ಓ ವಿಶ್ವ ಮಾನವತೆ ಓ ಸತ್ಯ ಶಾಶ್ವತತೆ
ಓ ಪ್ರೇಮ ಕಾಶ್ಮೀರ ಸುರಿದು ಬರಲಿ
ಮುಗಿಲು ಮಲ್ಲಿಗೆ ಅರಳಿ ನೆಲತಾಯಿ ಚುಂಬಿಸಲಿ
ಗುಡುಗು ಎಲುಬಿನ ಗಡಿಗಿ ಒಡೆದು ಬರಲಿ

ನಾವು ಆತ್ಮರ ಬಳಗ ನಾವು ದೇವರ ಬಳಗ
ಈ ಬದುಕು ಅಮೃತದ ಪ್ರೇಮ ಕೊಳಗ
ಜಾತಿ ಬೇಲಿಯ ಕೋತಿ ಅಲ್ಲಲ್ಲ ನಾವಲ್ಲ
ಕಟ್ಟೋಣ ಸಾಗರಕೆ ದೇವಹಡಗ

ಮುಳ್ಳು ಮಲ್ಲಿಗೆಯಾಗಿ ಕಲ್ಲು ಬೆಣ್ಣೆಯು ಆಗಿ
ಹಾವು ಚೇಳಿನ ರಾತ್ರಿ ಬೆಳಗಾಗಲಿ
ವರ್ಗಭೇದದ ಭೂತ ವರ್ಣಯುದ್ಧದ ಪ್ರೇತ
ಬಿಟ್ಟೋಡಿ ಪಂಚಮಿಯ ಸವಿಯಾಗಲಿ

ಬಾಯ್ತುಂಬ ಸವಿಮಾತು ಎದಿತುಂಬ ಶಿವಮಂತ್ರ
ಮನತುಂಬ ಶಿವಲಿಂಗ ಗುಡಿಗಟ್ಟಲಿ
ಸತ್ಯ ಜ್ಞಾನದ ತೇರು ಸ್ವರ್ಣ ವರ್ಣದ ತೇರು
ಶಿವನ ಸುಂದರ ತೇರು ಗಡಿಮುಟ್ಟಲಿ
*****