ಏಳೆನ್ನ ಮನದನ್ನೆ, ಏಳು ಚೆನ್ನಿಗ ಕನ್ನೆ
ಏಳು ಮೂಡಲ ಕೆನ್ನೆ ಕೆಂಪಾಯಿತು.
ಬಾಳ ಬೃಂದಾವನದಿ, ನಾಳೆಯೊಲವಿನ ರವದಿ,
ಆಸೆ ಮರೆಯುತಲಿಹುದು ಕಳೆದ ನಿನ್ನೆ!

ಕೊಳದ ನೀರಲಿ ಶಾಂತಿ ಮೂಡಿಹುದು, ರವಿ ಕಾಂತಿ
ಬೆಳ್ಳಿಯಲೆಗಳ ಭ್ರಾಂತಿ ಹೊಳೆಯುತಿಹುದು.
ತೀಡುತಿಹ ತಂಗಾಳಿ ಮಿಡಿಸದಿದೆ ಅಲೆಯೋಳಿ,
ಇಂತಿರಲು ಕಮಲಕಳಿ ನಡುಗುತಿಹುದು!

ಬಿರಿದ ಹೂವಿನೊಳೊಂದು ದುಂಬಿ ಇರುಳಲಿ ಬಂದು
ಒಲವಿನಲಿ ಮನ ನಿಂದು ಇರುಳನೆಲ್ಲ
ಕಮಲದಲಿ ಸೆರೆಯಾಗಿ, ಹೊರ ಜಗಕೆ ಮರೆಯಾಗಿ,
ನಡುಗಿಸಿದೆ ಹುಚ್ಚಾಗಿ ದಳವನೆಲ್ಲ!

ಅಂತೆ ನಿನ್ನೊಲವಿನಲಿ ನನ್ನೆದೆಯ ಗೀತದುಲಿ
ಶೃಂಗಾರದಳಗಳಲಿ ಸೆರೆಗೆ ಸಿಕ್ಕಿ,
ನಿನ್ನ ಬೇಡುತಲಿಹುದು, ತನ್ನ ನೀಡುತಲಿಹುದು.
ಎದ್ದೇಳು ಕಣ್ಣಮಣಿ, ನಿದ್ದೆ ಮಿಕ್ಕಿ!
*****