ಎಳೆಬಿಸಿಲು ಸಂಜೆಯಾ ಮಲ್ಲಾಡ ಗದ್ದೆಯಲಿ
ಹಸಿರು ಹುಲ್ಲಿನ ಮೇಲೆ ಒರಗಿದ್ದೆ
ಕಬ್ಬಿನಾ ಬದುವಿನಲಿ ಮಾವಿನಾ ಎದುರಿನಲಿ
ಸಗ್ಗ ಸೊಗಸನೆ ಈಂಟಿ ಕುಡಿದಿದ್ದೆ

ಚಲ್ಲಾಡುವಾ ಚಲುವಿನ ಭತ್ತದ ಎಳೆಯಾಟ
ಸೌಂದರ್ಯ ಭಾಷೆಯ ನುಡಿದಿತ್ತು
ಹೊಂಬಣ್ಣ ಹೊಳಪಿನ ಮಾವಿನ ಹೊಯ್ದಾಟ
ಕವಿಯ ಲೆಕ್ಕಣಕಿಯ ಕುಣಿಸಿತ್ತು

ಸವಿಗಾಳಿ ಸುಳಿವಾಗ ಎಲೆಗಳು ಅಲೆದಾಗ
ಉಲ್ಲಾಸನಾದವು ಕರೆದಿತ್ತು
ಗೊಲ್ಲರು ನುಡಿದಾಗ ಹಕ್ಕಿಗಳು ಉಲಿದಾಗ
ಮಲ್ಲಾಡ ಹಾಡು ಹರಡಿತ್ತು
*****