ನಿನ್ನ ಪ್ರೀತಿಯನ್ನಷ್ಟೇ ಉಟ್ಟು
ಹೊರಟು ನಿಂತಿದ್ದೇನೆ-
ಇಗೋ ಹೊರಟೆ-
ಎಲ್ಲವ ದಾಟಿ ಹೋಗಿಯೇ ಬಿಡುತ್ತೇನೆ

ನೀ ಬಿಟ್ಟು ಹೋದ
ತುಂಡು ನೆಲವನ್ನು
ಉತ್ತು ಬಿತ್ತಿ
ಫಸಲು ತೆಗೆಯುತ್ತೇನೆ

ಚಳಿ-ಗಾಳಿಯೊಡನೆ ಗುದ್ದಾಡಿ
ಕಲ್ಲುಗಳ ಜತೆಗೂಡಿ ಹಾಡಿ
ಮೈಮರೆಯುತ್ತೇನೆ

ಬಿಸಿಯಪ್ಪನನ್ನು, ತಂಪಣ್ಣನನ್ನು
ಒಬ್ಬರೆದುರಿಗೆ ಮತ್ತೊಬ್ಬರನ್ನು
ಹೂಡಿ ಆಟ ನೋಡುತ್ತೇನೆ

ದಿನಚರಿಯ ಪುಟಗಳಲಿ
ಮಳೆ ಹನಿ, ಮಿಂಚು-ಗುಡುಗಿನ
ಲೆಕ್ಕ ಬರೆದಿಡುತ್ತೇನೆ

ಇರುವುದೊಂದೆ ನದಿ
ಮೊಗೆದು ಮೊಗೆದು….
ಇರುವುದೊಂದೆ ಬಾನು
ಅಳೆದು ಅಳೆದು….
ಒಂದು ದಿನ ಸದ್ದಿಲ್ಲದೆ
ಸರಿದು ಹೋಗುತ್ತೇನೆ.

ಸತಿ ಹೋಗಬೇಡ….
ನನ್ನ ಸಖಿಯಾಗು ಬಾ ಗೆಳತಿ
ಅಂದ ಪ್ರೀತಿ ಶಿವನೊಡನೆ
ನನ್ನ ಮರುಮದುವೆ, ಮನೆ.
*****