ಹಳೆಯೂರ ಧಿಕ್ಕರಿಸಿ
ಹೊಸ ಊರುಗಳ ಕನಸಿ
ಕಟ್ಟಿದ್ದ ಕೆಡವಿ ಹೊರಟಿರುವ ಹೆಣ್ಣೆ
ತಿರುಗಿ ನೋಡೇ ಒಮ್ಮೆ ಇಳಿದ ದಿನ್ನೆ

“ನಾ ಮುಡಿದ ಹೂವು, ನಾ ತೊಟ್ಟ ಕೈಬಳೆ, ಹಣೆಗೆ
ಇಟ್ಟ ಸಿಂಧೂರ, ಎದೆಕವಚ ನೀನೇ” ಎಂದು
ನನ್ನೂರ ದಾರಿಯನು ತೂರಿ ತೇರಿನ ಕಳಸ
ಏರಬಲ್ಲ ಸವಾರಧೀರ ಬಾರೋ” ಎಂದು,
ಮದಿಸಿ ಮೈಬಿಲ್ಲಿನಲಿ ಹೂಡಿದವಳೆ
ಹೊತ್ತ ಭಾರದ ಕೆಳಗೆ ತೆತ್ತ ಧನ್ಯತೆ ಪಡೆದು
ತಾಳಲಾಗದ ಸುಖದಿ ನರಳಿದವಳೆ,
ಎಲ್ಲಿ ಹೋಯಿತು ಹೇಳೆ ಹೆಣ್ಣೆ, ಘಮ ಘಮ ಹಣ್ಣೆ
ಬಿಗಿದ ಹೆಡೆ ಫಟ್ಟೆಂದು ಕಡಿಯಿತೇನೇ ?

“ಮೊಗ್ಗು ಕಚ್ಚಿದ ಎದೆಗೆ
ಹೂವು ಕಚ್ಚಿದ ಕವೆಗೆ
ಚಿಗುರು ಸೊಕ್ಕಿದ ಕೆನ್ನೆ, ಕೆಂಪುತುಟಿಗೆ
ಹಗಲಿರುಳು ತೂಗಿದವ
ಕಾಲವನೆ ತೇಗಿದವ
ಮಳೆ ಕೆರೆವವನೆ ನನ್ನ ಮಣ್ಣ ಬಿಸಿಗೆ
ಬಾರೋ ಬಾರೋ ಬದುಕು ಹಗುರ ಬಾರೋ
ಹೇರಿಕೊಳ್ಳುವೆ ನಿನ್ನ ಭಾರ ತಾರೋ”
ಎಂದು ಕೂಗಿದ ಹೆಣ್ಣೆ
ಜೇನು ಹನಿಯುವ ಹಣ್ಣೆ
ಇರುಳು ಇಳಿಯುವ ಮೊದಲೆ ಎಲ್ಲಿ ಹೋದೆ ?
ಮರುಳು ಹಾಡುವ ಮೈಯ ತೊರೆದೆ ಹೇಗೆ ?

ಅಲಕಾವತಿಯ ಕನಸುಬುರುಡೆಗಳ ಬಿಗಿದಪ್ಪಿ
ವರುಷಶಾಪವ ಈಜಿ ಬಂದ ಜೀವ
ಹೇಗೆ ತಾಳೀತು ಬಾಳೀತು ಉದುರಲು ಮುತ್ತು
ಬರಿಯ ಚಿಪ್ಪನು, ಮರೆತು ಕುದಿವ ನೋವ ?
ನಾಳೆಗಳ ಸೂತ್ರದಲಿ ನಿನ್ನೆ ನೆನಪನು ಕೋದು
ಬಾಳುವುದೆ ಜೀವನವೆ ಹೇಳು ಚೆನ್ನೆ
ಸಾರ ತೀರಿದ ಬಾಳು ತುರಿವ ತಿರುಳಿನ ಕರಟ
ದನಿಸತ್ತ ಚೇಷ್ಟೆಗಳ ಮೂಕ ಸನ್ನೆ
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)