ಮುಳುಗುತಿಹ ನೇಸರನು ಮುದಿಸಿಂಹನಂತಾಗಿ
ಪಶ್ಚಿಮಾದ್ರಿಯ ಗವಿಯ ಸೇರುತಿಹನು;
ತನ್ನ ಸರ್ವಾಧಿಕಾರತ್ವ ಕೊನೆಗೊಳ್ಳುತಿರೆ
ಲೋಗರೆಡೆ ಕೆಕ್ಕರಿಸಿ ನೋಡುತಿಹನು.

ಸಂಜೆ ಕಕ್ಕರಮಬ್ಬು ಗಗನ ಸಿಂಹಾಸನದಿ
ಕಪ್ಪು ಬಾವುಟವೆತ್ತಿ ತೋರಿಸಿಹುದು;
ಪಕ್ಷಿಸಂಕುಲ ಕೆಲೆದು ಬಿಡುಗಡೆಯ ಹಿಗ್ಗಿನಲಿ
ಹಾಡಿ ಜಯಜಯಕಾರ ಗೈಯುತಿಹುದು.

ಹಗಲ ಉರಿವಿಸಿಲ ಸಾಮ್ರಾಜ್ಯಶಾಹಿಯು ಉರುಳಿ
ಪಡುವ ಕಡಲಿನ ಹಡಗವೇರುತಿರಲು
ಸಂಧ್ಯಾಸಮೀರನದೊ ಸ್ವಾತಂತ್ರ್‍ಯಸಂದೇಶ
ಹೊತ್ತು ನಾಲ್ದೆಸೆಗಳಲಿ ಹರಡುತಿಹನು.

ಬಿತ್ತರದ ಬಾನಿನಲಿ ಮತ್ತೆ ಜನತಾ ರಾಜ್ಯ
ಮೆರೆಯುತಿದೆ ಚಿಕ್ಕೆಯ ಪ್ರಜಾಪ್ರಭುತ್ವ:
ವ್ಯಕ್ತಿಶಕ್ತಿಯ ಗುಣವಿಕಾಸ ಪ್ರಕಾಶದಲಿ
ಜಗವ ಬೆಳಗುವುದದರ ಮೂಲತತ್ವ.

ಆಕಾಶಗಂಗೆ ಶಾಸನ ಸಭೆಯನೇರ್ಪಡಿಸಿ
ಮಂತ್ರಿಮಂಡಲವನ್ನು ನಿರ್ಮಿಸಿಹುದು;
ಬುಧ ಬೃಹಸ್ಪತಿ ಶುಕ್ರ ಶನಿ ಮಂಗಳಾದ್ಯರನು
ವಿವಿಧ ಮಂತ್ರಿಗಳಾಗಿ ನೇಮಿಸಿಹುದು.

ಕೃತ್ತಿಕೆಯು ಮೃಗಶಿರವು ಸಪ್ತರ್ಷಿ ಮಂಡಲವು
ರಾಜಕೀಯದ ಪಕ್ಷಪಂಗಡವೆನೆ
ದಕ್ಷಿಣೋತ್ತರ ಧ್ರುವದ ರಾಯಭಾರಿತ್ವದಲಿ
ಮುಖ್ಯಮಂತ್ರಿಯು ಚಂದ್ರನಾಗಿರುವನೆ?

ಬಿಡುಗಡೆಯ ಸೌಭಾಗ್ಯ ಪಡೆದ ಬಾನಿನೊಳಿಂತು
ಶಾಂತಿ ಸಮದರ್ಶಿತ್ವ ತಂಪಿನಿರುಳು
ಬಡವ ಬಲ್ಲಿದರೆನದೆ ಸಮತೆಯಲಿ ತಣಿಸಿಹುದು
ಸರ್ವರಿಗು ಸಮಪಾಲು ಬೆಳದಿಂಗಳು.

***