ಬಣ್ಣಬಣ್ಣ ಮುಗಿಲ ಮೈತುಂಬ
ಹೂವರಳಿದ ಸಿರಿಸಂಜೆ ಮೋಡದಂಚಿಗೆ
ಜರಿಯ ಅಂಚು ಮೆದು ಮಲ್ಲಿಗೆ
ಅಂಗಳದ ಮೂಲೆಯಲಿ ಸೂಸಿದ ಕಂಪು
ನೀನು ಪ್ರತಿಫಲಿಸಿದ ನನ್ನೆದೆ ಕನ್ನಡಿ.

ಸಿರಿ ಮುಗಿಲ ರಂಗವಲ್ಲಿ ಸ್ಪಂದನಕೆ
ಮೊಗ್ಗಾಗಿ ತಿಳಿಗಾಳಿ ತೀಡಿ ಕೈಯಿಂದ
ಮನಸ್ಸಿಗೆ ತೇಲಿದ ಗಾಳಿಪದ ಅಲ್ಲಿ
ಬಂಗಾರ ಗೌರಿಶಂಕರ ಶಿಖರ ಕವಿತೆ
ಭಾವದ ಪಣತಿಯಲ್ಲಿ ಉರಿಯುವ ಬತ್ತಿ.

ಹೊನ್ನ ಮುಡಿಯಲಿ ಸೇವಂತಿಗೆ ಜಾಜಿ
ದಿಕ್ಕು ದಿಕ್ಕುಗಳಿಗೆಲ್ಲಾ ಕಸ್ತೂರಿ ಚಂದನ ಸೂಸಿ
ನೊರೆತೆರೆಗಳು ಏರಿದ ಕಡಲ ಒಡಲಲಿ
ಉಯ್ಯಾಲೆ ಜೇಕುವ ಹಾಯಿ ದೋಣಿ
ಹುಟ್ಟು ಹಾಕಿದ ಹೊಸ ಬಗೆಯ ಬಂಧ

ನನ್ನೊಳಗೆ ನಿನ್ನೊಳಗೆ ಇರುವ ಭಾನು
ಭೂಮಿ ಬಯಲು ಆಲಯ ಸಪ್ತಾಂತರಾಳ
ಬೇರು ಇಳಿದ ಹರವನಲಿ ಟೊಂಗೆ ಚಾಚಿದ
ದಿಗಂತ ಕತ್ತಲಾಯಿತು ಬೆಳಕಾಯಿತು
ಬೀಜದಲಿ ರೂಹುಗೊಂಡ ಅಖಂಡ ಸಂಸಾರ ಸಂಬಂಧ.
*****