ಗುರುವರನ ಸ್ಮರಿಸಿ ಕರಿಮುಖಗ ಕರಗಳ ಮುಗಿದು
ವರವ ಬೇಡುವೆನು ಶಾರದಿಗೆ

||ಇಳವು||

ಶಾರದಿ ಗಣಪತಿ ಉಭಯ ಮೂರುತಿ
ಹದಪೂರ ನುತಿಸಿ ನಮೋಯೆಂದು
ಭಾರತ ಪುರಾಣದ ಸಂದು
ಧಾರುಣಿಪತಿ ರಾಜೇಂದ್ರ ಧರ್ಮನಾ ಯಜ್ಞ
ತುರಗವು ಬಂದು ಸ್ತ್ರೀ ರಾಜ್ಯದೊಳಗ ನಡತಂದು
ಏ ನಾರಿಯರಿಗೆ ಅರಸಾದ ಪ್ರಮೀಲೆಯು
ನರನ ಸಮ್ಮುಖದಿ ನಿಂದು
ಸರಸದಲಿ ಸಮರಕನುವರಿದು

||ಏರು||

ಮೆರಯುವ ಜೈಮಿನಿಯ ಪರ್ವಿನಲಿ
ವಿಸ್ತರ ಕಥೆಯಾ ವಿರಚಿಸಿದೆ ಹೋಳಿಪದದಿಂದಾ || ೧ ||

ನೇಮಿಸಿದ ಯಮಜಾತನಶ್ವಮೇಧದ ಕುದುರಿ
ಕಾಮಿನಿಯರಾಳ್ವ ಸೀಮೆಯೊಳು ಏ
ಕೋಮಲಾಂಗದ ತೇಜಿ ಹಣಿ.
ಮೇಲೆ ಆ ಮಹಾ ಲಿಖಿತವ ನೋಡಿ
ಭಾಮಿನಿಯರೆಲ್ಲರು ಕೂಡಿ ತಮ್ಮ
ಸ್ವಾಮಿಯಾದ ಪ್ರಮೀಲೆಯಳಿಗೆ ಕರಜೋಡಿಸಿ ಬಲು
ಪ್ರೇಮದಿಂದ ಮಾತಾಡಿ ಭೂಮಿಪ
ಧರ್ಮನಹುದೆಂದು ತಿಳಿದುಕೊಂಡಾಡಿ
ಸಂಗ್ರಾಮ ಸರಸಕನುಗೂಡಿ

||ಏರು||

ತಾಮರಸನೇತ್ರಿಯರು ತವಕದಲಿ ಪಾರ್ಥನೊಳು
ತಾವು ಕದನಕ್ಕೆ ಒದಗಿದರು || ೨ ||

ಅಂಗನೆಯರೆಲ್ಲರು ಶೃಂಗಾರವಾದರು ನರನ
ಸಂಗರಕೆ ಹೋಗಬೇಕೆನುತಾ
ಭೃಂಗ ಕುಂತಳೆಯರೆಲ್ಲ ನೆರೆದು
ರಂಗಾಗಿ ಪ್ರಮೀಲೆಯ ಕಂಡು
ಅಂಗಜನ ಅರಮನೆಯ ದಂಡು
ಹಿ೦ಗಿರಲು ಮಂಗಲಾಂಗಿನಿಯರೆಲ್ಲ ಮುಕ್ಕೊಂಡು
ತಿಂಗಳಿಸಿತು ಮದಗಜ ಹಿಂದು
ಅಂಗೈಸಿ ನಿಂತು ಭಯಗೊಂಡು

||ಏರು||

ದಂಗಾದರೆಲ್ಲ ಧನಂಜಯನ ಸ್ನೇಹಿತರು
ರಂಗದುಟಿಯವರ ಬಲ್ಲೆವೆನುತ ||೩||

ಮಾತು ಕೇಳಿರಿ ಜನರು|
ಪಾರ್ಥನೊಳು ಕಾಳಗಕೆ ಈ ತರುಣಿಯರೆದ್ದು ಬರುತಿರಲು

||ಇಳವು||

ಭೂತಳ ನಡುಗುವ ತೆರದಿ ನಡದಿತೋ
ನೂತನದ ರಥವೇರಿ ಆತುರದಿ ಆರ್ಭಟದಿ ಸಾರಿ
ಕೌತುಕಾಯ್ತು ದಿಕ್ಕೆಂಟು ದೇಶದೊಳು ತೋರಿ
ಪ್ರತಿಚಂದ್ರ ಕಿರಣದ ಲಹರಿ
ಪ್ರೀತಿಯಲಿ ಫಲ್ಗುಣ ಕಾತುರಕೆಳಿಸುವದಾರಿ
ಚಾತುರ ಚಮತ್ಕಾರ ಬೀರಿ

||ಏರು||

ಈ ತೆರದಿ ಬಯಸಿ ಅರ್ಜುನನೊಡನೆ ಕಾದಲ್ಕೆ
ಆತುರದಿ ಓತುಕೊಂಡಿರಲು ||೪||

ಮೀದಾಂಕ ದೊರೆಯ ಮನಸಾದ ಗಜಗಮನಿಯರು
ಆನೆಯನು ಹತ್ತಿ ಆ ಕ್ಷಣದಿ
ಜಾಣೆ ಝಗತೆ ದರವೇಣಿಯರಾಗಳೆ
ಬಾಣ ಬಿಲ್ಲು ಸಹವಾಗಿ
ಕ್ಷೋಣಿಪ ಕಿರೀಟಿಗೆ ತಾಗಿ
ಏನು ಹೇಳಲಿ ಪರಿಸಾಣಿ
ಅಲಗು ಗರಿ ತ್ರಾಣ ಬಲಿದು ಕೈದೂಗಿ
ಮಾನಿನಿಯರ ಬಲ ಮುಂದಾಗಿ
ಗೇಣು ಇಲ್ಲದೆ ಕಲಿವೀರರ ಕೆಡಿಸುವದೇನು
ಎನುತ ಬೆರಗಾಗಿ ಬ್ರಹುಪ್ರಾಣಿ ಜನರು ತಲೆದೂಗಿ

||ಏರು||

ಸಾನಂದದಿಂದೆ ಸೈಗರಿದು ಇಂದ್ರಜನೊಡನೆ
ತಾನಾದರಾಗ ಕಾಳಗಕ ||೫||

ಮೌಜಿನಲಿ ಮದನ ಮಹಾರಾಜನೊಯ್ಯಾಳಿಮಾಳ್ಪ
ಮಾಜಿಗಳ ಫೌಜು ಕೆಳೆಯತ

||ಇಳವು||

ರಾಜಪ್ರಮೀಲಿಯ ಕೆಲಬಲದಲಿ
ರಾಜಿಸುವ ತೇಜಿಗಳ ಹತ್ತಿ
ರಾಜಿಪ ನೇತ್ರಿಯರು ಮುತ್ತಿ
ಮೂಜಗದೊಳಿವರಿಗೆ ಸರಿಗಾಣೆನೆಂಬ ಭಯ ಭೀತಿ
ಸ್ತ್ರೀ ಜನರೊಳಗಧಿಕ ತರ ಜಾತಿ
ಈ ಜಗದಿ ವೀರ ಇಂದ್ರಜನ ಮೇಲೆ ಕೈ ಎತ್ತಿ
ರೇಜುಗಟ್ಟಿ ಬಲಕೆ ಬೆಂಬತ್ತಿ

||ಏರು||

ಮಾಜದಲಿ ಮನಸಿಜನ ಸವ್ಯಸಾಚಿಯ ದಳಕೆ
ಜಾಜೆನಸ್ತ್ರಗಳು ಬೆರದಂತೆ ||೬||

ರಾಯಸುಪ ಪ್ರಮೀಲಿ ಪುರದೊಳಗಿರುವ
ಪಾಯದಳದವರು ಹೊರಬಿದ್ದು
ಆಯಜಾಕ್ಷಿಯರು ಅಂಗ ತಿದ್ದಿ
ಮೈ ಛಾಯ ಸುವಣ೯ದ ಬಣ್ಣ
ಸಣ್ಣಪ್ರಾಯ ಭರ್ತಿ ಯವ್ವನಾ ಈ
ಮಾಯಕಾರ್ತಿಯರ ವಸ್ತ್ರಾಭರಣ ಝಣಝಣ
ನಯವಾದ ಕಡಗ ಕಂಕಣ
ಕೈಯೊಳಗ ಚಕ್ರದಾಕಾರ ತಿರುವತಾರ ಕಣ್ಣ
ಸೈ ವಂಕಿ ವಜ್ರ ಒಡ್ಡ್ಯಾಣ

||ಏರು||

ಮೋಹನಾಸ್ತ್ರದಲಿ ಧಮ೯ಜನ ತಮ್ಮನ
ಗೆಲಿವ ಉಪಾಯ ವಿಸ್ತರಿಸಲರಿದರಿದು ||೭||

ತಾರೀಪದದಿಂದ ತೈಯ್ಯಾರವಾದರು ಭರದಿ
ವಾರಿಜಾಕ್ಷಿಯರು ಒನಪಿನಲಿ
ಚಾತುರದ ಚಲ್ವಾದ ಚದುರಿಯರು
ಹಾರೈಸುತ ಹೊರಹೊಂಟು
ಜರತಾರಿ ಸೀರಿಯನುಟ್ಟು
ವೈಯಾರದಿಂದ ವಳೆ ದೊರಕಿಸುವ
ಜರದ್ಹೂವಿನ ಕುಪ್ಪಸತೊಟ್ಟು
ಡೆಲಾರೆ ಹರಡಿ ಮುರಗಿ ಬಳಿಯನಿಟ್ಟು
ಬರ್ಪುರೆ ಹೆರಳು ಬಂಗಾರ ಸರಗಿ
ಚಿಂತಾಕ ಕೊರಳನೊಳಗುಂಟು
ಕಸ್ತೂರಿ ತಿಲಕ ಬರಿದಿಟ್ಟು

||ಏರು||

ಚೂರಿ ಕರದೀಟ ಕಠಾರಿ ಕೈಯಲಿ ಬಾಕು
ವೀರಾವೇಶಗಳ ನಟಿಸು ಕಲಿ ||೮||

ಹಣ್ಣಿಸಿತು ಹೆಣ್ಣಾಳ್ಗಳೈದುಲಕ್ಷದಮೇಲೆ
ಕಣ್ಣಿಗಿಂಪಾದ ಶೇನಿಕವು

||ಇಳವು||

ಬಣ್ಣ ಕಂಚುಕಿಯ ಬಿಗಿದಾಡಿ ಸರ್ವರು
ಚಣ್ಣತೊಟ್ಟು ವೀರಗಾಸಿ
ಸಣ್ಣನಡವಿಗೆ ನಡಕಟ್ಟು ಬೇಸಿ
ನುಣ್ಣಗ ಚಿನ್ನದಾಭರಣ ಧರಿಸಿದ
ವರ್ಣ ರನ್ನದ ರಾಸಿ ಕನ್ನಿಯರು ಕರದು ಪುರಮಾಸಿ
ಚನ್ನಾಗಿ ಚಕ್ರ ಗದೆ ಬಾಣಕೈದುಗಳ
ಗಾಣಹಾಕಿ ಬಲು ಸೋಸಿ
ಅರ್ಜುನನ ಮೇಲೆ ಆರ್ಭಟಿಸಿ

||ಏರು||

ಇನ್ನು ಅಮರೇಂದ್ರಸುತನನ್ನು ಸಮರದಲ್ಲಿ ಗೆಲವೋ
ಅನ್ನೆಗಣಿಕಾಸ ಕೌತುಕವು ||೯||

ಬಾಲೆಯರ ಬಲವೆದ್ದು ಬಂದು
ಪ್ರಮೀಲೆಯಳ ವಾಲಗದ ಊಳಿಗಕೆ ಸಾಗಿ
ಕಾಲ್ಗೆಜ್ಜಿ ಕಿರಿಪಿಲ್ಲಿ ಪೈಜಣ ಮೇಲ ತೊಡರುಗಳ ಹಾಕಿ
ಸುರಪಾಲನ ಸುತನೊಳು ಹೊಣಕಿ
ನಾಳಿನ ಸಮರ ಗೆಲವೆಮಗೆನುತ ಬಲ್ಲಾಕಿ
ಹೇಳಿದಳು ಚೋಪದರಳಾಕಿ
ನಳಿತೋಳು ಎತ್ತಿ ಕೈ ಮುಗಿದು ನಿಂತು ಪರಾಕಿ
ವೀಳ್ಯವನು ಬೇಡ್ವ ಕಳವಳಕಿ

||ಏರು||

ಸಾಲುಗೊಂಡೆಸೆದು ಸಲಾಮೆನುತ
ಅರಸುಗಳಿಗೆ ಬಹಳ ಉಲ್ಹಾಸದಲಿ ಮುಳುಗಿ || ೧೦ ||

ಪೊಡವಿಪತಿ ವಿಜಯ ಪಾಂಡವನ
ಕಡುಗಲಿತನದ ಸೆಡಹು ಬಿಡುಹುಗಳ ನೋಡುವುದಕೆ
ಬಿಡದೆ ಬ್ಯಾಗ ತಮ್ಮ ಒಡೆಯ ಪ್ರಮೀಲೆಯ
ಕಡಿನಾಡೊಳು ಹಮಕಿನಿಂದ
ಮಡದಿಯರ ಮಾರ್ಬಲವು ಚಂದ
ನುಡಿವಂಥ ಭೇರಿ ಆಬ್ಬರದ ವಾದ್ಯರವದಿಂದ
ಜಡಿಸಿದರು ಕಾಳಿ ಕೂಡರೆಂದ
ಪಿಡಿದೆತ್ತಿ ಸತ್ತಿಗೆ ಛತ್ರ ಚಾಮರ ಸಾಲು ಗೋಡಿಯ ನೆರಳಿಂದ
ಅಡಗಿತ್ತು ಸೂರ್ಯ ಗಣವೃಂದ

||ಏರು||

ಕಡೆಗಣ್ಣು ಕೋಲ್ಮಿಂಚು ಖಡ್ಗವನು ಝಳಪಿಸುತ
ಬೆಳಕಿನೊಳು ಅಡಿಯಿಡುತ || ೧೧ ||

ಕಳೆವೀರ ಕೆಳದಿಯರು
ಬಳಸಿಲೆ ಪ್ರಮೀಲೆಯಳು ಮಾತಾಡಿ ಅರ್ಜುನನ

||ಇಳವು||

ಭಳಿರೆ ಪಾರ್ಥ ನಿನ್ನಶ್ವ ಕಟ್ಟು
ನಿನ್ನಳವಿ ಕಾಣುತದ ತ್ರಾಣ
ಇನ್ನ ಉಳಿಸಿಕೊಳೋ ನಿನ್ನ ಪ್ರಾಣ
ವಳೆ ತಿಳಿದುನೋಡೋ ಸಮ್ಮೋಹನಾಸ್ತ್ರದಲಿ ಸುರತಕೆ ಬಾ ಸುಜಾಣಾ
ಒಲ್ಲೆನೆಂದರ ಕಳೆದೇನೋ ಮಾನಾ
ಬಲುಸತ್ವದಿಂದ ಧನು ಟೇಂಕರಗೊಳಸುತ
ಒಲಿದು ತೂಗತಾಳೋ ಗೋಣಾ
ಕಳದಿಟ್ಟು ಹೊಡೆದಳೊ೦ದು ಬಾಣಾ

||ಏರು||

ಆ ಲಲನೆಯರು ಬಿಟ್ಟ ಅಸ್ತ್ರಕೆ
ಆತು ಇಂದ್ರಜನು ಎಳೆನಗೆಯಯೊಳೆಂದ ಅವಳೊಡನೇ || ೧೨ ||

ಭಾಮಿನಿಯರು ನೀವು ನಿಮ್ಮೊಡನೆ ಯುದ್ಧವ
ಮಾಳ್ಪ ಸಾಯಕಗಳುಂಟು ಸ್ಮರನಲ್ಲೆ
ನಾವು ಪುರುಷ ಜಾತಿಗಳು
ನಮ್ಮಕೂಡ ಸ್ನೇಹಮಾಡುವದು ಸಲ್ಲಾ
ನಿಮ್ಮ ಮೋಹಕೆ ಬೀಳುವರಲ್ಲಾ
ರಾಯಧರ್ಮಜನ ಅಶ್ವ ಕಟ್ಟಿಸಿದ
ಬಾಯಬಡಕತನ ಬಲ್ಲೆ
ಛೇ ಬರದಿರು ಎನ್ನ ಮೈಮೇಲೆ
ಈ ಮಾಯಕಾರ್ತಿಯರ ನೋಯಿಸಿದರೆ
ಜೀವ ಝಲ್ಲೆನುತದೆ ನಾನೊಲ್ಲೆ
ನಿಮ್ಮ ಸ್ನೇಹ ನಮಗ ತರವಲ್ಲೆ

|| ಏರು||

ಹ್ಯಾವ ಕಟ್ಟದೆ ಸುಮ್ಮನೀ ಹವಕೆ ಬರಬಹುದೆ
ಛೇ ನಿಮ್ಮ ಬುದ್ಧಿಗೇನನಲಿ ? || ೦೩ ||

ಮಾರ ಸಂಜೀವಿನಿಯಿಂದ ಮಾಡಬಲ್ಲೆನು ಸಮರ
ಕವರಲಿಗ ಸೂರೆ ಮಾಡುವೆನು

||ಇಳವು||

ಆರರಿಂದ ರಥನೇರಿ ಬಂದಿಯೋ
ವಾನರ ನಿನ್ನ ದ್ವಜಸ್ಥಂಬ ಚೀರ್ಯಾಡುತ ಗಿಡ
ಮರೆಗೊಂಬ ಮುರಾರಿಯು ಮೆಚ್ಚಿ ಅಸ್ತ್ರ ಕೊಟ್ಟನೆಂದು
ಸಾರುತಿಹುದು ಜಗತುಂಬಾ
ತೋರಿಸುವೆ ಚಮತ್ಕಾರದೆಂಬ
ಈ ದಾರುಣಿಯೊಳು ದುರಧೀರ ಪರಾಕ್ರಮಿ
ವೀರಧನಂಜಯರೆಂಬ ಒಣಪೌರುಷ ಕಂಡೆನು ಜಂಬಾ

||ಏರು||

ನಾರಿಯರ ಸೀಮೆಯೊಳು ಮೀರಿ ಹೋದವರಿಲ್ಲ
ಈ ರಣದಿ ಹೇಡಿ ತರವೇನೋ || ೧೪ ||

ಪುಂಡಗಾತ್ರಿಯರ ಕರದಂಡ ಬಾಣಕೆ ಪಾರ್ಥ
ಬಂಡೆದ್ದು ಬಳಲಿ ಬೆದರಿದನು
ದಂಡಿನವರು ಭಯಗೊಂಡು ಓಡುತಿರೆ
ಕಂಡು ವಿಜಯ ಬಾಯಾರಿ ಗಾಂಡವಿಯಾದನು ಗಾಬರಿ
ಮಂಡಲದೊಳು ಶ್ರೀ ರಾಮ ಲಕ್ಷ್ಮಣ
ತುಂಡ ತಾಟಕಿಯ ಮಾರಿ
ತಮ್ಮ ಖಡ್ಗದಿ ಮಲಿ ಮೂಗು ಸವರಿ
ಅಂಡಲಿಯುತ ಆ ಮಾತು ನೆನೆದು
ಕೋದಂಡ ಶರಾಗ್ನಿಯ ಕಾರಿ
ತಾಂಡವರ ರುದ್ರನವತಾರಿ

||ಏರು||

ಪಾಂಡವನ ಕೋಪಕ್ಕೆ ಜಾಂಡದಲಿ ಧ್ವನಿಯಾಗಿ
ಹಿಂಡು ಜನ ಕೇಳಿದರು ಅದನು ||೧೫||

ಆಕಾಶವಾಣಿ ಅಂಬರದಲ್ಲಿ ಕೂಗಿದಳು
ಸ್ತ್ರೀ ಕೊಲಿಗೆ ಹೇಸದೀ ಹವದಿ

||ಇಳವು||

ಸಾಕು ಸಾಕು ಬಿಡು ಸವ್ಯಸಾಚಿ
ನೀ ಯಾಕೆ ಮಹಾಸ್ತ್ರವ ತೊಟ್ಟಿ
ಸೈ ಕಾಕುತನದಿ ಕೈಗೆಟ್ಟ
ಜೋಕಿ ಇವಳ ಕೂಡ ಕಾದಿದೆ
ಸೈ ಲೋಕದೊಳಗೆ ಲೊಳಲೊಟ್ಟಿ
ಇದು ಸೋಂಕಿತು ಪಾಪದ ಮಟ್ಟಿ
ಬೇಕೆನುತಲಿ ನಿನ್ನಶ್ವ ಕಟ್ಟಿದಳು
ಆಕಿ ಧೈರ್ಯದಲಿ ಗಟ್ಟಿ
ಹೊರಗ್ಹಾಕಿಸುವಳು ಹೊಡದಟ್ಟಿ

||ಏರು||

ಆ ಕಿರೀಟಿಯು ಬೈಲುಲಾಕು ಮನಸ್ಸಿಗೆ ತಂದು
ತಾ ಕೋಲನಿಳುಹಿ ಸನುಮಮತದಿ ||೧೬||

ಮನ್ನಿಸಿದ ಮೌಜಿನಲಿ ಬಳಿಕ ಪ್ರಮೀಲಿಯ-
ಳನ್ನಾಪ್ತರಿಂದ ಕರೆಕಳುಹಿ ಚನ್ನಚಲುವೆ ಬಾ
ಪನ್ನಂಗವೇಣಿಯೆ ನಿನ್ನ ಛಲಕಣಿಗಾಣೆ
ಇನ್ನಾರ ಕಲಹ ಬಿಡೆ ಜಾಣೆ
ಮನ್ಮಥ ನಾಟಕ ಎಳಸಿದರೇನಿದು
ಅಣ್ಣನಾಜ್ಞೆಯೊಳು ನಾನೆ ಪರಹೆಣ್ಣೊಳು ಬೆರಸದಲಿಹನೆ
ಘನ್ನಘಾತಕ ಬಿಡು ಎನ್ನಶ್ವವ ಕೊಡು
ಇನ್ನ್ಯಾತಕ ಅನುಮಾನ ಹಸ್ತಿನಾವತಿಗೆ ನಡಿ ನೀನಾ
ಬಣ್ಣದ ಮುರಾರೆ ಧರ್ಮರಾಜನ ಪಾದವ ನಂಬಿ
ಸನ್ನುತದಿ ಹೇಳಿದನು ತಿಳುಹಿ || ೧೭ ||

ದಿಕ್ಕೆಂಟು ದೇಶದೊಳು ಒಪ್ಪುವದು ಶಿಕುನಾಳ
ಮುಕ್ಕಣ್ಣನ ದಯದಿ ಫಲ್ಗುಣನು

||ಇಳವು||

ತಕ್ಕಬುದ್ಧಿ ಹೇಳಿ ತರಣಿ ಪ್ರಮೀಲೆಯ
ಗಕ್ಕನೆ ಗಜಪುರದತ್ತ ಕಳುಹಿದನು ಸೇನೆಸಹಿತತ್ತ
ತಕ್ಕಳಿಸಿತು ಪಟುಭಟರ ಸ್ವರಕ್ಕೆ
ಇಕ್ಕೆಲದ ಆ ಬೆನ್ನತ್ತಿ ಬಲುಕಕ್ಕರದಾದಿತು ಮತ್ತು
ಚಕ್ಕನೆದ್ದು ಹಯ ಟೆಂಕಣಕಡೆ ನಜರಿಕ್ಕಿ ಮುಂದಕ್ಹೋಗುತ್ತ-
ರಕ್ಕಸರ ದೇಶ ತಿರುಗುತ್ತ

||ಏರು||

ಸಿಕ್ಕಿತಸುರರ ನಾಡೊಳು ಹೊಕ್ಕು ತುರಗವ ಬಿಡಿಸಿ
ಮಿಕ್ಕಿ ಬರುವದಕೆ ಮಿಡಿಕಿದನು || ೧೮ ||

ಊರ್ವಿಯೊಳು ದಾನವರ ಸರ್ವರಿಗೆ ಅರಸಾದ
ಗರ್ವಿಕೆಯ ಘೋರ ವಿಭೀಷಣನ

||ಇಳವು||

ತೋರಮಂದಿ ಬ್ಯಾರೀರ್ವರಿರ್ವರೈಸಿರಿ ಕಾರ್ಪಛಡಲಿ ಕಿರಿಡೊಳ್ಳು ನೂರು
ಮೂರು ಶರೀರ ಒಂದು ಕಾಲು
ಕೋರೆಹಲ್ಲಿನ ಮಾರಿ ಎರಗಿ ಶಿರದ ಮೇಲೆ
ಕೋಡ್ಗಳೆರಡು ಕಣ್ಣುಗಳು ಮೂರು ಮೊಳ ಉದ್ದ
ಕೈವತ್ತೋಳು ಬೋರ್ಗರೆವುತ ಬಾಯಿ ತೆರದರೆ
ಧ್ವನಿ ಚೀರ್ವರು ತುಟಿಗಳ ಜೋಲು
ಹಾರ ಬೆದರ್ದರು ನರಮಾಂಸಗಳು

||ಏರು||

ದುರ್ನಯನ ತೆಗೆದು ನೋಡಿ
ವರಭೀತಿಗೆ ಅಂಜಿ ಶ್ರೀಹರಿಯ ನೆನೆದರ್ಜುನನ
ಬಗಿಬಗಿಯ ರಕ್ಕಸರ ನಾಡಿನೊಳು ಕಾಂತಿ
ಅಲಗು ಮಾಡಿ ನೋಡುತೈತರಲು
ಅಗಣಿತದ ಅದ್ಭುತ ಭಯಂಕರ
ಬಿಗಹು ಕತ್ತಿ ಆಕಾರ
ಸೊಗಸೆನಿಪ ಕುದುರಿಮುಖದವರ
ಮಿಗಿಲು ಭೂತವೇತಾಳ ರಗಳಿಮಯ
ಬೊಗಳು ಪಿಶಾಚಿಗಳೂರ ತೊಗಲುಡಿಗೆಯವರ ವಿಸ್ತಾರ
ಹಗಲಿರುಳೆ ಸುರಾಮಾಂಸ ಸೇವಿಪ
ಬಿಗಿದು ಸಪ್ತಸಾಗರ ಮುಗಿಲುದ್ದ ನಿಗಚೆ ನಿಲ್ಲುವರ

||ಏರು||

ಈಗ ಇವರೊಳಗೋರ್ವ ಮೇಧಾಹೋತ ಪುರೋಹಿತನು
ವಿಭೀಷಣನ ಮನೆಗೆ ಬರುತಿಹನು ||೨೦||

ಲಾಲೆವುದು ಮೇಧೋಹೋತನರೂಪ
ಶೀಲಗಳ ನೆರೆ ಇದ್ದನ್ಹಾಳಮರದಂತೆ

||ಇಳವು||

ಹೇಳಲೇನು ಕೈತೋಳು ಜ್ಯಾಲಿಗಿಡ ಜ್ಯಾಲಿಗಾತ್ರ ಶಿರದಲ್ಲಿ
ಜೋಲ್ಬಿದ್ದ ಜಟಾಜಗ್ಗುತಲಿ
ಕೇಳು ನೀಲಗರ ತಸ್ತವಡಲು
ಇದು ಮೇಲು ಮುಕುಟ ಕಿವಿಯಿಲ್ಲಿ
ಕುಂಡಲಿಗಳಂಟು ಎಲಬಿನ
ಕೋಲಬೆತ್ತ ಕರಿ ಬೆನ್ನಿನಸ್ಥಿ
ಗಜಚರ್ಮ ಧೋತ್ರ ಮೈಯಲ್ಲಿ
ನರಡೋವಿ ಕೊರಳ ಜಪಮಾಲಿ.

||ಏರು||

ಕಾಲನರಮನೆಯ ರಕ್ಕಸರಿಗುಪದೇಶಕೊಡುವ
ಬಾಲಬ್ರಹ್ಮಿಗಳು ಬರುವಂತೆ
ಮೇಧೋಹೋತನು ಬರುವ ಹಾದಿಯೊಳು ಸಂಚರಿಪ
ಮೇಧದ ಹಯಕಂಡು ಹಾತೊರೆದು

||ಚಾಲ||

ಸಾಧಿಸಿದರೆ ಸಿಗದಂಥ ಕುದುರೆಯೆಂದು
ತಾನದನು ಸಂತೋಷ ಇದು ಸೇವಿಸಬೇಕೆಂಬ ಆಶಾ
ಬಗೆಬಗೆಯ ವಿಧದಿ ನೋತಿರೆ ಚದುರ ಲಿಖಿತ ಇತಿಹಾಸ
ಅದನು ಓದಿಕೊಂಡರ ಬಹುಲೇಸಾ
ಮುದದಿ ಮುಳುಗಿ ಭುಜವಧರಿಸಿ ತುರಗವ
ಸದರಿಗೊಯ್ದು ಉಲ್ಲಾಸ
ವಿಭೀಷಣಗೆ ಹೇಳತಾನೋ ಖಾಸ

||ಏರು||

ಮೊದಲು ನಿಮ್ಮಯ ಬಕನನ್ನು ಕೊಂದ
ಭೀಮನಿಗೆ ತಮ್ಮ ಅರ್ಜುನನ ದಯವೆಂದು ||೨೨||

ಸಿಟ್ಟಿನಲಿ ವಿಭೀಷಣನು ಪಾಂಡವರು ಹಯವನ್ನು
ಕಟ್ಟಿಸಿಹಾ ಕಾಡಬೇಕೆನುತಾ
ಕಟ್ಟಾಳ್ಗಳು ಮೂರು ಕೋಟಿ ದಾನವರು
ಚಟ್ಟನೆದ್ದು ತಯಾರಾಗೆನುತಲಿ
ಪಟ್ಟಣದೊಳು ಯಾರಿಲ್ಲೆನಿಸುವ ತೆರ
ಬಟ್ಟೆವಿಡಿದು ಬರುತಿರೆ ದಾನವ ಬಲ
ಹೊಟ್ಟೆನಾಲ್ಕು ಹರದಾರಿ‌ಉದ್ದಮಲಿ
ಬಿಟ್ಟು ಯೋಜನಸ್ತನೀ ಲಂಬೋದರಿ
ದಿಟ್ಟ ಪಾರ್ಥನ ರಥದ ಪತಾಕಿ
ನಿಂತುಟ್ಟತುದಿಯ ಹನುಮಂತನ ಕಂಡು

||ಏರು||

ಗಟ್ಟಿ ಕೋಡಗ ಲಂಕಿ ಸುಟ್ಟು ಬಂದಿತು ಎಂದು
ಅಷ್ಟ ಮಣಿಸರಕ ತಗದಿಡುತ ||೨೩||
ನಗಿಬಂದು ಹನುಮಂತ ನಕ್ಕಾನು ಗುಣವಂತ
ವಿಕಟ ರಕ್ಕಸಿಯ ನುಡಿಕೇಳಿ

||ಇಳವು||

ರಘುವರ ಸೇವೆಯೊಳಿರುತಿರೆ ಪೂರ್ವದಿ
ಅಗಣಿತ ಲಂಕೆಯ ಕೋಟೆಯ ಗೆಲ್ದೇನು ಬಲ್ಲ
ಮಿಗಿಲೆನಿಸುವ ಅಸುರರ ಸಂಹರಿಸಿದೆ
ಸೊಗಸಿಲೆ ಪಾರ್ಥನ ಆಳಾದೆನು ಬಂದೀಗ
ಸಂಘಟಿಸುತ ದಾನವ ಕಲಿಗಳ

||ಏರು||

ಬಗಿಯ ತಿಳಿದು ಬಾಲಾ ಚಿಗಸಿ ಕೊರಳಿಗುರಲ
ಬಿಗಿದು ಕೊಂದನು ಸಮರದಲ್ಲಿ || ೨೪ ||

ಒದ್ದು ಮಾರುತಿ ರಣಗೆದ್ದು ಅಸುರರ ಬಲವ
ಇರ್ದನರ್ಜುನನು ಅದರೊಳಗೆ

||ಚಾಲ||

ಸಿದ್ದವಾಗಿ ಧನು ಟೆ೦ಕರಗೊಳಿಸುತ
ತಿದ್ದಿ ಹೊಡೆದ ರಕ್ಷೋಘ್ನ ಬಾಣದಲಿ
ಕದ್ದಡಗಿದ ರಕ್ಕಸರು ಗಿಲದಮಕಿ
ಬಿದ್ದೋಡಲು ಪುರದೊಳಗಿನ ದಾನವರು
ಹೊದ್ದು ಪುರುಷ ಡಕ್ಕೆ ಯುದ್ಧ ಖಡ್ಗದೀ
ಎದ್ದು ಹೋಗಿ ಪಾರ್ಥ ಕೊಲ್ಲುವುದಕೆ

||ಏರು||

ಎದ್ದು ಬರುತಿರೆ ಇವರು ಮುದ್ದು ಫಲ್ಗುಣ ನೋಡಿ
ಗುದ್ದಿ ಸಂಹರಿಸಿ ಕ್ಷಣದೊಳಗೆ || ೨೫ ||

ಹೆಚ್ಚಿನ ರಕ್ಕಸರ ಕೊಚ್ಚಿ ಕಾಲ್ಹಿಡಿದೆಳೆದು
ಮುಚ್ಚಿ ವಿಭೀಷಣನ ಮರ್ದಿಸುತ

||ಚಾಲ||

ಮೆಚ್ಚಿ ಪಾರ್ಥ ಹನುಮಂತನ ಸತ್ವಕೆ ನಡಸಿದ ರಥ ಬಡಬಡಾ
ನಿಚ್ಚಳವಾಗಿ ನಿಜಸೈನ್ಯದಿ ಪಟುಭಟರೆಚ್ಚತ್ತರು ಬಲ್‍ಗಡಗಡಾ
ಬಿಚ್ಚಿ ಕುದುರಿ ಮುಂಗಟ್ಟ ಅದರ ಬೆನ್ನತ್ತಿತು ಕಲಿಗಳ ಫಡಫಡಾ
ಅಚ್ಚ ಹಸರು ನೀಲ ವಿಕರ್ಣದ
ಅಚ್ಚ ಬಿಳಿದು ಹಯ ನೋಡನೋಡಾ
ರೊಚ್ಚಿಗೆದ್ದು ತನ್ನಿಚ್ಚಿಲೆ ಹೋಗುತಿರೆ
ಉಚ್ಚಳಿಸಿತು ದಳ ಕೂಡಕೂಡಾ
ಬೆಚ್ಚು ಬೆದರಿ ಮಣಿಪುರದ ಸೀಮೆಯೊಳು
ಸ್ವಚ್ಛ ಕಾನನದ ಗಿಡಗಿಡಾ

||ಏರು||

ಬಚ್ಚಿಟ್ಟು ಇದನೋಡಿ ಬಬ್ರುವಾಹನರಾಜ
ಉಚ್ಚಿ ಪಟವನ್ನು ಓದಿಸುತ || ೨೬ ||

ನೀಟುಳ್ಳ ಮಣಿಪುರ ಕೋಟೆ ನೋಡಲು ಪಾರ್ಥಾ
ದಾಟಿ ಹೋಗದಕ ಮರಳಾದಾ

||ಚಾಲ||

ನಾಟಿ ಗಗನದಲಿ ನಲಿದಾಡುವ ತೆನಿ
ಮಾಟ ಮದನ ಕೈಗಳಾಗಳಾ
ಚಾಟು ಹಿಡಿದು ಚಿತ್ರಿಸಿದ ಬಾಗಿಲ ಚಂದ್ರಕಾಂತದ ಶಿಲಾ ಶಿಲಾ
ತಾಟಲಿಂದ ಕೊತ್ತಲಗಳು ಭೂಮಿಗೆ
ಮೀಟಿ ಸಪ್ತಪಾತಾಳ ತಳಾ
ಘಾಟ ಕಟಕ ನವರತ್ನ ಮುತ್ತುಕರ
ವಾಟೆ ವಜ್ರ ಮೈ ಜಳಾ ಜಳಾ
ಲುಂಟಿಮಾಡಿದರೆ ಆರಿಗೆ ನಿಲುಕದು
ನೋಟಕರಿಗೆ ಕಳವಳಾ ವಳಾ
ಪಾಟ ಬುರುಜು ಹದಿನೆಂಟು ಬಾಜಾರ
ಕೋಟಿ ಸೂರ್ಯನ ಕಳಾ ಕಳಾ

||ಏರು||

ತೋಟ ಪನ್ನೀರು ಲಕ್ಷ್ಮಿ ಆಟಕ ಸುರಜಾತ-
ಕೋಟಿ ಲಯ ಮರೆತು ಮರುಳಾದಾ ||೨೭||

ಹನುಮಂತ ಆರ್ಜುನನು ಹೆಣಗಾಡಿ
ಮಣಿಪುರದ ಕಣವಿಗೆ ದಂಡನಿಳಿಸಿದರು

||ಚಾಲ||

ಕನಲಿ ಕತ್ತಲ ಹೊತ್ತುಮುಳುಗಿತು
ಭೂಮಿಗೆ ದಿನಕರ ಆಸ್ತಂಗತಗತ
ತನಗ ತಾನೆ ಹಯಸಿಗಲು ಬಬ್ರುವಾ-
ಹನಗೆ ಆಯಿತೋ ಹಿತಾ ಹಿತಾ
ಕನಕ ಚಾಪಡಿ ರತ್ನ ತಿವಾಸಿಗಿ
ಮಿನುಗು ಮಾಲಿನೊಳು ಗಿತಾಗಿತಾ
ಘನಹರುಷದಿ ಕುಳಿತಿರುವ ಪ್ರಧಾನರು
ಸೇನಸಹಿತ ಹಿತಾಹಿತಾ
ಚಿನುಮಯಾತ್ಮಕನು ಕೃಷ್ಣನ ಸಖನೊಳು
ನಾಳೆ ಕಾಳಗದ ಪಥಾಪಥಾ
ನೆನೆದು ಮನಸಿನೊಳು ಜನರಿಗ್ಹೇಳಿ
ಅನುಕರಿಸಿದಾಜ್ಞಾ ಹಯರಥಾರಥಾ

||ಏರು||

ರಣಕೆ ಹೊರಡಲದಕೆ ರಾಜ ರಾಜಮತರೆಲ್ಲ
ಕ್ಷಣದೊಳಗೆ ಮಣಿದು ಮುಳುಗಿದು ||೨೮||

ಇದಕೆ ಚಿತ್ರಾಂಗನೆಯು ಸುತನಿಗ್ಹೇಳ್ಯಾಳೋ ಬುದ್ಧಿ
ಕದನ ಬೇಡೆಂದು ವಾರ್ಥನೊಳು

||ಚಾಲ||

ಚದುರನ ಕಾಣದೆ ಬಹಳ ದಿನವಾಯಿತು
ಸದನದೊಳಗೆ ಕರಿ ಲಗುಬಗಿ
ಸುದತಿ ಉಲೂಪಿಯೊಡನಾಡುತ ಪೂರ್ವದ ಹವಣ
ದೊರಕಿತೆಂದು ನಗೀ ನಗೀ
ಸದರವಾಗಿ ಕಂದಗೆ ಎನುತಾಳೋ ಮನೆಯಲ್ಲಿಯ
ಭರ್ತಿಬಾಂಡಾರವ ತಗೀತಗೀ
ಒದಗಿಸಿ ಕಟ್ಟಿದ ಕುದುರೆ ಸಹಿತ ನೀ
ನಜರುಕೊಟ್ಟು ಕೈಮುಗೀ ಮುಗೀ
ಮೊದಲು ತಾಯಿ ಮಾತು ಲಾಲಿಸಿ
ಮರುದಿನ ಉದಯ ಕಾಲದಲಿ ಹೋಗಿ ಹೋಗಿ
ಮುದದಿ ನಿನ್ನ ಮಗನೆನುತಿರೆ
ಅರ್ಜುನ ಬೆದರಿದನು ಸಿಟ್ಟಾಗಿ ಆಗಿ

|| ಏರು||

ಅದು ಬಬ್ರುವಾಹನನಿಗೆ ಕೋಪ
ಉದಿಸಿ ತಾನೆ ಎದುರಾಗೆನುತ ರಣದೊಳಗೆ ||೨೯||

ತಂದ ಸುವಸ್ತುವನು ಹಿಂದಕಟ್ಟಿದೆ ನಿನ್ನ
ಕೊಂದುಹಾಕದೆ ಬಿಡನೆಂದೆಂದಾ

||ಚಾಲ||

ಬಂದು ಬಬ್ರುವಾಹನ ಬಹಳ ತೀವ್ರದಲಿ
ಹೊಂದುಗೂಡಿಸಿದ ಸೇನಾ ಸೇನಾ
ಸಂದಣಿಸಿತು ಗಣ ತುರಗಪಾಯದಳ
ಬಂಧುರ ವಾದ್ಯವು ಘನಾ ಘನಾ
ಬಂಧುರ ರಥದಲಿ ಕುಳಿತು ಹೊಡೆದನು ಸಿಂಜಿಗೇರಿಸಿ ಬಾಣಾ ಬಾಣಾ
ಅಂದಗೆಟ್ಟು ಹನುಮಂತ ಕರ್ನಜಗನಿಂದು ಹೇಳಿದಾ ಫಲ್ಗುಣಾಗಣಾ
ಅಂದು ಆಗ ವೃಷಕೇತು ಅರ್ಜುನಗೆ
ವಂದಿಸಿದನು ತನ್ನ ಮನಾ ಮನಾ
ತಂದೆ ಅಪ್ಪಣೆಕೊಂಡು ಬಬ್ರುವಾಹನನ
ಮುಂದೆಗೆಡಿಸಿ ದಿಟ್ಟತನಾ ತನಾ

||ಏರು||

ಎಂದು ಆ ಕ್ಷಣ ಹೊರಟು
ಒಂದು ಅಸ್ತ್ರವನಿಡಲು ಬಬ್ರುವಾಹನನ ಬಲನೊಂದು || ೩೦ ||

ಬಬ್ರುವಾಹನ ಮೂರ್ಛೆ ತಿಳಿದೆದ್ದು
ಉಬ್ಬಿಹೊಡೆದ ಅಸ್ತ್ರವವರೆದು

||ಚಾಲ||

ಅಬ್ರಕೊಯ್ದು ಅರ್ಜುನನ ಕೆಡಹಿತು
ರಣಭೂಮಿಗೆ ರಥ ಚೂರಾಚೂರಾ
ನಿಬ್ಬೆರಗಾದರು ಸಬ್ಬ ದಂಡಿನೊಳು
ಸವ್ಯಸಾಚಿ ಪಾನರಾನರಾ
ಮಬ್ಬುಕವಿದು ಮಗ ಸತ್ತನೆಂದು
ಮಹದುಃಖಮಾಡತಾನು ಮರಾ ಮರಾ
ಬಬ್ರುವಾಹನನ ಕಂಡು ಹೇಳಿದ
ನೋಡಿಕೋ ವೇಶ್ಯೆಸಂಭವನೆ ಶರಾಶರಾ
ಎಬ್ಬಿಸಿದನು ಕಿಚ್ಚೆನುತ ಪಾರ್ಥನು
ಉಬ್ಬಿ ರೋಷದ ಭರಾಭರಾ
ಹಬ್ಬಿದ ಬಾಣವ ಚಿತ್ರಾಂಗದಿಸುತ
ನಡುವೆ ಖಂಡಿಸಿದ ಸರಾಸರಾ

||ಏರು||

ಅಬ್ಬರಿಸುತಲಾಗ ಜ್ವಾಲೆಯಂತಹ ಅಲಗು
ಉಬ್ಬಸದ ನರನ ಕೊರಳದು ||೩೧||

ಮುಗಿಲಮೇಲಿನ ಚಿಕ್ಕಿ ಚಿಗಿದು ಭೂಮಿಗೆ ಬಿದ್ದು
ಝಗಝಗಿಸುತ ಕಲಿ ಪಾರ್ಥಾ

||ಚಾಲ||

ನೆಗೆದು ಘಟ ಬೀಳಲಿರಿಕ್ಕೆ ಸಿಗದೆ ಓಡಿತು ದಂಡು
ಮಿಗೆ ವೀರ ಹಿಡಂಬಿ ವರ್ನಜ ಮೂರ್ಡೆ ತಗೊಂಡು
ಬಿಗಿದು ರಣಮಂಡಲದಿ ಬಬ್ರುವಾಹನ ಕಂಡು
ಬ್ಯಾಗ ಸಮರ ಜಯಸಿತೆಂದು ಸಾಗಿದನು
ಹೋಗಿ ನಗರ ಬಾಗಿಲದೊಳು ತಾಗಿದನು
ಹೀಂಗ ಸೊಗಸಿಲೆ ಜನರಿದಿರ್ಗೊಂಬುದೇನು

||ಏರು||
ಕೂಗಿ ಹೇಳಿದರು ಚಾರಕರ‍್ಹೋಗಿ ಚಿತ್ರಾಂಗದಿಗೆ
ಈಗ ನಿನ್ನ ಮಗನು ಸಮರ್ಥಾ ||೩೨||

ಸುತನು ಸಮರದಲಿ ಪತಿಯ ಕೊಂದನೆನುತ
ರತ್ನ ಮೂಗುತಿ ನೆಲಕೊಗಿದು

||ಚಾಲ||
ಮತಿವಂತಮಗನೆ ಹುಟ್ಟಿ ಮುತ್ತೈದಿತನ ಕಳಿದ್ಯಾ
ಹಿತದಿ ಮಾತೆಯ ಮಂಗಳಕೊರಳಸೂತ್ರವ ಕಳಿದ್ಯಾ
ಸತತ ಸಲಹಿದಕೆನಗತಿಗೆ ಹೊಂದಿಸದುಳಿದ್ಯಾ
ಅತಿ ಚತುರತೆಯಲೂಪಿಯ ಕರೆದಳು ತಾ
ಮಾತೆಯತನ ತಪ್ಪಿತು ಘಾತವಾಯಿತೆನುತಳುತ
ತಾನು ಹತಿಸಿಕೊಂಬುವೆನೆಂದು ಹೊರಬೀಳುತ

||ಏರು||
ದುಃಖದಿಂದ ಕ್ಷಿತಿಯೊಳು ಹೊರಳುವ ಚಿತ್ರಾಂಗದಿಗೆ
ಸಮ್ಮತಿಸಿ ಉಲೂಪಿ ಕೈಮುಗಿದು || ೩೩ ||

ಮರುಗದಿರು ಅರ್ಜುನನ ಪ್ರಾಣವನು ಪಡೆಯುವುದಕೆ
ಉಪಾಯವುಂಟು ದೊರೆಸಾನಿ ಕೇಳು ಕೇಳು

||ಚಾಲ||

ಅರ ಸಂಚೆಗಮನಿಯೆ ಧರೆಯಪೊತ್ತರಸಿನ
ವರಸಚಿವ ಉರದಾಧಿಪ ಪುಂಡರೀಕ ತನ್ನ
ಪರಮಪಿತನು ಅವನಲ್ಲೆ ಇರುವದು ಸಂಜೀವನ
ಈಗ ಬರೆಸು ಪತ್ರದನೊಂದು
ಗುರುತ ಇಟ್ಟು ನಿನ್ನ ಕಿರಿಬೆರಳಿನ
ಕರ್ಣದೋಲೆಗಳ ಕೊಟ್ಟು ಸಧ್ಯ ತರುವಲ್ಲಿಂದ
ಸಾಹಸಮಾಡು ದುಃಖಸದಿರು ಎಂದೆನುತ

||ಏರು||

ಈರ್ವರಂಜಿಕೆ ಬೆರಸಿ ಬಬ್ರುವಾಹನನ ಕರಸಿ
ಭರದಿ ರಣಭೂಮಿಗ್ಹೊರಹೊರಟು || ೩೪ ||
ನೋಡಿ ಮಗನು ಬೈದು
ಖೋಡಿ ನಿನಗೇನದಾಡಿ ನಿನ್ನ ವಂಶವು ಹುರಿಯಲಿ
ಬ್ಯಾಡಮ್ಮ ಕೋಪ ನಿನಗೀಡಾಡುವೇನೀದೇಹಾ

||ಇಳವು||

ಮೂಢಮತಿಯಿಂದೆನ್ನ ಮನ್ನಿಸದಾದನು ಜೀಯಾ
ಪಾಂಡುಪಂಥಗಳಿಂದ ಕೇಡು ಬಂದಿತಪಾಯ
ಆಡಿ ಫಲವೇನು ರೂಢಿಪೋತ್ತಮನಲ್ಲಿಗೆ
ಗಡಾ ಹೋಗಿ ಸಂಜೀವನ ಬೇಡಲಾಗಿ
ಕೊಂಡದಿರಲು ಆತನ ಪುರಕಿಡುವೆ ಬ್ಯಾಗಿ

||ಏರು||

ಮಾಡಿ ಶಪಥವಮಾಡಿ ಹೊಡಿಯಲು ಬಾಣ
ನಾಡ ರಸಾತಳವು ನಡುಗಿರಲು || ೩೫ ||
ಸೇದಿ ಹೊಡೆದನು ಅಸ್ತ್ರ ಬೇಧಿಸುತ ರಸಾತಳಕೆ
ಹೋದ ಅದರೊಳಗೆ ದಳಸಹಿತ

||ಚಾಲ||

ಪಾದಕ್ಹೊಂದಿಸಿ ಫಣಿಪಗೊಯ್ದು ವಸ್ತ್ರವತೋರಿ
ಮೋದದಿಂದಲಿ ಸಚಿವ ಪುಂಡರೀಕಗೆ ಬೀರಿ
ಮೇದಿನಿಪೋತ್ತಮಗ ವಾಣಿಯ ಬೇಡಿದ ಸಾರಿ
ಸಾಧಿಸಿದವದರೊಳು ಉರಗಾದಿಗಳು
ಹಾದಿಗಳು ಹಾದಿಕಟ್ಟಿ ನಿಂತವು ಕರ್ಕೋಟಾದಿಗಳು
ಕಾದಿ ಗೆಲಿದೆವೆನುತ ಬಬ್ರುವಾಹನನೊಳು

||ಏರು||

ಸಾಧಿಸಿದ ಉರಗಬಲ ಹೊಯ್ದು
ಸಂಜೀವನವ ತಂದ ಕಲಿಪಾರ್ಥನುಳುಹುದಕೆ || ೩೬ ||

ಇತ್ತ ಹಸ್ತಿನಾಪುರದ ಸತ್ಯ ಧರ್ಮಜನೊಡನೆ
ಕುಂತಿ ಹೇಳಿದಳು ಸ್ವಪ್ನಗಳಾ

||ಚಾಲ||

ಚಿತ್ತೈಸಿ ಸಕಲ ಸಾತ್ವಿಕಿ ಭೀಮಾದಿಗಳೆಲ್ಲಾ
ಮತ್ತೆ ವಿಜಯನಿಗಂತ್ಯಕಾಲವದಗಿತು
ಅತ್ತ ದ್ರೌಪದಿ ಸೌಭದ್ರಿ ಕೇಳುತ ಸೊಲ್ಲಾ
ಮತ್ತು ಕೃಷ್ಣಲಾಲಿಸಿ ಬಂದ ನಿಭಕೆಪುರ
ಹೊತ್ತು ಅರಿತು ಸರ್ವರು ಪಾದಕೆ ಎರಗಿ
ಉತ್ತಮರ ದುಃಖನೋಡಿ ತನ್ನೊಳು ಮರುಗಿ

||ಏರು||

ಅತ್ತ ಆತುರ ದೊರೆಯು ಗರುಡನೇರುತ
ಶೌರಿ ಪಾರ್ಥನೆಡೆಗೆ ಬರುತಿರಲು || ೩೭ ||

ಇಳೆಗೆ ಶಿಶುನಾಳಧೀಶನ ಗೆಳೆಯ ಶ್ರೀಕೃಷ್ಣನು
ಉಳುಹಿಕೊಂಬುವದಕೆ ಅರ್ಜುನನ

||ಚಾಲ||

ಮರಳಿದರು ಬಾಂಧವರು ಬಳಗಸಹ ಮಣಿಪುರಕೆ
ತಿಳಿದು ಚಿತ್ರಾಂಗದೆ ಉಲೂಪಿ ಗುಣದಬ್ಬರಕೆ
ಚಲುವ ನರನನುಳುಹಿಸಿದ ಸಿರಿ ಅರಸನ ಚರಣಕ್ಕೆ
ಬಹಳ ಹೇಳಿಕೊಳ್ಳುತ್ತ ಬಂದು ನಮಿಸುತ್ತಲೀ
ತೋರಿ ಪಾರ್ಥ ಕರ್ನಜಗಳಿರೆನ್ನುತಲಿ
ಹಳಗೊಳಿಸಿ ಮಕ್ಕಳು ತಂದೆಗೊಲಿಸುತಲಿ

|| ಏರು||

ಕೇಳೋ ಜನಮೇಜಯನೇ
ವೈಶಂಪಾಯನ ಹೇಳಿದ ಕಥೆಯಾ
ಹೋಳೀ ಪದದಿಂದ ರಚಿಸಿದೆ ||೩೮||
*****