ಬಟ್ಟೆಯಲ್ಲ ಬಣ್ಣವಲ್ಲ ಬೆಳಕಿನ ಈಟಿ
ಹಾರಲಿ ಈ ಧ್ವಜ ಎಲ್ಲಾ ತಡೆಗಳ ಮೀಟಿ.
ಈ ಧ್ವಜ ಶತಸಾವಿರ ಭುಜ ಎತ್ತಿ ಹಿಡಿದ ಜ್ಯೋತಿ
ಸಾವಿರ ಬಗೆ ಜೀವನಕೆ ನೆರಳನಿತ್ತ ಕೀರ್ತಿ
ಇತಿಹಾಸಕು ಹಿಂದೆ
ವಾಲ್ಮೀಕಿಗು ತಂದೆ
ಎನುವ ಬಿರುದ ಹೊತ್ತ ನೆಲದ ಘನತೆಯ ಪ್ರತಿಮೂರ್ತಿ.
ಈ ಪತಾಕೆಯಂತರಂಗ ಧರ್ಮಚಕ್ರಧಾಮ
ಬುದ್ಧಗಾಂಧಿ ಶಂಕರ ಶಿಬಿ ರಾಮ ಸತ್ಯಕಾಮ
ಗೋಕುಲದಾ ಗೊಲ್ಲ
ಗಾಂಡೀವದ ಮಲ್ಲ
ಎಳೆಯಾದರು ಈ ಧ್ವಜದಲಿ ಇದಕೆಣೆಯೇ ಇಲ್ಲ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.