ಬನ್ನಿ ಸಜ್ಜನರೇ ಬನ್ನಿ
ನವ ನಾಡ ಕಟ್ಟುವ ಬನ್ನಿ ||ಪ||

ಪ್ರಗತಿ ಬಂಡಾಯ ದಲಿತ ನವೋದಯ
ನವ್ಯ ಸಂಪ್ರದ ಶೀಲರೆ ಬನ್ನಿ,
ಜ್ಞಾನ ವಿಜ್ಞಾನ ನಿಧಿಯ ವಿಬುಧ ಜನ
ಸಮ್ಮಾನ ಜನಪದರೆ ಬನ್ನಿ, ||ಅ.ಪ.||

ಕಬ್ಬಿಗ ಬನದ ಕಾವ್ಯ ರಸದ
ಸುಧೆ ಕಳಸ ಹೊತ್ತು ಬನ್ನಿ,
ಮಾನವ ಜಾತಿ ತಾನೊಂದೆ ಕುಲವೆಂಬ
ಸ್ಪಟಿಕ ನುಡಿಯ ಬೆಳಕ ತನ್ನಿ,
ರವಿ ಕಾಣದ್ದನ್ನು ಕಾಣೋ ಕಲ್ಪನೆ ಕನಸಲೋಕದೀಚೆ….
ಕಣ್ ಕಂಡದ್ದನ್ನು ನಿಜ ನೇರ ನುಡಿಸೋ
ಸತ್ವ ದೀಪ್ತರಾಗಿ ಬನ್ನಿ |

ವಿಜ್ಞಾನ ದೇಗುಲದ ದೀಪದಾರತಿಯ
ನಿಜ ಬೆಳಕ ಬೀರ ಬನ್ನಿ,
ಜ್ಞಾನ-ವಿಜ್ಞಾನವು ಜಗದ ಬಲವೆಂಬ
ಮಣಿಕಾಂತಿ ತೋರ ಬನ್ನಿ,
ಮುಗಿಲೊಳಗು ಥಳಕುಗಳ ನಿಗೂಢ ಶೋಧ ದಾಚೆ…..
ನೆಲದ ಬದುಕಿನಾ ಜೀವ ಪ್ರೀತಿಸೋ
ಸೆಲೆ ಸುಳಿವ ಹಿಡಿದು ಬನ್ನಿ |

ಹಳೆಯ ಕೊಳೆಯ ಕಳೆಯನೊಮ್ಮನದಿ ಕೊಚ್ಚಿ
ನವನೀತ ನೇಹ ತನ್ನಿ,
ಕವಿ ಕವಿದ ನಿಶೆಯ, ಬಿಡಿ ಬಿಡಿಸೋ ಉಷೆಯ
ಹೊಂಗಿರಣವಾಗ ಬನ್ನಿ,
ಗೂಡು ಗೂಡುಗಳ ಹೊತ್ತಿ ಉರಿಸೋ ಹಗೆಯ ಜಾಲದೀಚೆ….
ಗೂಡೆದೆಯ ಗೂಡಿಗೂ ಪ್ರೀತಿ ಗುಟುಕನು
ಹಂಚಿ ಉಣಿಸಿ ಉಣಲು ಬನ್ನಿ |

ಅವರು ಇವರು ಇವರವರೆಂಬ
ತರತಮವ ಕೈಬಿಟ್ಟು ಬನ್ನಿ,
ಉಸಿರಿನ್ಹುಸಿರ ನಾಡ್ಹೆಸರ ಹಸಿರ ಬಸಿರ
ಸತ್ಯ ಹೊತ್ತು ತನ್ನಿ,
ಒಂದಾದುದೆಲ್ಲವೆರಡೆರಡ ಮಾಡೋ ಧಗೆಯ ತಂತ್ರದಾಚೆ….
ಒಂದು ಗೂಡಿಸುತ ಬಾನ್ಬೆಳಕ ಬೀರುವ
ದೀವಿಗೆಯ ಹಿಡಿದು ತನ್ನಿ |
*****

ಗಿರಿಜಾಪತಿ ಎಂ ಎನ್

ಎನ್ ಎಂ ಗಿರಿಜಾಪತಿಯವರು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ರಾಮಸಾಗರ ಗ್ರಾಮದವರು.ತಂದೆ ದಿ|| ಎನ್ ಎಂ ಸೋಮಶೇಖರಸ್ವಾಮಿ, ತಾಯಿ ಶ್ರೀಮತಿ ಎನ್ ಎಂ ವಿಶಾಲಾಕ್ಷಮ್ಮ,.ಗಿರಿಜಾಪತಿಯವರು ಎಂ. ಎ., ಬಿ. ಇಡಿ., ಪದವಿ ಪೂರೈಸಿದ್ದು, ಪಿ. ಎಚ್‌ಡಿ., ವ್ಯಾಸಂಗ ಮಾಡುತ್ತಿದ್ದಾರೆ.

ಮುಂಬೈನ ಬಿ.ಎ.ಎ.ಆರ್‍.ಸಿ. ಯವರಿಂದ ವಿಜ್ಞಾನ ಪ್ರಬಂಧಕ್ಕೆ ಗೌರವ ಪುರಸ್ಕಾರ. ‘ಮೃತ್ಯು ಸಂಝೀವಿನಿ’ ನಾಟಕ ಹಸ್ತಪ್ರತಿಗೆ ಬೆಂಗಳೂರಿನ ವಿಶ್ವೇಶ್ವರಯ್ಯ ಟೆಕ್ನಿಕಲ್ ಅಂಡ್ ಇಂಡಸ್ಟ್ರಿಯಲ್ ಮ್ಯೂಸಿಯಂನಿಂದ ಗೌರವ ಪುರಸ್ಕಾರ.ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಪುರಸ್ಕಾರ, ಲಲಿತ ಪ್ರಬಂಧಕ್ಕೆ ಸಂಕ್ರಮಣ ಸಾಹಿತ್ಯ ಗೌರವ ದೊರೆತಿವೆ.

ಕೃತಿಗಳ ವಿವರ:

ಕವನ ಸಂಕಲನ:
ತಾಯಿ ಭಾರತಿ ಸುತೆ ಕನ್ನಡತಿ
ಭಾವನದಿಯ ದಂಡೆಯ ಮೇಲೆ...
ಆಮ್ಲ ಮಳೆ

ಕಥಾ ಸಂಕಲನ:
ನಾವು ನಮ್ಮವರು

ಮಕ್ಕಳ ನಾಟಕ:
ಅಪಾಯದ ಗಂಡೆ

ಸದ್ಭೋದಾಮೃತ ಶತಕ
ಕನ್ನಡ ವ್ಯಾಕರಣ ಮತ್ತು ಭಾಷಾ ರಚನೆ
ವಚನ ರತ್ನತ್ರಯರು
ಕಾವ್ಯ ಪರಿಕರಗಳು
ವಚನ ಚಿಂತಾಮಣಿ
ಕನ್ನಡ ಛಂದಸ್ಸಂಪದ
ಕನ್ನಡ ಛಂದೋದರ್ಪಣ
ಕನ್ನಡ ಭಾಷಾಲೋಕ
ಅಮೃತ ತರಂಗಿಣಿ
ಬೆಳಕಿನ ಹೆಜ್ಜೆಗಳು
ಪ್ರಾಚೀನ ಭಾರತೀಯ ಕಥಾ ಸಾಹಿತ್ಯ
ನಮ್ಮೂರ ಹೋಳಿ ಹಾಡು
*****
ಗಿರಿಜಾಪತಿ ಎಂ ಎನ್

Latest posts by ಗಿರಿಜಾಪತಿ ಎಂ ಎನ್ (see all)