ನಿನ್ನೆಯ ದಿನ ಮೈಯೆಲ್ಲವನ್ನು
ಗೀರಿಕೊಂಡಿದ್ದವು ಗಾಯಗಳು
ನಿನ್ನೆಯ ದಿನ ಮನಸೆಲ್ಲವನ್ನೂ
ಹೀರಿಕೊಂಡಿದ್ದವು ಗಾಯಗಳು
ನಾನು ಅವುಗಳಿಗೆ ಪರಿಪರಿಯಾಗಿ
ತಿಳಿಯ ಹೇಳಿದೆ
ಪ್ರೀತಿಯ ಮಾತಿಂದ
ಸಂತೈಸಲು ನೋಡಿದೆ
ಅವು ನನ್ನನ್ನು ಧಿಕ್ಕರಿಸಿದವು
ಅಹಂಕಾರದ ಗಾಯಗಳವು
ಇನ್ನಷ್ಟು ಹೊತ್ತಿಕೊಂಡು ಉರಿದವು
ಅವಮಾನದ ಗಾಯಗಳವು
ಮತ್ತಷ್ಟು ಕೀವು ಸುರಿಸಿದವು
ಇವತ್ತು ನಿರ್ಧರಿಸಿದ್ದೇನೆ
ಆ ಸೂರ್ಯನನ್ನು ಕೇಳಿಯೇ ಬಿಡುತ್ತೇನೆ
ಅವನು ನನ್ನ ಗಾಯಗಳನ್ನು
ಒಣಗಿಸಬಹುದು
ನಾಳೆ ಚಂದ್ರನ ಮೊರೆ ಹೋಗುತ್ತೇನೆ
ಅವನು ಅಳಿದುಳಿದ
ಕಲೆಗಳನ್ನೂ ಅಳಿಸಿಹಾಕಬಹುದು
ರಾತ್ರಿಗಳು ಹಗಲುಗಳು
ಹಗಲುಗಳು ರಾತ್ರಿಗಳು
ಗಾಯಗಳು ಮಾಯಬಹುದು
*****
Latest posts by ಸವಿತಾ ನಾಗಭೂಷಣ (see all)
- ಕರೇ ಮನುಷ್ಯಾ ದಿಗಿಲು ಯಾಕ? - February 27, 2021
- ಕೋವಿಯಲಿ - February 20, 2021
- ಸಾವು - February 13, 2021