ನನಗೇಕೋ ಈಗೀಗ ಮಾತುಗಳೇ
ಕೇಳುವುದೇ ಬೇಡಾಗುತ್ತದೆ, ಸುಮ್ಮನೆ
ಹೀಗೆ ಮೌನವಾಗಿ ನಡೆಯ ಬೇಕೆನಿಸುತ್ತದೆ,
ಮಾತಿನ ಗದ್ದಲದ ಸಂತೆಯಲಿ ಸಿಕ್ಕು
ಮನಸ್ಸೀಗ ನಜ್ಜುಗುಜ್ಜಾಗಿದೆ ಅಜ್ಜಿಯಾಗಿದೆ.
ಈಗ ಮಾತುಗಳೇ ಕಿವಿಗಳಿಗೆ ಬೇಡ
ಎಲ್ಲಿಯೂ ಒಂದು ಪ್ರಮಾಣಿಕ ಮಾತಿನ
ಜಾಡು ಸಿಗಲೊಲ್ಲದು ಬರೀಶಬ್ದಗಳ
ಜಾತ್ರೆಯಲಿ ಸಾವಿರಾರು ಮಂದಿಯ ಹೆಜ್ಜೆಗಳ
ಗುರುತುಗಳು ನನ್ನವನ್ನು ಅಳುಕಿಸಿ ಹಾಕಿಯಾಗಿದೆ.
ಮಾತುಗಳೇಕೆ ಬೇಕು ಈಗ,
ಎಲ್ಲವೂ ಸತ್ಯ ಸುಳ್ಳುಗಳು ಇಲ್ಲದರ
ಅವಸ್ಥೆಯಲ್ಲಿ ಇಬ್ಬರ ಹೃದಯವೂ
ಕಿರಿಕಿರಿಯ ಗೂಡಾಗಿ ಮಾಡು ಸೋರಿ
ಸೂಸಿ ಹೊಳೆಯುವ ಅನರ್ಥಗಳಾಗಿವೆ,
ಪದ್ಯಗಳು ಯಾರು ಎದೆಯನ್ನು ತಟ್ಟುವುದಿಲ್ಲ.
ಮಾತುಗಳು ಬೇಡವೆಂದರೂ ಒಮ್ಮೊಮ್ಮೆ
ಮೌನದ ಏಕಾಂತದಲಿ ಎಂದೋ ಆಡಿದ
ಮಾತುಗಳು ಒಂದಕ್ಕೊಂದು ಡಿಕ್ಕೀ
ಹೊಡೆದ ಮೋಡಗಳಾಗಿ ಭೋರೆಂದು ಸುರಿದು
ಕಣ್ಣಹನಿಗಳಿಗೆ ಗುಡುಗು ಮಿಂಚಾಗಿ
ಓಣಿ ತುಂಬೆಲ್ಲಾ ಕೆಸರು ರಾಡಿ. ಮಾತಿನಿಂದ
ನನ್ನನ್ನು ತಪ್ಪಸಿಕೊಳ್ಳಲಾಗುತ್ತಿಲ್ಲ ಇಂದಿಗೂ.
*****