ಎಷ್ಟು ದಿನಾದರು ಇಷ್ಟಿಷ್ಟೆ ಆಶೆಗಳು
ನಷ್ಟವಾಗುತಾವೆ ಮನದಾಗೆ
ತೇಲುವ ಕನಸೆಲ್ಲ ಆವ್ಯಾಗಿ ಹೋಗ್ತಾವೆ
ಇಳಿವಲ್ದು ಮಳೆಯಾಗಿ ನೆಲದಾಗೆ

ಕಾಲಕಾಲಕು ನಿನ್ನ ಕರಿತಾನೆ ಬದುಕೀನಿ
ಕರೆಯೋದು ಒಂದೇ ಕೊನೆಯಾಸೆ
ಏನೆಲ್ಲ ಇದ್ರೂನು ಏನೆಲ್ಲ ಬಂದ್ರೂನು
ಕೊರಗೋದು ತಪ್ಪಿಲ್ಲ ಅಳಿಯಾಸೆ

ಅಂದುಕೊಂಡದ್ದಲ್ಲ ಅವಲಕ್ಷಣಾದೀತು
ಆಶೆ ಮಾಡಿದ್ದು ಹುಸಿಯಾತು
ಮಾಡಿದ್ದು ಮುಟ್ಟಿದ್ದು ಎಡವಟ್ಟೆ ಆದೀತು
ಕನಸಿನ ಮಂಟಪ ಕುಸಿದಿತ್ತು

ಆಶೆಯ ಉಸುಗೀನ ಗೂಡನ್ನು ಕಟ್ಟೋದು
ಅಲೆ ಬಂದು ಅದನಾ ಕೆಡಿಸೋದು
ಬಣ್ಣದ ಕನಸಿನ ಕಾಮನ ಬಿಲ್ಲಾಗಿ
ಅಗೋ ಅನ್ನದ್ರಾಗ ಅಳಿಸೋದು

ಕನಸಿನ ಗೋಪುರ ಕಟ್ಟೋದು ಬೀಳೋದು
ನಡೆದಾದ ಬದುಕಿನ ಈ ಯಾತ್ರೆ
ಆಶೆಯ ದೀಪವು ಆರುತ್ತ ಹ್ಯಾಂಗ್ಯಾಂಗೊ
ಉಳದೈತೆ ಅದಕೇ ಹೂಪತ್ರೆ

ಏನೆಲ್ಲ ಹಾಳಾಗ್ಲಿ ಎಲ್ಲಾನು ಅಳಿದೋಗ್ಲಿ
ಆ ದೀಪ ಆರದಾಂಗೆ ಉಳಿದಿರ್ಲಿ
ಆ ಕಣ್ಣ ಬೆಳಕಿನ ದಾರೀನ ಹಿಡಕೊಂಡು
ಉಸಿರಾಟದೀ ಗೊಂಬೆ ಉಸಿರಾಡ್ಲಿ

ಕನಸಿನ ಏಣಿಗೆ ಸಾವಿರಾರು ಹಲ್ಲುಗಳು
ಹಲ್ಳುಗಳುದುರಿದ್ರೂ ಉಳದೈತೆ
ಆಶೆಯ ದೀಪಕ್ಕೆ ಬಿರುಗಾಳಿ ಬೀಸಿದ್ರು
ಆರಿ ಆರಿ ದೀಪ ಬದುಕೈತೆ
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)