ಮೊದಲ ಪುಟಗಳನು (ತನಗೆ ಬೇಕಷ್ಟು)
ನುಂಗಿಹಾಕುವ ಹಕ್ಕು
ಹಿರಿತನದ ಸಹಜ ಅಧಿಕಾರ ಬಲ
ತೋರಿದ್ದೆ ದಿಕ್ಕು

ತಿಳಿದವರು ತಿಳಯದವರು ಎಂಥ ಮಹಾತ್ಮರೂ
ಓದುವರು ಮುನ್ನುಡಿ
ಬಾಗಿಲು ದಾಟಲೇಬೇಕಷ್ಟೆ ಮನೆಯ
ಒಳಗಿರಿಸುವುದಕ್ಕೆ ಅಡಿ

ಮನಸ್ಸು ಮಾಡಿದರೆ ಎಂಥ ಲೇಖಕನನ್ನೂ
ಏರಿಸಬಲ್ಲ ಅಟ್ಟಕ್ಕೆ
ಎತ್ತಿ ಹಾಗೆಯೇ ನೆಲಕ್ಕೆ ಅಪ್ಪಳಿಸಿ
ಮುರಿಯ ಬಲ್ಲ ಪಕ್ಕೆ

ಆದರೂ ಮೀರುವುದು ಹೇಗೆ ಪರಂಪರೆಯ
ಶಿಷ್ಟಾಚಾರದ ಕಟ್ಟು
ಹಾವು ಸಾಯದಂತೆ ಕೋಲು ಮುರಿಯದಂತೆ
ಹಾಕಬೇಕು ಪೆಟ್ಟು

ಇದು ಸುಲಭವಲ್ಲ; ಅಡ್ಡ ಗೋಡೆಯ ಮೇಲೆ
ಇರಿಸಿದಂತೆ ಬೆಳಕು
ಕಣ್ಣಿಗೆ ಶಬ್ದಗಳನೆರಚುವಂಥ ಕಲೆ
ಸಿದ್ಧಿಸಿರಬೇಕು

ಇಷ್ಟೆಲ್ಲ ಆದರೂ ಮುಗಿಯುವುದಿಲ್ಲ ಅಲ್ಲಿಗೆ
ಮುನ್ನುಡಿಕಾರನ ಕಷ್ಟ
ದುಷ್ಟ ವಿಮರ್ಶಕರ ಕೈಗೆ ಸಿಗದಿರುವನೆ ಕೊನೆಗೂ
ಈ ನತದೃಷ್ಟ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)