ಯಾದವರ ಜಿವಸುಳಿ ವುರಿಗೆರೆಯು ಮೈಸೂರು
ಆದಿಯಲಿ ತೆಂಕಣಕೆ ಅಂಕಿತವ ನಿಡಲಿಳಿದು
ಮೇದಿನಿಯ ನಾಡಿಸಿದ ನಾಡಿಯಿದು ಬೆಳೆದಿಹುದು ದ್ವಾಪರದಿ ಕಲ್ಕಿಗೆನಲು

ಆದಿಯಿಂ ರಾಜ ಕಂಠೀರವರ ದೇವಚಾ
ಮೋದಧಿಯ ಚಂದ್ರ ಕೃಷ್ಣೇಂದ್ರನೆನೆ ಜ್ಯೋತಿಗಳ
ಮೋದದಲಿ ರಾಜಸಿರಿ ಹಾದಿಯಲಿ ಎಣಿಸಿಹಳು ಮಹಿಷರ ನೆನಹಿನಲ್ಲಿ

ದಳವಿ ನ್ನೊಂದರಳುತಲಿದೆ ನೋಡಿರಿ
ತಿಳಿಹೃದಯದ ತೆರೆ ತೆಗೆಯುತಲಿರುವುದು
ತಿಳಿ! ಯಾದವ ಶಕುತಿಯ ದಳವೆದ್ದಿತು! ಈ ದಿನ ಜನುಮದಿನ

ಸುಳಿಸುಳಿ ಕಂಪಿನ ಸುಳಿಯಲಿ ಪ್ರಜೆಗಳು
ಕಳಕಳ ರವದಲಿ ಕೂಡುತ ಹರಿದರು
ಇಳೆಯೊಳು ಹೊಸದಿನ ವೊಂದುರಿಯುತಲಿದೆ ಕಾಂತಿಯ ನೋಡೆನುತ

ವನವನಾಂ ತರದಿಂದ ಹೊರಸೂಸು ತಿರಸುರಭಿ
ಘನಪಥದಲತಿಥಿ ಜನ ಮನಮರೆದು ಸುಳಿಸುಳಿಯೆ
ಸನುಮತದ ಸುಳಿಯಿಡುತ ಚಿರದಿನದ ಗೆಳೆತನವು
ಬಲು ಬಿರಿದು ಸುರಿಯೆ ಮಧುವು

ಮನವರಳಿ ಕಂಪೊಗೆಯೆ ಮಹಿಷೂರ ನಾಡೊಳಗೆ
ಜನುಮದಿನ ಜನವಿದಕೆ! ಜನುಮದಿನ ಯಾದವರ
ಘನಜೋತಿಲತೆಗಿದುವೆ! ಜನುಮದಿನ ವೈಭವಕೆ!
ಜನುಮದಿನ! ಸುಖಶಾಂತಿಗೆ

ಜಗದಲಿ ಕೋಲಾ ಹಲವಿದು ಹೊಳಲಿಡೆ
ಚಿಗುರಲು ಹೊಸದಿನ ವರಳಲು ರವಿಸುಮ
ಬಗೆಬಗೆ ನಿಧಿಗಳ ನೊಗೆದಿಡೆ ಧರಣಿಯು ಕೈಗಾಣಿಕೆಯೆನುತ

ಮಿಗೆಸವಿ ಪುರುಳನು ಪ್ರಜೆಗಳು ತರುತಿರೆ
ಸೊಗೆಯಿಪ ನೆನಹವು ಹಾರುತಬರುತಿರೆ
ಗಗನಕೆ ನೆಗೆದಿತು ಹಳದಿನದಂಚೆಯು ಹೊಸದಿನ ದನಿಗೊಡಲು

ನುಂಗುತಲಿ ಮಲಗೆದ್ದು ಹಳೆದಿನದ ದುಗುಡಗಳ
ಸಂಗಡಲೆ ಚಿಗಿದೆದ್ದು ಗಂಡಭೇರುಂಡವದು
ಕಂಗಳಿರೆ ಭರವಸೆಯ ಜೋತಿಯೆರಡೆನುವಂತೆ ಮೀಯುತಿರೆ ಆಗಸದಲಿ

ಕೆಂಗಿರುಣದಲಿ ಮಿಂದು ಯದುಮಣಿಯ ಮನವಿಂದು
ಸಿಂಗರಿಸಿ ಕೈಬಿಗಿದ ಜನವೃಂದವನು ಬಿಗಿದು
ಕಂಗಳಾಹೊಳಹಿನಲಿ! ಕಂಬನಿಯ ಮಿಡಿಯೆ! ನವ
ಜೀವಕಾದಿಯಿದು! ಎನುತ

ಮಂಜುಳ ರವವೇ ನೆನ್ನುತ ಚಿನನ
ಕಂಜಗಳರಳಲು ಕೇಶವಗವಿಯಿಂ
ದಂಜುತ ಬರುತಲೆ ಗೊಂದಲ ವೇನನೆ! ಚಂಡಿಯು ನಸುನಗಲು

“ನಂಜಿನ ಕೋರೆಯು ಸಡಲಿವೆಕಾಲಗೆ!
ಆಂಜದಿರಂಜದಿರವಮುಳಿದರೆ! ನೀ”
ನಂಜನಗೂಡಲಿ ಧೈರ್ಯದ ನುಡಿಬರೆ ಕೊಂಡಿಯು ಸಡಲಿದವು

ದಿನದೇರು ಬಹಮುಂದೆ ಬಿಳಿಗೊಳದ ಕಳಶದಲಿ
ಹನಿಸಿಡುವೆ ಸೈಕತವ ಗೋದೆಯಲಿ ನಾಮಿಂದು
ಮನವಾಜಿಯೇರುತಲಿ ತುಂಬುವೆನು ತುಂಗೆಯಲಿ
ಭದ್ರೆಯಲಿ ಶುಭಜಲವನು

ವನಪಥವ ಕಾವೇರಿ ಬಿಡುವುದರ ಮುಮ್ಮುಂದೆ
ಹನಿಸಿಡುವೆ ಕಳಶಕ್ಕೆ! ಶಿರಿಯುಗದ ಜೀವನವ!
ಘನಪಾದವೆರಡನ್ನು ತೊಳೆಯುವೆನು ಬಾ! ವಿಭುವೆ!
ಕರುನಾಡ ಹೃದಯದಲ್ಲಿ

ನಲಿದೆದ್ದು ಹಂಪೆಯಲಿ ಶಿಖಿಯೆತ್ತೆ ಕೊಳಲನ್ನು
ಜಲ! ಜೋಗ ಪಾತ್ರದಲ್ಲಿ ಜಯಘೋಷ ಮಾಡುತಿರೆ
ತಿಳಿನೆನಹ ಗಂಗರಸ ಚಾಲುಕ್ಯ ಹೊಯ್ಸಳರು
ಶುಭದಿನವು ! ಸಾಧುವೆನಲು

ಅಲೆಯೆದ್ದು ತೀರಗಳ ನಪ್ಪುತಲೆ ಬೆಳೆಯಿರೆನೆ
ಕಳಕಳವು ಕಾಳೆಯಿಡಲರಿವಿನಟಿವಿಯ ದೂರಿ
ಘಳಿರನಿದೂ! ವೈತಾಳಿ! ಮಹಿಷೂರಮಂಗಳಕೆ
ಶ್ರೀ ಕೃಷ್ಣ ಏಳೆನುತಿದೆ
*****

Latest posts by ಹೊಯಿಸಳ (see all)