ಮಹಾ ಭೀಕರ ಕರಾಳ ಬಾಯಿ
ಯಾವುದೋ ಬಗೆಯಲ್ಲಿ ಕಬಳಿಸಬಹುದು
ಈ ಬಣ್ಣ ಬಣ್ಣದ ಮಾಯದ ಬದುಕನ್ನು
ಅಸಂಖ್ಯ ಧ್ವನಿಗಳು ಪ್ರಾಣಗಳೊಡನೆ
ಭೂಮಿಯೊಳಗೆ ಅಡಗುತ್ತವೆ
ಭೀಕರ ಬಾಯಿಯ ಸ್ವಾಟೆಯೊಳಗಿಂದ
ಉಳಿದು ಜಾರಿದ ಜೊಲ್ಲಿನಂತೆ
ಕೆಲವು ಆಕ್ರಂದನ ಧ್ವನಿಗಳು ಉಳಿಯುತ್ತವೆ
ತಣ್ಣಗಿನ ಉಪ್ಪು ನೀರು ಮೇರೆ ಮೀರಿ
ತನ್ನ ಕಪ್ಪು ನಾಲಗೆಯ ಚಾಚಿ
ದಂಡೆಗಳ ಜೀವರಾಶಿಗಳ
ಸುರ್ರೆಂದು ಸೆಳೆದುಕೊಳ್ಳಬಹುದು
ತನ್ನೊಡಲೊಳಗೆ
ಹೆಣಗಳು ಚೆಲ್ಲಾಪಿಲ್ಲಿ ದುರ್ವಾಸನೆ
ಅಗೋಚರ ರೋಗಪಾಶಗಳು
ಸಾಂಕ್ರಾಮಿಕ ನುಂಗಬಹುದು
ಊರು ಸೀಮೆಗಳ ಮಸಣ ಮಾಡಿ
ಕಾಳ್ಗಿಚ್ಚು ಕೆರಳಬಹುದು
ಅಡವಿಗಳು ಸಾಲದೆ ಊರುಗಳನ್ನು
ಚಪ್ಪರಿಸಿ ಕಬಳಿಸಬಹುದು
ಯುದ್ಧಗಳು ಬದ್ಧದ್ವೇಷಗಳು
ಬಾಂಬು ಬೀಜಗಳ ಬಿತ್ತಿ
ಬೆಳೆಯಬಹುದು ಹೆಣದ ಬಣವೆಗಳ
ನಂದನವನದ ನೆಲವಾಗುವುದು
ಕೆಂಡಬೂದಿಗಳ ಸುಡುಗಾಡು
ವಿಷಾನಿಲಗಳು ಉಸಿರುಕಟ್ಟಿಸಬಹುದು
ಮೇಲಿಂದ ಮೇಲೆ ಅಗೋಚರ ಆಪತ್ತುಗಳು
ಎರಗಬಹುದು ಬೆಚ್ಚಿಗಿನ ಬದುಕಿನ ಮೇಲೆ
ಮಾಡಬಹುದು ಜೀವಾಂಡ ಬ್ರಹಾಂಡವ
ಒಣ ಹುಡಿ ಬರಡು ಗ್ರಹದುಂಡೆ
ಅಬ್ಬಾ ಈ ಕಪ್ಪು ಕೈ ಕರಾಳ ಬಾಯಿ
ಅದೆಷ್ಟು ಕ್ರೂರ ಕಠೋರ
ನಿರ್ದಯ ನೀರವ
ಅಗೋಚರ ಅನಿರೀಕ್ಷಿತ ಅನಿವಾರ್ಯ
*****