ಶ್ರೀಮಾನ್ ಬೇಂದ್ರೆಯವರಿಂದ

ತಂಗಿ ಜಾನಕಿ ನಿನ್ನ
ವೈದೇಹದೊಲವಿನಲಿ
ಓಲೆ ಬಂದಿತು ಒಂದು
ಇತ್ತತೇಲಿ

ಯಾರಿಗಾರೋ ಎನುವ
ನಾಸ್ತಿಕತೆಯನು ನೂಕಿ
ದಾಟಿ ದಿಕ್ಕಾಲಗಳ
ಸುತ್ತು ಬೇಲಿ

ಕವಿಯು ಮಾನಸಪುತ್ರ
ಅವನು ಆಗಸದೇಹಿ
ಮಾತಿನಲೆ ಮೂಡುವಾ
ಭಾವಜೀವಿ

ಮೈಯಾಚೆ ಉಸಿರಾಚೆ
ಬಗೆಯ ಬಣ್ಣಗಳಾಚೆ
ಅವನ ಹೂ ಅರಳುವುದು
ಭಾವದೇವಿ

ನೂರಾರು ತಂಗಿಯರ
ಸಹಜ ನೇಹದಿ ಮಿಂದು
ಮಿಂಚಿನಾಚೆಯ ಬೆಳಕ
ಬಯಸಿ ಬೆಳೆದು

ದೋಷರಾಹಿತ್ಯದಾ
ಕಲ್ಪನಾರಾಜ್ಯದೊಳು
ಸಗ್ಗದೂಟವನುಣವೆ
ರೂಪು ತಳೆದು

ಅದನು ನೀ ಕಂಡವಳು
ಬೇರೆ ಕಾಣಿಕೆಯೇಕೆ?
ಕ್ಷೀರಸಾಗರದಲೆಯ
ತಲೆಯ ಪೆರೆಯೆ

ಪೂರ್ಣಿಮಾದೃಷ್ಟಿಯಲಿ
ತೆರೆದೊಂದು ಸೃಷ್ಟಿಯಲಿ
ನಿನ್ನ ನಂದನಕೇನು
ಮುಚ್ಚುಮರೆಯೆ

ಝೇಂಕೃತದ ಸುಳಿಹಿಡಿದು
ಚಿತ್ತರಂಗಕೆ ನುಗ್ಗು
ಕಮಲವನವಲ್ಲೆ
ನಿಃಸೀಮವಹುದು

ಭಾವಶಿಖರಗಳಲ್ಲೆ
ಜೀವಪುರನೆಲಸಿಹುದು
ಅದನು ನೀ ವೈದೇಹಿ
ಕಾಣಬಹುದು

ವಿಷಯ ವಿಷ ವಿಷಮವನು
ತಳ್ಳಿ ಪದತಲದಾಚೆ
ಸಪ್ತಸ್ವರ್ಗವ ಸೀಳಿ
ಮೇಲೆ ಹಾರು

ಅಲ್ಲಿರುವ ನಲಿವೊಲವು
ಇಲ್ಲಿರುವ ಬಲ ಚೆಲುವು
ಮಿಕ್ಕು ಸೂಸುವ ಹಾಗೆ
ಜಗಕೆ ಸಾರು

ಅಂಬಿಕಾತನಯದತ್ತ
ರಥಸಪ್ತಮೆ, ಸೊಲ್ಲಾಪುರ
೨೦-೦೧-೧೯೪೫
*****

ಜನಕಜೆ
Latest posts by ಜನಕಜೆ (see all)