ಕತ್ತಲಾಗುವುದನೇ ಕಾದ ಹೊಲದೊಡೆಯ
ಸಿಹಿ ಹಾಲು ತುಂಬಿದ ಬೆಳೆಸೆ ತೆನೆಯ
ಕುಳ್ಳು ಬೆಂಕಿಯಲಿಟ್ಟು ಹದವಾಗಿ ಸುಟ್ಟು
ಚೂರು ಚೂರೇ ಕಂಕಿಯನು ಕಿತ್ತು
ಕರಿಯ ಕಂಬಳಿಯ ಒಡಲ ತುಂಬಿ
ಬಲಿತ ದಂಟಿಲೆ ಒಡನೆ ಓಡೆಯ
ಏರಿಸಾರಿಸಿ ತೂರಿಸಿ ಮೂಲೆಸೇರಿಸಿ
ತಳ ಸರಿಸಿ ಹೊಡೆದು ಕೊಡವೆ
ಮೈ ಮೈಯೆಲ್ಲಾ ಮುತ್ತ ಹನಿ
ಸುಖದ ಮುಲುಕಲಿ ಬಿರಿದ ಮಲ್ಲಿಗೆ
ಗೊಂಗಡಿಯ ತುಂಬಿದೆ ಘಮ ಘಮ
ಜೊತೆಯಾಯಿತು ನಲ್ಲೆ ಇರುಳಿಗೆ
ಸವೆಯಲಾರದ ಸವಿ ಮಾತಿನ ಗಂಟು
ಬೆಳಕು ಹರಿಯುವಗಂಟ ಬೆಲ್ಲದ ನಂಟು

ಮಿಂದೆದ್ದಿದೆ ಮುಂಜಾವು
ಮಂಜು ಹನಿಯಲಿ ಮುತ್ತು
ಮೊಗವ ನೋಡಿ ನಗುವ
ಬೆಳ್ಳಿ ಸೂರ್ಯನ ಗತ್ತು
*****