ಹಳೆಬಾಳಿಗೆ ಹೊಸ ಅರ್ಥವ ತಾ
ಸಂಕ್ರಾಂತಿಯ ಸೂರ್ಯ,
ಹೊಸ ಬೆಳಕಲಿ ತೊಳೆ ಈ ಜಗವ
ಮೊಳಗಿಸು ನವತೂರ್ಯ.
ಕಾಲದ ಬೆಂಕಿಯ ಹಾಯ್ದುಳಿದ
ಅಪರಂಜಿಯನುಳಿಸು,
ಚಿತ್ತದ ಕತ್ತಲೆಗಳ ಅಳಿಸಿ
ಭಾವಶುದ್ಧಿ ಹರಸು.
ಅಂತರ್ಮುಖಿ ಆಗಲಿ ಈ ಬಾಳು
ತನ್ನ ನಿಜಕೆ ಒಲಿದು,
ಹತ್ತಲಿ ಮೆಲ್ಲಗೆ ಸತ್ಯ ಅಹಿಂಸೆಯ
ಎತ್ತರಗಳು ಹೊಳೆದು.
ತನ್ನ ನಿಜಕೆ ತಾ ಸಂದವನ
ಬಾಳೇ ನಿಜ ಅಮೃತ
ಮನದಾಳದಿ ಈ ಅರಿವಿರಲು
ಸಂಕ್ರಾಂತಿಯು ಸತತ.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.