ಇವನೊಬ್ಬನಿದ್ದಾನಲ್ಲಾ
ಈ ಒಳಗಿನವನು?
ಅಬ್ಬಬ್ಬಾ ಇವನದೆಂತಾ ಮಂಗನಾಟ?
ನನ್ನ ಬೊಗಸೆಯನ್ನೂ ಮೀರಿ
ನೂರು ನೋಟ!

ಪಾತಾಳದಲ್ಲೇ ಕುಬ್ಜಳಾದಾಗ ಮೇಲೆತ್ತಿ
ಗತ್ತಿನಿಂದ ಶಿಖರವೇರಿ
ನಿಂತಾಗ ಕೆಳಕ್ಕೊತ್ತಿ,
ತಪ್ಪುಗಳೇ ಅಪರಾಧವೆಂಬಂತೆ ಚುಚ್ಚಿ
ದೌರ್ಬಲ್ಯಗಳ ಸಧ್ಯ ಹರಾಜಿಗಿಡದೇ ಮುಚ್ಚಿ

ಆಪ್ತನೆನ್ನುತ್ತಾ ತೆಕ್ಕೆಗೆ ಹೋದರೆ
ಧಿಕ್ಕರಿಸಿ, ಅಟ್ಟಹಾಸಗೈವ ಈತ
ದುಷ್ಟನೆನ್ನುತ್ತಾ ದೂರ ಸರಿದರೆ
ತಕ್ಕೈಸಿ ಮುದ್ದಿಡುವ
ಅರೆಹುಚ್ಚರ ಕುಲದಾತ!

ಇಷ್ಟೇ ಎನ್ನುತ್ತಾ ತೊಡಿಸಿಟ್ಟರೆ ಚೌಕಟ್ಟು
ಒಡೆದುರುಳಿಸುತ್ತಾನೆ ಅಣೆಕಟ್ಟು
‘ಇವನದೇನು ನನ್ನ ಮೇಲೆ ದೌಲತ್ತು?’
ಎನ್ನುತ್ತಾ ತೋರಿದರೆ ಗತ್ತು
ಸರಿಯಾದ ಸಮಯಕ್ಕೇ ಉಳಿ ಪೆಟ್ಟು!

ಇವನ ಲಹರಿಯ
ಎಂದೂ ನಾ ಅರಿಯೆ
ನನ್ನ ಲಹರಿಗೂ
ಇವನೇ ದೊರೆಯೆ?
ಸದಾ ನನ್ನುಸಿರೊಳಗೇ ಇರುವಾತ
ತಪ್ಪು-ಸರಿಗಳ ಭೂತಗನ್ನಡಿ ಹಿಡಿದೇ
ಪರಿಕಿಸಿ ಮುಖಕ್ಕೆ ಹಿಡಿವಾತ
ಇವ ಸದಾ ಎಚ್ಚೆತ್ತ ಭೂತ!
ಸಾವಿನವರೆಗೂ ಬೆಂಬಿಡದ ಮಿತ್ರ!
*****