ನಿಶಿಯ ನೀರವ ಮೌನದೆದೆಯ ಏಕಾಂತವನು
ಭೇದಿಸುತ ಗಾಳಿಯಲಿ ತೂರಿಬಂತು
ಯಾವುದೋ ನೋವಿನಲಿ ತನ್ನ ಬಾಳಿನ ಹಣತೆ
ತೇಲಿಬಿಟ್ಟೊಂದು ಕಿರು ಕೋಗಿಲೆಯ ಕೊರಗು.

“ಕೋಗಿಲೆಯೆ ಇಂದೇಕೆ -ಈ ಋತು ವಸಂತದಲಿ
ನಿನ್ನಿನಿಯನೊಲವಿನೆದೆ ಮಡಿಲೊಳಿರದೆ
ಇಲ್ಲಿ ಏಕಾಂತದಲಿ ತುಂಬು ನೋವಿನೊಳೆದೆಯ
ಹರಿಸಿ ಹಾಯಿಸುತಿರುವೆ – ನನ್ನೊಲವ ನೋವೆ

ನಿನ್ನೊಲವ ಪರಿಯೇನು? – ನಾ ಕಳೆದುಕೊಂಡಿರುವ
ಬೆಳಕ ಕಾತರದಲ್ಲಿ ಹಾಡುತಿಂದು
ನನ್ನ ಹೃದಯದೊಳೇಕೆ ಬಿರುಗಾಳಿಯೆಬ್ಬಿಸಿಹೆ?
ಹೋಗು ದೂರಕೆ ಹುಚ್ಚೆ” ಎಂದೆ ನಾನಾಗ!

ಅಯ್ಯೋ! ನನ್ನೀ ಬಾಳ ನೋವ ಕೇಳುವರಿಲ್ಲ
ವಿಶ್ವದೊಳಗೆನಗೆ ವಿಧಿಯಿತ್ತುದಿನಿತೆ?
ನಾನೇಕೆ ಉಳಿದೆನೋ ನನ್ನವರ ಜತೆಯಲೇ
ನನ್ನನೂ ಕೊಂಡಿದ್ದರೆನಿತು ಸುಖವಿತ್ತು!

ಓ ವಿರಹಿ ಕವಿ, ನಿನ್ನ ನೋವಿನೇಕಾಕಿತನ
ನನಗೆ ಅರಿವಿದೆ; ನನ್ನ ನೋವ ಕೇಳು
ಬಾಳು ಎಂತಿಹುದೆಂದು, ಬಾಳು ಎಂತಹುದೆಂದು.
ಬಾಳ್ಗೆ ಬಾಳುವೆಯುಂಟೆ ಒಲವಿಲ್ಲದಂದು?

ಹಿಂದೊಂದು ದಿನ ಒಂದು ಕಾಗೆಗಳ ಹಿರಿ ತಂಡ
ಕೋಗಿಲೆಯ ಗೂಡೊಂದ ದಾಳಿಯಿಡಲು
ಗಂಡು ಕೋಗಿಲೆ ತನ್ನ ಹೆಂಡತಿಯ ಕಾಪಿಡಲು
ಹೋರಾಡಿ, ಹೋರಾಡಿ, ಜೀವ ಪಣವಿಡಲು,

ಹೆಣ್ಣು ಹೃದಯದ ನೋವು, ಕಾತರತೆ, ಭೀತಿಯಲಿ
ಕಾಗೆಗಳ ಕೂಗಿನಲಿ- ತಲ್ಲಣದಲಿ
ಹಿಮ್ಮೆಟ್ಟಿ ಹಾರುತಿರೆ-ಕೋರಿ ಕಾಗೆಯದೊಂದು
ಮೃತ್ಯುವೊಲು ಚಿಮ್ಮಿತದರೆದೆಯ ಕುಕ್ಕಿಡಲು.

ಹೂಂಕರಿಸಿ, ಹೇಂಕರಿಸಿ, ಕುಕ್ಕಿ ಜೀವವ ಹಿಂಡಿ,
ಕೋಗಿಲೆಯ ನೆತ್ತರಲಿ ತನ್ನ ಕೊಕ್ಕು
ಕೆಂಪಡರೆ, ಸಂತಸದಿ, ಕಾಗೆ ಗೂಡಿಗೆ ಬಂದು,
ಮೂಲೆಯೊಳಗಿದ್ದೊಂದು ಮೊಟ್ಟೆಯನ್ನು ಕಂಡು,

ಹಿಗ್ಗಿನಲಿ ಕೊಂಡೊಯ್ದು, ತನ್ನ ಗೂಡಿನಲದಕೆ
ಕಾವಿತ್ತು, ಮರಿಮಾಡಿ, ಗುಟುಕನಿತ್ತು,
ತನ್ನಂತೆಯೇ ಅದಕು ‘ಕಾ’ ಎನಲು ಕಲಿಸುವೆನು
ಎನುತ ಯತ್ನಿಸುತಿರಲು- ಮರಿಯ ದನಿ ಬೇರೆ!

ಜಗದ ಕರ್ಕಶವೆಲ್ಲ ಕೂಡಿ ಮಾಡಿಸಿದಂತೆ
ಕಾಗೆ ತನ್ನಯ ಕೊರಳ ಹೊರಳಿಸಿರಲು
ಕೋಗಿಲೆಯ ಮರಿ ಹಾಡೆ ಜಗದಿ ಜೀವದ ತಾರೆ
ಪುಲಕಿಸಿತು. ಅರಳಿತ್ತು ಋತು ಕಾಮಬಣ್ಣ!

ನನ್ನಂತೆಯೇ ಹಾಡು ಎನುತ ಎಳ ಕೋಗಿಲೆಯ
ಕತ್ತ ನುಲಿಚಿತು ಕಾಗೆ ಈರ್ಷ್ಯೆಯಲ್ಲಿ
ಕಾಗೆಯೊಲು ಕೂಗಲೆಂದೆನಿತು ಯತ್ನಿಸಲೇನು!
ಮಧುರ ಗೀತವೆ ಮರಿಯ ಕೂರಳ ದನಿಯೊಳಗು!

ಕಾಗೆಗಳು ದ್ವೇಷದಲ್ಲಿ ಗುಂಪುಗೂಡುತ ಎಳೆಯ
ಕೋಗಿಲೆಯ ಕತ್ತಿನಲಿ ಕೊಕ್ಕನಿಟ್ಟು
ಚುಚ್ಚಿದುವು, ತಮ್ಮಂತೆ ಕಂಠ ಒಡಕಾದೊಡದು
ಹಾಡುವುದ ನಿಲ್ಲಿಪುದು, ಆಗ ಸರಿಯೆಂದು!

ಈ ನೋವ ಮುಗಿಸಲೆಂದೆಂದಿರುಳು ಕೋಗಿಲೆಯು
ಹಾರಿತ್ತು ದೂರಕ್ಕೆ ಗೂಡಿನಿಂದ;
ಇಂದದಕೆ ನೆಲೆಯಿಲ್ಲ- ಜಗದಲ್ಲಿ ಒಲವಿಲ್ಲ,
ಅದರ ಹಾಡಿನ ಹುರುಳು ಬರಿಯ ನೋವಾಯ್ತು!

ಎನುತ ಹಾಡಿತು ಹಕ್ಕಿ ತನ್ನ ಬಾಳಿನ ಹಾಡು
ಕೇಳಲಿಲ್ಲಾನದರ ಉಲಿಯ ಮತ್ತೆ,
ಎಲ್ಲಿ ಹೋಯಿತೊ ಏನೊ! ಬಾಳನೇ ಬಿಟ್ಟಿತೋ?
ಕೋಗಿಲೆಗೆ ಇರಲಿಲ್ಲವೇನೋ ನೆಲೆಯಿಲ್ಲಿ!

ಇಂತ ಹಾಡಲು ಬೇಕು, ಅಂತ ನುಡಿಯಲು ಬೇಕು;
ಎಂತಾದರೂ ಸರಿಯೇ ನಮ್ಮ ಬಗೆಯ
ಅನುಸರಿಸಿ ಕವಿಯಾಗು, ಇಲ್ಲದೊಡೆ ನೆಲೆಯಿಲ್ಲ!
ನಿನ್ನ ಹಾಡನು ಕೇಳಿ ಮೆಚ್ಚುವವರಿಲ್ಲ!

ಎನುತ ಕವಿಗಳಿಗೆಲ್ಲ ಹಸಿವ ಬಂಧನದಲ್ಲಿ
ಹಿಡಿದು, ಹಿಡಿತದಿ ಹಿಗ್ಗಿ, ತಗ್ಗಿ ದುಡಿಸಿ,
ದೂರಿಡುವ ಕನ್ನಡದ ನಾಡ ಕವಿಗಳ ಪಾಡೆ
ಕೋಗಿಲೆಯ ಪಾಡೇನೊ ಎನಿಸಿತೆನಗೆ!
*****