳಾಟಕೆ ಕುಪ್ಪಳಿಸಿದ
ಹಕ್ಕಿ ಜೋಕಾಲಿ ಜೀಕಿ ಹಾರಿ ಏರಿ ಮತ್ತೆ
ಅವಿತು ಕೊಳ್ಳುವ ತಾಣವನ್ನು ತನಗೇ ತಾನೆ
ಬಾಹುಗಳ ಚೆಲ್ಲಿ ಅಂಗೈಯಲ್ಲಿ ಹೊಸೆದು

ಬಿಗಿದು ಬಯಲ ಅನಂತ ಬಾಳಲೆಂದು
ಟೊಂಗೆಯ ಸಂಧಿಯಲಿ ಗೂಡು ಕಟ್ಟಿತು ಪ್ರೀತಿಯಗುಂಗಿನಲಿ.
ಹಿಡಿ ಯಲಾಗದ ಬೆಳದಿಂಗಳು ಹರಡಿ
ಮರದ ಕೊಂಬೆ ರೆಂಬೆಯಲಿ ಇಬ್ಬನಿ
ಹಾಸಿ ಮರ್ಮರಕೆ ಚಿಗಿತು ಚೆಲ್ಲುವ
ಕನಸುಗಳ ಹೂಗಳು ಗೂಡಿನಲಿ
ಶೃಂಗಾರ ಕಾವ್ಯದ ಲಹರಿ ಹರಿದು ಬಂತು
ಹಕ್ಕಿ ಕೊರಳ ಗಾನದಲಿ ಮರದ ನಾದದಲಿ
ಮುಟ್ಟಲಾಗದ ಪ್ರೀತಿ ಕೂಟದಲಿ.
*****

ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)