ಕಳೆದುಕೊಂಡಿದ್ದೇನೆ ನಾನು
ನೀಡುವ ಎಲ್ಲಾ ಸುಖಗಳನ್ನು
ನೀಡುತ್ತ ಕಾಡುತ್ತ ಹಾಡುತ್ತ
ಸವೆಯುವ ಎಲ್ಲಾ ಚಪ್ಪರಿಕೆಗಳನ್ನು

ಮುಖ ಒಳೆಯದೇ ಮನಸ್ಸು
ಕೂಡಾ ಚಂದ ತೆಳು ಮೋಡ ಆಕಾಶದಲಿ
ಹರಿದಾಡಿ ತೇಲಾಡಿ ಕಿಟಕಿಯಲ್ಲಿ ಇಣುಕಿ
ಹಾಯಿಕೊಡುವ ಎಲ್ಲಾ ಬಿಸುಪುಗಳನ್ನು
ಕಳೆದುಕೊಂಡಿದ್ದೇನೆ ನಾನು.

ಶತಮಾನದ ಚಿಗುರು ಮರ
ಸಂತಮರವಾಗಿ ಒಡಲ ಸಿಂಗರಿಸಿದ
ನದಿ ಕಡಲು ಕಾಡು ಗುಡ್ಡದ ಐಸಿರಿ
ಬದಲಾಯಿಸಿದ ಮನೆಗಳು ಇಂಗಿ
ಕಳೆದು ಕೊಂಡಿದ್ದೇನೆ ನಾನು ಎಲ್ಲಾ
ಮೌನಗಳ ಮಾರಾಟದ ಗೆದ್ದಲದ ಸಂತೆಯಲಿ.

ಹುಡುಕದ ಬೀಜ ಬಿತ್ತದನೆಲ
ಎಲ್ಲವೂ ಪಾಡು ಬಿಟ್ಟ ಕಸಬೆಳೆದ
ಶುಷ್ಕ ಹೊಲದ ಬದುವಿನ ಮುಖವಾಡ
ಚಿಗುರು ಚಂದನ ಹಾಸು ಹೂಗಳಿಲ್ಲದೇ
ಕಳೆದುಕೊಂಡಿದ್ದೇನೆ ನಾನು ಶೀಥಲಗರ್ಭವ
ಋತು ಬಂಧದ ಏರುಪೇರಿನ ಬಂಧಿಖಾನೆಯಲಿ.
*****