ಎಲ್ಲರಂತೆ, ಎಲ್ಲದರಂತೆ,
ಸಹಜವೆಂಬಂತೆ
ಸೂರ್ಯ ಚಂದ್ರರಿಲ್ಲವೇ,
ಮಿನುಗುವ ತಾರೆಗಳಿಲ್ಲವೇ ಹಾಗೆ
ಸಂತಸ ನೀಡುತ್ತಿಲ್ಲವೇ ಅಂತೆ
ನೀನು ನನಗಾಗೇ ಎಂದು ತಿಳಿದೆ
ನಿನ್ನಾಳ,
ಅದರೊಳಗೊಂದರ್ಥ, ಒಂದಾಸೆ,
ಹೊರಡದ
ಹೊರಡಿಸಲಾಗದ ತುಮುಲ
ತುಡಿತ ಇತ್ತೆಂದು ಅರಿವಾಗಲೇ ಇಲ್ಲ
-ಅಮ್ಮ
ನಿನ್ನೊಳಗೂ ಒಂದು ಪುಟ್ಟ ಹೃದಯವಿದೆ,
ಕುಡಿಗಳ ಹನಿ ಪ್ರೀತಿಗೆ ಹಂಬಲಿಸುತ್ತಿದೆ,
ಎಂದು ಎಂದೂ ಅನ್ನಿಸಲೇ ಇಲ್ಲ
ನಿನ್ನದೆಲ್ಲವೂ ನನ್ನದೇ
ಎಂದು ಗರ್ವಿಸಿದೆ.
ನೀ ಸಿಟ್ಟಾಗಲಿಲ್ಲ, ನಕ್ಕುಬಿಟ್ಟೆ.
ನಗುಮೊಗದಿ ನೀಡಿದೆ.
ಆದರೂ ಮಕ್ಕಳ ಹಪಾಹಪಿಗೆ
ಎದೆಯೊಳಗೆ ಹಳಹಳಿಸಿದೆ.
ಹೈರಾಣಾದೆ-ಹಂಗು ತೊರೆದು ನಡೆದೆ.
ಈಗ ಹಳಹಳಿಕೆ ನನ್ನದೇ ಸೊತ್ತು.
*****