ತಾಯೆ ನಿನ್ನ ಮಡಿಲಲಿ
ಕಣ್ಣ ತೆರೆವ ಕ್ಷಣದಲಿ
ಸೂತ್ರವೊಂದು ಬಿಗಿಯಿತಮ್ಮ
ಸಂಬಂಧದ ನೆಪದಲಿ

ಆಕಸ್ಮಿಕವೇನೋ ತಿಳಿಯೆ
ನಿನ್ನ ಕಂದನಾದುದು,
ಆಕಸ್ಮಿಕ ಹೇಗೆ ನಿನ್ನ
ಪ್ರೀತಿ ನನ್ನ ಗೆದ್ದುದು?
ಗುಣಿಕೆ ಮಣಿದು ನಾನು ನಿನ್ನ ಚರಣತಳಕೆ ಬಿದ್ದುದು?

ಇಲ್ಲಿ ಹರಿವ ಪುಣ್ಯ ಜಲ
ಕಣ್ಣ ತೊಳೆವ ಹಸಿರ ಕುಲ
ಮಣ್ಣಿನಿಂದ ಹೂರಟ ಗಂಧ
ನನ್ನ ಬದುಕ ತೆರದವು;
ಮೈಯ ಎಲ್ಲ ಕಣಕಣದಲು ನಿನ್ನ ಋಣವ ಬರೆದವು

ಇತಿಹಾಸಕು ಹಳೆಯ ನಿನ್ನ
ಪರಂಪರಗೆ ಹೂಡಿ ನನ್ನ,
ಸೊನ್ನಯಾದ ಮಗುವಿಗೊಂದು
ಸಣ್ಣ ಪಾಲು ನೀಡಿದೆ;
ನಿನ್ನ ಹಿರಿಯ ಕಂದರಿರುವ ಎಡೆಗೆ ತಂದು ನಿಲಿಸಿದೆ.
*****