ಏಕೆ ಗೆಳತಿ ಮನ
ಬಾಗಿಲವರೆಗೂ ಬಂದು
ತಟ್ಟಿ ಕರೆಯಲಿಲ್ಲ
ನಿನ್ನ ಭಾವನೆಗಳೇಕೆ
ನನ್ನವರೆಗೂ ಮುಟ್ಟಲೇ ಇಲ್ಲ
ನನಗೂ ಇತ್ತಲ್ಲ ಆಸೆ
ನಿನ್ನಂತೆ

ಗೆಳತಿಯಾಗಿ ಬಂದವಳು
ಪ್ರೇಮಿಯಾಗಿ ಬರಲೆಂದು
ಜೀವನಕೆ ಜೊತೆಯಾಗಲೆಂದೆ
ಅದಕ್ಕೇಕೆ ತಣ್ಣೀರನ್ನೆರೆಚಿದೆ?
ಕಡೆತನಕ ಬಗೆಗೊಡು
ಹೊಗೆಗೂಡಾಗಲೆಂದೇ?

ಬಣ್ಣದ ಚಿತ್ತಾರ ಬಿಡಿಸ
ಹೊರಟಾಗ ಕಪ್ಪು ಮಸಿ
ಚೆಲ್ಲಿ ಕಲೆಯಾಯಿತೆ?

ವ್ಯಥೆ ಬೇಡ ಗೆಳತಿ
ನವ್ಯ ಕಲೆಯ ರೀತಿ
ಗೆರೆ ಎಳೆದು ಚಿತ್ರವಾಗಿಸುವೆ
ಹೊಗೆಗೂಡ ಕಿಂಡಿಯನು
ತೆರೆದು ಬಿಡು
ಶುದ್ಧವಾತ ಹರಿದು ಬರಲಿ
ಪ್ರೇಮವಿರದಿರೆ,
ಸ್ನೇಹವಾದರೂ ಇರಲಿ ಈ ಪರಿ

ಸ್ವಾರ್ಥದ ನೆರಳಿಲ್ಲ
ಏಕತಾನೆತೆಯ ಕೊರಗಿಲ್ಲ
ವಿಳಂಬ ಬೇಡ ಗೆಳತಿ
ಈಗಲಾದರೂ ಪ್ರೇಮಸೌಧದ
ತಳಪಾಯದ ಮೇಲೆ
ಕಟ್ಟೋ ನಡಿ ಸ್ನೇಹಸೌಧ

*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)