ಇಲ್ಲಿ ಹಸುರ ಹಸುರಿಗೆ
ಚಿಗುರು ಹೂವ ಕಂಪು
ಬಳ್ಳಿ ಬಳ್ಳಿ ತೇಲಿ ಸೂಸಿ
ಗುಂಗಿ ಗಾನ ಇಂಪು.

ನೆರಳಕಾವ ಮುಗಿಲಮೋಡ
ಇಣುಕಿ ಸೂರ್ಯ ಬೆಳಕ ಚೆಲ್ಲಿ
ಇಬ್ಬನಿ ಹನಿ ಹನಿ ಮುತ್ತು ಹರಡಿ
ದಂಡೆಯಾಗಿ ಸೇವಂತಿಗೆ ಮಲ್ಲಿಗೆ.

ಮೆದು ಹಸಿರು ಎಳೆಹೆಸರು
ಚಾಪೆ ಹಾಸಿ ತಿಳಿಗಾಳಿಸೂಸಿ
ಬಿದ್ದ ಎಲೆಗಳ ಮನಸ್ಸಿನಲಿ
ಮುದ್ದು ಮುಖ ಪ್ರತಿ ಬೈಗಿನಲಿ.

ಗುಂಗಿಗಾನದಲಿ ತುಂಗೆ ಹರಿದು
ಜಗದ ಸ್ನಾನ ಒಳಹೊರಗೆ
ಮನಸ್ಸು ಮನಸ್ಸಿನ ದಾಟು
ಹಾಯಿ ಬಂಧ ಸೇತುವೆ ದಾರಿ.

ಕೋಗಿಲೆ ಕಾಜಾಣ ಗಿಳಿವಿಂಡು
ಮಣಿ ಮಣಿ ಮುಗಿಲ ಮೇಲೇರಿ
ಹಗಲು ಹೊಳೆದು ರಾತ್ರಿ ಉಳಿದು
ಚಿಕ್ಕಿಗಳ ಮಿಂಚಿದವು ಅವಳ ಕಪ್ಪುಕೂದಲಲಿ.

ಮಂಜು ಮುಸುಕಿದ ಸಂಜೆ
ಇಳಿದ ರಾಗ ಮಾಲಕಂಸ
ಹಾಡಿ ಹರಿದ ಹೃದಯಗಳು
ಅಂಗಳದಲಿ ಬೆಳಕುಕತ್ತಲು ಒಂದಾಯಿತು.

*****